ಬುಧವಾರ, ಅಕ್ಟೋಬರ್ 21, 2009

ರಾತ್ರಿ ರಾಹುಕಾಲ, ಬೆಳಗ್ಗೆ ಗುಳಿಗೆ ಕಾಲ

ಮೊದಲ ಬಾರಿ ಸ್ಯಾನಿಟರಿ ನ್ಯಾಪ್‌ಕಿನ್  ಜಾಹೀರಾತು ಟಿವಿಯಲ್ಲಿ ಪ್ರಸಾರವಾಗಿದ್ದು ನೆನಪಿದೆಯೇ? ರೇಣುಕಾ ಶಹಾನೆ ("ಸುರಭಿ' ಕಾರ್ಯಕ್ರಮದಿಂದ ಜನಪ್ರಿಯಳಾಗಿದ್ದಳಲ್ಲ, ಅವಳೇ!)ಸರಳವಾದ ಉಡುಪಿನಲ್ಲಿ ಬಂದುನಿಂತು 'ನಾನು ನಿಮ್ಮ ಬಳಿ ಹೇಳಲೇಬೇಕಾದ ವಿಷಯವೊಂದಿದೆ. ಆದರೆ ಹೇಗೆ ಹೇಳಲಿ?’ ಎಂದು ಸಂಕೋಚದಿಂದ, ಮೆಲುದನಿಯಲ್ಲಿ ಅದರ ಬಗ್ಗೆ ಸೂಚ್ಯವಾಗಿ ಹೇಳುವ  ಜಾಹೀರಾತದು. ಸಂಪ್ರದಾಯವಾದಿಗಳು ಅಂದು ಮೂಗು ಮುರಿದಿದ್ದರು. ಮಕ್ಕಳು ಇದೇನೆಂದು ಕೇಳಿದರೆ ಏನು ಹೇಳುವುದು ಎಂದು ಹೌಹಾರಿದ್ದರು. ಆದರೆ ಮಕ್ಕಳ ಗಮನ ಸೆಳೆಯುವಂಥದ್ದೇನೂ ಅದರಲ್ಲಿರಲಿಲ್ಲ.   ಹೈಸ್ಕೂಲು, ಕಾಲೇಜಿಗೆ ಹೋಗುವ ತರುಣಿಯರು ಮಾತ್ರ  ಪರಸ್ಪರ ಕಿವಿಯಲ್ಲಿ ಪಿಸುಗುಟ್ಟಿಕೊಂಡು ಕಿಲಕಿಲ ನಕ್ಕಿದ್ದರು. ಅಷ್ಟು ವರ್ಷಗಳಿಂದ ಆರೋಗ್ಯ ಇಲಾಖೆ ಹೇಳಲು ವಿಫಲವಾಗಿದ್ದ ನೈರ್ಮಲ್ಯದ ಪಾಠವನ್ನು ಕೇವಲ ಒಂದು ಜಾಹೀರಾತು  ಸಾಧಿಸಿ ತೋರಿಸಿತ್ತು. ಮಾತ್ರವಲ್ಲ, ಜಾಹೀರಾತು ಲೋಕದಲ್ಲಿದ್ದ ಮಡಿವಂತಿಕೆಯನ್ನೂ ಕಳಚಿತ್ತು. ಅದರ ಪರಿಣಾಮವಾಗಿಯೇ ಇಂದು ಅದೇ ನ್ಯಾಪ್ಕಿನ್ ಕಂಪೆನಿ ಯಾವುದೇ ಸಂಕೋಚ, ಮುಜುಗರಗಳಿಗೆ ಅವಕಾಶವಿಲ್ಲದಂತೆ "ಹ್ಯಾವ್ ಅ ಹ್ಯಾಪಿ ಪಿರಿಯಡ್’ ಎಂದು ವಿಶ್ ಮಾಡಿಕೊಳ್ಳುವಂಥ ಆರೋಗ್ಯಕರ ಪರಿಸರವನು  ರೂಪಿಸಿಕೊಂಡಿತು.

 ಸ್ಯಾನಿಟರಿ ನ್ಯಾಪ್‌ಕಿನ್‌ಗಳಷ್ಟೇ ಗರ್ಭ ನಿರೋಧಕ ಮಾತ್ರೆ ಮತ್ತು ಕಾಂಡೋಮ್‌ಗಳ ಬಗ್ಗೆಯೂ ಮಡಿವಂತಿಕೆ ಇತ್ತು. ಜಾಗೃತಿಯ ಅಗತ್ಯವಿತ್ತು. ಆದರೆ ಅದರ ಸುರಕ್ಷೆಗೆ ಒತ್ತು ಕೊಡದೇ,  ಕಾಮೋತ್ತೇಜಕ  ಮಾತ್ರೆಗಳೇನೋ ಎಂಬಂತೆ ದೃಶ್ಯಗಳನ್ನು ಬಳಸಿದ್ದರಿಂದಲೇ ನಿರೀಕ್ಷಿತ ಮಟ್ಟದಲ್ಲಿ ಜಾಗೃತಿ ಮೂಡಿಸಲಿಲ್ಲವೆನಿಸುತ್ತದೆ. ಪಡಖಾನೆಯಲ್ಲಿ ಕೂತು ಟಿವಿ ನೋಡುವ ನಮ್ಮ ಮಂದಿ ಅಂಥ ದೃಶ್ಯಗಳನ್ನು ಕಂಡಕೂಡಲೇ ಚಾನೆಲ್ ಬದಲಾಯಿಸುತ್ತಾರೆ ಎನ್ನುವುದನ್ನು ಆ ಜಾಹೀರಾತು  ಮಾಡಿದವರು ಮರೆತಿದ್ದರೇನೊ.

ಇತ್ತೀಚೆಗೆ ಟಿವಿಯಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿರುವ ಗರ್ಭ ನಿರೋಧಕ ಮಾತ್ರೆಗಳ ಜಾಹೀರಾತುಗಳನ್ನು ನೋಡಿದಾಗ ಇದೆಲ್ಲಾ ನೆನಪಾಯಿತು."ರಾತ್ರಿ ಏನೇ ನಡೆದಿರಲಿ, ಬೆಳಗಾಗೆದ್ದು ಒಂದು ಮತ್ರೆ ನುಂಗಿದರೆ ಮುಗಿದೇ ಹೋಯಿತು, ಗರ್ಭಿಣಿಯಾಗುವ ಭಯವಿಲ್ಲ’ ಎನ್ನುವ "ಮರುದಿನದ ಮಾತ್ರೆಗಳ’ (Morning after pills) ಜಾಹೀರಾತದು. ಹುಡುಗಿಯರಿಬ್ಬರು ತಮ್ಮ "ರಹಸ್ಯ’ಗಳನ್ನು ಹಂಚಿಕೊಳ್ಳುವುದು ಮತ್ತು ಗರ್ಭಪಾತ ಮಾಡಿಸಿಕೊಳ್ಳುವುದಕ್ಕಿಂತ ’ಇದು’ ಉತ್ತಮ ಎಂಬ ತೀರ್ಮಾನಕ್ಕೆ ಬರುವ ಆ  ಜಾಹೀರಾತು ಅದೇಕೋ ಕಳವಳವನ್ನು ಹುಟ್ಟಿಸಿತು. ಬಹುಶಃ ಆ  ಜಾಹೀರಾತಿನಲ್ಲಿ ಮದುವೆಯಾದ ಗೃಹಿಣಿ ಅಥವಾ ಆಕಸ್ಮಿಕ ಅವಘಢಕ್ಕೆ ತುತ್ತಾದ ಹುಡುಗಿಯೊಬ್ಬಳನ್ನು ತೋರಿಸಿದ್ದರೆ ಹೆಚ್ಚು ಸಮರ್ಥನೀಯವಾಗುತ್ತಿತ್ತೇನೊ. ಕುತೂಹಲದ ಕಣ್ಣಲ್ಲೇ ಎಲ್ಲವನ್ನೂ ನೋಡುವ ಮಕ್ಕಳು, ಯುವಜನರು ಇದನ್ನು ಪ್ರಯೋಗಿಸಲು ಹೊರಟರೆ ತಡೆಯುವವರ್‍ಯಾರು?

ಕೆಲವು ತಿಂಗಳುಗಳ ಹಿಂದೆ ಕೇರಳದಲ್ಲಿ ಇಂಥದ್ದೇ ಜಾಹೀರಾತೊಂದಕ್ಕೆ ಸಂಬಂಧಿಸಿದ್ದಂತೆ ಗಲಾಟೆಯಾಗಿತ್ತು. "ಮರುದಿನ’ದ ಮಾತ್ರೆಯೊಂದರ ಹೆಸರೇ "ಮಿಸ್-ಟೇಕ್’ ಎಂದಿದ್ದದ್ದೇ ಅದರ ಮಿಸ್ಟೇಕು.  ಈ ಬಗೆಯ ಮಾತ್ರೆಗಳು ಯಾರನ್ನ ತಮ್ಮ ಗುರಿಯನ್ನಾಗಿಸಿಕೊಂಡಿವೆ ಅನ್ನೋದು ಸಾಂಪ್ರದಾಯಿಕ ಸಮಾಜವಾಗಿರುವ ಕೇರಳಿಗರ ಪ್ರಶ್ನೆಯಾಗಿತ್ತು. ಇದು ಮಕ್ಕಳಲ್ಲಿ, ನವತರುಣರಲ್ಲಿ  ಜವಾಬ್ದಾರಿ ಇಲ್ಲದ ಸ್ವೇಚ್ಛೆಗೆ ಅನುವು ಮಾಡಿಕೊಡುಲಿದೆ ಎನ್ನುವ ಕಳವಳ ಅವರು  ಈ ಬಗೆಯ ಮಾತ್ರೆಗಳ ವಿರುದ್ಧ ತಿರುಗಿ ನಿಲ್ಲುವಂತೆ ಮಾಡಿತ್ತು.

ನಾವು ಮುಕ್ತ ಸಮಾಜವೆಂದು ಭಾವಿಸಿರುವ ಮುಂದುವರಿದ ದೇಶಗಳಲ್ಲೇ ’ಮರುದಿನದ ಮಾತ್ರೆಗಳ’ ಜಾಹೀರಾತಿಗಳಿಗೆ ಕಡಿವಾಣವಿದೆ. ಅಮೆರಿಕದಲ್ಲಿ ಈ ಬಗೆಯ ಜಾಹೀರಾತುಗಳು ಕೇವಲ ಕೆಲವು ಚಾನೆಲ್‌ಗಳಲ್ಲಿ ಮಾತ್ರ ಪ್ರಸಾರವಾಗುತ್ತದೆ. ಎಲ್ಲರೂ ನೋಡುವ ರೆಗ್ಯುಲರ್ ಚಾನೆಲ್‌ಗಳಲ್ಲಿ ಪ್ರಸಾರ ಮಾಡುವುದಿಲ್ಲ. ಬ್ರಿಟನ್ನಿನಲ್ಲಿ ಸಹ ಈ ಜಾಹೀರಾತು ಕಳೆದ ಏಪ್ರಿಲ್‌ನಿಂದಷ್ಟೇ ಪ್ರಸಾರವಾಗುತ್ತಿದೆ. ಅದೂ ರಾತ್ರಿ  9 ಗಂಟೆಯ ನಂತರವಷ್ಟೇ (ಆ ವೇಳೆಗೆ ಮಕ್ಕಳು ಮಲಗಿರುತ್ತಾರೆ). ಅಲ್ಲಿ ಈ ಜಾಹೀರಾತನ್ನು ಹುಡುಗಿಯೊಬ್ಬಳ ಸ್ವಗತವೆಂಬಂತೆ ಕಾರ್ಟೂನ್‌ನಲ್ಲಿ ಚಿತ್ರಿಸಲಾಗಿದೆ. ಹಾಗಿದ್ದೂ ಸಹ ಅದು ಯುವಕರಲ್ಲಿ ಸುರಕ್ಷಿತವಲ್ಲದ ಲೈಂಗಿಕ ಜೀವನವನ್ನು ಪ್ರಚೋದಿಸುತ್ತಿದೆ, ವಿಷಯದ ಗಂಭೀರತೆಯನ್ನು ಕ್ಷುಲ್ಲಕವೆಂಬಂತೆ ಬಿಂಬಿಸುತ್ತಿದೆ ಎಂದು ನೂರಾರು ದೂರುಗಳು ಬರುತ್ತಿವೆ. ಈ ಮಾತ್ರೆಯ ಜಾಹೀರಾತನ್ನು ತೋರಿಸಬಹುದಾದರೆ ಗರ್ಭಪಾತದ ಮಾತ್ರೆಯ ಜಾಹೀರಾತನ್ನು ಟಿವಿಯಲ್ಲಿ ಪ್ರಸಾರಮಾಡುವುದಿಲ್ಲವೆಂಬ ನಂಬಿಕೆ ನಮಗಿಲ್ಲ ಎನ್ನುತ್ತಾರೆ ಅದರ ವಿರುದ್ಧ ಪ್ರತಿಭಟಿಸುವವರು. ದುರಾದೃಷ್ಟವೆಂದರೆ ಭಾರತದಲ್ಲಿ , ಕೇರಳವನ್ನು ಹೊರತುಪಡಿಸಿದರೆ ಆ ಬಗ್ಗೆ ಸೊಲ್ಲೆತ್ತಿದ ಉದಾಹರಣೆಯೇ ಇಲ್ಲ.

ಇದರರ್ಥ ಈ ಮಾತ್ರೆಗಳನ್ನು ಸಂಪೂರ್ಣವಾಗಿ ವಿರೋಧಿಸಬೇಕು ಎಂದಲ್ಲ. ಮಹಿಳೆಯರಿಗೆ ಅವರ ಲೈಂಗಿಕ ಜೀವನದ ಮೇಲೆ, ಗರ್ಭಧಾರಣೆಯ ಮೇಲೆ ಸಂಪೂರ್ಣ ಸ್ವಾತಂತ್ರ ನೀಡಲಿಕ್ಕಾಗಿ, ಅದರ ಬಗ್ಗೆ ಅರಿವು ಮೂಡಿಸಲಿಕ್ಕಾಗಿಯೇ ಈ ಜಾಹೀರಾತುಗಳನ್ನು ಪ್ರಸಾರ ಮಾಡಲು ಸರಕಾರ ಒಪ್ಪಿಗೆ ನೀಡಿದೆ. ಆದರೆ ಲೈಂಗಿಕತೆಯೊಂದಿಗೆ  ಮಹಿಳೆಯರ ದೈಹಿಕ ಸ್ವಾಸ್ಥ್ಯ ಮತ್ತು ಸಮಾಜದ ಮಾನಸಿಕ ಸ್ವಾಸ್ಥ್ಯವೂ ಅಂಟಿಕೊಂಡಿರುವುದರಿಂದ ನೈತಿಕತೆಯೂ ಇಲ್ಲಿ ಪ್ರಮುಖ ಪಾತ್ರ ವಹಿಸಬೇಕಿತ್ತು. ಈ ಜಾಹೀರಾತುಗಳಲ್ಲಿ ಅದರ ಕುರುಹೇ ಇಲ್ಲದಿರುವ ಬಗ್ಗೆಯಷ್ಟೇ ನಮ್ಮ ಸಂತಾಪ. ಕೈ, ಕೈ ಹಿಡಿದು ನಗುತ್ತಾ ಬರುವ ಗಂಡು ಹೆಣ್ಣಿನ ಜೋಡಿ ’ಟೆನ್ಶನ್ ಫ್ರೀ’ ಎಂದು ಸಾರುವ ಈ ಜಾಹೀರಾತುಗಳು ಯುವ ಪೀಳಿಗೆಯನ್ನು ಮುಕ್ತ ಕಾಮಕ್ಕೆ ಪ್ರಚೋದಿಸುವ, ಲೈಂಗಿಕ ಸ್ವಾತಂತ್ರ್ಯ ನೀಡುವಂತಿದೆ ಎನ್ನುವುದು ಸ್ಪಷ್ಟ.  ಅದರ ಬದಲು ತುರ್ತು ಸಂದರ್ಭದಲ್ಲಿ ಮಾತ್ರ ಬಳಸುವಂತೆ ಸೂಚಿಸಿ, ಇನ್ನಷ್ಟು ಪಾಸಿಟೀವ್ ಆಗಿ, ನಮ್ಮ ಸಮಾಜದ ನಂಬಿಕೆಗಳಿಗೆ, ಆರೋಗ್ಯಕ್ಕೆ ತೊಂದರೆ ನೀಡದಂತೆ ಜಾಹೀರಾತನ್ನು ರೂಪಿಸಿಬಹುದಿತ್ತು.

ಯಾರೋ ದುಷ್ಟರು ಅರೆ ಕ್ಷಣದ ಸುಖಕ್ಕಾಗಿ ಹೆಣ್ಣೊಬ್ಬಳನ್ನು ಬಲಾತ್ಕರಿಸಿದರೆ, ಮುಂದಿನ ಪರಿಣಾಮಗಳನ್ನು ಯೋಚಿಸಿಯೇ ಸಾಯಲು ತೀರ್ಮಾನ ಮಾಡುವ ಮನಸ್ಥಿತಿಯ ಹುಡುಗಿಯರು ನಮ್ಮ ಸಮಾಜದಲ್ಲಿದ್ದಾರೆ. ಆಂಥ ಕ್ಷಣದಲ್ಲಿ ಈ ಮಾತ್ರೆ ಅವರಿಗೆ ಧೈರ್ಯವನ್ನು ಕೊಡುತ್ತದೆಯಲ್ಲದೆ, ಅವರ ಪ್ರಾಣವನ್ನೂ ಉಳಿಸುತ್ತದೆ. ಕೆಲವೊಮ್ಮೆ  ಬೇಜವಾಬ್ದಾರಿಯಿಂದಲೋ, ಅಸಹಾಯಕತೆಯಿಂದಲೋ ಸುರಕ್ಷಾ ಕ್ರಮಗಳನ್ನು ಕೈಗೊಳ್ಳದ ಗೃಹಿಣಿಯರಿಗೆ ಈ ಮಾತ್ರೆ ವರದಾನವಾಗುತ್ತದೆ. ನಿಜವೇ. ಅದರೆ ಅದೇ ಅಭ್ಯಾಸವಾದರೆ ಗತಿಯೇನು? ಸ್ವೇಚ್ಛತೆಗೆ ಬೇಜವಾಬ್ದಾರಿಯ ಸಾಥ್ ಸಿಕ್ಕಂತಾಗುವುದಿಲ್ಲವೇ? ಅಲ್ಲದೆ ಕಾಂಡೋಂ ಬಳಸಲು ಹಿಂಜರೆಯುವ ಗಂಡು "ಬಿಡು, ನೀನು ಬೆಳಗಾಗೆದ್ದು ಅದನೊಮ್ಮೆ ನುಂಗಿಬಿಡು’ ಎಂದು ಅಪ್ಪಣೆ ಮಾಡುವುದಿಲ್ಲ ಎಂಬುದಕ್ಕೆ ನಮ್ಮ ಸಮಾಜದಲ್ಲಿ ಖಾತ್ರಿಯೂ ಇಲ್ಲವಲ್ಲ.


ಜಾಹೀರಾತುಗಳಲ್ಲಿ ಈ ’ಮರುದಿನ’ದ ಮಾತ್ರೆಗಳ ಬಳಸುವಿಕೆಯ ಬಗ್ಗೆ ಸರಿಯಾದ ಮಾಹಿತಿಯೂ ಇಲ್ಲ. ಇದು ಕುಟುಂಬ ಯೋಜನೆಗೆ ಬಳಸುವ ಸಾಮಾನ್ಯ ಕುಟುಂಬ ನಿಯಂತ್ರಣ ಮಾತ್ರೆಯಂದು ತಪ್ಪು ತಿಳಿದುಕೊಂಡು ನಿತ್ಯ ಬಳಸುವವರೂ ಇದ್ದಾರೆ. ಆದರೆ ಇದು ಸಾಮಾನ್ಯ ಕುಟುಂಬ ನಿಯಂತ್ರಣ ಮಾತ್ರೆಯಂಥಲ್ಲ. ಅದರ ಹತ್ತರಷ್ಟು ಹೆಚ್ಚಿನ ಪ್ರಮಾಣದ ರಾಸಾಯನಿಕಗಳಿರುವ ಈ ಮಾತ್ರೆಗಳು ಖಂಡಿತಾ ಬಳಸಲು ಯೋಗ್ಯವಲ್ಲ. ಕೇವಲ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಬಳಸಬಹುದಾದಂಥವು. ಅಡ್ಡ ಪರಿಣಾಮಗಳೂ ಜಾಸ್ತಿ. ಕ್ಯಾನ್ಸರ್‌ಕಾರಕ ಅಂಶಗಳೂ ಅದರಲ್ಲಿರುವುದು ಸಂಶೋಧನೆಗಳಲ್ಲಿ ಪತ್ತೆಯಾಗಿದೆ. ಆದ್ದರಿಂದಲೇ ಈ ಮಾತ್ರೆಗಳು ಯಾವುದೇ ರೀತಿಯಲ್ಲೂ ಕುಟುಂಬ ಯೋಜನೆಗೆ ಪರ್ಯಾಯವಾಗುವುದು ಸಾಧ್ಯವಿಲ್ಲ. ಆದರೆ ಈ ಮಾತ್ರೆಗಳಿವೆಯೆಂಬ ಧೈರ್ಯದಲ್ಲಿ ಇತರ ಸುರಕ್ಷಾ ಮಾರ್ಗಗಳನ್ನು ಕೈಬಿಡುವ ಸಾಧ್ಯತೆ ಇರುವುದೂ ಪ್ರಜ್ಞಾವಂತರ ಆತಂಕಕ್ಕೆ ಕಾರಣ. ಏಕೆಂದರೆ ಈ ಮಾತ್ರೆಗಳು ಕಾಂಡೋಂನಂತೆ ಎಚ್‌ಐವಿ/ಏಡ್ಸ್‌ನಂಥ ಲೈಂಗಿಕ ರೋಗಗಳಿಂದ ಕಾಪಾಡಲಾರದು.

 ಈ ಮೊದಲೂ  ಅಂಥ ತುರ್ತು ಪರಿಸ್ಥಿತಿಯಲ್ಲಿ ಈ ಮಾತ್ರೆಗಳನ್ನೇ ವೈದ್ಯರು ಕೊಡುತ್ತಿದ್ದುದು. ಆದರೆ ಈ ಗ ಈ ಮಾತ್ರೆಗಳನ್ನು ಕೊಳ್ಳಲು ವೈದ್ಯರ ಸಲಹೆಯೇ ಬೇಕಿಲ್ಲ. ಪ್ರಿಸ್ಕ್ರಿಪ್ಷನ್ ಇಲ್ಲದೆಯೇ ಮೆಡಿಕಲ್ ಶಾಪ್‌ಗಳಲ್ಲಿ ಈ ಮಾತ್ರೆಗಳು ದೊರೆಯುತ್ತಿವೆ. ಅತ್ಯಾಚಾರಕ್ಕೊಳಗಾದ ಹುಡುಗಿಯರೇ ಈ ಮಾತ್ರೆಯನ್ನು ಬಳಸುತ್ತಾರೆಂದುಕೊಂಡರೂ, ಅವರಿಗೆ  ವೈದ್ಯರ ಸಲಹೆ, ಮಾನಸಿಕ ಸಾಂತ್ವಾನದ ಅಗತ್ಯವೂ ಇದೆ. ಅದನ್ನು ನೀಡುವವರ್‍ಯಾರು?

  ಧಾರಾವಾಹಿ ನೋಡುವ ಗೃಹಿಣಿಯೊಬ್ಬಳು ಹತ್ತನೇ ತರಗತಿ ಓದುತ್ತಿರುವ ತನ್ನ ಮಗಳೆಲ್ಲಿ ಈ ಜಾಹೀರಾತು ನೋಡುತ್ತಾಳೋ ಎಂಬ ಭಯದಿಂದ ತಕ್ಷಣ ಚಾನೆಲ್ ಬದಲಾಯಿಸುತ್ತಾಳೆ. ಆದರೂ ಭಾರತದಲ್ಲಿ ಪ್ರತಿ ತಿಂಗಳೂ ಸುಮಾರು  2  ಲಕ್ಷ  "ಮರುದಿನ’ದ ಮಾತ್ರೆಗಳು ಮಾರಾಟವಾಗುತ್ತಿವೆ ಎಂಬ ವರದಿ ಪತ್ರಿಕೆಗಳಲ್ಲಿ ಬರುತ್ತಿದೆ.

ಸೋಮವಾರ, ಅಕ್ಟೋಬರ್ 12, 2009

ಛೇ! ಅಪ್ಪನಿಗೂ ವಯಸ್ಸಾಗಿಬಿಡ್ತೇ?




ಕಾಲ ಎಷ್ಟು ಬೇಗ ಬದಲಾಗಿಬಿಡತ್ತಲ್ವಾ? ಪ್ರತೀ ದಿನ ಅದೇ ಸೂರ್ಯ ಅಲ್ಲೇ ಮುಳುಗುತ್ತಿದ್ದರೂ ನಿನ್ನೆ ಇದ್ದ ಹಾಗೆ ಇಂದಿಲ್ಲ. ಚಿಕ್ಕವಳಿದ್ದಾಗ ಎಂದಾದರೂ ಅಪ್ಪನಿಗೂ ವಯಸ್ಸಾಗುತ್ತದೆ ಎಂಬುದನ್ನು ಊಹಿಸಿಯೇ ಇರಲಿಲ್ಲ. "ಅಪ್ಪನಿಗೆ ವಯಸ್ಸಾಗತ್ತಾ? ಅಜ್ಜನಿಗೆ ಮಾತ್ರ ವಯಸ್ಸಾಗುವುದು ’ ಎಂದೇ ನಮ್ಮ ತಿಳುವಳಿಕೆ. ಹಾಗೆ ನೋಡಿದರೆ ಅಪ್ಪ ನಾನು ಭಾರೀ ಫ್ರೆಂಡ್ಸ್. ಚಿಕ್ಕವಳಿದ್ದಾಗ ಶಾಲೆ ಮುಗಿದ ತಕ್ಷಣ ತೋಟಕ್ಕೆ ಓಡ್ತಿದ್ದೆ. ಕೆಲಸ ಮುಗಿದ ಮೇಲೆ ಅಪ್ಪನ ಜತೆ ಮಾತಾಡುತ್ತಾ ಕೆರೆಯ ಏರಿಯ ಮೇಲೆ ಬರುವುದು ನನ್ನ ನೆಚ್ಚಿನ ಸಂಗತಿ. ಆಗಲೇ ನಾನು ಶಾಲೆಯ ಬಗ್ಗೆ , ಗೆಳತಿಯರ ಬಗ್ಗೆ, ಮಾಡಿದ ಪಾಠ, ನಡೆಸಿದ ದಾಂದಲೆಗಳ ಬಗ್ಗೆ ಅಪ್ಪನಿಗೆ ಹೇಳುತ್ತಿದ್ದುದು. ಅಪ್ಪ ಯಾವುದಕ್ಕೂ ಬಯ್ಯದೇ ನನ್ನ ಮಾತು ಕೇಳುತ್ತಾ , ಹೊಸ ಹೊಸ ಆಟ ಹೇಳಿಕೊಡುತ್ತಾ, ದಾರಿಯಲ್ಲಿ ಎದುರಾಗುವ ಹಸು ಕರುಗಳಿಗೆ ದಾರಿ ಮಾಡಿಕೊಡುತ್ತಾ ನನ್ನ ಕೈ ಹಿಡಿದು ಕರೆತರುತ್ತಿದ್ದರು. ನಾನು ಅಷ್ಟೆಲ್ಲಾ ಪಟ್ಟಾಂಗ ಹೊಡೆಯುತ್ತಿದ್ದರೂ ನನ್ನ ದೃಷ್ಟಿ ಮಾತ್ರ ನಮ್ಮ ನೆರಳ ಮೇಲೆಯೆ. ಸೂರ್ಯನಿಗೆ ಬೆನ್ನು ಹಾಕಿ ನಡೆಯುತ್ತಿದ್ದ ನಮ್ಮ ಮುಂದೆ ಉದ್ದೂದ್ದ ನೆರಳುಗಳು. ಆದರೂ ನನ್ನ ನೆರಳು ಅಪ್ಪನ ನೆರಳಿಗಿಂತ ಚಿಕ್ಕದು. ನನ್ನ ನೆರಳು ಅಪ್ಪನ ನೆರಳಿಗಿಂತ ಉದ್ದ ಕಾಣಬೇಕೆಂದು ಮುಂದೆ ಮುಂದೆ ಓಡುತ್ತಿದ್ದೆ. ಅಥವಾ ಅಪ್ಪನ ನೆರಳನ್ನ ತುಳಿಯುತ್ತಾ ಹಿಂದೆ ಹಿಂದೆ ಬರುತ್ತಿದ್ದೆ. ಅಪ್ಪ ನಗುತ್ತಿದ್ದರು.

ಇತ್ತೀಚೆಗೆ ನನ್ನ ಓದು ಮುಗಿಸಿ ಕೆಲಸ ಸಿಕ್ಕ ನಂತರ ಊರಿಗೆ ಹೋದಾಗ ಅಪ್ಪ ಯಾಕೋ ನಿಧಾನವಾಗಿ ನಡೆಯುತ್ತಿದ್ದಾರಲ್ಲ ಅನಿಸಿತ್ತು. ಆಮೇಲೆ ಅದನ್ನು ಮರೆತೇ ಬಿಟ್ಟಿದ್ದೆ. ಆದರೆ ನಿನ್ನ ಬಿಟ್ಟು ಇಲ್ಲಿರಲಾರೆವು, ನಾವೂ ಅಲ್ಲಿಗೇ ಬರುತ್ತೇವೆ ಎಂದು ಪತ್ರ ಬರೆದು ಇಲ್ಲಗೇ ಬಂದರಲ್ಲ, ಅವತ್ತು ಮಾತ್ರ ಇದ್ದಕ್ಕಿದ್ದಂತೆ ಅಪ್ಪನಿಗೆ ವಯಸ್ಸಾಗುತ್ತಿದೆ ಎನಿಸಿ ಕಸಿವಿಸಿಯಾಗತೊಡಗಿತ್ತು. ಸಂಜೆ ಅಪ್ಪನೊಂದಿಗೆ ವಾಕಿಂಗ್ ಹೊರಟರೆ ಅರೇ! ನನ್ನ ನೆರಳು ಅಪ್ಪನ ನೆರಳಿಗಿಂತ ಉದ್ದ! ಅಪ್ಪ ಕುಗ್ಗಿದ್ದಾರೆ ಅನಿಸಿ ಅಪ್ಪನ ಮುಖ ನೋಡಿದರೆ ಅವರಿಗೆ ಮುಳುಗುತ್ತಿರುವ ಸೂರ್ಯನ ಕಿರಣಗಳೂ ಕಣ್ಣಿಗೆ ಚುಚ್ಚಿದಂತಾಗುತ್ತಿತ್ತೇನೋ, ಸೂರ್ಯನಿಗೆ ನನ್ನನ್ನು ಅಡ್ಡ ಮಾಡಿಕೊಂಡು ನನ್ನ ನೆರಳಿನಲ್ಲಿ ಬರುತ್ತಿದ್ದರು. ಖುಷಿಯೋ, ದುಃಖವೋ, ಉಕ್ಕಿಬಂದ ಮಮತೆಯೋ ಗೊತ್ತಾಗದೇ ನಿಧಾನವಾಗಿ ಅವರ ಕೈ ಹಿಡಿದುಕೊಂಡು ನಡೆಯತೊಡಗಿದೆ...

ಮಂಗಳವಾರ, ಸೆಪ್ಟೆಂಬರ್ 29, 2009

ನಮ್ಮ ದಾರಿ ಬರಿ ಚಂದ್ರನವರೆಗೆ...?



ಅಂದು ಅಕ್ಟೋಬರ್ 22,2008. ಆಂಧ್ರಪ್ರದೇಶದ ಶ್ರೀಹರಿ ಕೋಟದಲ್ಲಿ ಮೊದಲ ಹೆರಿಗೆಯ ಸಂಭ್ರಮ ಹಾಗೂ ಆತಂಕ. ಇಡೀ ದೇಶ ಉಸಿರು ಬಿಗಿ ಹಿಡಿದು ಕುಳಿತಿತ್ತು. ಎಲ್ಲರ ಕಣ್ಣು ಟಿವಿಯಲ್ಲಿ ಬರುವ ಬ್ರೇಕಿಂಗ್ ನ್ಯೂಸ್‌ನತ್ತಲೇ. ಬೆಳಗ್ಗೆ 6.22ಕ್ಕೆ ಸರಿಯಾಗಿ ಹಾರಿತಲ್ಲ ಗಗನನೌಕೆ, ಪ್ರಾರಂಭವಾಯಿತಲ್ಲ ಚಂದ್ರಯಾನ, ಇಡೀ ದೇಶವೇ ಆತ್ಮವಿಶ್ವಾಸದ ಗೆಲುವಿನ ಸಂಭ್ರಮದಲ್ಲಿ ಮಿಂದೆದ್ದಿತು. ಅದಕ್ಕೆ ಕಾರಣವೂ ಇತ್ತು. ಅದು ಭಾರತದ ಮೊದಲ ಚಂದ್ರಯಾನ ಯೋಜನೆಯಾಗಿದ್ದುದು ಮಾತ್ರವಲ್ಲ ಸಂಪೂರ್ಣವಾಗಿ ಸ್ವದೇಶೀ ನಿರ್ಮಿತವಾಗಿತ್ತು.
1998ರಲ್ಲಿ ಪೋಖ್ರಾನ್‌ನಲ್ಲಿ ಭಾರತ ತನ್ನ ಅಣುಶಕ್ತಿ ಪ್ರದರ್ಶಿಸಿದ ದಿನವೂ ಹೀಗೆಯೇ ಸಂಭ್ರಮಾಚರಣೆ ನಡೆದಿತ್ತು. ಆದರೆ ಅದಕ್ಕೆ ಅಮೆರಿಕವೂ ಸೇರಿದಂತೆ ಹಲವು ಮುಂದುವರಿದ ದೇಶಗಳು ಕೆಂಗಣ್ಣು ಬೀರಿ, ಭಾರತಕ್ಕೆ ನೀಡುವ ತಮ್ಮೆಲ್ಲಾ ಸಹಾಯ, ಸಹಕಾರವನ್ನು ನಿಲ್ಲಿಸಿದ್ದವು. ಆದರೆ ಭಾರತೀಯ ವಿಜ್ಞಾನಿಗಳು ಅದನ್ನೇ ಸವಾಲಾಗಿ ಪರಿಗಣಿಸಿ ಸಂಪೂರ್ಣ ಸ್ವದೇಶಿ ನಿರ್ಮಿತ ರಾಕೆಟನ್ನು ತಯಾರಿಸಿದರು. ಅದೇ ಚಂದ್ರಯಾನದತ್ತ ಮೊದಲ ಹೆಜ್ಜೆಯಾಯಿತು.
ಚಂದ್ರಯಾನ ನಡೆದ ಈ ಒಂದು ವರುಷದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ತಲೆ ಎತ್ತಿನಡೆಯುವಂಥ ಹಲವು ಬದಲಾವಣೆಗಳಾಗಿವೆ. ಚಂದ್ರನತ್ತ ಬಾಹ್ಯಾಕಾಶನೌಕೆಯನ್ನು ಕಳಿಸಿದ ಪ್ರತಿಷ್ಠಿತ ನಾಲ್ಕನೇ ದೇಶವಾಗಿ ಭಾರತ ಹೊರಹೊಮ್ಮಿದೆ. ನಿಗದಿತ ಅವಗೆ ಮುಂಚೆಯೇ ಭೂಮಿಯೊಡನೆ ತನ್ನ ಸಂಪರ್ಕ ಕಳೆದುಕೊಂಡರೂ ಮೊದಲ ಚಂದ್ರಯಾನ ಅಂದುಕೊಂಡಿದ್ದ ಕೆಲಸವನ್ನೆಲ್ಲಾ ಮಾಡಿ ಮುಗಿಸಿದೆ. ಚಂದ್ರನ ಮೇಲೆ ನೀರಿದೆಯೇ ಎಂಬ ಪ್ರಶ್ನೆಗೆ ಸಾಕ್ಷಿ ಸಮೇತ ಉತ್ತರ ಕೊಟ್ಟಿದೆ. ಆರ್ಥಿಕ ಹಿಂಜರಿತವನ್ನು ಭಾರತ ದೃಢವಾಗಿ ಎದುರಿಸಿ ನಿಂತಿದೆ. "ಭಾರತ ಚಂದ್ರಯಾನದತ್ತ ಧಾಪುಗಾಲಿಡುತ್ತಿದೆ. ನಾವು ನಮ್ಮ ಸಾರ್ವಭೌಮತ್ವವನ್ನು ಬಿಟ್ಟುಕೊಡಬಾರದು' ಎಂದು ಅಧ್ಯಕ್ಷ ಒಬಾಮ ತನ್ನ ದೇಶಿಗರಿಗೆ ಎಚ್ಚರಿಸುವ ಮಟ್ಟಿಗೆ ಅಮೆರಿಕ ಹೆದರಿದೆ. ಈ ಎಲ್ಲ ಸಂಭ್ರಮಗಳ ಮಧ್ಯೆ ಭಾರತ ಮತ್ತೊಂದು ಚಂದ್ರಯಾನಕ್ಕೆ ಸಿದ್ಧಮಾಡಿಕೊಳ್ಳುತ್ತಿದೆ.
ಅಂದುಕೊಂಡಂತೆ ಆಗಿದ್ದರೆ ಈ ವರುಷದ ಕೊನೆಯಲ್ಲೇ ಎರಡನೇ ಚಂದ್ರಯಾನ ಪ್ರಾರಂಭವಾಗಬೇಕಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಅದೀಗ 2013ಕ್ಕೆ ಎಂದು ನಿರ್ಧಾರವಾಗಿದೆ. ನಿಜ ಹೇಳಬೇಕೆಂದರೆ ಭಾರತ ವಿಜ್ಞಾನಿಗಳ ಮೂಲ ಆಸಕ್ತಿ ಇರುವುದು ಈ ಎರಡನೇ ಚಂದ್ರಯಾನದ ಮೇಲೆಯೇ. ಮೊದಲನೆಯದು ಕೇವಲ ಮುನ್ನುಡಿಯಷ್ಟೆ. ಸುಮಾರು 386 ಕೋಟಿ ರೂಗಳ ವೆಚ್ಚದಲ್ಲಿ (ಜಗತ್ತಿನಲ್ಲಿಯೇ ಅತಿ ಅಗ್ಗದಲ್ಲಿ ತಯಾರಾದ ಗಗನನೌಕೆ ಇದು ಎಂಬುದೂ ಒಂದು ಸಾಧನೆ. ಮುಂದುವರಿದ ದೇಶಗಳಲ್ಲಿ ಇದೇ ಯೋಜನೆಗೆ ಸಾವಿರಾರು ಕೋಟಿ ರೂ.ಗಳು ಖರ್ಚಾಗಿದೆ.) ಚಂದ್ರಯಾನ ಮಾಡಿದ ಆ ನೌಕೆಯಿಂದ ಹಲವಾರು ವಿಷಯಗಳು ತಿಳಿದುಬಂದವು. ಸೆಕೆಂಡಿಗೆ ಒಂದರಂತೆ, ಚಂದ್ರನ ಮೇಲ್ಮೈಯನ್ನು ವಿವಿಧ ಕೋನಗಳಿಂದ ಸೆರೆ ಹಿಡಿದ ಸಾವಿರಾರು ಚಿತ್ರಗಳನ್ನು ಭೂಮಿಗೆ ಕಳುಹಿಸುತ್ತಿತ್ತು. ಇದರಿಂದ ಚಂದ್ರನ ಮೇಲಿನ ತಗ್ಗು, ದಿನ್ನೆ, ಮೇಲ್ಮೈರಚನೆಯ ಮಾಹಿತಿ, ಅಲ್ಲಿರಬಹುದಾದ ನೀರು, ಖನಿಜಗಳ ವಿವರ ನಮಗೆ ಲಭ್ಯವಾಗುತ್ತಿದೆ. ಅಲ್ಲದೆ ಮೊದಲನೇ ಚಂದ್ರಯಾನದಿಂದ ಚಂದ್ರನಲ್ಲಿ ಹೊರಸೂಸುವ ವಿಕಿರಣ ಈ ಮೊದಲು ಲೆಕ್ಕ ಹಾಕಿದ್ದಕ್ಕಿಂತ ಹೆಚ್ಚಿದೆ ಎಂಬುದು ತಿಳಿಯಿತು. ಆದ್ದರಿಂದಲೇ ನೌಕೆಯ ಕೆಲವು ಉಪಕರಣಗಳು ಸರಿಯಾಗಿ ವರ್ತಿಸದೆ, ನಿಗದಿತ ಅವಧಿಗೆ ಮೊದಲೇ ಮೊದಲ ಚಂದ್ರಯಾನ ಮುಗಿಯುವಂತಾಯಿತು. ಆದರೆ ಈಗ ತಿಳಿದ ಸರಿಯಾದ ಮಾಹಿತಿಯಿಂದ ಮುಂದಿನ ಚಂದ್ರಯಾನದಲ್ಲಿ ಮತ್ತಷ್ಟು ಸುರಕ್ಷತೆಯ, ಉಷ್ಣ ನಿರೋಧಕಗಳನ್ನು ಅಳವಡಿಸಿ ಕೊಳ್ಳಬಹುದು. ಹೀಗೆ ಹಲವು ಪ್ರಾಯೋಗಿಕ ಸಮಸ್ಯೆಗಳಿಗೆ ಮೊದಲ ಚಂದ್ರಯಾನ ಉತ್ತರ ದೊರಕಿಸಿಕೊಟ್ಟಿದೆ.

ಮೊದಲ ಚಂದ್ರಯಾನದಿಂದಾದ ಇನ್ನೊಂದು ಪ್ರಮುಖ ಲಾಭವೆಂದರೆ ಅಮೆರಿಕದೊಂದಿಗಿನ ರಾಜತಾಂತ್ರಿಕ ಸಂಬಂಧ ಸುಧಾರಿಸಿರುವುದು. ಚಂದ್ರನ ಮೇಲಿನ ತನ್ನ ಹಿಡಿತವನ್ನು ಬಡಪೆಟ್ಟಿಗೆ ಬಿಡಲೊಪ್ಪದ ಅಮೆರಿಕದ ಈಗ ಅನಿವಾರ್ಯವಾಗಿ ಸಂಧಾನಕ್ಕೆ ಬಂದಿದೆ. ಅದರ ಫಲವಾಗಿಯೇ ಕಳೆದ ಆಗಸ್ಟ್ ೨೦ರ ಮಧ್ಯರಾತ್ರಿ ಭಾರತದ ಚಂದ್ರಯಾನದ ಉಪಗ್ರಹದೊಂದಿಗೆ ಅಮೆರಿಕದ ನಾಸಾದ ಉಪಗ್ರಹವೂ ಸೇರಿ, ಚಂದ್ರನ ಮೇಲ್ಮೈಯಲ್ಲಿ ನೀರಿನ ಪಸೆಯನ್ನು ಪತ್ತೆ ಹಚ್ಚುವ ಜಂಟಿ ಕಾರ್ಯಾಚರಣೆ ನಡೆಸಿದ್ದು. ಈ ಎರಡೂ ಉಪಗ್ರಹಗಳು ಸೆಕೆಂಡಿಗೆ 1.6 ಕಿ.ಮೀ ವೇಗದಲ್ಲಿ ಚಂದ್ರನ ಉತ್ತರ ಧ್ರುವದ 200ಕಿ.ಮೀ ಮೇಲಿನಿಂದ ಒಟ್ಟಿಗೇ ಸಮೀಕ್ಷೆ ನಡೆಸಿದ್ದವು. ಈ ಸಮೀಕ್ಷೆಯಲ್ಲಿಯೇ ಚಂದ್ರನ ಮೇಲೆ ನೀರಿರುವ ಅಂಶ ಖಚಿತಗೊಂಡಿದ್ದು. ಇದು ಭಾರತದ ಬಾಹ್ಯಾಕಾಶ ಸಾಧನೆಗೆ ಸಂದ ಐತಿಹಾಸಿಕ ವಿಜಯ.


ಈ ಹೊತ್ತಿಗಾಗಲೇ 425 ಕೋಟಿ ರೂಪಾಯಿಗಳ ಎರಡನೇ ಚಂದ್ರಯಾನದ ಸಂಪೂರ್ಣ ನೀಲನಕ್ಷೆ ಸಿದ್ಧವಾಗಿದೆ. ನೌಕೆ ಎಲ್ಲಿ ಇಳಿಯಬೇಕು, ಅಲ್ಲಿ ಏನು ಮಾಡಬೇಕು ಎಂಬುದರ ರೂಪುರೇಷೆ ಗೊತ್ತುಮಾಡಲಾಗಿದೆ. ಇದರ ವಿಶೇಷವೆಂದರೆ ಅದರಲ್ಲಿ ಪ್ರಥಮವಾಗಿ ಬಳಸಲಾಗುತ್ತಿರುವ ಅಣು ಇಂಧನ. ಅದನ್ನು ನಮಗೆ ಕಾಣದ ಚಂದ್ರನ ಮುಖದ ಇನ್ನೊಂದು ಭಾಗದಲ್ಲಿ ಕೇವಲ ಕತ್ತಲಿರುವುದರಿಂದ (ಅಲ್ಲಿ ಸೌರಶಕ್ತಿ ದೊರೆಯುವುದಿಲ್ಲವಾದ್ದರಿಂದ) ಅಲ್ಲಿ ಅಣು ಇಂಧನವನ್ನು ಬಳಸಿಕೊಳ್ಳಲಿದ್ದಾರೆ. ಅಣು ಇಂಧನ ಇರುವುದರಿಂದಲೇ ಈ ನೌಕೆಗೆ ಹಿಂದೆಂದಿಗಿಂತಲೂ ಹೆಚ್ಚಿನ ಮಟ್ಟಿಗೆ ಸುರಕ್ಷೆಗೆ ಒತ್ತು ಕೊಡಲಾಗಿದೆಯಂತೆ. ಅದಕ್ಕಾಗಿ ಇತ್ತೀಚಿನ ಆಧುನಿಕ ಉಪಕರಣಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಎರಡನೇ ಚಂದ್ರಯಾನಕ್ಕೆ ರಷ್ಯಾದ ತಾಂತ್ರಿಕ ನೆರವಿದ್ದರೂ, ಅದು ಸಂಪೂರ್ಣವಾಗಿ ನಮ್ಮದೇ ಯೋಜನೆ. ಅದರ ಕುರಿತು ನಮ್ಮ ವಿಜ್ಞಾನಿಗಳಿಗೆ ಹಲವು ಕನಸುಗಳಿವೆ. ಚಂದ್ರನ ಧ್ರುವ ಭಾಗದಲ್ಲಿ ನಿರಂತರವಾಗಿ ಸೂರ್ಯನ ಬೆಳಕು ಬೀಳುತ್ತಿರುತ್ತದೆ. ಅಲ್ಲಿ ಸೌರಶಕ್ತಿಯ ಘಟಕವನ್ನೂ ಸ್ಥಾಪಿಸುವ ಯೋಜನೆಯೂ ಚಂದ್ರಯಾನ-2ರ ಮುಂದಿದೆ. ಅಲ್ಲಿಯೇ ಹಿಮ ಹಾಗೂ ಹೈಡ್ರೋಜನ್ ಇರಬಹುದಾದ ಸೂಚನೆಯೂ ಸಿಕ್ಕಿದೆ. ಅಲ್ಲಿಯ ಮಣ್ಣಿನಲ್ಲಿ ನೀರಿನ ಪಸೆ ಇರುವುದೀಗ ಖಚಿತವಾಗಿರುವುದರಿಂದ, ನೆಲವನ್ನು ಕೊರೆದು ಅಂತರ್ಜಲ ಹುಡುಕುವ ಪ್ರಯತ್ನವನ್ನೂ ಮಾಡಬಹುದು ಎಂದು ಅಬ್ದುಲ್ ಕಲಾಂ ಸಲಹೆ ನೀಡಿದ್ದಾರೆ. ಅಂಥ ಪ್ರದೇಶದಲ್ಲಿ ಒಂದು ಶಾಶ್ವತ ವಾಸ್ತವ್ಯ ರೂಪಿಸುವ ಯೋಜನೆಯೂ ಇದೆ. ಅದು ಮುಂದೆ ಚಂದ್ರನ ಅಂಗಳಕ್ಕೆ ಬರಬಹುದಾದ ಗಗನಯಾತ್ರಿಗಳಿಗೆ ಮನೆಯೂ ಅಗಬಹುದು! ಈ ಕನಸಿಗೂ ಕಾರಣವಿದೆ. 2020ರ ಒಳಗೆ ನಡೆಯುವ ಭಾರತದ ಮೂರನೇ ಚಂದ್ರಯಾನದಲ್ಲಿ ಭಾರತೀಯ ಗಗನಯತ್ರಿಯೊಬ್ಬ ಚಂದ್ರನಲ್ಲಿಗೆ ಹಾರಲಿದ್ದಾನೆ! ಭಾರತ ಈಗಾಗಲೇ ಅದಕ್ಕೆ 12,000ಕೋಟಿ ರೂ.ಗಳನ್ನು ಅದಕ್ಕಾಗಿ ಮೀಸಲಿರಿಸಿದೆ. ಅಲ್ಲದೆ ಈಗ ಮೊದಲ ಚಂದ್ರಯಾನದ ವಿಜಯದಿಂದಾಗಿ ಇತರ ದೇಶಗಳೂ ನಮ್ಮೊಡನೆ ಭಾಗವಹಿಸಲು ಹಾತೊರೆಯುತ್ತಿವೆ.


ಇಸ್ರೋದ ಅಧ್ಯಕ್ಷ ಮಾಧವನ್ ನಾಯರ್ ಹೇಳಿರುವಂತೆ ಕ್ಯಾಮೆರಾಗಳನ್ನು ಉಪಗ್ರಹದ ಆಯಕಟ್ಟಿನ ಜಾಗದಲ್ಲಿ ಸರಿಯಾಗಿ ಇಡಲಾಗುತ್ತಿದೆಯಂತೆ. ಅವರು ಅಷ್ಟೊಂದು ವಿಶ್ವಾಸದಿಂದ ಅದನ್ನು ಹೇಳಿರುವುದಕ್ಕೂ ಕಾರಣವಿದೆ. ಚಂದ್ರಯಾನ-1ರಲ್ಲಿಟ್ಟ ಕ್ಯಾಮೆರಾಗಳು ಅದೆಷ್ಟರ ಮಟ್ಟಿಗೆ ಸರಿಯಾಗಿ ಕಾರ್ಯ ನಿರ್ವಹಿಸಿವೆ ಎಂದರೆ ನಮ್ಮ ವಿಜ್ಞಾನಿಗಳು ಇತ್ತೀಚೆಗೆ ನಡೆದ ಸೂರ್ಯಗ್ರಹಣದ ಸಮಯದಲ್ಲಿ ಅದರ ಕ್ಯಾಮೆರಾಗಳನ್ನು ಇಲ್ಲಿಂದಲೇ ಸುಲಭವಾಗಿ ಭೂಮಿಯ ಕಡೆ ತಿರುಗಿಸಿದ್ದರು!


ಚಂದ್ರಯಾನ ಕೇವಲ ದುಂದುವೆಚ್ಚ, ಮುಂದುವರಿದ ದೇಶಗಳ ಷೋಕಿ, "...ಜುಟ್ಟಿಗೆ ಮಲ್ಲಿಗೆ ಹೂ' ಎಂದೆಲ್ಲಾ ಜರಿಯುವವರೂ ಇದ್ದಾರೆ. ಆದರೆ ಚಂದ್ರಯಾನದ ಹಿಂದೆ ಆರ್ಥಿಕ ಉದ್ದೇಶವೂ ಬಹಳಷ್ಟಿದೆ. ಚಂದ್ರಯಾನ-1ರ ಪ್ರಾಥಮಿಕ ಉದ್ದೇಶವೇ ಅಲ್ಲಿರುವ ಖನಿಜಗಳ ಪತ್ತೆ ಹಚ್ಚುವಿಕೆಯಾಗಿತ್ತು. ಅದರಲ್ಲಿ ಮುಖ್ಯವಾದದ್ದು ಹೀಲಿಯಂ ಹುಡುಕಾಟ. ಮುಂದಿನ ಜನಾಂಗದ ಶಕ್ತಿಯ ಮೂಲ ಎಂದೇ ಬಿಂಬಿತವಾಗಿರುವ ಹೀಲಿಯಂ ಅಲ್ಲಿ ಸಾವಿರಾರು ಟನ್ನುಗಟ್ಟಲೆ ವ್ಯರ್ಥವಾಗಿ ಬಿದ್ದಿರುವ ಸಾಧ್ಯತೆ ಇದೆ. (ಒಂದು ಟನ್ ಹೀಲಿಯಂ ಒಂದು ಸಾವಿರ ಕೋಟಿ ರೂಪಾಯಿಗೆ ಸಮ) ಅದೃಷ್ಟವಶಾತ್ ಅದನ್ನು ಅಲ್ಲಿಂದ ಇಲ್ಲಿಗೆ ತರುವುದು ಅತ್ಯಂತ ಸುಲಭ. ಹೀಲಿಯಂನ್ನು ಕಾಯಿಸಿದರೆ ಅದು ಅನಿಲರೂಪ ತಾಳುತ್ತದೆ. ಆನಂತರ ಅದನ್ನು ಸುಲಭವಾಗಿ ಭೂಮಿಗೆ ರವಾನಿಸಬಹುದು!


ಬಾಹ್ಯಾಕಾಶ ಸಂಶೋಧನೆಗಳನ್ನು ಅನಗತ್ಯ ಎಂದು ಹೀಗಳೆಯುವದರಲ್ಲಿ ಯಾವುದೇ ಅರ್ಥವಿಲ್ಲ. ಅದರಿಂದ ತತ್‌ಕ್ಷಣಕ್ಕೆ ಯಾವುದೇ ಆರ್ಥಿಕ ಲಾಭವಾಗದಿರಬಹುದು. ಆದರೆ ಅವು ಇಡೀ ದೇಶದ ಜನರ ಮನಸ್ಥಿತಿಯನ್ನು ಬದಲಾಯಿಸುತ್ತವೆ. ಕನಸುಗಳನ್ನು ಬಿತ್ತುತ್ತವೆ. ಚಂದ್ರಯಾನದ ಪ್ರತಿ ಹೆಜ್ಜೆಯೂ ಯುವಕರನ್ನು ಮೂಲ ವಿಜ್ಞಾನ ಕ್ಷೇತ್ರದತ್ತ ಆಕರ್ಷಿಸುವಂತೆ ಮಾಡಿದರೆ ಅದಕ್ಕಿಂತ ದೊಡ್ಡ ಲಾಭ ಬೇಕೆ? ಕೇವಲ ಬಹುರಾಷ್ಟ್ರೀಯ ಕಂಪನಿಗಳನ್ನು ಕಟ್ಟುವಲ್ಲಿ ತಮ್ಮ ಪ್ರತಿಭೆಯನ್ನು ಪಣಕ್ಕಿಡುತ್ತಿರುವ ನಮ್ಮ ವಿದ್ಯಾರ್ಥಿಗಳು ಇದರಿಂದಲಾದರೂ ಮೂಲ ವಿಜ್ಞಾನದ ಅಧ್ಯಯನ, ಸಂಶೋಧನೆ ಮಾಡುವತ್ತ ಮನಸ್ಸು ಹರಿಸಿದರೆ ದೇಶದ ಭವಿಷ್ಯವೇ ಬದಲಾಗದಿರದೇ?

ಮಂಗಳವಾರ, ಸೆಪ್ಟೆಂಬರ್ 1, 2009

"ಸುಪರ್" ಗುರುವಿಗೆ ಸಲಾಮ್

ಸತೀಶ ಕುಮಾರನಿಗೆ ಚಿಕ್ಕಂದಿನಿಂದಲೂ ಓದುವ ಹುಚ್ಚು. ಆದರೆ ಅವನ ತಾಯಿಗೆ ಅದೇ ಚಿಂತೆ. ತನಗೆ ಬರುವ 200 ರೂ. ವಿಧವಾ ವೇತನದಲ್ಲಿ ಊಟಕ್ಕೆ ಅಕ್ಕಿ ಕೊಳ್ಳದೇ, ಅವನನ್ನು ಉತ್ತಮ ಶಾಲೆಗೆ ಕಳಿಸುವುದು ಕನಸಿನ ಮಾತೇ ಸರಿ. ಆದರೆ ಈ ವರುಷದ ಐಐಟಿ ಪ್ರವೇಶ ಪರೀಕ್ಷೆಯಲ್ಲಿ ,ರಾಷ್ಟ್ರಮಟ್ಟದಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರ ಪಟ್ಟಿಯಲ್ಲಿ ಇವನ ಹೆಸರೂ ಇದೆ !

ಜಾಡಮಾಲಿಯೊಬ್ಬನ ಮಗ ನಾಗೇಂದ್ರ ಓದಿದ್ದು ಹಳ್ಳಿಯ ಸರಕಾರಿ ಶಾಲೆಯಲ್ಲಿ. ಆದರೆ ಯಾವತ್ತೂ ಶಾಲೆಗೆ ಈತನೇ ಮೊದಲಿಗ. ಆದರೆ ಮನೆಯಲ್ಲಿ ಊಟಕ್ಕೂ ಗತಿ ಇಲ್ಲದ ಬಡತನ. ಶಾಲೆಗೆ ಪ್ರವೇಶ ಪಡೆಯಲಿಕ್ಕೇ ಇವನು ತುಂಬಾ ಹೋರಾಟ ಮಾಡಬೇಕಾಗಿತ್ತು. ಪರೀಕ್ಷೆ ಸಮಯದಲ್ಲಿ ಪುಸ್ತಕಗಳನ್ನು ಕಡ ತಂದು ಓದಬೇಕಾಗುತ್ತಿತ್ತು. ಆದರೆ ಇಂದು ರಾಷ್ಟ್ರದ ಪ್ರಖ್ಯಾತ ಶಿಕ್ಷಣ ಸಂಸ್ಥೆ ಐಐಟಿಯಲ್ಲಿ ವಿದ್ಯಾರ್ಥಿ!

ಬಿಹಾರದಲ್ಲೀಗ ಇಂಥ ಪವಾಡಗಳು ಜರುಗುತ್ತಿವೆ. ಇವರ್‍ಯಾರೂ ಆರ್ಥಿಕವಾಗಿ ಸದೃಢರಲ್ಲ, ಆದರೆ ಎಲ್ಲರೂ ಬುದ್ಧಿವಂತರು ಹಾಗೂ ಎಲ್ಲರೂ ರಾಮಾನುಜನ್ ಸ್ಕೂಲ್ ಆಫ್ ಮ್ಯಾಥಮ್ಯಾಟಿಕ್ಸ್‌ನಲ್ಲಿ ತರಬೇತಿ ಪಡೆದವರು. ಬಡತನದ ಬೇಗೆಯಲ್ಲಿ ಕಮರಿ ಹೋಗಬೇಕಾಗಿದ್ದ ಈ ಪ್ರತಿಭೆಗಳಿಗೆ ಸಾಣೆ ಹಿಡಿದು ಬೆಳಕಿಗೆ ತಂದಿದ್ದೇ ಒಂದು ಯಶೋಗಾಥೆ.

ಪ್ರತಿ ಏಪ್ರಿಲ್‌ನಲ್ಲಿ ಸುಮಾರು ಎರಡೂವರೆ ಲಕ್ಷ ವಿದ್ಯಾರ್ಥಿಗಳು, ಭಾರತದ ಏಳು ಪ್ರಖ್ಯಾತ ವಿದ್ಯಾಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಹಲವು ತಿಂಗಳ ಪೂರ್ವ ಸಿದ್ಧತೆಯೊಂದಿಗೆ ಐಐಟಿ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಪ್ರವೇಶ ಪರೀಕ್ಷೆ ಬರೆಯುತ್ತಾರೆ. ಆರು ಗಂಟೆಗಳ ಕ್ಲಿಷ್ಟಕರ ಪರೀಕ್ಷೆಯಲ್ಲಿ ಆಯ್ಕೆಯಾಗುವುದು ಕೇವಲ ಐದು ಸಾವಿರ ವಿದ್ಯಾರ್ಥಿಗಳು! ಸಾಮಾನ್ಯವಾಗಿ ಆಯ್ಕೆಯಾಗುವ ಮಧ್ಯಮ ವರ್ಗ ಮತ್ತು ಮೇಲ್ಮಧ್ಯಮ ವರ್ಗದ ವಿದ್ಯಾರ್ಥಿಗಳು ಇದಕ್ಕಾಗಿ ಖಾಸಗಿ ಟ್ಯೂಶನ್ ತೆಗೆದುಕೊಂಡಿರುತ್ತಾರೆ. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ತೀರಾ ಕೆಳವರ್ಗದ, ಬಡತನ ರೇಖೆಗಿಂತ ಎಷ್ಟೋ ಕೆಳಗಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳೂ ಐಐಟಿಗೆ ಪ್ರವೇಶ ಪಡೆಯುತ್ತಿದ್ದಾರೆ. ಆದರ ಸಂಪೂರ್ಣ ಕ್ರೆಡಿಟ್ ಸಲ್ಲಬೇಕಾಗಿರುವುದು - ಸದಾ ಅನಕ್ಷರತೆ, ಬಡತನ, ಭ್ರಷ್ಟಾಚಾರದಿಂದಲೇ ಕುಖ್ಯಾತಿಗೊಳಗಾಗಿರುವ ಬಿಹಾರದ ರಾಜಧಾನಿ ಪಾಟ್ನಾದಲ್ಲಿರುವ - ಆನಂದ ಕುಮಾರ್‌ಗೆ ಮತ್ತು ಅವರ ಸಂಸ್ಥೆ 'ರಾಮಾನುಜನ್ ಸ್ಕೂಲ್ ಆಫ್ ಮ್ಯಾಥಮೆಟಿಕ್ಸ'ಗೆ.


ಪ್ರತಿ ವರುಷ, ಆರ್ಥಿಕವಾಗಿ ಹಿಂದಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ಐಐಟಿ ತರಬೇತಿ ನೀಡುವ ’ಸುಪರ್ ೩೦’ ಎಂಬ ಪರಿಕಲ್ಪನೆ ಆನಂದಕುಮಾರ್‌ಗೆ ಬಂದದ್ದೇ "ರಾಮಾನುಜನ್ ಸ್ಕೂಲ್ ಆಫ್ ಮ್ಯಾಥಮ್ಯಾಟಿಕ್ಸ್’ ಸಂಸ್ಥೆಯ ಸ್ಥಾಪನೆಗೆ ಕಾರಣವಾಯ್ತು. ಗಣಿತದ ಶಿಕ್ಷಕ ಹಾಗೂ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪತ್ರಿಕೆಗಳ ಅಂಕಣಕಾರರಾಗಿರುವ ಆನಂದಕುಮಾರ್ ಬಂದಿದ್ದೂ, ಮನೆಯಲ್ಲಿ ಹಪ್ಪಳ ಮಾಡಿ ಮಾರುವುದನ್ನೇ ಉದ್ಯೋಗ ಮಾಡಿಕೊಂಡಿದ್ದ ಕುಟುಂಬದಿಂದಲೇ. ಹೀಗಾಗಿಯೇ ಬಡತನದ ಪರಿಣಾಮಗಳೂ ಮತ್ತು ಕೇವಲ ಹುಟ್ಟಿನಿಂದ ಬರುವ ಬುದ್ಧಿವಂತಿಕೆಯೊಂದೇ ಜೀವನದಲ್ಲಿ ಯಶಸ್ಸು ತಂದುಕೊಡಲು ಸಾಧ್ಯವಿಲ್ಲ ಎಂಬುದು ಅವರಿಗೆ ಚೆನ್ನಾಗಿಯೇ ಗೊತ್ತಿತ್ತು. ಪಾಟ್ನಾದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಅಭಯಾನಂದ್ (ಈಗ ಅವರೂ ತರಬೇತಿ ಕೇಂದ್ರ ಆರಂಭಿಸಿದ್ದು, ಅದೂ ಯಶಸ್ವಿಯಾಗಿದೆ) ಜತೆ ಕೆಲಸ ಮಾಡುತ್ತಿದ್ದ ಆನಂದಕುಮಾರ್ 2002ರಲ್ಲಿ ತಮ್ಮ ಮನೆಯ ಒಂದು ಭಾಗದಲ್ಲೇ ವಿದ್ಯಾರ್ಥಿಗಳಿಗೆ ಐಐಟಿ ತರಬೇತಿ ನೀಡಲು ಪ್ರಾರಂಭಿಸಿದರು. ಅದು ತರಗತಿ ಎನ್ನುವುದಕ್ಕಿಂತ ತಗಡಿನ ಹೊದಿಕೆ ಹೊದೆಸಿದ ದನದ ಕೊಟ್ಟಿಗೆಯಂತಿದೆ. ಕುಳಿತುಕೊಳ್ಳಲು ಉದ್ದನೆಯ ಮರದ ಬೆಂಚುಗಳು. ಅಲ್ಲಿಯ ಪಾಠ ಕೇಳುವುದಕ್ಕೆ ಅಕ್ಕಪಕ್ಕದ ಹಳ್ಳಿಗಳಿಂದ ಬಸ್ಸಿನಲ್ಲಿ, ಸೈಕಲ್ಲಿನಲ್ಲಿ, ಅಥವಾ ಪಕ್ಕದ ಉಚಿತ ಹಾಸ್ಟೆಲ್‌ನಿಂದ ಬರಿಯ ಕಾಲಿನಲ್ಲಿ ನಡೆಯುತ್ತಾ ವಿದ್ಯಾರ್ಥಿಗಳು ಬರುತ್ತಾರೆ. ಆದರೆ ಅಲ್ಲಿ ಸೇರಿದ ಮೂವತ್ತಕ್ಕೆ ಮೂವತ್ತೂ ವಿದ್ಯಾರ್ಥಿಗಳು ಐಐಟಿಯಲ್ಲಿ ಪ್ರವೇಶ ಪಡೆದಿದ್ದಾರೆ !

ಶ್ರೇಷ್ಠ ಗಣಿತಜ್ಞ ರಾಮಾನುಜನ್ ಹೆಸರನ್ನೇ ಹೊತ್ತ ಈ ಸಂಸ್ಥೆಗೆ ಸೇರಲು ಸಾವಿರಾರು ವಿದ್ಯಾರ್ಥಿಗಳು ಸಾಲುಗಟ್ಟುತ್ತಾರೆ. ಆದರೆ ಅಲ್ಲಿ ಸೇರಲು ಬೇಕಾದ ಎರಡು ವಿಶೇಷ ಅರ್ಹತೆಗಳೆಂದರೆ ಅಪಾರ ಬುದ್ಧಿವಂತಿಕೆ ಹಾಗೂ ಬಡತನ! ಕೇವಲ ಅರುವತ್ತು ರೂಪಾಯಿಯ ಅರ್ಜಿಯನ್ನು ಸುಮಾರು ಆರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಖರೀದಿಸುತ್ತಾರೆ. ಅದರಲ್ಲಿ ಮೂವತ್ತು ವಿಶೇಷ ಬುದ್ಧಿವಂತಿಕೆಯ ವಿದ್ಯಾರ್ಥಿಗಳನ್ನು ಆರಿಸಲು ಮೂರು ವಿಧವಾದ ಪರೀಕ್ಷೆಗಳನ್ನು ಬರೆಯಬೇಕಾಗುತ್ತದೆ. ಕ್ಲಿಷ್ಟ, ಹೆಚ್ಚು ಕ್ಲಿಷ್ಟ, ಅತ್ಯಂತ ಹೆಚ್ಚು ಕ್ಲಿಷ್ಟದ ಈ ಪರೀಕ್ಷೆಗಳಲ್ಲಿ ವಿದ್ಯಾರ್ಥಿಯ ಐ.ಕ್ಯು. (ಬುದ್ಧಿಮತ್ತೆ)ಪರೀಕ್ಷಿಸಲಾಗುತ್ತದೆ. ಆಯ್ದ "ಸುಪರ್ 30 ವಿದ್ಯಾರ್ಥಿಗಳಿಗೆ ಮುಂದಿನ ಒಂದು ವರುಷ ಉಚಿತ ಹಾಸ್ಟೆಲ್, ಪಾಠ, ತರಬೇತಿ. ಆದರೆ ಒಂದೇ ಒಂದು ತರಗತಿಯನ್ನೂ ತಪ್ಪಿಸುವಂತಿಲ್ಲ.

ಇಲ್ಲಿ ಇತರ ಕೋಚಿಂಗ್ ಕ್ಲಾಸ್‌ಗಳ ರೀತಿಯಲ್ಲಿ , ಸುಲಭವಾಗಿ ಐಐಟಿಯಲ್ಲಿ ಪ್ರವೇಶ ಪಡೆಯುವುದು ಹೇಗೆ ಎಂದು ಹೇಳಿಕೊಡುವುದಿಲ್ಲ. ಯಾವುದೇ ಅಡ್ಡ ದಾರಿಗಳಿಲ್ಲ. ಏನು ಪಡೆಯಬೇಕೆಂದರೂ ಕಷ್ಟಪಡಲೇಬೇಕು ಎನ್ನುವುದು ಇಲ್ಲಿಯ ಅಲಿಖಿತ ನಿಯಮ. ಆದ್ದರಿಂದಲೇ ಇಲ್ಲಿಯ ವಿದ್ಯಾರ್ಥಿಗಳು ಒಂದು ವರುಷವನ್ನು ಸಂಪೂರ್ಣವಾಗಿ ವಿದ್ಯಾಭ್ಯಾಸದ ಮೇಲೆ ಕೇಂದ್ರೀಕರಿಸಬೇಕು. ಆ ಒಂದು ವರುಷ ಓದುವುದನ್ನು ಬಿಟ್ಟು ಬೇರೇನು ಮಾಡಲೂ ಅವಕಾಶವಿಲ್ಲ. ಅವರಿರುವ ಹಾಸ್ಟೆಲ್‌ನಲ್ಲಿ ಟಿವಿ ಇಲ್ಲ, ಕಂಪ್ಯೂಟರ್ ಇಲ್ಲ. ಆಟವಾಡುವಂತಿಲ್ಲ, ಸಿನಿಮಾ ಇಲ್ಲವೇ ಇಲ್ಲ. ಹಾಗೂ ಅಲ್ಲಿಯ ವಿದ್ಯಾರ್ಥಿಗಳು ಅದನ್ನು ಬಯಸುವುದೂ ಇಲ್ಲ. ಏಕೆಂದರೆ ಇಡೀ ಜಗತ್ತನ್ನೇ ಗೆಲ್ಲುವಷ್ಟು ಬುದ್ಧಿವಂತಿಕೆ ಇದ್ದೂ ಬಡತನದಿಂದಾಗಿ ಕಟ್ಟಿ ಹಾಕಲ್ಪಟ್ಟಿದ್ದೇವೆ ಎಂದು ಅರಿವಾದಾಗ, ಆ ಕಟ್ಟನ್ನು ಒಡೆದುಹಾಕಲು ಏನು ಬೇಕಾದರೂ ಮಾಡಲು ಸಿದ್ಧರಾಗುತ್ತಾರೆ. ಅದಕ್ಕೆ ಇಲ್ಲಿಯ ವಿದ್ಯಾರ್ಥಿಗಳ ಶ್ರಮ ಹಾಗೂ ಅದರ ಪ್ರತಿಫಲವೇ ಸಾಕ್ಷಿ. ಬಹುಶಃ "ಸುಪರ್ 30'ಯ ಯಶಸ್ಸಿನ ಹಿಂದಿರುವ ಗುಟ್ಟೂ ಸಹ ಅದೇ.

ಉದಾಹರಣೆಗೆ "ಸುಪರ್ 30’ಯಲ್ಲಿ ಒಬ್ಬನಾಗಿದ್ದ ಸಂತೋಷ ಕುಮಾರ ಪ್ರತಿ ದಿನ ಬೆಳಗ್ಗೆ ನಾಲ್ಕು ಗಂಟೆ ಓದಿನಲ್ಲಿ ತೊಡಗುತ್ತಿದ್ದ. ಆನಂತರ ಮೂರು ಗಂಟೆ, ಗಣಿತ, ರಸಾಯನ ಶಾಸ್ತ್ರ ಅಥವಾ ಭೌತವಿಜ್ಞಾನದ ಪತ್ರಿಕೆ ಬಿಡಿಸುತ್ತಿದ್ದ. ಸ್ವಲ್ಪ ಸಮಯದ ವಿರಾಮದ ನಂತರ ಸಂಜೆ ಆರರಿಂದ ಒಂಬತ್ತರವರೆಗೆ ಅಂದಿನ ತರಗತಿ. ಆನಂತರ ಮರುದಿನದ ಪರೀಕ್ಷೆಗಾಗಿ ರಾತ್ರಿ ಎರಡು ಗಂಟೆಯವರೆಗೆ ತಯಾರಿ. ಅವನ ಈ ಕಠಿಣ ಶ್ರಮದಿಂದಾಗಿಯೇ ಈ ವರುಷ ಐಐಟಿಗೆ ಆಯ್ಕೆಯಾದ 5000 ವಿದ್ಯಾರ್ಥಿಗಳಲ್ಲಿ ಈತನಿಗೆ 3537ನೇ ಸ್ಥಾನ ದೊರಕಿದೆ.

ವಿದ್ಯಾರ್ಥಿಗಳಿಂದ ಸಾವಿರಾರು ರೂಪಾಯಿ ಪಡೆಯುವ, ವಿದ್ಯಾರ್ಥಿಗಳನ್ನು ಸೆಳೆಯಲು ಯಾವ ಮಟ್ಟದ ಸ್ಪರ್ಧೆಗೂ ಇಳಿಯಲು ಸಿದ್ಧವಿರುವ ಖಾಸಗಿ ಟ್ಯುಟೋರಿಯಲ್‌ಗಳಿಗೆ "ರಾಮಾನುಜನ್ ಶಾಲೆ’ ಸಿಂಹಸ್ವಪ್ನ. ಆದ್ದರಿಂದಲೇ ಅನೇಕ ಬಾರಿ ಆನಂದಕುಮಾರ್ ಅವರ ಮೇಲೆ ಬಾಂಬ್ ದಾಳಿಯಂಥ ಹಲವು ಬಗೆಯ ಕೊಲೆ ಯತ್ನಗಳೂ ನಡೆದಿವೆ. ಈಗಲೂ ಸುತ್ತ ಅಂಗರಕ್ಷಕರನ್ನು ಇಟ್ಟುಕೊಂಡು ಬೀದಿಗಿಳಿಯಬೇಕಾದ ಪರಿಸ್ಥಿತಿ ಇದೆ. ಆದರೂ ಆನಂದಕುಮಾರ್ ಪಾಠ ಮಾಡುವುದನ್ನು ಬಿಟ್ಟಿಲ್ಲ!

ಕೃಪೆ: ಔಟ್‌ಲುಕ್‌‌

ಗುರುವಾರ, ಆಗಸ್ಟ್ 20, 2009

ಆರತಿ ಎತ್ತಿರೇ ಕಳ್ ಗಣಪಂಗೆ...



ಶ್.... ಗಣಪತಿ ಬಪ್ಪಾ.... ಮೋರ್ಯಾ...
ಕೈಲಿದ್ದ ಗಣಪತಿಯನ್ನು ಕಂಡವರ ಮನೆ ಮುಂದೆ ಇಟ್ಟು ಹೀಗೆ ಜೋರಾಗಿ ಒಮ್ಮೆಲೆ ಕೂಗಿ ಎದ್ದುಬಿದ್ದು ಓಡಿಬಿಡುತ್ತಿತ್ತು ನಮ್ಮ ಗುಂಪು. ಅರೆ ಕ್ಷಣ ನಮ್ಮ ಗಣಪತಿ ಅಲ್ಲಿ ಅನಾಥ. ಮರು ಕ್ಷಣದಲ್ಲೇ ಆ ಮನೆಯ ಬಾಗಿಲು ತೆರೆಯುತ್ತಿತ್ತು. ನೋಡಿದರೆ ಎದುರಿಗೇ ಸಾಕ್ಷಾತ್ ಗಣಪತಿ. ಹಬ್ಬದ ದಿನ ಬಾಗಿಲಿಗೆ ಬಂದ ಗಣಪತಿಯನ್ನು ಹಾಗೆ ಕಳಿಸುವುದಕ್ಕಾಗುತ್ತದೆಯೇ? ಆರತಿ ಮಾಡಿ ಒಳಗೆ ಕೊಂಡೊಯ್ದು ಮಂಟಪ, ನೈವೇದ್ಯಕ್ಕೆ ಸಿದ್ಧ ಮಾಡಿಕೊಳ್ಳಬೇಕು. ಪಾಪ! ಕಣ್ಣು ತಿಕ್ಕಿಕೊಳ್ಳುತ್ತಾ ಹೊರಗೆ ಬಂದಿದ್ದ ಮನೆಯೊಡೆಯನ ನಿದ್ದೆ ಅದೆಲ್ಲಿ ಹಾರಿಹೋಗುತ್ತಿತ್ತೋ?

ಗಣಪತಿ ತಯಾರಿಸುವ ಕಿಟ್ಟಣ್ಣ ಇನ್ನೂ ಮಣ್ಣು ತಂದಿರುತ್ತಿದ್ದನೋ ಇಲ್ಲವೋ. ನಮ್ಮ ಹುಡುಗರ ಗುಂಪಂತೂ ಶ್ರಾವಣ ಮಾಸ ಪ್ರಾರಂಭವಾದಾಗಲಿಂದ ಬಹಳ ರಹಸ್ಯವಾಗಿ, ಮತ್ತು ಅಷ್ಟೇ ಶ್ರದ್ಧೆಯಿಂದ ಕಳ್ಳ ಗಣಪತಿ ತಯಾರಿಸಲು ಕೂತುಬಿಡುತ್ತಿತ್ತು. ಗಣಪತಿ ಮಾಡಲು ಸರಿಯಾಗಿ ಬಾರದಿದ್ದರೂ ಅದಕ್ಕೆ ದೊಡ್ಡ ಕಿರೀಟ, ಉದ್ದ ಸೊಂಡಿಲು, ದಪ್ಪ ಹೊಟ್ಟೆ ಇಟ್ಟು ಹೇಗೋ ಮೂರ್ತಿಯೊಂದನ್ನು ಮಾಡಿಬಿಡುತ್ತಿದ್ದೆವು. ಯಾರದ್ದೋ ಮನೆಗೆ ಹಚ್ಚಲು ತಂದಿರುವ ಬಣ್ಣವನ್ನು ಕದ್ದುತಂದು ಆ ಮೂರ್ತಿಗೆ ಹಚ್ಚಿದರೆ... ಆಹಾ! ಗಣಪತಿ ಸಿದ್ಧ. ಅದು ದೊಡ್ಡವರಿಗೆ ಕಾಣದಂತೆ ಕಾಯುವ, ಸುರಿವ ಮಳೆಯಿಂದ ಕಾಪಾಡುವ ಹೊಣೆ ಬೇರೆ. ಹಬ್ಬಕ್ಕೆ 2-3 ದಿನವಿದ್ದಾಗ ಹುಡುಗರ ಗುಂಪು ರಹಸ್ಯ ಸಭೆ ಸೇರಿ ಯಾರ ಮನೆಯಲಿ ಗಣಪತಿ ಇಡಬೇಕೆಂಬ ತೀರ್ಮಾನ ಕೈಗೊಳ್ಳುತ್ತಿತ್ತು. ಸಾಮಾನ್ಯವಾಗಿ ಮಾವಿನ ಕಾಯಿ ಕೊಯ್ಯಲು ಬಿಡದ, ಮಕ್ಕಳಿಗೆ ಬೈಯುವ, ತೀರಾ ಜುಗ್ಗತನ ತೋರುವ, ಗಣಪತಿ ಹಬ್ಬ ಮಾಡದ ಮನೆಯೊಂದನ್ನು ಆರಿಸಿಕೊಳ್ಳಲಾಗುತ್ತಿತ್ತು. ಹಬ್ಬದ ದಿನ ಬೆಳಗ್ಗೆ ನಾಲ್ಕು-ನಾಲ್ಕೂವರೆಗೆ ಎದ್ದು ಎಲ್ಲರೂ ಸೇರಿ ಯಾರಿಗೂ ಗೊತ್ತಾಗದಂತೆ ಆ ಮೂರ್ತಿಯನ್ನು ಎತ್ತಿಕೊಂಡು ಹೋಗಿ ಆ ಮನೆಯ ಬಾಗಿಲಲ್ಲಿ ಇಟ್ಟು ....ಗಣಪತಿ ಬಪ್ಪಾ...ಮೋರ್ಯಾ..

ಪಾಪ! ಹಬ್ಬಕ್ಕೆಂದು ಯಾವ ತಯಾರಿಯನ್ನೂ ಮಾಡಿಕೊಂಡಿರದ ಆ ಮನೆಯವರ ಸ್ಥಿತಿ ಅಂದು ದೇವರಿಗೇ ಪ್ರೀತಿ. ಒಂದೆಡೆ ನಮ್ಮನ್ನು ಬೈಯುತ್ತಾ... ಇನ್ನೊಂದೆಡೆ ಆವತ್ತಿನ ಪೂಜೆಗೆ ಪುರೋಹಿತರನ್ನು ಕರೆಸುವ, ಅಡುಗೆಗೆ ದಿನಸಿ ತರುವುದರ ಜತೆಗೆ ಒಂದು ವರ್ಷ ಗಣಪತಿ ಇಟ್ಟವರು ಕನಿಷ್ಠ ಮೂರು ವರ್ಷ ಇಡಲೇ ಬೇಕು ಎಂಬ ಅಲಿಖಿತ ನಿಯಮದ ಯೋಚನೆ. ಮೂರು ವರ್ಷ ಗಣಪತಿ ತಂದು ಪೂಜೆ ಮಾಡಿ ಅಭ್ಯಾಸವಾದರೆ ಆನಂತರ ಎಂದೂ ಗಣಪತಿ ಹಬ್ಬವನ್ನು ಬಿಡುವುದಿಲ್ಲವೆಂಬುದು ನಮ್ಮ ನಂಬಿಕೆ.

ಸಂಜೆ 21 ಗಣಪತಿ ನೋಡಬೇಕೆಂದು ಮನೆ ಮನೆಗೆ ತಿರುಗಲು ಹೊರಡುತ್ತಿದ್ದ ನಮ್ಮ ಗುಂಪಿಗೆ ಕಳ್ಳ ಗಣಪತಿ ಇಟ್ಟಿರುವ ಮನೆಗೆ ಹೋಗಲು ಭಾರಿ ಸಂಭ್ರಮ. "ಅವಸರಕ್ಕೆ ಮಾಡಿದ್ದಾದರೂ ಪಂಚಕಜ್ಜಾಯ ತುಂಬಾ ರುಚಿ ಇದೆ ಮರಾಯ್ರೇ' ಎಂದು ಅವರನ್ನು ಕಿಚಾಯಿಸುವುದು ಬೇರೆ. ನಮ್ಮನ್ನು ಕೊಂದು ಬಿಡುವಷ್ಟು ಕೋಪ ಉಕ್ಕಿಬರುತ್ತಿದ್ದರೂ ಅವರು ಏನೂ ಮಾಡುವಂತಿಲ್ಲ. ಏಕೆಂದರೆ ನಮ್ಮ ಗಣಪತಿ ಅಲ್ಲೇ ನಗುತ್ತಿರುತ್ತಾನಲ್ಲ!

ಶನಿವಾರ, ಆಗಸ್ಟ್ 15, 2009

ಹಳೇ ಚಿತ್ರಕೆ ಹೊಸ ದಾರಿ

ಅದು 1895-96ರ ಸಮಯ. ಎದುರಿನ ದೊಡ್ಡ ಪ್ರೊಜೆಕ್ಟರ್‌ನಲ್ಲಿ ಕಂಡ ಬೃಹತ್ ರೈಲು ಚಲಿಸುತ್ತಾ ತಮ್ಮೆಡೆಗೆ ಹಾದು ಬಂದದನ್ನು ಕಂಡು ಪ್ರೇಕ್ಷಕರು ಹೌಹಾರಿದರು. ತಮ್ಮ ಮೇಲೆಯೇ ಹರಿಯಲಿದೆ ಎಂದು ಎದ್ದು ಓಡಿದರು. ಅವರ ಭಯಕ್ಕೂ ಕಾರಣವಿತ್ತು. ಅದು ಲೂಮಿಯರ್ ಸಹೋದರರ 'ನಿಲ್ದಾಣಕ್ಕೆ ಆಗಮಿಸುತ್ತಿರುವ ರೈಲು' (Arrival of a Train at La Ciotat)ಚಲನ ಚಿತ್ರದ ಮೊದಲ ಪ್ರದರ್ಶನವಾಗಿತ್ತು. ಅದುವರೆಗೂ ಸ್ಥಿರ ಚಿತ್ರಗಳನ್ನು ಮಾತ್ರ ನೋಡಿದ್ದ ಪ್ರೇಕ್ಷಕರು ಚಿತ್ರದಲ್ಲಿರುವ ರೈಲು ತಮ್ಮೆದುರು ಚಲಿಸಿದಾಗ ಉದ್ವೇಗಕ್ಕೆ ಒಳಗಾಗಿದ್ದು ಸಹಜವೇ.

40-50 ಸೆಕೆಂಡುಗಳ ವಿವಿಧ ಚಲನ ದೃಶ್ಯಗಳನ್ನು ಸೆರೆ ಹಿಡಿದು, ಅದನ್ನು ನೋಡಲು ಟಿಕೆಟ್ ಇಟ್ಟಿದ್ದ ಲೂಮಿಯರ್ ಸಹೋದರರು "ಈ ಹೊಸ ಸಂಶೋಧನೆಗೆ ಭವಿಷ್ಯವಿಲ್ಲ' ಎಂದು ತೀರ್ಮಾನಿಸಿ, ತಮ್ಮ ಗಮನವನ್ನು ಕಲರ್ ಫೋಟೊಗ್ರಫಿಯ ಕಡೆ ತಿರುಗಿಸಿಕೊಂಡರಂತೆ. ಅಂಥ ಅದ್ಭುತ ಪ್ರತಿಭಾವಂತರ ಲೆಕ್ಕವೂ ತಪ್ಪಾಗುವಂತೆ ಇಂದು ಸಿನಿಮಾ ಬೃಹತ್ ಉದ್ಯಮವಾಗಿ ಬೆಳೆದುನಿಂತಿದೆ.

ಲೂಮಿಯರ್ ಸಹೋದರರ ಚಿತ್ರಗಳ ಪ್ರದರ್ಶನಕ್ಕೂ ಮೊದಲೇ ಹಲವರು ಚಲಿಸುವ ಚಿತ್ರಗಳನ್ನು ರೂಪಿಸಲು ಪ್ರಯತ್ನ ಪಟ್ಟಿದ್ದರು. 1878ರಲ್ಲೇ ಎಡ್ವರ್ಡ್ ಮೇಬ್ರಿಡ್ಜ್ ಎಂಬಾತ "ಚಲಿಸುತ್ತಿರುವ ಕುದುರೆ'ಯ ಚಿತ್ರವನ್ನು ಸೆರೆ ಹಿಡಿದಿದ್ದ. ಕುದುರೆಯ ಹಾದುಬರುವ ದಾರಿಯಲ್ಲಿ 12 ಕ್ಯಾಮೆರಾಗಳನ್ನು ಸಾಲಿಗಿಟ್ಟಿದ್ದ. ಕುದುರೆಯ ಪ್ರತಿ ಹೆಜ್ಜೆಗೂ ಒಂದೊಂದು ವೈಯರು ಜೋಡಿಸಿ ಪ್ರತಿ ಕ್ಯಾಮೆರಾ ಕ್ಲಿಕ್ಕಿಸುವಂತೆ ಮಾಡಿದ್ದ. ಅವನ ಪ್ರಯತ್ನ ಯಶಸ್ವಿಯಾಗಿತ್ತು.



ಲೂಯಿ ಲೆ ಪ್ರಿನ್ಸ್ ಎಂಬುವವನು 1888ರಲ್ಲಿ "ರಾಂಡೆ ಗಾರ್ಡನ್ ಸೀನ್' ಚಿತ್ರೀಕರಿಸಿದ್ದ. ಬ್ರಿಟನ್ನಿನ ಶ್ರೀಮಂತ ವಿಟ್ಲೆ ಕುಟುಂಬದವರು ತಮ್ಮ ಮನೆಯ ಮುಂದಿನ ಉದ್ಯಾನದಲ್ಲಿ ನಗುತ್ತಾ ಸಂಚರಿಸುವ ದೃಶ್ಯವದು. ಸಿಂಗಲ್ ಲೆನ್ಸ್‌ನಲ್ಲಿ ತೆಗೆದ ನಾಲ್ಕು ಫ್ರೇಮಿನಲ್ಲಿರುವ ಈ ಚಿತ್ರ ಕೇವಲ ಎರಡು ಸೆಕೆಂಡಿಗೆ ಮುಗಿದು ಹೋಗುತ್ತದೆ. ಈಗಲೂ ನೋಡಲು ಸಾಧ್ಯವಿರುವ ಅತಿ ಹಳೆಯ ಚಲನಚಿತ್ರ ಎಂಬ ದಾಖಲೆಯೂ ಇದಕ್ಕಿದೆ.

ಇಂಥ ಅಪರೂಪದ ಹಳೆಯ ಚಿತ್ರಗಳನ್ನು ಇದುವರೆಗೂ ನಾವು ನೀನಾಸಂನಲ್ಲೋ, ಆಥವಾ ಯಾವುದಾದರೂ ಫಿಲ್ಮ್ ಸೊಸೈಟಿ ನಡೆಸಿಕೊಡುವ ಸಿನಿಮಾ ರಸಗ್ರಹಣ ಶಿಬಿರಗಳಲ್ಲೋ ಮಾತ್ರ ನೋಡುತ್ತಿದ್ದೆವು. ಆದರೆ ಈಗ ಅವುಗಳೆಲ್ಲಾ ಯೂಟ್ಯೂಬ್‌ನಲ್ಲಿಯೇ ಲಭ್ಯವಿದೆ! ಲೂಮಿಯರ್ ಸಹೋದರರು,ಎಡ್ವರ್ಡ್ ಮೇಬ್ರಿಡ್ಜ್, ಲೂಯಿ ಲೆ ಪ್ರಿನ್ಸ್ ಹೀಗೆಯೇ ಹುಡುಕಿದರೆ ಅವರ ಇನ್ನೂ ಹಲವಾರು ಚಿತ್ರಗಳು ನಿಮ್ಮೆದುರು ಕಾಣುತ್ತವೆ. ನೋಡ್ತೀರಲ್ವಾ?

ಸೋಮವಾರ, ಆಗಸ್ಟ್ 3, 2009

ತಕ್ಕಡಿಯಲ್ಲಿ ಎರಡು ಹಾಡು

ಕಳೆದೆರಡು ವಾರಗಳಲ್ಲಿ ಇಬ್ಬರು ದಿಗ್ಗಜರ ಅಗಲಿಕೆಯಿಂದಾಗಿ ಸಂಗೀತ ಕ್ಷೇತ್ರ ಬಡವಾಗಿದೆ. ಒಂದೆಡೆ ಮೈಕೆಲ್ ಜಾಕ್ಸನ್‌ನ ಸಾವು ಪಾಪ್ ಸಂಗೀತ ಲೋಕದ ಅಬ್ಬರವನ್ನು ತಣ್ಣಗಾಗಿಸಿದ್ದರೆ ಇನ್ನೊಂದೆಡೆ ಗಂಗೂಬಾಯಿ ಹಾನಗಲ್‌ರ ನಿಧನ ಶಾಸ್ತ್ರೀಯ ಸಂಗೀತ ಲೋಕವನ್ನು ಮಂದ್ರದಲ್ಲಿ ನಿಲ್ಲಿಸಿದೆ. ಇಬ್ಬರೂ ಮಹಾನ್ ಪ್ರತಿಭಾವಂತರೇ. ಅಲ್ಲಿ ಯಾರು ಹೆಚ್ಚು ಯಾರು ಕಡಿಮೆ ಎಂದು ತೂಗಲು ನನ್ನ ತಕ್ಕಡಿಗೆ ಸಾಮರ್ಥ್ಯವೇ ಇಲ್ಲ. ಇಬ್ಬರೂ ತಮ್ಮ ತಮ್ಮ ಮಿತಿಗಳನ್ನು ಅರಿತು ಅದನ್ನೇ ಅಸ್ತ್ರವನ್ನಾಗಿಸಿಕೊಂಡು ಸಾಧನೆಯ ಶಿಖರ ಮುಟ್ಟಿದವರು. ಕೀರ್ತಿಯ ಸವಿಯ ಉಂಡವರು.ಆದರೆ ಸಾವಿನ ಬೆಳಕು ಅವರಿಬ್ಬರ ಬದುಕಿನ ಶೈಲಿಯ ಅಂತರವನ್ನು ಕಣ್ಣಿಗೆ ರಾಚುವಂತೆ ತೆರೆದಿಟ್ಟುಬಿಟ್ಟಿದೆ.

ಮೂಳೆಗಳೇ ಇಲ್ಲವೆನೋ ಎಂಬಂತೆ ಮೈಡೊಂಕಿಸಿ ಕುಣಿಯುತಿದ್ದ ಮೈಕೆಲ್‌ನ ಮೈಯಲ್ಲಿ ಸಾಯುವ ವೇಳೆಗೆ ಮೂಳೆಯಲ್ಲದೇ ಬೇರೇನು ಇರಲಿಲ್ಲ. ಹೊಟ್ಟೆಯಲ್ಲಿ ಒಂದಗಳು ಅನ್ನಕ್ಕೂ ಜಾಗವಿಲ್ಲದಂತೆ ಮಾತ್ರೆಗಳೇ ತುಂಬಿದ್ದವಂತೆ. ಬರಬಾರದ ರೋಗಗಳನ್ನೆಲ್ಲಾ ತಂದುಕೊಂಡು ತನ್ನ ಐವತ್ತನೇ ವರ್ಷದಲ್ಲಿಯೇ ಅಸಹಜ ರೀತಿಯಲ್ಲಿ ಸಾವನ್ನಪ್ಪಿದ. ೯೭ ವರ್ಷದ ತನಕ ಹಾಡುತ್ತಲೇ ಜೀವನ ಸಾಗಿಸಿದ ಗಂಗಜ್ಜಿಗೆ ವಯಸ್ಸಾಗಿತ್ತೇ ಹೊರತು ಆರೋಗ್ಯಕ್ಕೇನೂ ಕೊರತೆಯಾಗಿರಲಿಲ್ಲ. "ನಾಳೆ ಊಟ ಮಾಡಲು ನಾನಿರುವುದಿಲ್ಲ. ಊಟ ತರಬೇಡವೋ" ಎಂದು ಅಪ್ಪಣೆ ಕೊಟ್ಟೇ ವಿದಾಯ ಹೇಳಿದ ನಿಶ್ಚಿಂತೆ. ಚಿರನಿದ್ರೆಯಲ್ಲಿದ್ದ ಅವರ ಮುಖ ನೋಡಿದರೆ ಸಾವೂ ಸಹ ಅವರ ಬಳಿ ತಲೆಬಾಗಿ ಬಂದಿತ್ತು ಎಂಬುದು ಯಾರಿಗಾದರೂ ತಿಳಿಯುವಂತಿತ್ತು.

ತನ್ನ ಅಂದಚೆಂದಗಳಿಗೆ ಅಪಾರ ಗಮನ ಕೊಡುತ್ತಿದ್ದ ಮೈಕೆಲ್‌ನ ದೇಹಕ್ಕೆ ಇನ್ನೂ ಸರಿಯಾದ ರೀತಿಯಲ್ಲಿ ಅಂತ್ಯ ಸಂಸ್ಕಾರವೇ ಆಗಿಲ್ಲ. ಅವನ ಖ್ಯಾತಿ, ಕುಖ್ಯಾತಿ ಎರಡನ್ನೂ ಬಿತ್ತರಿಸಿದ್ದ ಮಧ್ಯಮಗಳಿಗೆ ಅವನ ಸಾವನ್ನೂ ಸೆನ್ಸೇಷನ್ ಮಾಡುವ ಅವಕಾಶ. ಆದರೆ ನೆಮ್ಮದಿಯುತ ಜೀವನ ನಡೆಸಿದ ಗಂಗಜ್ಜಿ ಕೊನೆಯ ತನಕ ಅಜಾತಶತ್ರು. ಪ್ರಾಯದಲ್ಲೂ ಹಳಿಕೊಳ್ಳುವಂಥ ಚಂದಗಾತಿಯಲ್ಲದಿದ್ದರೂ ಜೀವನ ಮುಗಿಸಿದ ಮೇಲೆ ತಮ್ಮ ಕಣ್ಣುಗಳನ್ನು ದಾನ ಮಾಡಿದ ಗುಣವಂತೆ.

ಕೋಟಿಗಟ್ಟಲೇ ಹಣವನ್ನು ಡಾಲರ್ ಲೆಕ್ಕದಲ್ಲಿ ಗಳಿಸುತ್ತಿದ್ದ ಮೈಕೆಲ್ ತೀರಿಕೊಂಡಾಗ ಆತನಿಗಿದ್ದ ರೋಗದ ಪಟ್ಟಿಯಂತೆಯೇ ಸಾಲದ ಪಟ್ಟಿಯೂ ದೊಡ್ಡದಿತ್ತು. "ಗಳಿಸಿದ ದುಡ್ಡು ಹೋದದ್ದೆಲ್ಲಿ?' ಎಂಬುದು ಅವನ ಅಭಿಮಾನಿಗಳ ಪ್ರಶ್ನೆ. ಗಂಗಜ್ಜಿಯೂ ಬಡತನದಲ್ಲೇ ಬೆಳೆದವರು. ಸಾಲ ತೀರಿಸಲು ಮೈಮೇಲಿನ ಒಡವೆ ಮಾರಿದವರು. ಆದರೆ ಅವರ ಮನೆ ಬೇರೆಯವರ ಪಾಲಾಗುವ ಸಂದರ್ಭದಲ್ಲಿ ಸಾಲ ಕೊಟ್ಟವನು ಬಂದು "ನಿಮಗೆ ಸಾಧ್ಯವಾದಾಗ ಕೊಡಿ ತಾಯಿ" ಎಂದು ಕೈಮುಗಿದು ಹೋದನಂತೆ. "ಅವರು ಗಳಿಸಿದ್ದು ಈ ಅಭಿಮಾನವನ್ನೇ' ಎಂದು ಉತ್ತರಿಸಿತ್ತಾರೆ ಅವರನ್ನು ತಿಳಿದವರು.

ಲಕ್ಷಾಂತರ ಜನರ ಅರಾಧ್ಯ ದೈವವಾಗಿದ್ದ ಮೈಕೆಲ್‌ನ ಕೊನೆಗಾಲದಲ್ಲಿ ಅವನ ಮೈಯ ಬಣ್ಣ , ತಲೆಯ ಕೂದಲು, ಮೂಗು, ಮುಖದ ಆಕಾರ ಯಾವುದೂ ನಿಜವಾಗಿರಲಿಲ್ಲ, ಕೊನೆಗೆ ಅವನ ಮಕ್ಕಳೂ ಅವನದಾಗಿ ಉಳಿಯಲಿಲ್ಲ. ಆದರೆ ಕೆಲವೇ ಕೇಳುಗರಿರುವ ಶಾಸ್ತ್ರೀಯ ಸಂಗೀತದ ಸೇವೆ ಮಾಡಿದ ಗಂಗೂಬಾಯಿ ಎಂಬಾಕೆ ಹಾಡು ಮುಗಿಸುವಷ್ಟರಲ್ಲಿ ಕೇಳುಗರೆಲ್ಲಾ ಮಕ್ಕಳಾಗಿದ್ದರು. ನಾಡಿನ ಜನರಿಗೆಲ್ಲಾಆಕೆ "ಗಂಗೂ ತಾಯಿ' ಯಾಗಿದ್ದರು.

ಶುಕ್ರವಾರ, ಜುಲೈ 24, 2009

ಅಂತೂ ಇಂತೂ ಶ್ರಾವಣ ಬಂತು!

ಅಬ್ಬಾ! ಅಂತೂ ಆಷಾಢ ಮುಗಿಯಿತು ! ಈ ನಿರಾಳತೆಯ ನಿಟ್ಟುಸಿರೆಳೆಯಲು ಕಾದ ದಿನಗಳೆಷ್ಟು? ಎಲ್ಲರೂ ಕ್ಯಾಲೆಂಡರ್ ನೋಡಿ ಒಂದೇ ತಿಂಗಳು ಎನ್ನುತ್ತಾರೆ. ಇವರೆಲ್ಲಾ ಗಡಿಯಾರದ ಸೆಕೆಂಡಿನ ಮುಳ್ಳು ತಿರುಗುವುದು ನೋಡುವುದೇ ಇಲ್ಲವೆನಿಸುತ್ತದೆ. ಆ ಮುಳ್ಳೋ, ಯಾರೋ ಕಾಯುವವರೇ ಹಾಗೆಂದು ಹೆಸರಿಟ್ಟಿರಬೇಕು, ನಿಧಾನವಾಗಿ ಚಲಿಸುತ್ತಾ ಪದೇ ಪದೆ ನೋಡುವ ಕಣ್ಣಿಗೆ ಮುಳ್ಳಾಗಿ ಚುಚ್ಚುತ್ತಿರುತ್ತದೆ.
ನನಗಾದರೂ ಏನು ಗೊತ್ತು, ಹೀಗೆ ಆಗುತ್ತದೆಯೆಂದು. ಆಷಾಢ ಪ್ರಾರಂಭವಾಗುವ ನಾಲ್ಕು ದಿನ ಮೊದಲೇ ನಾನು ಊರಿಗೆ ಹೋಗಲು ತುದಿಗಾಲಲ್ಲಿ ನಿಂತಿದ್ದೆನಲ್ಲ. "ಹೇಗಿರುವೆಯೇ ಹುಡುಗಿ, ನನ್ನ ಬಿಟ್ಟು?’ ಎಂಬ ಪಿಸುಮಾತಿನ ಪ್ರಶ್ನೆ ನನ್ನ ಸಂಭ್ರಮದಲ್ಲಿ ಕಿವಿಗೇ ತಾಕಿರಲಿಲ್ಲ. ಅಣ್ಣ ಬಂದು ಕರೆಯುತ್ತಿದ್ದಂತೆ ಊರಿಗೆ ಹಾರಿಬಿಟ್ಟಿದ್ದೆ.
ಮೊದಲೆರಡು ದಿನ ಏನೆಲ್ಲಾ ಸಂಭ್ರಮ, ಅಮ್ಮನೊಡನೆ ಮಾತನಾಡುವಾಗ ’ನಮ್ಮನೆ’ ಅಂತ ಯಾವುದಕ್ಕೆ ಹೇಳಬೇಕೋ ಗೊತ್ತಾಗದೆ ಹೇಳಿ ನಾಲಿಗೆ ಕಚ್ಚಿಕೊಳ್ಳುತ್ತಿದ್ದೆನಲ್ಲ. ಆದರೆ ಮೂರನೆಯ ದಿನ ಸುರಿದ ಮಳೆಗೆ ಫೋನ್ ಡೆಡ್ ಆಯ್ತಲ್ಲ, ಆಗಲೇ ಶುರುವಾಗಿದ್ದುದು ನಿಜವಾದ ಆಶಾಢ. ಐದನೇ ದಿನ ಕಳೆಯುವಷ್ಟರಲ್ಲಿ ಕಣ್ಣು ಕ್ಯಾಲೆಂಡರ್ ಹುಡುಕುತ್ತಿತ್ತು. ಮನಸಿನಲ್ಲಾಗಲೇ ಶ್ರಾವಣನ ಬಯಕೆ.

ರಚ್ಚೆ ಹಿಡಿವಂತೆ ಸುರಿವ ಮಳೆಯನ್ನು ನೋಡುತ್ತಾ ಕುಳಿತಿರುವಾಗೇಕೋ ಕೆ.ಎಸ್.ನ ರವರ ’ತೌರ ಸುಖದೊಳಗೆನ್ನ ಮರೆತಿಹೆನು ಎನ್ನದಿರಿ, ನಿಮ್ಮ ಪ್ರೇಮವ ನೀವೇ ಒರೆಯಲಿಟ್ಟು’ ಹಾಡು ಅಚಾನಕ್ಕಾಗಿ ಬಾಯಿಗೆ ಬಂದಿದ್ದಾದರೂ ಹಗಲಿನಲಿ ನೆನಪು ಹಿಂಡುವುದು, ಇರುಳಿನಲಿ ಕನಸು ಕಾಡುವುದು ಸುಳ್ಳಾಗಿರಲಿಲ್ಲವಲ್ಲ. ಆಮೇಲೆ ತಾನೆ ತುಳಸಿಗೆ ನಮಸ್ಕರಿಸುವಾಗ ಪಕ್ಕದಲ್ಲಿ ಕೃಷ್ಣನಿರುವುದೂ, ಆಕಾಶ ನೋಡುವಾಗ ಜೋಡಿ ನಕ್ಷತ್ರ ನಗುತ್ತಿರುವುದೂ, ಕ್ಯಾಲೆಂಡರ್‌ನಲ್ಲಿರುವ ದೇವರೆಲ್ಲರೂ ದಂಪತ್ ಸಮೇತ ಕುಳಿತಿರುವುದೂ ಕಣ್ಣಿಗೆ ಬೀಳತೊಡಗಿದ್ದುದು. ಆಮೇಲೇನು? ’ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ...’
ಅಮ್ಮನ ಥರಾವರಿ ಉಂಡೆಗಳ ಸಿದ್ಧತೆ, ಮಕ್ಕಳು ಬಾಗಿಲಿಗೆ ಜೋಕಾಲಿ ಕಟ್ಟತೊಡಗಿದ್ದು "ತೌರ ಪಂಜರದೊಳಗೆ ಸೆರೆಯಾದ ಗಿಳಿ’ಗೆ ಕಂಡಿದ್ದೇ ಉಸಿರು ಬಂದಂತಾಗಿಬಿಟ್ಟಿತು. ಇನ್ನೇನು ಶ್ರಾವಣ ದೂರವಿಲ್ಲ. ಆದರೂ ಬಾಗಿಲಿಗೆ ಕಟ್ಟಿದ ಜೋಕಾಲಿಯಲ್ಲಿ ಕುಳಿತು ಎಷ್ಟು ಜೋರಾಗಿ ಚಿಮ್ಮಿದರೂ ಹೊರಗೆ ಹೋದಂತಾಗುತ್ತದೆ ಅಷ್ಟೇ, ಆದರೆ ಮತ್ತೆ ಅಷ್ಟೇ ಒಳ ತಳ್ಳುತ್ತದೆ...ನಿರಾಶೆಯ ಮಡುವಿಗೆ.
ಇಲ್ಲ, ಅದೇನು ನಿರಂತರವಲ್ಲ, ಯಾವುದೋ ಒಂದು ಆಶಾಢದ ರಾತ್ರಿಗಾದರೂ ಶ್ರಾವಣದ ಬೆಳಗು ಕಾಯುತ್ತಿರುತ್ತದೆಯಂತೆ. ಅದೇ ಕನಸಿನಲ್ಲಿ ಬೆಳಗಾಗಿ ಬಾಗಿಲು ತೆಗೆದರೆ ಎದುರಿಗೆ ನಿಂತಿದ್ದಾನಲ್ಲ ಶ್ರಾವಣ. ಅವನೊಂದಿಗೆ ನಗುತ್ತಿರುವ ಹಬ್ಬಗಳ ಕಲರವ...

ಮಂಗಳವಾರ, ಜುಲೈ 7, 2009

ನಮ್ಮೂರಿನ ಮರಗಳೆಲ್ಲ ನಮ್ಮ ಮನೆಯೊಳಗೇ ಇದ್ದವು!


ಮೊದಲು ನಮ್ಮ ಮನೆಯೂ ಹಾಗೇ ಇತ್ತು, ಎಲ್ಲರ ಮನೆಗಳಂತೆ. ಭವ್ಯವಾದ ಬಾಗಿಲು, ಕುಸುರಿ ಕಲೆಯಿಂದ ಮೆರೆಯುತ್ತಿರುವ ಕರಿ ಮರದ ಮಂಚ, ಸುಂದರ ದೀವಾನ್ ಕಾಟ್, ಸಿಂಹಾಸನದಂತಿರುವ ಕುರ್ಚಿಗಳು, ಫೋನ್ ಇಡಲೊಂದು ಪುಟಾಣಿ ರೋಸ್‌ವುಡ್ ಟೇಬಲ್, ಕಂಪ್ಯೂಟರ್ ಇಡುವುದಕ್ಕೆ ಮತ್ತೊಂದು. ಮನೆಯ ಪ್ರತಿ ಕಿಟಕಿಗೆ, ಪ್ರತಿ ತಿರುವಿಗೆ ಮರದ ಚೌಕಟ್ಟು. ಗಾಜಿನ ಶೋಕೇಸಿನ ಅಂದ ಹೆಚ್ಚಿಸಲು ಇನ್ನಷ್ಟು, ಮನೆಯ ಘನತೆ ಹೆಚ್ಚಿಸಲು ಮತ್ತಷ್ಟು...
ಅವತ್ತೊಂದು ದಿನ ಊರಿಂದ ಅಪ್ಪ ಬಂದಿದ್ದರು. ಅವರೊಂದಿಗೇ ಟೀಕ್‌ವುಡ್‌ನ ಹೊಚ್ಚ ಹೊಸ ಡೈನಿಂಗ್ ಟೇಬಲ್ ಮನೆಗೆ ಬಂದಿತ್ತು. ಇನ್ನಿಲ್ಲದ ಪ್ರೀತಿಯಿಂದ ಅಪ್ಪನಿಗೆ ಕಾಫಿ ಮಾಡಿಕೊಟ್ಟು, ನಾನೂ ಕಾಫಿ ಕುಡಿಯುತ್ತಾ ಕುಳಿತಿದ್ದೆ. ಅಪ್ಪನೊಡನೆ ಊರಿನ ಬಗ್ಗೆ ವಿಚಾರಿಸುತ್ತಾ ಕುಳಿತಿದ್ದೆನಾದರೂ ಕಣ್ಣು ನಸುಗೆಂಪು ಬಣ್ಣದಿಂದ ಫಳಫಳ ಹೊಳೆಯುವ ಹೊಸ ಡೈನಿಂಗ್ ಟೇಬಲ್‌ನ ಅಂದ ಚಂದದ ಮೇಲೇ ನೆಟ್ಟಿತ್ತು. ಇಲ್ಲಿ ಸಿಗುವ ರೆಡಿಮೇಡ್ ಫರ್ನಿಚರ್ ಬಿಟ್ಟು ಊರಿಂದಲೇ ತರಿಸಿಕೊಳ್ಳುವ ನನ್ನ ನಿರ್ಧಾರಕ್ಕೆ ನಾನೇ ಮನಸ್ಸಿನಲ್ಲಿಯೇ ಶಹಭಾಶ್‌ಗಿರಿ ಕೊಟ್ಟುಕೊಳ್ಳುತ್ತಿದ್ದೆ. ಅಪ್ಪ ಸಹ ನನ್ನ ಅರಳಿದ ಮುಖ ನೋಡಿ ಖುಷಿಯಾಗಿದ್ದರು. ಮನೆಯ ಮುಂದಿದ್ದ ತೇಗದ ಮರವನ್ನು ಕಡಿದು ಅದರಲ್ಲೇ ಡೈನಿಂಗ್ ಟೇಬಲ್ ಮಾಡಿಸಿದ್ದರಿಂದ ಗುಣಮಟ್ಟದ ಬಗ್ಗೆ ಅನುಮಾನವೇ ಇಲ್ಲ ಎಂದು ಹೆಮ್ಮೆಯಿಂದ ಅಪ್ಪ ಹೇಳಿದರು. ಮರುಕ್ಷಣವೇ ಎದೆ ಝಗ್ ಅಂದಿತು. ಹಾಗಾದರೆ, ಅಂಗಳದ ಪಕ್ಕದ ಬೇಲಿಗೆ ಅಂಟಿಕೊಂಡಂತಿದ್ದ ತೇಗದ ಮರ ಇನ್ನಿಲ್ಲವಾ?
ನಾನು ಚಿಕ್ಕವಳಿದ್ದಾಗಲಿಂದಲೂ ಆ ಮರ ಅಲ್ಲೇ ಇತ್ತು. ಆದರೆ ಹೂವು ಹಣ್ಣು ಬಿಡದ, ಆಟವಾಡಲು ಸಾಕಷ್ಟು ಟೊಂಗೆಗಳೂ ಇಲ್ಲದ ಮರ ಯಾವ ಮಕ್ಕಳಿಗೆ ತಾನೇ ಇಷ್ಟವಾಗತ್ತೆ? ಅದೇ ಕಾರಣದಿಂದ ಅದರತ್ತ ಯಾವ ಮಕ್ಕಳೂ ತಿರುಗಿ ಕೂಡ ನೋಡುತ್ತಿರಲಿಲ್ಲ. ಆದರೂ ಅದರಲ್ಲಿ ನನಗೊಂದು ಆಕರ್ಷಣೆ ಇತ್ತು. ಅದರ ಎಳೆಯ ಎಲೆಯೊಂದನ್ನು ಹಿಡಿದು ಅದರ ತೊಟ್ಟಿನಿಂದ ಅಂಗೈ ಮೇಲೆ ಗೀಚಿಕೊಂಡರೆ ಆರೇಂಜ್ ಸ್ಕೆಚ್ ಪೆನ್ನಿನಿಂದ ಬರೆದ ಹಾಗೆ ಬಣ್ಣ ಮೂಡುತ್ತಿತ್ತು. ಮದರಂಗಿ ಎಲೆ ಕೊಯ್ದು ತಂದು, ಅದನ್ನು ರುಬ್ಬಿ, ಗಂಟೆಗಟ್ಲೆ ಕೈ ಮೇಲೆ ಇಟ್ಟುಕೊಂಡು ರಂಗಾಗುವುದನ್ನು ಕಾಯುವಷ್ಟು ಸಹನೆ ಇಲ್ಲದ ನನಗೆ ತತ್‌ಕ್ಷಣ ಬಣ್ಣ ಮೂಡಿಸುವ ಈ ಎಲೆ ಕಂಡರೆ ಏನೋ ಖುಷಿ. ಕೆಲವೊಮ್ಮೆ ಅಂತೂ ನಾಜೂಕಾಗಿ ಚಿತ್ರ ಬಿಡಿಸಿಕೊಳ್ಳುವಷ್ಟೂ ತಾಳ್ಮೆ ಇಲ್ಲದೆ ಎಳೆಯ ಎಲೆ ಕಿತ್ತುಕೊಂಡು ಅಂಗೈ ಮೇಲಿಟ್ಟು ಉಜ್ಜಿಬಿಡುತ್ತಿದ್ದೆ. ಎರಡೂ ಕೈ ತುಂಬಾ ಬಣ್ಣದೋಕುಳಿ!
ಆ ಮರ ಇನ್ನಿಲ್ಲ. ನನ್ನ ಕೈಗೆ ಮದರಂಗಿಯ ಬಣ್ಣ ತುಂಬುತ್ತಿದ್ದ ಮರವನ್ನು ನನಗಾಗಿ ಕಡಿಯಲಾಗಿದೆ. ಈ ಯೋಚನೆ ಬಂದಿದ್ದೇ ತಡ, ಮೈ ಜುಮ್ಮೆಂದಿತು. ಮನೆಯೊಳಗೆ ಒಮ್ಮೆ ಕುಳಿತಲ್ಲಿಯೇ ಹಾಗೇ ಸುಮ್ಮನೆ ಕಣ್ಣಾಡಿಸಿದೆ.... ನಮ್ಮೂರಿನ ಮರಗಳೆಲ್ಲಾ ನಮ್ಮ ಮನೆಯಲ್ಲೇ ಸತ್ತು ಬಿದ್ದಿವೆ...ಹಾಗೂ ನಾನವುಗಳ ಹೆಣದ ಮೇಲೆ ಕುಳಿತು ಕಾಫಿ ಕುಡಿಯುತಿದ್ದೇನೆ!

ಸೋಮವಾರ, ಜೂನ್ 22, 2009

ತುಂಗೆಗೆ ಮಳೆರಾಯನೊಂದಿಗೆ ಮದುವೆಯಾಯಿತಂತೆ!


ಹರಿವ ಒರತೆಯನ್ನು ಕಾಪಿಟ್ಟುಕೊಂಡು ಗಂಭೀರವಾಗಿ ನಡೆಯುವ ಹುಡುಗಿ, ಅದು ಹೇಗೆ ಬದಲಾದಳೋ! ನಿತ್ಯ ನೋಡುವವರಿಗೇ ಬೆರಗು. ತಲೆ ಬಗ್ಗಿಸಿ ದಾರಿ ತುಳಿಯುತ್ತಿದ್ದವಳು ಬಿಗುಮಾನ ಸಡಿಲಿಸಿ ಚಿಮ್ಮುತ್ತಿದ್ದಾಳೆ, ನಡಿಗೆಯಲ್ಲಿ ಅಪರಿಚಿತರೂ ಗುರುತಿಬಹುದಾದ ಹೊಸ ಒನಪು, ವಯ್ಯಾರ. ಬಿಸಿಲು ಚೆಲ್ಲಿ ನಕ್ಕಂತೆ ಮಾಡಿ ಕದ್ದೋಡಿ ಬಂದು ಮುತ್ತಿಡುತ್ತಿರಬೇಕು ಅವಳ ಗಂಡ, ಸಾಕ್ಷಿ ಬೇಕಾದರೆ ಅವಳ ಮುಖ ನೋಡಿ, ದಟ್ಟ ಕೆಂಪು. ಕಾಲನ ಮೇಲೆ ಭರವಸೆಯಿಟ್ಟು ವಿರಹದ ಬಿಸಿ ಸಹಿಸಿದ್ದ ಮನಕ್ಕೆ ತಂಪಿನ ಮೊದಲ ಮುತ್ತು ಬಿದ್ದಿದ್ದೇ ಸಂಭ್ರಮದ ಮಿಂಚು ಹರಿದಿದೆ. ಒಂದು ಎರಡು ಮೂರು... ಸುರಿದ ಹನಿಗಳ ಲೆಕ್ಕವಿಲ್ಲ. ಹರಿದಷ್ಟೂ ಪ್ರೀತಿ, ಉಕ್ಕಿದಷ್ಟೂ ಖುಷಿ. ಛತ್ರಿಯ ಸಂದಿಯಿಂದ ನವದಂಪತಿಯ ರಾಸಲೀಲೆ ಕದ್ದು ನೋಡಿದವರಿಗೆ ಕಂಡದ್ದು ಅವರಿಬ್ಬರ ನಡುವೆ ಬಾಗಿ ನಿಂತ ಕಾಮನಬಿಲ್ಲು ಮಾತ್ರ.

ಉಕ್ಕಿ ಹರಿದಿದೆಯಂತೆ ಪಕ್ಕದೂರಲಿ ಪುಟ್ಟ ಕೆರೆ ಕೋಡಿ ಎಂದು ಮಾತನಾಡುತ್ತಿದ್ದವರು ನೋಡುನೋಡುತ್ತಿದ್ದಂತೆ ಇಲ್ಲಿ ಹರವು ಹೆಚ್ಚಿದೆ, ಹನಿ ಬಿದ್ದಷ್ಟೂ ಬಾಚಿ ಒಳಗೆಳೆದುಕೊಳ್ಳುವ ಆಸೆ. ಸುಖದ ಸ್ಪರ್ಶದಿಂದ ಅರೆಬಿರಿದ ಕಣ್ಣಲ್ಲಿ ಮುಗಿಲು ಕಟ್ಟಿದ ಕಪ್ಪು ಮೋಡದ ಕನಸು. ಸಡಗರದ ನಡೆಗೆ ಅಡ್ಡವಾಗುವ ಕೃತಕ ಅಣೇಕಟ್ಟು ಅವಳಿಗಿಷ್ಟವಿಲ್ಲವಂತೆ. ದುಮುದುಮು ಎನ್ನುತ್ತಲೇ ತುಂಬುತ್ತದೆ, ದಾಟಿ ನುಗ್ಗುತ್ತದೆ ಸಿರಿಯ ಹೆರುವ ಬಯಕೆ. ಕಾದು ನಿಂತಿದೆ ಅವಳ ತವರು ಮನೆ ಸೀಮಂತದ ಸೀರೆ ಉಡಿಸಲು. ಮೊಳಕೆಯೊಡೆದ ಬೀಜದಲಿ ಇಣುಕಿ ನೋಡುತಿದೆ ಹಸಿರ ಉಸಿರು. ಹೊಳೆಯುತಿದೆ ಉಬ್ಬಿದ ಹಸಿರ ಒಡಲಿನಂಚಿನಲ್ಲಿ ಹೊಳೆವ ಚಿನ್ನದ ಮಿಂಚು. ಏಳನೆಯ ತಿಂಗಳಲಿ ಮಡಿಲು ತುಂಬಲಿಕ್ಕಿದೆಯಂತೆ, ಮುಂಬರುವ ನನಸಿಗೆ ಇಂದೇ ತೊಟ್ಟಿಲು ಕಟ್ಟುವ ತವಕ. ಆದರೇನಂತೆ ಅವಳೀಗ ಸಂತೃಪ್ತೆ , ಮುಂಬರುವ ದಿನಗಳಲಿ ತೂಗಿ ತೊನೆಯಲಿದೆ ಫಸಲು... ಕನಸು ಕಣ್ಣಿನ ರೈತನ ಮನೆಯಿಂದ ತೇಲಿ ಬರುತಲಿದೆ ಮಗುವಿನ ನಗುವು.

ಗುರುವಾರ, ಜೂನ್ 4, 2009

ಬಣ್ಣ ಬಿಳಿಯಾಗದಿರಲಿ, ಬೇಗನೆ ಬೆಳಕಾಗದಿರಲಿ!


"ಬೆಡ್‌ಲೈಟೇ ಇಲ್ಲದಿದ್ದರೆ ಕನಸು ಕಾಣಿಸೋದೇ ಇಲ್ಲ, ಅಲ್ವಾ ಅತ್ತೆ?" ಐದು ವರ್ಷದ ಸೊಸೆಯ ಮುದ್ದು ಪ್ರಶ್ನೆ. ಹೊಸದಾಗಿ ತಂದಿದ್ದ ಬೆಡ್‌ಲೈಟಿನ ಬಣ್ಣಬಣ್ಣದ ಬೆಳಕ ನೋಡುತ್ತಾ ಅದರಲ್ಲಿ ಚಲಿಸುವ ಥರಾವರಿ ಮೀನಿನ ಚಿತ್ರಗಳನ್ನ ನೋಡುತ್ತಾ ಕೂತವಳ ಕಣ್ಣಲ್ಲಿಯೂ ಬೆರಗಿನ ಬಣ್ಣ. ಪ್ರಕಾಶಮಾನವಾದ ರೂಮಿನ ಟ್ಯೂಬ್‌ಲೈಟ್ ಆರಿದ ನಂತರ ಹತ್ತುವ ಬೆಡ್‌ಲೈಟ್ ಸೃಷ್ಟಿಸುವ ಆಪ್ಯಾಯಮಾನವಾದ ನಸುಕೆಂಪು ಬೆಳಕು ಅವಳಿಗಿಷ್ಟ. ಪ್ರತಿ ದಿನದಂತೆ ನಾನು ರಾಜಕುಮಾರಿಯನ್ನು ಹುಡುಕುತ್ತಾ ಕುದುರೆಯೇರಿ ಬರುವ ರಾಜಕುಮಾರನ ಕತೆ ನೆನಪಿಸಿಕೊಂಡು ಹೇಳುತ್ತಿದ್ದಂತೆ ಅವಳು ನಿದ್ದೆಗೆ ಜಾರಿದರೂ ಗುಲಾಬಿ ಎಸಳಿನಂಥ ತುಟಿಗಳ ಮೇಲೆ ಆ ಬಣ್ಣದ ದೀಪ ಚುಂಬಿಸಿ ಮತ್ತಷ್ಟು ಕೆಂಪಾಗಿತ್ತು...

ನನಗೆ ಗೊತ್ತಿಲ್ಲವೇ, ಈ ಬಣ್ಣದ ದೀಪ ಹೊತ್ತು ತರುವ ಜಾದೂ ಜಗತ್ತು? ಚಿಕ್ಕವಳಿದ್ದಾಗ ನಮ್ಮ ಊರಿನಲ್ಲಿ ಸುಗ್ಗಿಕಾಲದಲ್ಲಿ ಪೇರಿಸಿಟ್ಟ ಬಣವೆ ಕಾಯಲು ಅಪ್ಪ ಹೋಗುತ್ತಿದ್ದ. ಅಪ್ಪನೊಂದಿಗೆ ಮಕ್ಕಳ ದಂಡೂ ಹೋಗುತ್ತಿತ್ತು. ಆ ಕತ್ತಲಲ್ಲಿ ಗದ್ದೆಯ ಬಯಲಿನಲ್ಲಿ ಇರುತ್ತಿದ್ದ ಬೆಳಕು ಬರೀ ಚಂದ್ರ, ನಕ್ಷತ್ರಗಳದ್ದು ಮಾತ್ರವಾಗಿರಲಿಲ್ಲ, ಜತೆಗೆ ಮಿಂಚು ಹುಳಗಳದ್ದೂ ! ಹಾರುವ ಅವುಗಳನ್ನು ಹಿಡಿಯಲು ನಾವೂ ಹಾರಾಡುತ್ತಾ ಏನೆಲ್ಲಾ ಸರ್ಕಸ್ ಮಾಡಬೇಕಾಗುತ್ತಿತ್ತು... ಅದು ನಮ್ಮ ಕೈಗೆ ಸಿಕ್ಕಿಬಿಟ್ಟರೆ ಜಗತ್ತೇ ನಮ್ಮ ಕೈಗೆ ಸಿಕ್ಕಹಾಗೆ ಬೀಗುತ್ತಿದ್ದೆವು. ಅಲ್ಲಿರುತ್ತಿದ್ದ ಎರಡು ಮೂರು ಗಂಟೆಯಲ್ಲಿ ಹತ್ತಿಪ್ಪತ್ತು ಹುಳಗಳನ್ನಾದರೂ ಹಿಡಿದು ಅವನ್ನು ಖಾಲಿ ಬೆಂಕಿಪೆಟ್ಟಿಗೆಯಲ್ಲಿಟ್ಟು ಜೋಪಾನವಾಗಿ ಮನೆಗೆ ತಂದು ಯಾರಿಗೂ ಕಾಣದ ಹಾಗೆ ಮುಚ್ಚಿಡುತ್ತಿದ್ದೆವು.

ರಾತ್ರಿ ಮಲಗುವಾಗ ಸೊಳ್ಳೆ ಪರದೆ ಕಟ್ಟಿಕೊಂಡ ನಂತರ ಅದರೊಳಗೆ ಮಿಂಚು ಹುಳಗಳನ್ನು ಬಿಟ್ಟುಬಿಟ್ಟರೆ... ನಮ್ಮ ಹಾಸಿಗೆಯಲ್ಲಿಯೇ ಮಿನುಮಿನುಮಿನುಗುವ ನಕ್ಷತ್ರಲೋಕ. ಕರೆಂಟೇ ಇಲ್ಲದ ನಮ್ಮ ಮನೆಯಲ್ಲಿ ಸೊಳ್ಳೆ ಪರದೆಯೊಳಗೇ ಸುತ್ತಾಡುತ್ತಿರುವ ಈ ನಕ್ಷತ್ರಗಳು ಬೀರುವ ಹಸಿರು ಮಿಶ್ರಿತ ಹಳದಿ ಬಣ್ಣದ ಬೆಳಕಲ್ಲಿ ಮಲಗಿದರೆ... ಕಾಣುವ ಪ್ರತಿ ಕನಸಿಗೂ ಅಧ್ಭುತ ಲೈಟಿಂಗ್ ಎಫೆಕ್ಟ್! ಜತೆಗೆ ದೂರದಲ್ಲೆಲ್ಲೋ ರಾಜಕುಮಾರನ ಕುದುರೆಯ ಖುರಪುಟದ ಸದ್ದು ಕೇಳಿದಂತಾಗುತ್ತಿದ್ದರೆ ಕಂಬಳಿಯೊಳಗಿದ್ದೇ ನಾವೆಲ್ಲ ಪ್ರಾರ್ಥಿಸುತ್ತಿದ್ದೆವು: "ದೇವರೇ, ಬಣ್ಣಗಳೆಲ್ಲಾ ಬಿಳಿಯಾಗದಿರಲಿ... ಬೇಗನೆ ಬೆಳಕಾಗದಿರಲಿ...!’

ಚಿತ್ರ ಕೃಪೆ: ಈಸಿಡ್ರೀಂಅನಲಿಸಿಸ್‌.ಕಾಂ

ಬುಧವಾರ, ಮೇ 20, 2009

ಸುಕುಮಾರ್ ಸೇನ್ ಜಯ್ ಹೋ !!

ಈಗಷ್ಟೇ ಫಲಿತಾಂಶ ಹೊರಬಿದ್ದಿದೆ. ಯಾವ ಪಕ್ಷಕ್ಕೂ ಬಹುಮತ ನೀಡದೆ, ಹಾಗೆಂದು ಸ್ಥಿರ ಸರ್ಕಾರ ರಚನೆಗೆ ತೊಂದರೆಯೂ ಆಗದಂತೆ ಮತದಾರ ಬುದ್ದಿವಂತಿಕೆಯಿಂದ ಮತ ಚಲಾಯಿಸಿದ್ದಾನೆ. ಪ್ರಜಾಪ್ರಭುತ್ವದ ಗಜಗಮನಕೆ ಚುನಾವಣೆಯೇ ಅಂಕುಶ ಎಂಬುದನ್ನು ಅವನು ಅರ್ಥ ಮಾಡಿಕೊಂಡಿರುವುದಕ್ಕೆ ಸಾಕ್ಷಿ ಇದು. (ಮತ ಹಾಕದವರನ್ನು ಬಿಟ್ಟುಬಿಡಿ, ಅವರು ತೀರಾ "ಬುದ್ಧಿವಂತರು") ಆದರೆ ಭಾರತದ ಮೊದಲ ಚುನಾವಣೆಯ ಸಮಯದಲ್ಲಿ ಹೀಗಿರಲಿಲ್ಲ. ಆಗಷ್ಟೇ ಸ್ವತಂತ್ರ್ಯ ಬಂದಿತ್ತು.21 ವರ್ಷವಾದ ಪ್ರತಿಯೊಬ್ಬ ಭಾರತೀಯ ನಾಗರಿಕನಿಗೂ ಮತದಾನದ ಹಕ್ಕು ನೀಡುವ ಮಹತ್ವದ ನಿರ್ಧಾರ ಕೈಗೊಳ್ಳಲಾಯ್ತು (ಆಗಿನ್ನೂ ಅಮೆರಿಕದಂಥ ದೇಶದಲ್ಲೇ ಎಲ್ಲರಿಗೂ ಮತ ನೀಡುವ ಹಕ್ಕು ಕೊಡುವ ಕುರಿತು ಅನುಮಾನಗಳಿದ್ದವು. ಹಲವು ದೇಶಗಳಲ್ಲಿ ಟ್ಯಾಕ್ಸ್ ಕಟ್ಟುವ, ವಿದ್ಯಾವಂತರಿಗೆ ಮಾತ್ರ ಮತ ನೀಡುವ ಹಕ್ಕಿತ್ತು.) ಭಾರತದಲ್ಲಿ ಆಗ 21 ವರ್ಷ ದಾಟಿದವರ ಸಂಖ್ಯೆ ಹದಿನೇಳು ಕೋಟಿ ಅರವತ್ತು ಲಕ್ಷಕ್ಕೂ ಹೆಚ್ಚಿತ್ತು. ಅದರಲ್ಲಿ ಶೇ.85ರಷ್ಟು ಅನಕ್ಷರಸ್ಥರು. ಅವರಿಗೆ ಚುನಾವಣೆಯ ಬಗ್ಗೆ ತಿಳಿ ಹೇಳುವುದಾದರೂ ಹೇಗೆ?

ಇಂಥ ಸಮಸ್ಯೆ ಪರಿಹರಿಸಲು ಶ್ರಮಿಸಿದವ ಸುಕುಮಾರ್ ಸೇನ್ ಎಂಬ ಭಾರತದ ಪ್ರಜಾಪ್ರಭುತ್ವದ ತೆರೆಮರೆಯ ನಾಯಕ, ಆಗಿನ ಮುಖ್ಯ ಚುನಾವಣಾಕಾರಿ. ಬೆಂಗಾಲದ ಸುಕುಮಾರ್ ಸೇನ್ ಲಂಡನ್ ವಿಶ್ವವಿದ್ಯಾಲಯದಲ್ಲಿ ಬಂಗಾರದ ಪದಕ ಗಳಿಸಿದ ಪ್ರತಿಭೆ. ಅದುವರೆಗೂ ಪಶ್ಚಿಮ ಬಂಗಾಳದ ಮುಖದಯ ಸೆಕ್ರೆಟರಿಯಾಗಿದ್ದ ಸುಕುಮಾರರ ಹೆಗಲಿಗೆ ಮೊದಲ ಚುನಾವಣೆಯ ಭಾರ ಹೊರಿಸಲಾಯಿತು. ಭಾರತದಲ್ಲಿ ಚುನಾವಣೆ ಎಂದರೆ ಅದು ಪ್ರಜಾಪ್ರಭುತ್ವದ ಪರೀಕ್ಷೆ ಎಂದು ಜಗತ್ತು ಕುತೂಹಲದಿಂದ ನೋಡುತ್ತಿದೆ ಎಂದು ಅರಿತಿದ್ದ ಸುಕುಮಾರ್ ಹೊಸ ಪ್ರಯೊಗಗಳಿಗೆ ಮುಂದಾದರು.

ಮೊದಲು ಮತದಾರರ ಪಟ್ಟಿಯನ್ನು ಸಿದ್ಧಪಡಿಸಿಬೇಕಿತ್ತು. ಅದಕ್ಕೂ ಸಾಮಾಜಿಕ ಹಾಗೂ ತಾಂತ್ರಿಕ ಸಮಸ್ಯೆಗಳು ಬಹಳಷ್ಟಿದ್ದವು. ಹೆಣ್ಣುಮಕ್ಕಳು ತಮ್ಮ ಹೆಸರನ್ನು ಬರೆಸಲೊಪ್ಪದೆ, ಗಂಡ ಅಥವಾ ಅಪ್ಪನ ಹೆಸರಿಂದ ಗುರುತಿಸಿಕೊಳ್ಳುವುದನ್ನು ಸುಕುಮಾರ್ ವಿರೋಧಿಸಿದರು. ಮಹಿಳೆಯರು ತಮ್ಮ ಸ್ವಂತ ಹೆಸರಿನಲ್ಲಿಯೇ ಮತಪಟ್ಟಿಗೆ ನೊಂದಾಯಿಸಲು ಮನ ಒಲಿಸಬೇಕಾಯಿತು. ಅದಕ್ಕಾಗಿ ಕೆಲವು ಪ್ರಾಮಾಣಿಕ ಅಧಿಕಾರಿಗಳನ್ನು ಈ ಕೆಲಸಕ್ಕೆ ನಿಯೋಜಿಸಲಾಯಿತು. (ಸುಕುಮಾರರ ಈ ಎಲ್ಲಾ ಪ್ರಯತ್ನಗಳ ಮಧ್ಯೆಯೂ ಸುಮಾರು ಎರಡು ಲಕ್ಷದ ಎಂಬತ್ತು ಸಾವಿರ ಮಹಿಳೆಯರು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ಒಪ್ಪದೆ, ಮತದಾನದಿಂದ ವಂಚಿತರಾದರು) ವಿಧಾನ ಸಭಾ, ಲೋಕಸಭಾ ಕ್ಷೇತ್ರಗಳನ್ನು ಅಭ್ಯಸಿಸಿ, ಅವುಗಳ ಭೌಗೋಳಿಕ ನೀಲನಕ್ಷೆ ರಚಿಸುವುದಕ್ಕೇ ಆರು ತಿಂಗಳು ಬೇಕಾಯಿತು. ಮತಪತ್ರ ಹೇಗಿರಬೇಕು, ಪೆಟ್ಟಿಗೆ ಹೇಗಿರಬೇಕು ಎಂಬುದರ ಬಗ್ಗೆ ಪರಿಣತರೊಂದಿಗೆ ಚರ್ಚೆ ನಡೆಸಲಾಯಿತು.

ಮೊದಲ ಚುನಾವಣೆಯಾದರೂ ಕಣದಲ್ಲಿರುವವರ ಸಂಖ್ಯೆ ಕಡಿಮೆಯೇನಿರಲಿಲ್ಲ. ಲೋಕಸಭೆಯ 498 ಸ್ಥಾನಗಳೂ ಸೇರಿದಂತೆ ಲೋಕಸಭೆ ವಿಧಾನ ಸಭೆ ಎರಡರಿಂದ ಒಟ್ಟು ೪೪೧೨ ಸ್ಥಾನಗಳಿದ್ದವು. ಅಭ್ಯರ್ಥಿಗಳ ಸಂಖ್ಯೆ18.000! ಓದು ಬರಹ ಬಾರದವರೇ ಮತದಾರರೇ ಬಹುಸಂಖ್ಯಾತರಿರುವುದರಿಂದ ಅವರಿಗೆ ಪಕ್ಷಗಳನ್ನು, ಅಭ್ಯರ್ಥಿಗಳನ್ನು ಸುಲಭವಾಗಿ ಗುರುತಿಸಲು ಚಿಹ್ನೆಗಳನ್ನು ನೀಡಲಾಯಿತು. ಅವೂ ಸಹ ದಿನಬಳಕೆಯ, ಮತದಾರರಿಗೆ ಪರಿಚಿತವಿರುವ ವಸ್ತುಗಳಾಗಿರಬೇಕು ಎನ್ನುವುದೂ ಚುನಾವಣಾ ಆಯೋಗದ ನಿಯಮವಾಗಿತ್ತು.

ಅಂತೂ ಇಂತೂ 1951-52ಕ್ಕೆ ಚುನಾವಣೆಗೆ ಭಾರತ ತಯಾರಾಯಿತು. ಸುಮಾರು ಎರಡು ಲಕ್ಷದ ಇಪ್ಪತ್ನಾಲ್ಕು ಸಾವಿರ ಮತಗಟ್ಟೆಗಳು, 22 ಲಕ್ಷ ಸ್ಟೀಲ್ ಮತಪೆಟ್ಟಿಗೆಗಳು ಸಿದ್ಧಗೊಂಡವು. ಮತದಾನ ಪ್ರಕ್ರಿಯೆಗೆ ಸಹಾಯ ಮಾಡಲು ಸುಮಾರು ಮೂರೂವರೆ ಲಕ್ಷ ಅಧಿಕಾರಿಗಳು, ಮತಗಟ್ಟೆಗಳ ಬಳಿ ಕಾವಲು ಕಾಯಲು ಎರಡು ಲಕ್ಷದ ಇಪ್ಪತ್ನಾಲ್ಕು ಸಾವಿರ ಪೊಲೀಸ್ ಅಧಿಕಾರಿಗಳು ನಿಯುಕ್ತಗೊಂಡರು. ಮತಗಟ್ಟೆ ನಿರ್ಮಿಸುವುದೇನೂ ಸುಲಭದ ಮಾತಾಗಿರಲಿಲ್ಲ. ಎಷ್ಟೋ ಹಳ್ಳಿಗಳನ್ನು ತಲುಪಲು ರಸ್ತೆಗಳೇ ಇರಲಿಲ್ಲ. ಚುನಾವಣೆಗೆಂದೇ ವಿಶೇಷವಾಗಿ ಎಷ್ಟೋ ನದಿಗಳಿಗೆ ಸೇತುವೆಗಳನ್ನು ಕಟ್ಟಬೇಕಾಯಿತು. ಹಿಂದೂ ಮಹಾಸಾಗರದಲ್ಲಿರುವ ದ್ವೀಪಗಳಿಗೆ ಮತಪೆಟ್ಟಿಗೆಗಳನ್ನು ಒಯ್ಯಲು ನೌಕಾದಳದ ಹಡಗುಗಳನ್ನು ಬಳಸಿದರು.

ಅನಕ್ಷರಸ್ಥ ಮತದಾರರಿಗೆ ಗೊಂದಲವಾಗದಿರಲು ಸುಕುಮಾರ್ ಅನೇಕ ಉಪಾಯಗಳನ್ನು ಮಾಡಿದರು. ಒಂದು ಮತಗಟ್ಟೆಯಲ್ಲಿ ಒಂದೇ ಮತಪೆಟ್ಟಿಗೆ ಇಡದೆ, ಹಲವು ಮತಪೆಟ್ಟಿಗೆ ಇಡಲಾಯಿತು. ಪ್ರತಿ ಪಕ್ಷಕ್ಕೂ ಅದರ ಚಿಹ್ನೆ ಇರುವ ವಿಶೇಷ ಮತಪೆಟ್ಟಿಗೆ. ಇದರಿಂದ ಮತದಾರ ಮತಗಟ್ಟೆ ಹೊಕ್ಕೊಡನೆ ತಾನು ಬಯಸಿದ ಪಕ್ಷದ ಚಿಹ್ನೆಯನ್ನು ಗುರುತಿಸಿ, ಅದೇ ಪೆಟ್ಟಿಗೆಗೆ ಮತ ಹಾಕಲು ಸುಲಭವಾಗುತ್ತಿತ್ತು. ಅಲ್ಲದೆ ಒಮ್ಮೆ ಮತ ಹಾಕಿದವ ಮತ್ತೊಮ್ಮೆ ಹಾಕುವುದನ್ನು ತಪ್ಪಿಸಲು ಭಾರತೀಯ ವಿಜ್ಞಾನಿಗಳು ತಯಾರಿಸಿದ ವಿಶೇಷ ಶಾಹಿಯನ್ನು ಬಳಸಲಾಯಿತು.
ಈ ಎಲ್ಲ ಯೋಜನೆ, ಪರಿಶ್ರಮಗಳ ಹಿನ್ನೆಲೆಯಲ್ಲಿ 1952ರ ಚುನಾವಣೆ ಭರ್ಜರಿ ಯಶಸ್ಸು ಕಂಡಿತು. ಶೇ 62ರಷ್ಟು ಜನರು ಅಂದರೆ ಸುಮಾರು 17.6 ಕೋಟಿ ಮತದಾರರಲ್ಲಿ 11ಕೋಟಿ ಜನರು ಮತ ಚಲಾಯಿಸಿದರು. ಸ್ವತಂತ್ರ್ಯ ಬಂದು ಆರು ದಶಕ ನಂತರದ ಈ ಬಾರಿಯ ಮತದಾನದ ಶೇಕಡಾವಾರು ನೋಡಿದರೆ ಸುಕುಮಾರಸೇನರ ಪರಿಶ್ರಮ ಅರ್ಥವಾಗುತ್ತದೆ.

ಸುಕುಮಾರರ ಪ್ರಾಮಾಣಿಕತೆಗೆ, ದೂರದೃಷ್ಟಿಗೆ ಸಾಟಿಯೇ ಇಲ್ಲ.1957ರಲ್ಲಿ ನಡೆದ ಎರಡನೇ ಮಹಾ ಚುನಾವಣೆಗೂ ಸುಕುಮಾರಸೇನರೇ ಮುಖ್ಯ ಚುನಾವಣಾಧಿಕಾರಿಯಾಗಿದ್ದರು. ಸ್ವಾರಸ್ಯವೆಂದರೆ ಮೊದಲ ಚುನಾವಣೆಗಿಂತ ಎರಡನೇ ಚುನಾವಣೆಗೆ ನಾಲ್ಕು ಕೋಟಿ ಐವತ್ತು ಲಕ್ಷ ಕಡಿಮೆ ಖರ್ಚಾಯಿತು. ಏಕೆಂದರೆ ಮೊದಲ ಚುನಾವಣೆಗೆ ತಯಾರಿಸಿದ್ದ ಸುಮಾರು ಮೂವತ್ತೈದು ಲಕ್ಷ ಮತಪೆಟ್ಟಿಗೆಗಳನ್ನು ಸುಕುಮಾರ್ ಜತನವಾಗಿರಿಸಿದ್ದರು ! ಒಟ್ಟಿನಲ್ಲಿ ಇಂದು ಭಾರತದಲ್ಲಿ ಪ್ರಜಾಪ್ರಭುತ್ವ ಸದೃಢವಾಗಿ ಬೇರೂರಿ, ಸಶಕ್ತ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಗೆಲ್ಲಲು ಸುಕುಮಾರಸೇನರ ಕಾಣಿಕೆ ಮರೆಯುವಂತಿಲ್ಲ. ಜಯ್ ಹೋ ಹೇಳಬೇಕಾಗಿರುವುದು ತೆರೆಮರೆಯ ಇಂಥ ಹೀರೋಗಳಿಗೆ.

ಬುಧವಾರ, ಮೇ 13, 2009

ಬೆಳೆಯುವ ಪರಿ ಸೋಜಿಗದಲಿ ನೋಡಿ


'ನೋಡ್ರೀ, ಅವನ ಚಡ್ಡಿ ಅವನೇ ಹಾಕಿಕೊಳ್ಳುತ್ತಿದ್ದಾನೆ. ಅಂತೂ ನನ್ ಮಗ ದೊಡ್ಡವನಾಗಿಬಿಟ್ಟ!' ಅಂತ ಸಂಭ್ರಮದ ದನಿಯಲ್ಲಿ ತಾಯೊಬ್ಬಳು ಹೇಳುತ್ತಿದ್ದರೆ ಉಳಿದವರ ಮುಖದಲ್ಲಿ ಮುಸಿ ಮುಸಿ ನಗು. ಅವರಿಗೆ ಚನ್ನಾಗಿ ನೆನಪಿದೆ, ಆ ಮಗು ಮೊದಲು ಅಂಬೆಗಾಲಿಟ್ಟಾಗ, ಎದ್ದು ನಿಲ್ಲಲು ಕಲಿತಾಗ, ಅಮ್ಮಾ ಎಂದಾಗ, 'ನಾನು ಚೂಲಿಗೆ ಹೋತಿನಮ್ಮಾ..'ಎಂದು ರಾಗ ಎಳೆದಾಗ ಅವಳು ಅದೇ ಮಾತನ್ನು ಇಷ್ಟೇ ಸಂಭ್ರಮದಲ್ಲಿ ಹೇಳಿದ್ದಳು. ಈಗಲೂ ಅವಳ ಆ ವಾಕ್ಯದಲ್ಲಿ ಅದೇ ಬೆರಗು.

ಹತ್ತು ವರ್ಷಗಳ ನಂತರ ಬಂದು 'ಓಓ.. ಎಷ್ಟೊಂದು ದೊಡ್ಡವನಾಗಿದ್ದಾನೆ!' ಎಂದು ಉದ್ಗರಿಸುವುದು ಒಂದು ರೀತಿ. ಆದರೆ ಪ್ರತಿ ನಿತ್ಯ, ಪ್ರತಿ ಕ್ಷಣ ಆ ಮಗುವಿನ ಆಟ ಪಾಠಗಳಲ್ಲಿ ಭಾಗಿಯಾಗುತ್ತಿದ್ದರೂ ಯಾವುದೋ ಒಂದು ಕ್ಷಣದಲ್ಲಿ ಅರೇ! ಇವನು ಯಾವಾಗ ಇಷ್ಟೊಂದು ದೊಡ್ಡವನಾದ, ನನಗೆ ಗೊತ್ತೇ ಆಗಲಿಲ್ಲವಲ್ಲ! ಎಂದು ಸೋಜಿಗ ಪಡುವುದಿದೆಯಲ್ಲ, ಅದು ಬೇರೆಯದೇ ರೀತಿಯದು. ಮೊದಲ ಬಾರಿ ಸ್ಕೂಲ್ ಯೂನಿಫಾರ್ಮ್ ಹಾಕಿಕೊಂಡು ಮಗು ಸ್ಕೂಲ್‌ಗೆ ಹೊರಟಾಗ, ಹತ್ತಾರು ಬಾರಿ ಬಿದ್ದು ಸೈಕಲ್ ಹೊಡೆಯಲು ಕಲಿತವ ಒಮ್ಮಲೆ ಬೈಕ್‌ನಲ್ಲಿ ಬುರ್‌ಎಂದು ಬಂದಾಗ, ಹೊಸ ಸೆಲ್ ಫೋನ್ ಬಳಸುವುದು ಹೇಗೆಂದು ಎಂಟು ವರ್ಷದ ಮಗನಿಂದ ಕಲಿಯುವಾಗ, ಮಗಳು ಮದುವೆಯಾಗಿ ಗಂಡನ ಜತೆ ನಿಂತಾಗ ಹೀಗೆ ಅನ್ನಿಸುವುದುಂಟು.

ಊರಿಗೆ ಹೋದಾಗಲೆಲ್ಲಾ ಮೊದಲು ನಾನು ನೆಟ್ಟ ತೆಂಗಿನ ಮರದೆಡೆ ಓಡುತ್ತೇನೆ, ನನಗಿಂತ ಎತ್ತರ ಬೆಳೆದಿದೆ ಎಂದು ಕಣ್ಣಲ್ಲೇ ಅಳೆಯುತ್ತಾ ಖುಷಿ ಪಡುತ್ತಿದ್ದಾಗ, ಪುಟ್ಟ ತಂಗಿ ಮೆಲ್ಲನೆ ನನ್ನ ದುಪ್ಪಟ್ಟ ಎಗರಿಸಿರುತ್ತಾಳೆ. ಬಾಗಿಲ ಹೊರಗೆ ಬಿಟ್ಟಿದ್ದ ನನ್ನ ಹೀಲ್ಡ್ ಚಪ್ಪಲಿ ಹಾಕಿಕೊಂಡು, ನನ್ನದೇ ದುಪ್ಪಟ್ಟವನ್ನ ತನ್ನ ಫ್ರಾಕ್ ಮೇಲೆ ಹಾರಾಡಿಸುತ್ತಾ ರಸ್ತೆಗಿಳಿಯುತ್ತಾಳೆ. ಅಭ್ಯಾಸವಿಲ್ಲದ, ಸರಿಯಾದ ಅಳತೆಯದೂ ಅಲ್ಲದ ಚಪ್ಪಲಿ ಕಾಲಿಗೆ ತೊಡರಿ ಬೀಳುತ್ತಿದ್ದರೂ ತಾನೂ 'ಅಕ್ಕನಂತಾದೆ' ಎಂದು ಬೀಗುತ್ತಾ ಸಾಗುವ ಅವಳ ನಡಿಗೆ ನನಗ್ಯಾವತ್ತೂ ಸೋಜಿಗ.

ಆದರೆ ಕೆಲವರಿಗೆ ಬೆಳವಣಿಗೆ ಬೇಕಿಲ್ಲ. ನಾಳೆ ಏನಾದೀತೆಂಬ ಸಹಜ ಕುತೂಹಲದ ಜತೆಗೇ ಚೂರು ದಿಗಿಲು, ಮೂವತ್ತು ದಾಟಿದವರ ಹುಟ್ಟುಹಬ್ಬದಂತೆ ಅದು ಅನಪೇಕ್ಷಿತ ಅತಿಥಿ. ಆದರೂ ಕಾಲ ನಿಲ್ಲುವುದಿಲ್ಲ. 'ನನ್ನ ಮಗ ಬೇರೆ ಜಾತಿ ಹುಡುಗಿಯನ್ನು ಮದುವೆಯಾಗುತ್ತೇನೆಂದಾಗ ಅವನನ್ನು ಮನೆ ಬಿಟ್ಟು ಓಡಿಸಿಬಿಟ್ಟಿದ್ದೆ. ಈಗ ನನ್ನ ಮುಪ್ಪಿನ ಕಾಲಕ್ಕೆ ಮಗ-ಸೊಸೆ ತಮ್ಮ ಮನೆಯಲ್ಲಿಟ್ಟುಕೊಂಡಿದ್ದಾರೆ. ಒಂದು ದಿನವೂ ಆ ಘಟನೆಯ ಬಗ್ಗೆ ಚಕಾರವೆತ್ತಿಲ್ಲ, ಕೊನೆಗೂ ನನ್ನ ಮಗ ನನಗಿಂತ ದೊಡ್ಡವನಾಗಿಬಿಟ್ಟ!' ಎಂದು ಹಿರಿಯರೊಬ್ಬರು ಕಣ್ದುಂಬಿಕೊಂಡರು. ಆ ಸೋತ ದನಿಯಲ್ಲೂ ಅಚ್ಚರಿಯ ಹೊಳಪಿತ್ತು.

ಸೋಮವಾರ, ಮೇ 4, 2009

ಇದು 'ಯಾಂತ್ರಿಕ ಪ್ರೀತಿ'ಯಲ್ಲ!


ಶಿವಮೊಗ್ಗದಲ್ಲಿ ಇಕ್ಬಾಲ್ ಅಹಮದ್ ಎಂಬ ರೈಲ್ವೆ ಮೆಕಾನಿಕ್‌ಗೆ ಶಿವಮೊಗ್ಗ-ತಾಳಗುಪ್ಪ ಮಾರ್ಗದ ಪುಟಾಣಿ ರೈಲೆಂದರೆ ಅದೇನೋ ಅಕ್ಕರೆ.( ಅದೆಷ್ಟು ಪುಟಾಣಿ ಎಂದರೆ ಕೇವಲ 52 ಸೀಟಿನದು. ಅದಕ್ಕೆ ಟ್ರೈನ್ ಕಾರ್ ಎಂದೇ ಕರೆಯುವುದು.) ಹೊರಗಡೆ ಆಟವಾಡಿ ಗಾಯ ಮಾಡಿಕೊಂಡು ಬಂದ ಪುಟ್ಟ ಮಗುವನ್ನು ಸುಶ್ರೂಷೆ ಮಾಡುವಂತೆ ಆ ರೈಲನ್ನು ಆರೈಕೆ ಮಾಡುತ್ತಿದ್ದರು. ತಾವಿಲ್ಲದಿದ್ದಾಗ ಇತರ ಕೆಲಸಗಾರರು ಕುಡಿದು ಗಾಡಿಯನ್ನು ಮುಟ್ಟಿದರೆ ಇವರು ಕಿಡಿಕಿಡಿ. ಅದೇ ಆತಂಕದಲ್ಲಿ ಕೆಲಸಕ್ಕೆ ಎಂದೂ ರಜೆ ತೆಗೆದುಕೊಳ್ಳುತ್ತಿರಲಿಲ್ಲ. ಅದರ ಚಾಲಕನಿಗೂ ಇವರದೇ ತರಬೇತಿ. ಒಮ್ಮೆ ಅನಂತಪುರದ ಬಳಿ ೧೫ ದಿನಗಟ್ಟಲೇ ಕೆಟ್ಟುನಿಂತಾಗ, ಗಾಡಿ ಬಿಟ್ಟಿರಲಾರದೇ ಹಳಿ ಸರಿ ಇಲ್ಲದಿದ್ದರೂ ಸಾಹಸ ಮಾಡಿ ಶಿವಮೊಗ್ಗಕ್ಕೆ ತಂದಿದ್ದಿದೆ. ಆದರೆ ಇತ್ತೀಚೆಗೆ ತಾಳಗುಪ್ಪ ಮಾರ್ಗ ಬ್ರಾಡ್‌ಗೇಜ್‌ಗೆ ಬದಲಾಗುತ್ತಿದ್ದಂತೆ ಈ ರೈಲು ಮ್ಯೂಸಿಯಂ ಸೇರಿತು. ಮಗುವನ್ನು ಹಾಸ್ಟೆಲ್‌ಗೆ ಬಿಟ್ಟುಬಂದ ತಾಯಿಯಂತೆ ಇವರು ಕೊರಗಿದರು. ಈಗಲೂ ವಾರಕೊಮ್ಮೆಯೋ, ಹದಿನೈದು ದಿನಕ್ಕೊಮ್ಮೆಯೋ ನಂಜನಗೂಡಿನಲ್ಲಿರುವ ರೈಲ್ವೇ ಮ್ಯೂಸಿಯಂಗೆ ಗಾಡಿಯನ್ನು ನೋಡಲೆಂದೇ ಹೋಗುತ್ತಾರೆ. ಸ್ವಲ್ಪ ದೂರ ಚಲಾಯಿಸಿ, ಸರಿಯಾಗಿದೆ ಎಂದು ಸ್ಪಷ್ಟಪಡಿಸಿಕೊಂಡು ಮರಳುತ್ತಾರೆ, ಮತ್ತೆ ಅಲ್ಲಿಗೆ ಹೋಗುವ ದಿನಾಂಕ ನಿಗದಿ ಪಡಿಸಿಕೊಂಡೇ.

ಮೊನ್ನೆ ಮೇ ಒಂದರಂದು ನಾನು ರಜೆಯ ವಿರಾಮದಲ್ಲಿ ಮನೆಯಲ್ಲಿದ್ದೆ. ಟಿವಿಯಲ್ಲಿ ಕಾರ್ಮಿಕ ದಿನಾಚರಣೆ, ಶೋಷಣೆ, ಬಡತನ ಎಂದೇನೋ ಬರುತ್ತಿತ್ತು. ನಾನು ಜಯಂತ್ ಕಾಯ್ಕಿಣಿಯವರ ಕಥಾ ಸಂಕಲನದಲ್ಲಿ ಮುಳುಗಿದ್ದೆ. ಅದರ ಕಥೆಯೊಂದರಲ್ಲಿ ನಾಯಕ ತನ್ನ ಟ್ರಕ್ಕಿನೊಂದಿಗೆ ಅಂಥ ಭಾವನಾತ್ಮಕ ಸಂಬಂಧ ಇಟ್ಟುಕೊಂಡ ಪ್ರಸಂಗವಿದೆ. ಅಲ್ಲಿ ಟ್ರಕ್ ಅವನ ಗೆಳೆಯ, ಪ್ರೇಯಸಿ, ತುಂಟ ಮಗು, ಕಷ್ಟಕಾಲದಲ್ಲಿ ಗಂಭೀರವಾಗಿ ಸಮಾಧಾನಿಸಬಲ್ಲ ಹಿರಿಯ. ಕೂಡಲೇ ನನಗೆ ಇಕ್ಬಾಲರೂ, ಆ ಟ್ರೈನ್‌ಕಾರೂ ನೆನಪಾಯಿತು.
ಯಂತ್ರದೊಂದಿಗೆ ಕೆಲಸ ಮಾಡುತ್ತಾ ಮಾಡುತ್ತಾ ಮನುಷ್ಯನೂ ಯಂತ್ರದಂತಾಗುತ್ತಾನೆ ಎನ್ನುವುದು ಒಂದು ಸಾಮಾನ್ಯ ಅಭಿಪ್ರಾಯ. ಚಾರ್ಲಿ ಚಾಪ್ಲಿನಂಥ ಮಹಾನ್ ಪ್ರತಿಭಾವಂತರು, ಚಿಂತಕರು ಹಲವು ರೀತಿಯಲ್ಲಿ ಆ ಭಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಮನುಷ್ಯನ ಭಾವನಾ ಲೋಕ ಎಷ್ಟು ವಿಚಿತ್ರವೆಂದರೆ ಅಂಥ ಯಂತ್ರದೊಂದಿಗೂ ತನ್ನ ಸಂಬಂಧವನ್ನು ಸೃಷ್ಟಿಸಿಕೊಳ್ಳಬಲ್ಲದು. ತನ್ನ ಸಂವೇದನೆಯನ್ನೂ ರೂಪಿಸಿಕೊಳ್ಳಬಲ್ಲದು. ಬಹುಶ: ಮನುಷ್ಯರ ಜತೆಗಿದ್ದೂ ಇದ್ದೂ ಯಂತ್ರವೂ ಮನುಷ್ಯನಂತಾಗಿಬಿಟ್ಟಿರುತ್ತದೆಯೇನೋ, ಮನಸುಳ್ಳವರ ಪಾಲಿಗೆ!

ಗುರುವಾರ, ಏಪ್ರಿಲ್ 23, 2009

ವಸಂತನ ಕರೆ


"ಮಳೆರಾಯ ಕೊಟ್ಟ ಮುತ್ತಿಗೆ...ಮತ್ತೇರಿದೆ ಭೂಮಿಗೆ" ಎಂದು ಬೆಳಗ್ಗೆಯೇ ಕಳಿಸಿದ ಗೆಳೆಯನ ಮೆಸೇಜನ್ನು ಓದಿ ಕಿಟಕಿಯಾಚೆ ಕಣ್ಣಾಯಿಸಿದವಳಿಗೆ ಹೊರಗಡೆ ಹೊಸ ಲೋಕವೊಂದು ಬಂದಿಳಿದಂತೆನಿಸತೊಡಗಿತು. ನಿನ್ನೆಯವರೆಗೂ ಧೂಳು ಮೆತ್ತಿಕೊಂಡು, ಬೆವರಿನಿಂದ ಜಿಡ್ಡುಜಿಡ್ಡಾಗಿದ್ದ ಲೋಕ, ಕತ್ತಲು ಕಳೆದು ಬೆಳಗಾಗುವುದರ ಒಳಗೆ ಈಗಷ್ಟೆ ಸ್ನಾನ ಮಾಡಿಬಂದ ಅಪ್ಸರೆಯಂತೆ ಹೊಳೆಯತೊಡಗಿದ್ದಾದರೂ ಹೇಗೆ? ಗಿಡ ಮರವೆಲ್ಲಾ ಹೊಸ ಹಸಿರು ಸೀರೆಯುಟ್ಟಿದ್ದರೆ, ರಸ್ತೆಯುದ್ದಕ್ಕೂ ಗುಲ್‌ಮೊಹರ್ನ ಕೆಂಪುಹಾಸು! ಎಷ್ಟೆಂದರೂ ಋತುರಾಜ ವಸಂತನ ಆಳ್ವಿಕೆಯ ಕಾಲವಲ್ಲವೇ? ಐದಂಕಿಯ ಸಂಬಳಕ್ಕಾಗಿ ಹಳೆಯ ನೆನಪುಗಳನ್ನು ಊರಿನಲ್ಲಿಯೇ ಗಂಟುಕಟ್ಟಿ ಇಟ್ಟುಬಂದರೂ ಬೆಂಗಳೂರಂಥ ಬೆಂಗಳೂರಲ್ಲೂ ವಸಂತನ ನೆನಪಾಗುತಿದೆಯೆಂದರೆ ವೈ.ಎನ್.ಕೆ ಹೇಳಿದ್ದು ಸರಿಯೆ.
"ವಸಂತ ಕಾಲದಲ್ಲಿ
ಯಾರೂ ಸಂತರಲ್ಲವಂತೆ,
ಕಂತುಪಿತ ಭಗವಂತ
ಕೂಡ ರಮೆಯನ್ನು
ರಮಿಸುವ ಮಂತ್
ಇದಂತ’
"ಚೈತ್ರ ವೈಶಾಖ, ವಸಂತ ಋತು, ಜೇಷ್ಠ ಆಶಾಢ ವರ್ಷ ಋತು" ಅಂತ ಮನೆ ಮಕ್ಕಳೆಲಾ ರಾಗವಾಗಿ ಬಾಯಿಪಾಠ ಮಾಡುತ್ತಿದ್ದೆವಲ್ಲ, ಇದೇ ಬೋಗನ್‌ವಿಲ್ಲಾಗೆ ತಾನೆ ನಮ್ಮೂರಲ್ಲಿ "ಕಾಗದದ ಹೂವು" ಅಂತ ಕರೆಯುತ್ತಿದ್ದುದು, ಹತ್ತು ರೂಪಾಯಿಗೆ ಎರಡರಂತೆ ಕೊಳ್ಳುವ ಇದೇ ತೋತಾಪುರಿಗೆ ಅಲ್ಲವೇ ಪಕ್ಕದ ಮನೆಯ ಶಿವರಾಜುಗೆ ಬಳಪ ಲಂಚ ಕೊಟ್ಟು ತಿನ್ನುತ್ತಿದ್ದುದು, ಮಾವಿನ ಕಾಯಿಯ ಸೊನೆ ತುಟಿಗೆ ತಾಕಿ ಸುಟ್ಟಂತೆ ಕಪ್ಪು ಗಾಯವಾಗಿ, ನಂಜಾಗಿ, ಕೊನೆಗೆ ಅಪ್ಪನ ಹತ್ತಿರ ಹೊಡೆಸಿಕೊಳ್ಳುತ್ತಿದ್ದುದೂ ಅದೊಂದೇ ಕಾರಣಕ್ಕಲ್ಲವೇ? ಪಕ್ಕದ ಊರಿನ ಜಾತ್ರೆ ಇದೇ ತಿಂಗಳಲ್ಲೇ ನಡೆಯುತ್ತಿದ್ದುದಾ...ಇರಬೇಕು. ಪದವಿಯ ಪರೀಕ್ಷೆ ಮುಗಿಸಿ ಊರಿಗೆ ಹೊರಟು ನಿಂತಾಗ ಬೀಳ್ಕೊಡಲು ಬಂದ "ಅವನ" ಕಣ್ಣಲ್ಲಿ ಏನೋ ಫಳಫಳಗುಟ್ಟಿದ್ದು ಇನ್ನೂ ನೆನಪಿದೆ, ಆಗಲೇ ಅದಕ್ಕೆ ಎರಡು ವರ್ಷವಾಗಿಬಿಟ್ಟಿತೇ..ಬೇಸಿಗೆಯಲ್ಲಿ ರಜಾ ಕೊಡುವುದೇ ಅಜ್ಜಿ ಮನೆಗೆ ಹೋಗಲಿಕ್ಕೆಂದು ಎಂದು ಬಲವಾಗಿ ನಂಬಿದ್ದ ನನಗೆ ಆ ಸಲ ಅದೂ ರುಚಿಸಿರಲಿಲ್ಲ. ಪ್ರತಿ ವರ್ಷದಂತೆ ಅಂಗಳದಲ್ಲಿ ಮೊದಲ ಮಳೆಯೊಂದಿಗೆ ಬಿದ್ದ ಆಲಿಕಲ್ಲುಗಳನ್ನು ಆರಿಸಿಕೊಳ್ಳಲು ಕಾಂಪಿಟೇಷನ್ ಮಾಡದೆ ಸುಮ್ಮನೆ ನಿಂತು ನೋಡುತ್ತಿದ್ದವಳಿಗೆ ಅವನ ಕಣ್ಣಲ್ಲಿ ಹೊಳೆದದ್ದು ಇದೇ ಎನಿಸಿಬಿಟ್ಟಿತ್ತಲ್ಲ...
"ಕಾದು ಕಾದು
ಕೆಂಪಾದ ಇಳೆಗೆ
ತಂಪಾಯ್ತು ಇಂದು,
ನೆನೆದೂ ನೆನೆದೂ
ಬೆಂದೋಯ್ತು ಮನಸು,
ಭೇಟಿ ಇನ್ನೆಂದು?’
ಅದೇ ಗೆಳೆಯನ ಇನ್ನೊಂದು ಮೆಸೇಜ್ ಮೊಬೈಲ್‌ನಲ್ಲಿ ಉತ್ತರಕ್ಕಾಗಿ ಕಾಯುತ್ತಿದೆ. ಕಾಯಿ ಹಣ್ಣಾಗುವ ಸಮಯ, ಇನ್ನೂ ಕಾಯಿಸುವುದು ಸರಿಯಲ್ಲ ಎನಿಸತೊಡಗಿತು. ಮಳೆ ಸುರಿಯುವ ಎಲ್ಲಾ ಲಕ್ಷಣಗಳಿದ್ದರೂ ಛತ್ರಿಯನ್ನು ಬೇಕೆಂದೇ ಮರೆತು, ಹೊರ ಕಾಲಿಟ್ಟೆ. ತಂಗಾಳಿ ಬೀಸತೊಡಗಿತ್ತು...

ಬುಧವಾರ, ಏಪ್ರಿಲ್ 15, 2009

ವಿಶ್ವೇಶ್ವರಯ್ಯ ಮ್ಯೂಸಿಯಂ ನೋಡಿದ್ದೀರಾ?


ಯಾವುದೇ ವಸ್ತು ಸಂಗ್ರಹಾಲಯಕ್ಕೆ ಹೋದರೂ ಅಲ್ಲಿ ನೀವು ಕಾಣುವ ಮೊದಲ ಸೂಚನೆ "Dont Touch' ಆದರೆ ಯುರೋಪಿನ ದೇಶಗಳ ಮ್ಯೂಸಿಯಂಗಳಲ್ಲಿ "Do It Yourself' ಎಂದಿರುತ್ತದೆ. ಆದರೆ ನಮ್ಮಲ್ಲೂ ಅಂಥದ್ದೇ ಒಂದು ಮ್ಯೂಸಿಯಂ ಇದೆ ಎಂದು ನನಗೆ ಗೊತ್ತಾದದ್ದು ಮೊನ್ನೆ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದಾಗಲೇ. ಮೊದಲಿಗೆ ನನಗೆ ಆಶ್ಚರ್ಯವಾಗಿದ್ದು ,ಅಲ್ಲಿ ಎಲ್ಲಾ ಮ್ಯೂಸಿಯಂಗಳಲ್ಲಿ ಕಾಣುವಂ ಘನಗಂಭೀರ ಮುಖಗಳು ಕಾಣದೇ, ಫನ್‌ವರ್ಲ್ಡ್‌ನಲ್ಲಿರುವಂತೆ ಮಕ್ಕಳ ನಗು, ಕೇಕೆ ಕಂಡಿದ್ದು. ನೂರಾರು ಮಕ್ಕಳು, ಆ ಬೃಹತ್ ವಿಜ್ಞಾನ, ತಂತ್ರಜ್ಞಾನದ ಎದುರು ಮಕ್ಕಳೇ ಆಗಿರುವ ದೊಡ್ಡವರೂ ಬೆರಗಿನಿಂದ ಅಗಲವಾದ ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದರು. 'ಅದು ಹೇಗೆ ಹೀಗಾಗತ್ತಪ್ಪ?' ಎನ್ನುವ ಮಕ್ಕಳ ಪ್ರಶ್ನೆಗೆ ಅಲ್ಲಿರುವ ವಿವಣೆ ಓದಿ ತಿಳಿ ಹೇಳುವ ಪ್ರಯತ್ನದಲ್ಲಿದ್ದರು. ಆದರೆ ಅಲ್ಲಿ 'ಅದನ್ನು ಮುಟ್ಟಬೇಡಿ', 'ಇದಕ್ಕೆ ಕೈ ತಾಕಿಸಬೇಡಿ' ಎನ್ನುವವರ್ಯಾರೂ ಇರಲೇ ಇಲ್ಲ.
ಮ್ಯೂಸಿಯಂನ ಹೊರಭಾಗದಲ್ಲಿರುವ ವಿಮಾನ, ರಾಕೆಟ್, ಡೈನೋಸಾರಸ್ ಮಕ್ಕಳನ್ನಾಗಲೇ ಚುಂಬಕದಂತೆ ಸೆಳೆದಿದ್ದವು. ಒಳ ಹೊಕ್ಕೊಡನೆ ಬೃಹತ್ ಡೈನೋಸಾರಸ್ ಕುಟುಂಬದ ಸ್ಪೈನೊಸಾರಸ್ ಘೀಳಿಡುತ್ತಾ ಎದುರುಗೊಂಡಿತು. ಅಲ್ಲಿಂದ ಮುಂದೆ ಹೋಗಲೊಪ್ಪದ ಮಕ್ಕಳನ್ನು ಬಲವಂತವಾಗಿ ಮುಂದಿನ ಕೊಠಡಿಗೆ ಕರೆದುಕೊಂಡು ಹೋಗಬೇಕಾಯಿತು. "ಇಂಜಿನ್ ಹಾಲ್"ನಲ್ಲಿ ವಿವಿಧ ಯಂತ್ರಗಳ ಸರಳ ಉಪಯೋಗಗಳ ಡೆಮೊ ಕುತೂಹಲ ಕೆರಳಿಸುವಂತಿದೆ. ಕಬ್ಬಿಣದ ಸರಳುಗಳ ಮಧ್ಯೆ ನಿರಂತರವಾಗಿ ಸುತ್ತುವ , ಎಲ್ಲಿಂದಲೋ ಜಾರಿ ಎಲ್ಲೋ ಹಾರಿ ಬುಟ್ಟಿಯೊಳಗೆ ಬಂದು ಬೀಳುವ ಚೆಂಡುಗಳನ್ನು ಕಣ್ಣರಳಿಸಿಕೊಂಡು ನೋಡುತ್ತಿದ್ದರು. ಸಿನಿಮಾಸಕ್ತರಿಗೆ " ಅಪ್ಪು ರಾಜಾ’ ದಲ್ಲಿ ಕಮಲ್ ಹಸನ್ ಕೇವಲ ಒಂದು ಚೆಂಡನ್ನು ಬಳಸಿ ಕೇಡಿಗನನ್ನು ಕೊಲ್ಲುವ ತಂತ್ರವನ್ನು ನೆನಪಾದರೆ ಆಶ್ಚರ್ಯವಿಲ್ಲ. ಇಲ್ಲಿ ಬೇರೆಲ್ಲೂ ನೋಡಲು ಸಿಗದ ರೈಟ್ ಸಹೋದರರು ನಿರ್ಮಿಸಿದ ಮೊದಲ ವಿಮಾನದ ಪ್ರತಿಕೃತಿಯೂ ಇದೆ.
ಎರಡನೇ ಅಂತಸ್ತಿನ "ಎಲೆಕ್ಟ್ರೋ ಟೆಕ್ನಿಕ್ ಗ್ಯಾಲೆರಿ"ಯಂತೂ ಅಚ್ಚರಿಗಳ ಸಂತೆ. ತಳವೇ ಇಲ್ಲದ ಬಾವಿ, ಎಲ್ಲೋ ಪಿಸುಗುಟ್ಟಿದರೆ ಇನ್ನೆಲ್ಲೋ ಕಿವಿಗೊಟ್ಟು ಆಲಿಸಬಹುದಾದ ತಂತ್ರ, ದೃಷ್ಟಿ ಭ್ರಮೆ ಹುಟ್ಟಿಸುವ ವಿವಿಧ ಆಟಗಳು, ದೇಹ ತೂಕದ ಜತೆಗೆ ಅದರಲ್ಲಿರುವ ನೀರಿನ ತೂಕವನ್ನೂ ತಿಳಿಸುವ ಯಂತ್ರ, ನಮ್ಮದೇ ಬೆನ್ನನ್ನು ಕಣ್ಣೆದುರು ತೋರಿಸುವ ಕನ್ನಡಿ, ಒಂದೇ ಎರಡೇ. ವಿವಿಧ ಗ್ರಹಗಳ ಮೇಲೆ ನಮ್ಮ ತೂಕ ಎಷ್ಟು ಎಂದು ತೋರಿಸುವ ಯಂತ್ರ ನೋಡುಗರಲ್ಲಿ ಆ ಬಗ್ಗೆ ಕುತೂಹಲ ಹುಟ್ಟಿಸುವುದು ಖಂಡಿತ. ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ವಿವಿಧ ಆಟಗಳ ಮೂಲಕ ಕಂಪ್ಯೂಟರ್ ಹೇಗೆ ಸ್ಪರ್ಶವನ್ನು ಗಮನಿಸುತ್ತದೆ ಎಂದು ತೋರಿಸುವುದೂ ಒಳ್ಳೇ ಪ್ರಯೋಗ.
ಈಗೆರೆಡು ವರ್ಷಗಳ ಹಿಂದೆ ನಿರ್ಮಿಸಲ್ಪಟ್ಟ "ಬಾಲ ವಿಜ್ಞಾನ" ವಿಭಾಗದಲ್ಲಿ ಕುಳ್ಳಗಾಗಿ, ದಪ್ಪವಾಗಿ, ಉದ್ದವಾಗಿ ತೋರುವ ಕನ್ನಡಿಗಳು, ನಡೆದರೆ ನುಡಿಯುವ ಪಿಯಾನೊ ಇರುವ ಜಾಗವನ್ನೇ ಮರೆಸಿಬಿಡಬಲ್ಲವು. ಅಲ್ಲಿರುವ ೩ಈ ಚಿತ್ರಮಂದಿರದಲ್ಲಿ ವಿಶೇಷ ಕನ್ನಡಕ ಧರಿಸಿಕೊಂಡು ಚಿತ್ರ ನೋಡುವಾಗ ಮಕ್ಕಳಿರಲಿ, ದೊಡ್ಡವರೂ ಬೆರಗಾಗುವುವುದು ಅವರ ಕೇಕೆ, ಉದ್ಗಾರದಲ್ಲೇ ಗೊತ್ತಾಗುತ್ತಿತ್ತು.
ಸರ್. ಎಂ. ವಿಶ್ವೇ ಶ್ವರಯ್ಯನವರ ಜನ್ಮಶತಮಾನೋತ್ಸವದ ಅಂಗವಾಗಿ ೧೯೬೨ ಈ ಸಂಗ್ರಹಾಲಯವನ್ನು ಸ್ಥಾಪಿಸಿದ್ದಾದರೂ ಅಪ್‌ಡೇಟ್ ಆಗುತ್ತಿದೆ ಎನ್ನುವುದಕ್ಕೆ ಅಲ್ಲಿ ಸಾಕ್ಷಿಗಳಿದ್ದವು. ಪ್ರತಿ ದಿನ ನೂರಾರು ವೀಕ್ಷಕರಿರುವ , ಪ್ರತಿ ವಸ್ತುವನ್ನೂ ಮುಟ್ಟಿ, ತಟ್ಟಿ ನೋಡುವ ಈ ಸಂಗ್ರಹಾಲಯವನ್ನು ನೋಡಿಕೊಳ್ಳುವುದು ಸಾಮಾನ್ಯದ ಮಾತಲ್ಲ. ಆ ಕೆಲಸವನ್ನು ರಾಷ್ಟ್ರೀಯ ವಿಜ್ಞಾನ ವಸ್ತುಸಂಗ್ರಹಾಲಯ ಸೊಸೈಟಿಯು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ. ಬಹು ಅಂತಸ್ತಿನ ಕಟ್ಟಡದಲ್ಲಿ ಲಿಫ್ಟ್ ಇಲ್ಲ ಎನ್ನುವುದೊಂದು ಕೊರತೆ. ಆದರೂ ಅಲ್ಲಲ್ಲಿ ಕೂರಲು ಕುರ್ಚಿಗಳು, ಸ್ವಚ್ಛ ಶೌಚಾಲಯಗಳೂ ನೋಡುಗರನ್ನು ಹಗುರಾಗಿಸುತ್ತವೆ. ಮೇಲಂತಸ್ತನಲ್ಲಿರುವ ಕ್ಯಾಂಟೀನ್ ಮಾತ್ರ ಕೊಂಚ ದುಬಾರಿಯೇ.
ನಮ್ಮೊಂದಿಗೆ ವಿವಿಧ ವಯಸ್ಸಿನ ಮಕ್ಕಳನ್ನು ಕರೆದುಕೊಂಡು, "ಮಕ್ಕಳಿಗೆ ಬೋರ್ ಆಗುತ್ತದೆಯೇನೋ, ಆದರೂ ಇವನ್ನೆಲ್ಲಾ ತಿಳಿದಿರಬೇಕು" ಎಂದು ದೊಡ್ಡವರ ಪೋಸ್ ಕೊಡುತ್ತಾ ಬಂದಿದ್ದ ನಮಗೂ ಇದು ವಿಶಿಷ್ಟ ಅನುಭವ. ವಿವರವಾಗಿ ನೋಡಲು ಇಡೀ ದಿನ ಸಾಲದು. ಭಾನುವಾರವೂ ತೆರೆದಿರುತ್ತದೆ ಎನ್ನುವುದು ಪ್ಲಸ್ ಪಾಯಿಂಟ್. ನೀವು ನೋಡಿಲ್ಲದಿದ್ದರೆ ಒಮ್ಮೆ ಭೇಟಿ ನೀಡಲೇಬೇಕಾದ ಸ್ಥಳವಿದು. ನಿಮ್ಮೊಡನೆ ಮಕ್ಕಳಿದ್ದರೆ ಬೇಸಿಗೆ ರಜೆ ಮುಗಿಯುವ ಮುನ್ನ ಹೋಗಿಬಂದು ಬಿಡಿ. ರಜೆ ಸಾರ್ಥಕವಾದೀತು.
ವಿಳಾಸ: ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ. ಕಸ್ತೂರಬಾ ರಸ್ತೆ. ಬೆಂಗಳೂರು.

ಗುರುವಾರ, ಏಪ್ರಿಲ್ 2, 2009

ಬಿಸಿಲೇ ಗೊತ್ತಿಲ್ಲದ ಮೇಲೆ ಬೆಳದಿಂಗಳ ಮಾತೇಕೆ...?

ಮೊನ್ನೆ ಉತ್ತರ ಕರ್ನಾಟಕದಲ್ಲಿರುವ ನಮ್ಮ ಹಳ್ಳಿಗೆ ಹೋಗಿದ್ದೆನಲ್ಲ, ಎಂಥ ಬಿಸಿಲು ಅಂತಿರಿ ಅಲ್ಲಿ? ಬಸ್ಸಿಲ್ಲದ ನಮ್ಮೂರಿಗೆ ಎರಡು ಕಿಲೋ ಮೀಟರ್ ನಡೆದು ಹೋಗುವಷ್ಟರಲ್ಲಿ ಸುಟ್ಟ ಸೋರೇಕಾಯಂತಾಗಿಬಿಟ್ಟಿದ್ದೆ. ಅಮ್ಮ ಮಾಡಿಕೊಟ್ಟ ನಿಂಬೆ ಹಣ್ಣಿನ ಪಾನಕ ಕುಡಿಯುವ ತನಕ ಮಾತಾಡಲೂ ಶಕ್ತಿ ಇರಲಿಲ್ಲ. 'ಎನ್ ಬಿಸಿಲಮ್ಮಾ ಇಲ್ಲಿ. ಬೆಂಗಳೂರಿನಲ್ಲಿ ಬಿಸಿಲೇ ಇಲ್ಲ ಗೊತ್ತಾ' ಅಂದೆ. ಅಮ್ಮ 'ಪುಣ್ಯವಂತರ ಊರಪ್ಪಾಅದು' ಅಂದಿದ್ದರು. ಎರಡು ದಿನ ಕಳೆಯುವಷ್ಟರಲ್ಲಿ ಉರಿವ ಬಿಸಿಲು, ಸುಡುವ ಧಗೆ, ಕಣ್ಣುಮುಚ್ಚಾಲೆಯಾಡುವ ಕರೆಂಟ್‌ಗೆ ಬೇಸತ್ತು ಬೆಂಗಳೂರಿಗೆ ಹೋದರೆ ಸಾಕಪ್ಪನ್ನಿಸಿಬಿಟ್ಟಿತ್ತು.ಇಲ್ಲಿಯ ಜನ ಹ್ಯಾಗೆ ಬದುಕಿರ್‍ತಾರೋ ಇಲ್ಲಿಯೇ ಎಂದೆನಿಸಿದ್ದೂ ನಿಜ.
'ಬೆಂಗಳೂರಿನಲ್ಲಿದೊಡ್ಡ ದೊಡ್ಡಟ್ಟಡ ಇರೋದ್ರಿಂದ ಅಲ್ಲಿಗೆ ಸೂರ್ಯನ ಬಿಸಿಲೇ ತಾಕಲ್ವಂತೆ, ಯಾವಾಲೂ ಅಲ್ಲಿ ನೆರಳಿರೋದ್ರಿಂದ ತಣ್ಣಗಿರುತ್ತಂತೆ' ಅಂತ ಎಂದೂ ಬೆಂಗಳೂರು ನೋಡದ ನನ್ನ ಅಣ್ಣನ ಮಗ ಮಧ್ಯಾಹ್ನ ಆಟವಾಡುತ್ತಾ ಗೆಳೆಯರ ಎದುರಿಗೆ ಹೇಳುತ್ತಿದ್ದ. ಫ್ಯಾನ್ ಇಲ್ಲದೆ ಸೆಖೆಗೆ ನಿದ್ದೆಬಾರದೆ ನಡುಮನೆಯಲ್ಲಿ ಮಲಗಿ ಒದ್ದಾಡುತ್ತಿದ್ದ ನನಗೆ ಅದನ್ನು ಕೇಳಿ ನಗುಬಂದಿತ್ತು.
ಈಗ ಯೋಚಿಸಿದರೆ ಬೆಂಗಳೂರಿನಲ್ಲಿ ಬಿಸಿಲೇ ಇಲ್ಲವೋ ಅಥವಾ ನಾನು ಬಿಸಿಲನ್ನು ನೋಡಿಲ್ಲವೋ ಎಂಬ ಅನುಮಾನ ಹುಟ್ಟುತ್ತಿದೆ. ಬೆಳಿಗ್ಗೆ ೭. ೩೦ಕ್ಕೆ ಮನೆ ಬಿಟ್ಟು ಆಫೀಸ್ ಹೊಕ್ಕರೆ ಹೊರ ಬರುವುದು ರಾತ್ರಿ ೮ ಗಂಟೆ ನಂತರವೇ. ಅಲ್ಲಿ ಸದಾ ಬೀಸುವ ಫ್ಯಾನ್, ಏಸಿ, ಫಳಗುಟ್ಟುವ ಟ್ಯೂಬ್‌ಲೈಟ್‌ನಿಂದಾಗಿ ಹಗಲೋ ರಾತ್ರಿಯೋ ಗೊತ್ತಾಗುವುದೇ ಇಲ್ಲ. ಕಿಟಕಿಯ ಗಾಜುಗಳಿಗೂ ಕೂಲಿಂಗ್ ಪೇಪರ್ ಅಂಟಿಸಿರುವುದರಿಂದ ಒಳಗಿಂದ ನೋಡುವವರಿಗೆ ಹೊರಗಡೆ ಜಗತ್ತು ಸದಾ ಕೂಲ್. ಇನ್ನು ವೀಕೆಂಡ್‌ಗಳಲ್ಲಿ ಹಗಲೆಲ್ಲಾ ನಿದ್ದೆ, ಸಂಜೆ ಆರರ ನಂತರವೇ ಶಾಪಿಂಗ್. ಬಿಸಿಲು ನೋಡುವುದಾದರೂ ಯಾವಾಗ? ಹುಟ್ಟಿದಾಗಿನಿಂದಲೇ ಜತೆಯಲ್ಲಿರುವ ಕವಚ ಕುಂಡಲಗಳಂತೆ ಸದಾ ಕಾಲಿಗೆ ಶೂಸ್, ಕಣ್ಣಿಗೆ ಕೂಲಿಂಗ್ ಗ್ಲಾಸ್ ಅಂಟಿಸಿಕೊಂಡಿರುವಾಗ ಬಿಸಿಲು ತಾಕೀತಾದರೂ ಹೇಗೆ?
ಪ್ರಶ್ನೆಗಳ ಜತೆಜತೆಯಲ್ಲೇ ಯಾಕೋ ಅರವತ್ತರ ವಯಸ್ಸಿನಲ್ಲೂ ಮಟಮಟ ಎರಡು ಗಂಟೆಯವರೆಗೆ ಗದ್ದೆಯಲ್ಲಿ ಮೈ ಮುರಿದು ಕೆಲಸ ಮಾಡಿ ಬಂದು ಅಮ್ಮನೊಡನೆ ನಗುತ್ತಾ ಊಟ ಮಾಡುವ ಅಪ್ಪನ ನೆನಪಾಗುತ್ತದೆ. ಎಂಥಾ ಬಿರು ಬಿಸಿಲಲ್ಲೂ ದೇವಸ್ಥಾನಕ್ಕೆ ಬರಿಗಾಲಲ್ಲೇ ನಡೆದು ಹೋಗುವ ಅಮ್ಮನ ಪಾದದ ಬಗ್ಗೆ ಅಚ್ಚರಿಯಾಗುತ್ತದೆ. ತನ್ನ ಭವಿಷ್ಯದ ಬಗ್ಗೆ ಒಂದಿನಿತೂ ಯೋಚನೆಯಿಲ್ಲದೆ ದನಗಳನ್ನು ಮೇಯಲು ಬಿಟ್ಟು ಆಲದ ಮರದ ಬಿಳಿಲಿನಲ್ಲಿ ತಣ್ಣಗೆ ಜೋಕಾಲಿಯಾಡುವ ದನಗಾಹಿ ಕಾಳನ ಸುಖದ ಬಗ್ಗೆ ಅಸೂಯೆಯಾಗುತ್ತದೆ. ನನಗೂ ಅವರಂತೆ ಬಿಸಿಲಿಳಿದ ನಂತರ ಮನೆಯ ಹಿಂದಿನ ಮಲ್ಲಿಗೆ ಬಳ್ಳಿಯ ಕೆಳಗಿರುವ, ಇನ್ನೂ ಬಿಸಿಯಾರಿರದ ಕಟ್ಟೆಯ ಮೇಲೆ ಕುಳಿತು ಚುಕ್ಕಿ ಚಂದ್ರಮರ ಬೆಳಕಲ್ಲೇ ಹರಟಿ, ಉಂಡು ಮಲಗಿ ಕಾಲ ಕಳೆಯುವ ಆಸೆಯಾಗುತ್ತಿದೆ. ಆದರೆ ಬೆಂಗಳೂರಿನಲ್ಲಿ ಅದು.... ಬಿಡಿ, ನಾವು ಬಿಸಿಲೇ ಕಂಡಿಲ್ಲವೆಂದರೆ ಇನ್ನು ಬೆಳದಿಂಗಳ ಮಾತೇಕೆ?

ಗುರುವಾರ, ಮಾರ್ಚ್ 26, 2009

ಹೊಸತಾಗಲಿ ಬದುಕು

ಯುಗಾದಿ ಹೊಸ್ತಿಲಲೇ ನಿಂತಿದೆ. ಹೊರಗಡೆ ಚಂದ್ರ ಕಾಯುತ್ತಿದ್ದಾನೆ ಕಣ್ಣಮುಚ್ಚಾಲೆಯಾಡಲು. ಬೆಂಗಳೂರಿನ ಝಗಮಗಿಸುವ ಬೆಳಕುಗಳಲ್ಲಿ ಚಂದ್ರ ಕಾಣದಿದ್ದರೂ ನಿರಾಶರಾಗಬೇಡಿ, ಚಂದ್ರನಂಥವರು ಕಂಡೇ ಕಾಣುತ್ತಾರೆ. ಹುಡುಕಿ ನೋಡಿ...ಗೆಲುವು ನಿಮ್ಮದಾಗಲಿ

ಸೋಮವಾರ, ಮಾರ್ಚ್ 16, 2009

ಜೋಕಾಲಿ ಜೀಕೋಣ ಬನ್ನಿರೋ...

ನೆಲ ಬಿಟ್ಟು ಗಾಳಿಗೆ ಹಾರಲು ಎಲ್ಲರಿಗೂ ಅದೆಷ್ಟು ಇಷ್ಟ ಅಲ್ವಾ?ನನಗೂ ಅಷ್ಟೆ. ಚಿಕ್ಕಂದಿನಲ್ಲಂತೂ ಮುಗಿಲಿಗೆ ಏಣಿ ಹಾಕುವುದು ಹೇಗೆಂದು ಅದೆಷ್ಟು ರೀತಿ ಯೋಚಿಸಿದ್ದೆನೋ. ಹಕ್ಕಿ ರೆಕ್ಕೇನ ಕಟ್ಟಿಕೊಂಡರೆ ಹಾರಲಾದೀತಾ ಎಂದು ಪರೀಕ್ಷಿಸಬೇಕು ಅಂತ ಅದೊಮ್ಮೆ ನೂರಾರು ಹಕ್ಕಿ ಪುಕ್ಕಗಳನ್ನೂ ಸಂಗ್ರಹಿಸಿಟ್ಟಿದ್ದೆ. ಕಾಗದದ ಗಾಳಿಪಟದ ಬದಲು ನಾನು ಕೂರಬಲ್ಲಷ್ಟು ಗಟ್ಟಿಯಾದ ಕಬ್ಬಿಣದ ಗಾಳಿಪಟ ಮಾಡಲಿಕ್ಕಾಗತ್ತಾ ಅಂತ ಅಣ್ಣನಲ್ಲಿ ಕೇಳಿ ಬೈಸಿಕೊಂಡಿದ್ದೆ. ಬೆಂಗಳೂರಿನ ಯುಟಿಲಿಟಿ ಕಟ್ಟಡದ ತುತ್ತತುದೀಲಿ ನಿಂತರೆ ಮೋಡ ಕೆಳಗಿರತ್ತೋ ಮೇಲಿರತ್ತೋ ಅಂತ ಯೋಚಿಸಿದ್ದೆ. ವಿಮಾನದಷ್ಟು ಮೇಲೂ ಹಾರದ, ನೆಲದ ಮೇಲೂ ಚಲಿಸದ, ಕೇವಲ ನೆಲದಿಂದ ಒಂದೋ,ಎರಡೋ ಅಡಿ ಎತ್ತರದಲ್ಲಿ ಸಾಗುವ ವಾಹನ ಯಾಕಿಲ್ಲ ಎಂದು ತಲೆಕೆಡಿಸಿಕೊಂಡಿದ್ದೂ ಇದೆ. ನೀನು ಹೇಳಿದಂತೆಯೇ ಇದ್ದಿದ್ದರೆ ರಸ್ತೆ ರಿಪೇರಿ, ಗುಂಡಿ ರಿಪೇರಿ, ಟೈರ್ ಪಂಚರ್‌ಗೆ ಹಾಕೋ ದುಡ್ಡೆಲ್ಲಾ ಉಳಿಯುತ್ತಿತ್ತಲ್ವಾ ಅಂತ ಅಣ್ಣನೂ ಅದನ್ನು ಒಪ್ಪಿಕೊಂಡಿದ್ದ. ಈವರೆಗೂ ಯಾವ ವಿಜ್ಞಾನಿಯೂ ಯಾಕೆ ಈ ಬಗ್ಗೆ ಯೋಚಿಸಿಲ್ಲವೋ?

ಅಂಥದ್ದೊಂದು ವಾಹನ(?!)ಒಂದು ಕಾಲದಲ್ಲಿ ನಮ್ಮ ಬಳಿ ಇತ್ತು ಅಂದ್ರೆ ನೀವು ಸುಳ್ಳು ಎನ್ನುತ್ತೀರೇನೋ. ಆದರೆ ಇದು ನಿಜ. ಅದಕ್ಕೆ ಚಕ್ರ ಅಥವಾ ಗಾಲಿ ಇರಲಿಲ್ಲ. ಆದರೂ ಸರಾಗವಾಗಿ ಮುಂದೆ ಮತ್ತುಹಿಂದೆ ಚಲಿಸುತ್ತಿತ್ತು. ಯಾವುದೇ ಇಂಧನವೂ ಬೇಡ. ಆದರೆ ಎಷ್ಟೇ ವೇಗವಾಗಿ ಹೋದರೂ, ಅದರ ವೇಗಕ್ಕೆ ಉಸಿರೇ ಕಟ್ಟುವಂತಾದರೂ ಅದು ಇದ್ದ ಜಾಗಕ್ಕೇ ಬಂದು ನಿಲ್ಲುತ್ತಿದ್ದುದು ಅದರ ವಿಶೇಷ. ಅದು ದೊಡ್ಡವರಿಗೆ ತಲೆ ತಿರುಗಿಸಿದರೂ, ಮಕ್ಕಳಿಗೆ ಮಾತ್ರ ಲಾಲಿ ಹಾಡುವ ಮೃದುಮಾಯಿ-ಅದೇ ಜೋಕಾಲಿ!

ನಮ್ಮ ಮನೆಯಲ್ಲಿ ಹತ್ತು ಮಕ್ಕಳು ಕೂರಬಹುದಾದಷ್ಟು ದೊಡ್ಡದಾದ ಅದ್ಭುತ ಕೆತ್ತನೆಗಳಿಂದ ಕೂಡಿದ ಮರದ ತೂಗುಮಂಚವಿತ್ತು. ಮನೆಗೆ ಬರುವ ಮಕ್ಕಳಿಗಂತೂ ಅದರ ಮೇಲೇ ಕಣ್ಣು. ವಿವಿಧ ಬಗೆಯಲ್ಲಿ ಉದ್ಗಾರಗೈಯುತ್ತಾ ಕುಳಿತ ಮಕ್ಕಳನ್ನು ಹೊತ್ತಾಗಲಂತೂ ಆ ತೂಗುಮಂಚ ರಾಮಾಯಣದಲ್ಲಿ ಬರುವ ವಾನರ ಸೈನ್ಯವನ್ನು ಹೊತ್ತ ಪುಷ್ಪಕ ವಿಮಾನವೇ ಸರಿ!

ಮನೆಯಲ್ಲೇ ಇಂಥಾ ತೂಗುಮಂಚವಿದ್ದರೂ ನನಗೆ ಜೋಕಾಲಿ ಎಂದರೆ ಪ್ರಾಣ. ತೂಗುಮಂಚಕ್ಕೆ ಮನೆಯ ಮಾಡೇ ಅಡ್ಡ. ಆದರೆ ಜೋಕಾಲಿಗೆ ಹಾಗಲ್ಲ, ಅದು ಮುಗಿಲಿಗೂ ಮುತ್ತಿಕ್ಕಬಹುದು. ಗದ್ದೆ ಬಳಿಯ ಯಾವುದಾದರೊಂದು ಮರದ ರೆಂಬೆಗೆ ಉದ್ದ ಹಗ್ಗ ನೇತುಬಿಟ್ಟು ಜೋಕಾಲಿ ಕಟ್ಟಿಬಿಟ್ಟರೆ ಮುಗಿದೇ ಹೋಯಿತು, ನಾನು ಮತ್ತು ನನ್ನ ಗೆಳತಿಯರ ಬಳಗ ಮನೆಯನ್ನೇ ಸೇರುತ್ತಿರಲಿಲ್ಲ! ಜೋಕಾಲಿ ಜೀಕಿದಷ್ಟೂ ಉತ್ಸಾಹ. ಹೊಟ್ಟೆಯೊಳಗೇ ಕಚಗುಳಿ ಇಟ್ಟಂಥ ನಗು, ಕಲರವ. ನಮ್ಮ ಕಾಲಿಗಾದರೂ ನೆಲದ ಮೇಲೆ ಅದೇನು ಬೇಜಾರಿರುತಿತ್ತೋ, ನೆಲಕ್ಕೆ ತಾಗುತ್ತಿದ್ದಂತೆ ಮತ್ತೆ ಮತ್ತೆ ಬಲ ಬಿಟ್ಟು ಮೀಟುತ್ತಿದ್ದವು, ಮುಗಿಲೆಡೆಗೆ. ಯಾವುದೋ ಕಾಣದ ಅದ್ಭುತ ಲೋಕಕ್ಕೆ ಕರೆದುಕೊಂಡು ಹೋಗುತ್ತದೆಯೇನೋ ಅದು ಎಂಬಂತಿರುತ್ತಿತ್ತು ನಮ್ಮ ಆವೇಗ. ಆ ಲೋಕ ನಮಗೆ ಸಿಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಅದರೆ ಅಷ್ಟೆಲ್ಲಾ ಮೇಲೆ ಹಾರಿದರೂ ಆ ರೋಮಾಂಚನಕಾರಿ ಪಯಣವು, ಮೋಜಿಗೆ ಮೇಲೆ ಹಾರಿಸಿದ ಮಗುವು ಮರಳಿ ಅಪ್ಪನ ತೋಳಲ್ಲೇ ಬೀಳುವಂತೆ, ಕಾಲು ನೆಲಕ್ಕೆ ತಾಗುವುದರೊಂದಿಗೇ ಯಾವಾಗಲೂ ಮುಗಿಯುತ್ತಿತ್ತು, ಸುಖಾಂತ್ಯವಾಗಿ!

ಸೋಮವಾರ, ಮಾರ್ಚ್ 9, 2009

ತರಕಾರಿ ಜ್ಯೂಸ್: ರೋಗಿ ಬಯಸೋದೂ, ವೈದ್ಯ ಹೇಳೋದೂ....



ಮನೆಗೆ ಅತಿಥಿಗಳು ಬಂದಾಗ ಫ್ರಿಜ್‌ನಿಂದ ತೆಗೆದು ಕೋಲಾ ಬಗ್ಗಿಸಿಕೊಡುವುದು ಹಳೆಯ ಫ್ಯಾಶನ್. ತಾಜಾ ತರಕಾರಿ ಜ್ಯೂಸ್ ಮಾಡಿಕೊಡುವುದು ಈಗಿನ ಹೊಸ ಟ್ರೆಂಡ್. ಅದು ಅತಿಥೇಯರ ಅಭಿರುಚಿ, ಆರೋಗ್ಯದ ಬಗ್ಗೆ ಕಾಳಜಿಗೆ ಹಿಡಿದ ಕನ್ನಡಿ. ಉದ್ದನೆಯ ಗಾಜಿನ ಲೋಟಗಳಲ್ಲಿ ಬಣ್ಣದ ಜ್ಯೂಸನ್ನು ಕೊಟ್ಟು, ಅತಿಥಿಗಳು ಮೊದಲ ಗುಟುಕನ್ನೇ ಕಾಯುತ್ತಾ,ಅವರು ಬೆರಗಿನಿಂದ ತಲೆ ಎತ್ತಿದ ತಕ್ಷಣ 'ಅದು ಯಾವುದರ ಜ್ಯೂಸ್ ಹೇಳಿ? ನೋಡೋಣ' ಎನ್ನುವ ಮನೆಯೊಡತಿಗೆ ಅತಿಥಿಗಳ ಮೆಚ್ಚುಗೆಯ ಪ್ರಶಸ್ತಿ ಗ್ಯಾರಂಟಿ!
ಮಾರುಕಟ್ಟೆಯಲ್ಲಿ ಕೋಕ್, ಪೆಪ್ಸಿಗಳ ಹಾವಳಿ ಎಷ್ಟೇ ಇದ್ದರೂ ಎಳನೀರು, ತಾಜಾ ಜ್ಯೂಸ್‌ಗಳಿಗೂ ಅಪಾರ ಬೇಡಿಕೆ ಇರಲು ಕಾರಣ ಕೇವಲ ಅವುಗಳ ರುಚಿ ಮಾತ್ರವೇ ಅಲ್ಲ. ಅವು ಆರೋಗ್ಯಕ್ಕೆ ಪೂರಕ ಎನ್ನುವ ಅರಿವೂ ಹೌದು. ಒಟ್ಟಿನಲ್ಲಿ ಜನರಲ್ಲಿ ನಿಧಾನವಾಗಿ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗುತ್ತಿರುವುದಂತೂ ನಿಜ. ಸಣ್ಣಸಣ್ಣ ಊರುಗಳಲ್ಲಿಯೂ ಮಹಿಳೆಯರು, ಪುರುಷರೆನ್ನದೆ ವಾಕಿಂಗ್ ಹೆಸರಲ್ಲಿ ಜನ ನಡೆಯಲು ಪ್ರಾರಂಭಿಸಿರುವುದೇ ಅದಕ್ಕೆ ಸಾಕ್ಷಿ. ಯೋಗ ಪ್ರಾಣಾಯಾಮಗಳಲ್ಲಿ ಹೆಚ್ಚಿದ ನಂಬಿಕೆ, ಆಯುರ್ವೇದಿಕ್, ಹೋಮಿಯೋಪತಿ, ಆಧುನಿಕ ಔಷಧ ಪದ್ಧತಿಗಿಂತ ಉತ್ತಮವಾಗಿರಬಹುದೇ ಎಂಬ ಜಿಜ್ಞಾಸೆ, ತಿನ್ನುವ ಆಹಾರದ ಕಣಕಣವನ್ನೂ ತೂಗಿನೋಡುವ ಕ್ಯಾಲೋರಿ ಕಾನ್ಷಿಯಸ್, ಯಾವ ಗೊಬ್ಬರ ಹಾಕಿ ತರಕಾರಿ ಬೆಳೆಸಿದ್ದೀರಿ ಎಂದು ರೈತರನ್ನೇ ಪ್ರಶ್ನಿಸಿ ಕೊಳ್ಳುವ ಮುಂಜಾಗ್ರತೆ, ಏನು ತಿಂದರೆ ಏನಾಗಬಹುದೋ ಎನ್ನುವ ಗಾಬರಿ ಈ ಎಲ್ಲವೂ ಅದರದ್ದೇ ವಿವಿಧ ಮುಖಗಳು. ಅದಕ್ಕೆ ಇನ್ನೊಂದು ಹೊಸ (ರುಚಿಕರವೂ ಹೌದು) ಸೇರ್ಪಡೆ ತರಕಾರಿ ಜ್ಯೂಸ್‌ಗಳು.
ನಮಗೆ ಜ್ಯೂಸ್ ಹೊಸದಲ್ಲ. ಮಲೆನಾಡಿಗರನ್ನು ವಿಚಾರಿಸಿದರೆ ಐವತ್ತು-ಅರವತ್ತು ಬಗೆಯ ಪಾನಕಗಳನ್ನು ನಿಂತಲ್ಲಿಯೇ ಹೇಳಿಯಾರು. ಆದರೆ ವೈದ್ಯಕೀಯ ವಿಜ್ಞಾನ ಹೇಳುವಂತೆ ತರಕಾರಿಗಳನ್ನು ಹಸಿಯಾಗಿ ಬಳಸಬೇಕೆಂದರೆ ಕೋಸಂಬರಿ, ಚಟ್ನಿ ಅಥವಾ ತಂಬುಳಿಯನ್ನು ಮಾಡುತ್ತಿದ್ದರೇ ಹೊರತು ತರಕಾರಿ ಪಾನಕ ಗೊತ್ತಿರಲಿಲ್ಲ. ಊಟ ಮಾಡಲಿಕ್ಕೂ ಆಗದಷ್ಟು ನಿಶ್ಯಕ್ತಿಯಾದಾಗ ಅಕ್ಕಿಯೊಂದಿಗೆ ತರಕಾರಿಗಳನ್ನು ಹಾಕಿ ಬೇಯಿಸಿ, ರಸವನ್ನಷ್ಟೇ ಹಿಂಡಿ ರೋಗಿಗೆ ಬಲವಂತವಾಗಿ ಕುಡಿಸುತ್ತಿದ್ದುದೇ ಆಗಿನ ಕಾಲದ ತರಕಾರಿ ರಸ. ಆದರೆ ಈಗ ಚಿತ್ರ ಬದಲಾಗಿದೆ. ಸಂಜೆ ಕಾಫಿ ಕುಡಿದು ಒಂದು ಸಣ್ಣ ವಾಕ್ ಮುಗಿಸಿ ಬರುವಾಗ ಫ್ರೆಶ್ ಆದ ತರಕಾರಿ ತಂದು, ಜ್ಯೂಸರ್‌ನಲ್ಲಿ ಹಾಕಿ ತಿರುಗಿಸಿ ಘಮ್ಮೆನ್ನುವಂತೆ ಏಲಕ್ಕಿ, ಲವಂಗ, ಶುಂಠಿ ಹಾಕಿ, "ರುಚಿಗೆ ತಕ್ಕಷ್ಟು ಉಪ್ಪು" ಬೆರೆಸಿ ಚೆಂದದ ಗ್ಲಾಸಿನಲ್ಲಿ ಹಾಕಿಕೊಂಡು, ಆರಾಮಾಗಿ ದೀವಾನ ಕಾಟ್ ಮೇಲೆ ಕುಳಿತು "ಆಹಾ" ಎನ್ನುವಂತೆ ಕುಡಿಯುವಾಗ...ಯಾವುದೋ ಹೆಲ್ತ್ ಡ್ರಿಂಕಿನ ಜಾಹೀರಾತಿನಲ್ಲಿರುವಂಥ 'ಆರೋಗ್ಯಯುತ ಸುಂದರ ಜೀವನ" ನಿಮ್ಮದೆನಿಸುವುದು ಖಂಡಿತ.
ಮಕ್ಕಳು ತರಕಾರಿ ತಿನ್ನುವುದಿಲ್ಲ ಎನ್ನುವುದು ಎಲ್ಲ ಅಮ್ಮಂದಿರ ಆರೋಪ. ಆದರೆ ಯಾವ ಮಕ್ಕಳು ಜ್ಯೂಸ್ ಬೇಡ ಎನ್ನುತ್ತಾರೆ? ತರಕಾರಿಗಳು ಹಣ್ಣಿನಷ್ಟು ರುಚಿಕರವಲ್ಲ ಎನ್ನುವುದೂ ನಿಜ. ಆದ್ದರಿಂದ ತರಕಾರಿ ಜ್ಯೂಸ್‌ಗೆ ದ್ರಾಕ್ಷಿಯಂಥ ಹಣ್ಣುಗಳನ್ನೋ, ತೆಂಗಿನ ಕಾಯನ್ನೋ ಅಥವಾ ಹಾಲಿನ ಕೆನೆಯನ್ನೋ ಸ್ವಲ್ಪ ಸೇರಿಸಿ ರುಚಿಕರವಾಗಿರುವಂತೆ ನೋಡಿಕೊಳ್ಳಬೇಕಾದದ್ದು ತಾಯಿಯ ಜಾಣತನಕ್ಕೆ ಬಿಟ್ಟದ್ದು. ಅಲ್ಲದೆ ಬದಲಾಗುವ ಋತುವಿಗೆ ತಕ್ಕಂತೆ ತರಕಾರಿಗಳನ್ನೂ, ಹಣ್ಣುಗಳನ್ನೂ ಬದಲಾಯಿಸುತ್ತಾ, ವಿವಿಧ ಸೊಪ್ಪು, ಮೊಳಕೆ ಕಾಳುಗಳನ್ನು ಬಳಸುತ್ತಾ ಜ್ಯೂಸಿನ ರುಚಿಯನ್ನೂ ವೈವಿಧ್ಯಗೊಳಿಸಿದರೆ ಬೇಡವೆನ್ನುವವರೂ ಕುಡಿದಾರು.
"ರೋಗಿ ಬಯಸಿದ್ದೂ ಹಾಲೂ ಅನ್ನ, ವೈದ್ಯ ಹೇಳಿದ್ದೂ ಹಾಲೂ ಅನ್ನ' ಎನ್ನುವ ಸಂದರ್ಭ ಸಿಗಲೂ ಅದೃಷ್ಟ ಮಾಡಿರಬೇಕು. "ಜ್ಯೂಸ್ ಥೆರಪಿ" ಎನ್ನುವ ಚಿಕಿತ್ಸಾ ಪದ್ಧತಿಯೂ ಇದೆ ಎಂದು ತಿಳಿದಾಗ ನನಗಾದರೂ ರೋಗ ಬರಬಾರದಿತ್ತೇ ಎಂದುಕೊಳ್ಳುವವರೇನೂ ಕಡಿಮೆ ಇರಲಿಕ್ಕಿಲ್ಲ. ಖ್ಯಾತ ನಾಟಕಕಾರ, ನಿರ್ದೇಶಕ ಮಹೇಶ್ ದತ್ತಾನಿಯವರಿಗೆ ಒಮ್ಮೆ ಕ್ಯಾನ್ಸರ್ ಪ್ರಾರಂಭವಾಗಿರುವ ಸೂಚನೆ ಕಂಡುಬಂದಾಗ ಪ್ರತಿ ದಿನ ಕ್ಯಾರೆಟ್ ಜ್ಯೂಸ್ ಕುಡಿಯಲು ಡಾಕ್ಟರ್ ತಿಳಿಸಿದ್ದರಂತೆ. ಆನಂತರ ದತ್ತಾನಿಯವರೇ ಹೇಳುವಂತೆ "ಎರಡೇ ವಾರಗಳಲ್ಲಿ ಅದ್ಭುತ ಪಲಿತಾಂಶ ಕಾಣಿಸತೊಡಗಿತು. ಕ್ಯಾನ್ಸರ್ ಕಣಗಳ ಸಂಖ್ಯೆ ದಿನದಿನಕ್ಕೂ ಇಳಿಯತೊಡಗಿತು. ನನಗೆ ಬಂದ ರೋಗದ ಬಗ್ಗೆ ತೀರಾ ಕೆಟ್ಟದಾಗಿ ಯೋಚಿಸಿದ್ದೆ. ಆದರೆ ಎಂಥಾ ಸುಲಭ ಚಿಕಿತ್ಸೆ! ಹಲವು ದಿನಗಳ ಚಿಕಿತ್ಸೆಯ ನಂತರ ಸಂಪೂರ್ಣ ಗುಣವಾದಾಗ "ಇನ್ನು ಜ್ಯೂಸ್ ಕುಡಿಯಬೇಕಾದ ಅಗತ್ಯವಿಲ್ಲ" ಎಂದು ಡಾಕ್ಟರ್ ಹೇಳಿದರೂ ನಾನದನ್ನು ಬಿಟ್ಟಿಲ್ಲ. ಈಗ ತರಕಾರಿ ಜ್ಯೂಸ್ ನನ್ನ ಪ್ರತಿ ದಿನದ ಆಹಾರದ ಪ್ರಮುಖ ಅಂಗ".
ರಕ್ತಹೀನತೆಗೆ ಕೊತ್ತಂಬರಿ ಅಥವಾ ಕ್ಯಾರೆಟ್, ತೆಳ್ಳಗಾಗಲು ಸೋರೆಕಾಯಿ, ಮೂತ್ರಕೋಶದಲ್ಲಿ ಕಲ್ಲಾದಾಗ ಬಾಳೆದಿಂಡು ಅಥವಾ ಬೂದುಗುಂಬಳ, ಮಧುಮೇಹಕ್ಕೆ ಪುದೀನ ಅಥವಾ ನುಗ್ಗೇಕಾಯಿ, ಕ್ಯಾನ್ಸರ್‌ಗೆ ಗೋಹುಲ್ಲು ಅಥವಾ ಕ್ಯಾರೆಟ್ ಹೀಗೆ ಯಾವುದೋ ಕಾಯಿಲೆಗೆ ಔಷಯಾಗಿ ತರಕಾರಿ ಜ್ಯೂಸ್ ಕುಡಿಯಲು ಅಭ್ಯಾಸ ಮಾಡಿಕೊಂಡು, ಆನಂತರ ಅದನ್ನೇ ಹವ್ಯಾಸವನ್ನಾಗಿ ರೂಢಿಸಿಕೊಂಡವರೇ ಹೆಚ್ಚು. ಏಕೆಂದರೆ ಅವರಿಗಾಗಲೇ ಅದರ ಶಕ್ತಿಯ ಅರಿವಾಗಿರುತ್ತದೆ. ಆದರೆ ಜಾಣರು ತಮ್ಮ ಅನುಭವದಿಂದಲೇ ಪಾಠ ಕಲಿಯಬೇಕೆಂದಿಲ್ಲ. ಬೇರೆಯವರ ಅನುಭವದಿಂದಲೂ ಕಲಿತು, ರೋಗ ಬಾರದಿರುವಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತಾರೆ !
ಎಲ್ಲಾ ಹಣ್ಣುಗಳನ್ನೂ ಜ್ಯೂಸ್ ಮಾಡಬಹುದು, ಆದರೆ ಎಲ್ಲಾ ತರಕಾರಿಗಳನ್ನು ಜ್ಯೂಸ್ ಮಾಡಲಾಗುವುದಿಲ್ಲ. ಹಣ್ಣಿನ ಜ್ಯೂಸ್ ರುಚಿಕರವಾಗಿಯೂ ಪೌಷ್ಟಿಕವಾಗಿ ಇರುವುದು ನಿಜವಾದರೂ ಅದರಿಂದ ಇನ್ಸುಲಿನ್ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಆರೋಗ್ಯದ ದೃಷ್ಟಿಯಿಂದ ತರಕಾರಿ ಜ್ಯೂಸ್‌ಗೆ ಹೆಚ್ಚು ಅಂಕ. ತರಕಾರಿ ಜ್ಯೂಸ್‌ಗಳು ಬಹು ಬೇಗ ಹಾಳಾಗುತ್ತವೆ. ಆದ್ದರಿಂದ ಕೂಡಲೇ ಕುಡಿಯಬೇಕು. ಸ್ವಲ್ಪ ಹೊತ್ತು ಇಡಲೇ ಬೇಕಾದ ಪ್ರಸಂಗ ಬಂದರೆ ಗಾಳಿಯಾಡದ, ಮುಚ್ಚಳ ಬಿಗಿಯಾಗಿರುವ ಜಾರ್‌ನಲ್ಲಿ ಮೇಲ್ತನಕ ಹಾಕಿ ಇಡಬೇಕು. ಗಾಳಿಯಾಡಿದರೆ, ತೆರೆದಿಟ್ಟ ಸೇಬು ಹಣ್ಣು ಕೂಡಲೇ ಕಂದಾಗುವಂತೆ ತರಕಾರಿ ಜ್ಯೂಸ್ ಹಾಳಾಗಿಬಿಡುತ್ತದೆ ಎಂದು ಎಚ್ಚರಿಸುತ್ತಾರೆ ವೈದ್ಯರು.
ಬೆಂಗಳೂರಿನ ತಮ್ಮ ಮನೆಯ ತಾರಸಿಯ ಮೇಲೆ ಮಿನಿ ಕೈತೋಟ ಮಾಡಿಕೊಂಡಿರುವ ಗೃಹಿಣಿ ಅನುಸೂಯ ಶರ್ಮ, ಅವರ ಮನೆಗೆ ಆಗುವಷ್ಟು ತರಕಾರಿಯನ್ನೂ ಅಲ್ಲೇ ಬೆಳೆದುಕೊಳ್ಳುತ್ತಾರೆ. ಸಂಜೆ ನಾಲ್ಕಕ್ಕೆ ಕಾಫಿ ಕುಡಿದು ತಾರಸಿ ಹತ್ತಿ ಏಳರವರೆಗೆ ಗಿಡಗಳ ಆರೈಕೆ ಮಾಡಿ ಕೆಳಗಿಳಿದು ಬಂದಾಗ ಅವರಿಗೆ ತರಕಾರಿ ಜ್ಯೂಸ್ ಬೇಕೇಬೇಕು. ತಾರಸಿಯಿಂದ ಆಗಷ್ಟೇ ಕಿತ್ತು ತಂದ ಪಾಲಕ್‌ಅನ್ನು ಐದೇ ಐದು ನಿಮಿಷ ಬೇಯಿಸಿ ಅದಕ್ಕೆ ಉಪ್ಪು, ಮೆಣಸಿನ ಕಾಳು, ಹಾಲಿನ ಕೆನೆ ಹಾಕಿ ಜ್ಯೂಸ್ ಮಾಡಿಕೊಳ್ಳುತ್ತಾರೆ. ಜತೆಗೆ ಬ್ರೆಡ್ಡನ್ನು ಡ್ರೈಟೋಸ್ಟ್ ಮಾಡಿಕೊಂಡು ಅದರ ಮೇಲೆ ತೇಲಿಬಿಡುತ್ತಾರೆ (ಸೂಪ್‌ನಲ್ಲಿ ಇರುವಂತೆ). ಆನಂತರ ನಿರಾಳವಾಗಿ ಕುಳಿತು ಜ್ಯೂಸ್ ಕುಡಿದರೆ "ಹೊಟ್ಟೆ ಫುಲ್, ಮನಸು ಹೌಸ್‌ಫುಲ್". ಇದಲ್ಲದೇ ಟೊಮೇಟೊ-ಆಲೂಗಡ್ಡೆ ಜ್ಯೂಸ್, ಕ್ಯಾರೆಟ್, ಬೀಟ್‌ರೂಟ್, ಕೊತ್ತಂಬರಿ, ಬಾಳೆದಿಂಡು ಮಾತ್ರವಲ್ಲ, ಹೀರೇಕಾಯಿ ಸಿಪ್ಪೆ ಸಮೇತ, ಸೌತೆಕಾಯಿ ತಿರುಳಿನಲ್ಲಿ, ಬೂದುಗುಂಬಳಕಾಯಿಯನ್ನು ತುರಿದು ಜ್ಯೂಸ್‌ಗಳನ್ನು ಮಾಡುತ್ತಾರೆ. ನಲವತ್ತು ವರ್ಷಗಳಿಂದ ಪ್ರತಿನಿತ್ಯ ತರಕಾರಿ ಜ್ಯೂಸ್ ಕುಡಿದ ಅವರ ಅನುಭವದಲ್ಲಿ ಪಾಲಕ್ ಜ್ಯೂಸ್ ಅತ್ಯಂತ ರುಚಿಕರವಾದ ತರಕಾರಿ ಜ್ಯೂಸ್ ಅಂತೆ. ಇನ್ಯಾಕೆ ತಡ, ನೀವೂ ಒಂದ್ಸಲ ಟ್ರೈ ಮಾಡಿ...

ಶನಿವಾರ, ಫೆಬ್ರವರಿ 28, 2009

ಆಟ


'ಆ ಪೇಂಟಿಂಗ್ ನೋಡಿದರೆ ನಿಂಗೆ ಏನು ಕಾಣಿಸುತ್ತದೆ?'
'ದೊಡ್ಡ ಚೌಕ. ಒಳಗೆರಡು ಒಂದರ ಕೆಳಗೊಂದು ತ್ರಿಭುಜ. ಅದರ ಮದ್ಯೆ ವೃತ್ತದಲ್ಲಿ ಕೆಂಪು ಬಣ್ಣ...ನನಗೆ ಸ್ಕೂಲಿನಲ್ಲಿ ಓದಿದ ಯಾವುದೋ ಥಿಯರಂ ನೆನಪಾಗುತ್ತಿದೆ.'
'ಯೇ... ಹೋಗೋ...ನನಗೆ ಪುಟ್ಟ ಹುಡುಗಿಯೊಬ್ಬಳು ದೊಡ್ಡ ಕುಂಕುಮ ಇಟ್ಟುಕೊಂಡು ತನ್ನ ಅಮ್ಮನಂಥಾಗುವ ಪ್ರಯತ್ನದಲ್ಲಿದ್ದಾಳೆ ಎನಿಸುತ್ತಿದೆ.'
'ನಿನ್ ತಲೆ...ಅಲ್ಲಿ ಹುಡುಗಿ ಎಲ್ಲಿದ್ದಾಳೆಯೇ? ಓಹ್, ಸರಿ ಸರಿ... ಈಗ ಅರ್ಥವಾಯಿತು. ಹಾಗಾದರೆ ಈ ಪೇಂಟಿಂಗ್ ನೋಡಿದರೆ ಏನನ್ನಿಸುತ್ತದೆ ಹೇಳು?'
ಇದು ನಮ್ಮ ನಿತ್ಯದ ಆಟ. ಆಟವಾಡಲು ಪೇಂಟಿಂಗೇ ಬೇಕೆಂದಿಲ್ಲ. ನೀಲಾಕಾಶದ ಮೋಡಗಳು, ಟೇಬಲ್ ಮೇಲೆ ಚೆಲ್ಲಿದ ಕಾಫಿ ಕಲೆ , ಬಾತ್‌ರೂಮಿನ ಟೈಲ್ಸ್ ಮೇಲಿನ ಅಸ್ಪಷ್ಟ ಆಕಾರಗಳು, ಅಂಗೈ ಮೇಲಿನ ಗೆರೆಗಳು, ಒಂಟಿ ನಿಂತ ಮರದ ನಿಲುವು, ಹರಡಿದ ಮರದ ಬಿಳಲು, ಹೀಗೆ ಏನಾದರೂ ಆಗುತ್ತಿತ್ತು. ಕೊನೆಗೆ ಪಾರ್ಕಿನ ಬೆಂಚಿನ ಮೇಲೆ ಅಂಟಿರುವ ಪಾರಿವಾಳದ ಹಿಕ್ಕೆಯನ್ನೂ ಬಿಟ್ಟಿದ್ದಿಲ್ಲ. ಆದರೆ ಅನಿಸಿದ್ದನ್ನು ಹೇಳದೇ ಇರುವಂತಿರಲಿಲ್ಲ. ಚನ್ನಾಗಿ ಹೇಳಿದವರಿಗೆ ಮೆಚ್ಚುಗೆಯ ನೋಟವೊಂದು ಸಂದಾಯವಾಗುತ್ತಿತ್ತು. ಆಟ ಮತ್ತೆ ಮುಂದುವರಿಯುತ್ತಿತ್ತು.
ನನಗೋ ಆತನನ್ನು ಒಮ್ಮೆಯಾದರೂ ಸೋಲಿಸಬೇಕೆಂಬ ಹಂಬಲ. ಉಹ್ಹೂಂ... ಆತ ಸೋತಿದ್ದಿಲ್ಲ.
ಒಮ್ಮೆ ಮಾತ್ರ ಅದೇನಾಯಿತೋ ನಂಗೆ. ನಾನೇ ನೇರವಾಗಿ ಎದುರಿಗೆ ಹೋಗಿ ನಿಂತೆ. 'ನಿನಗೇನನಿಸತ್ತೆ ಹೇಳು?' ಎಂದೆ. ಆತ ನೋಡುತ್ತಲೇ ನಿಂತ. ಹೇಳಲಿಲ್ಲ. ನಾನು ಕಾಯುತ್ತಲೇ ನಿಂತೆ. ಸೋಲಲಿಲ್ಲ. ಆತ ಸೋತ. ಸೋತೇ ಹೋದ. ಸೋತು ತಲೆ ತಗ್ಗಿಸಿದ. ಆದರೂ ನಾನು ಗೆಲ್ಲಲಿಲ್ಲ!

ಸೋಮವಾರ, ಫೆಬ್ರವರಿ 23, 2009

ವಾಸ್ತವದ ಮುಖವಾಡ


'ರಿಯಾಲಿಟಿ ಶೋ' ಎಂಬ 'ವಾಸ್ತವ ಬದುಕಿನ ಚಿತ್ರಣ' ನೀಡುವ ಕಾರ್ಯಕ್ರಮಗಳು ಟಿವಿಯಲ್ಲಿ ಪ್ರಸಾರವಾಗಲಿವೆ ಎಂದಾಗ ಅಲ್ಲಿ ಮನುಷ್ಯನ ನಿಜವಾದ ಮುಖ ಕಾಣುತ್ತದೆ ಎಂದು ಕೆಲವರಾದರೂ ಅಂದುಕೊಂಡಿರಬಹುದು. . ಆದರೆ ಇಂದು ರಿಯಾಲಿಟಿ ಶೋ ಎನ್ನುವುದು ಕೇವಲ ಟಿವಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮ ಮಾತ್ರವೇ ಆಗಿಉಳಿದಿಲ್ಲ, ಅದರ ಹಿಂದು ಮುಂದಿನ ನಾಟಕಗಳೂ (ಕ್ಷಮಿಸಿ, ಘಟನೆಗಳೂ) ಅದರಲ್ಲಿ ಸೇರಿರುತ್ತವೆ. ಸೂಕ್ಷ್ಮವಾಗಿ ಗಮನಿಸಿದರೆ ಈ ಜನಗಳ ಮುಖ ಕಾಣಿಸದಿದ್ದರೂ ಮುಖವಾಡಗಳಂತೂ ಸ್ಪಷ್ಟವಾಗಿ ಕಾಣುತ್ತವೆ.
ಉದಾಹರಣೆಗೆ 'ಬಿಗ್ ಬ್ರದರ್'ನ ಶಿಲ್ಪಶೆಟ್ಟಿ ಮತ್ತು ಜೇಡ್ ಗೂಡಿ ಪ್ರಸಂಗ. ಜೇಡ್ ಗೂಡಿ ಕಾರ್ಯಕ್ರಮದಲ್ಲಿ ಶಿಲ್ಪಳನ್ನು ಮೂದಲಿಸಿದ್ದಕ್ಕೆ ಶಿಲ್ಪ ಕಾರ್ಯಕ್ರಮದ ಹೊರಗೂ ಅತ್ತಳು. ಹಾಗೆ ಅತ್ತಿದ್ದಕ್ಕೆ ಗೆಲುವಿನ ಬಹುಮಾನ ಕಾರ್ಯಕ್ರಮದಲ್ಲಿ ಸಿಕ್ಕಿತು. (ಹೊರಗಡೆಯೂ ಸಿಗುತ್ತಿದೆ!) ಜೇಡ್ ಗೂಡಿ ಕಾರ್ಯಕ್ರಮದಾಚೆಯೂ ಖಳನಾಯಕಿಯಾದಳು. ಜತೆಗೇ ಪ್ರಚಾರವೂ ಹೆಚ್ಚಿ ಅವಳ ಪಾತ್ರದ ಬೆಲೆಯೂ ಹೆಚ್ಚಾಯಿತು. ಈಗ ಅದೆಲ್ಲಾ ಫ್ಲಾಶ್‌ಬ್ಯಾಕ್.
ಆ ಖಳನಾಯಕಿಗೀಗ ಕ್ಯಾನ್ಸರ್. ಸಾವು ಬದುಕಿನ ಮಧ್ಯದಲ್ಲಿ ಗೂಡಿ ಇದ್ದಾಳೆ. ಈಗಲೂ ಒಂದು ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದಾಳೆ. ಅಷ್ಟೇ ಆಗಿದ್ದರೆ ಅದು ಆಕೆಯ ಜೀವನೋತ್ಸಾಹ, ಮರಣ ಮುಂದೂಡುವ-ಮರೆಯುವ ಪ್ರಯತ್ನ ಎನ್ನಿಸಿ, ನಾವೂ ಚಿಯರ್‌ಅಪ್ ಎನ್ನಬಹುದಿತ್ತು. ಆದರೆ ಆಕೆ ಮಾಧ್ಯಮಗಳ ಎದುರಿಗೆ ಪದೇ ಪದೆ 'ಬಹುಶಃ ನಾನು ಕ್ಯಾಮೆರಾ ಮುಂದೆಯೇ ಸಾಯಬಹುದು' ಎಂದು ಸಾರುತ್ತಿರುವುದನ್ನು ನೋಡಿದರೆ ಈಕೆ ತಾನು ಜಾಹೀರಾತು ನೀಡುತ್ತಿರುವುದು ತಾನು ಸಾಯುವುದಕ್ಕೋ ಅಥವಾ ಭಾಗವಹಿಸುವ ಕಾರ್ಯಕ್ರಮದ ಟಿಆರ್‌ಪಿ ಹೆಚ್ಚಿಸುವುದಕ್ಕೋ ಗೊತ್ತಾಗುತ್ತಿಲ್ಲ. ಆ ರಿಯಾಲಿಟಿ ಶೋನಲ್ಲೇ ಆಕೆ ಸತ್ತರೆ (ಹಾಗಾಗದಿರಲಿ)ಅದನ್ನ ಎಷ್ಟು ಹೃದಯವಿದ್ರಾವಕವಾಗಿ ತೋರಿಸಬಹುದೆಂದು ಆ ಕಾರ್ಯಕ್ರಮದ ಆಯೋಜಕರು, ಆಗ ಹೇಗೆ ದುಃಖ ವ್ಯಕ್ತಪಡಿಸಬೇಕೆಂದು ಉಳಿದ ಸಹ ನಟರು ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೇನೋ ಎಂಬ ಅನುಮಾನ ಬರುವಂತಿದೆ ಆಕೆಯ ಹೇಳಿಕೆ. ಆದರೆ ಆಕೆ ಸಾಯುವ ದೃಶ್ಯವನ್ನು ಮಿಸ್ ಮಾಡಿಕೊಳ್ಳಬಾರದೆಂದು ಆ ಕಾರ್ಯಕ್ರಮವನ್ನು ಜನರು ನೋಡುತ್ತಾರೆ ಎಂದು ಆಕೆ ಭಾವಿಸಿರುವುದನ್ನು ನೋಡಿದರೆ ನಿಜಕ್ಕೂ ಕನಿಕರ ಉಂಟಾಗುತ್ತದೆ, ಬಣ್ಣದ ಲೋಕದವರ ಭ್ರಮೆಗಳ ಬಗ್ಗೆ. ಕುಳಿತು ನೋಡುವ ನಮ್ಮ ಬಗ್ಗೆಯೂ.

ಶನಿವಾರ, ಫೆಬ್ರವರಿ 21, 2009

ಹೆಸರೊಂದರ ಹೆಸರು

ಯಾನ್, ಆರವ್, ಮಯಾಸ್,ರೇನೀ...ಏನಿವು? ಹೆಸರೇ? ಯಾವ ಭಾಷೆಯವು? ಯಾವ ದೇಶದವು? ಈ ಪ್ರಶ್ನೆಗಳಿಗೆ ಉತ್ತರಿಸದಿದ್ದರೆ ತಲೆ ಹೋಳಾಗುವುದೆಂದು ಬೇತಾಳ ಪ್ರಶ್ನೆ ಕೇಳಿದ್ದರೆ ಬಹುಶಃ ರಾಜಾ ವಿಕ್ರಮನ ತಲೆಯೂ ಹೋಳಾಗುತ್ತಿತ್ತೇನೋ.ಹೆಸರಿನಲ್ಲೇನಿದೆ? ಎಂಬ ಪ್ರಶ್ನೆ ಹೊಸತಲ್ಲ. ಆದರೆ ಹೆಸರು ಹೇಗಿರಬೇಕು ಎಂಬ ಪ್ರಶ್ನೆಗೆ ಉತ್ತರ ಕಾಲಕಾಲಕ್ಕೂ ಬದಲಾಗುತ್ತಲೇ ಇರುತ್ತದೆ ಎನ್ನುವುದೂ ಸುಳ್ಳಲ್ಲ.
ಭೂಮಿ ಜಾಗತಿಕ ಹಳ್ಳಿಯಾಗಿರುವುದರ ಗುರುತಾಗಿಯೋ ಏನೋ ಈಗಿನ ಹೆಸರಿನ ಟ್ರೆಂಡ್ ಬದಲಾಗಿದೆ. ಎಲ್ಲಾ ವಿಷಯಗಳಲ್ಲೂ 'ಫ್ಯಾಷನ್ ಮೇಕರ್‍ಸ್' ಅಗಿರುವ ಸಿನಿಮಾ ನಟ,ನಟಿಯರು, ಕ್ರೀಡಾಪಟುಗಳು ತಮ್ಮ ಮಕ್ಕಳಿಗೆ ಇಡುತ್ತಿರುವ ಹೆಸರನ್ನು ಗಮನಿಸಿದರೆ ಅದರಲ್ಲಿ ಪ್ರಾದೇಶಿಕತೆ, ಅಥವಾ ಭಾರತೀಯತೆ ಕಾಣುವುದೇ ಇಲ್ಲ. (ವಿದೇಶಿ ಗ್ರಾಹಕರಿಗೆ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ನಮ್ಮ ಕಾಲ್ ಸೆಂಟರ್ ಕೂಸುಗಳು ಹೆಸರು ಬದಲಾಯಿಸಿಕೊಳ್ಳುವಂತೆ ಯೂನಿವರ್ಸ್‌ಲ್ ಹೆಸರುಗಳು ಹಾಲಿವುಡ್‌ಗೆ ಪಾಸ್‌ವರ್ಡ್ ಆಗುತ್ತವೆ ಎಂಬ ಕಾರಣವೇ?) ಅದನ್ನೂ ಒಳ್ಳೆಯ ರೀತಿಯಿಂದ ಹೇಳಬೇಕೆಂದರೆ ಇಂದಿನ ಹೆಸರುಗಳು ಜಾತ್ಯಾತೀತ, ಧರ್ಮಾತೀತ, ಭಾಷಾತೀತ, ದೇಶಾತೀತ ಆಗುತ್ತಿರುವುದು ಮಾತ್ರವಲ್ಲ ಲಿಂಗಾತೀತವೂ ಆಗುತ್ತಿವೆ! ಅವು ಅರ್ಥಾತೀತವೂ ಆಗಿದ್ದರೆ ಆಶ್ಚರ್ಯವೇನೂ ಇಲ್ಲ.
ಹೃತಿಕ್ ರೋಷನ್ 'ಕಹೋ ನಾ...' ಚಿತ್ರದ ಮೂಲಕ ಒಮ್ಮಿಂದೊಮ್ಮೆಲೆ ಜನಪ್ರಿಯನಾದಾಗ ಹಿರಿಯರೊಬ್ಬರು 'ಬಹುಶಃ ಅವನ ಹೆಸರು ಋತ್ವಿಕ್ ಎಂಬ ಹೆಸರಿನ ಅಪಭ್ರಂಶವಿರಬಹುದು' ಎಂದಿದ್ದರು. ಈಗ ಅದೇ ಹೃತಿಕ್ ರೋಷನ್ ಮಗನ ಹೆಸರು ಹ್ರೇಹಾನ್ ಎಂದು ತಿಳಿದರೆ ಏನೆನ್ನಬಹುದೋ? ಅವನಂತೆಯೇ ಅಂತರ್ಧರ್ಮೀಯ ವಿವಾಹವಾದ ಬಾಲಿವುಡ್ ಬಾದೂಷಾ ಶಾರುಕ್ ಖಾನ್ ತನ್ನ ಮಕ್ಕಳಿಗೆ ಆರ್ಯನ್, ಸುಹಾನಾ ಎಂಬ ಟಿಪಿಕಲ್ ಉತ್ತರ ಭಾರತೀಯ ಹೆಸರನ್ನು ಇಟ್ಟಿದ್ದೇ, ಆಶ್ಚರ್ಯದ ವಿಷಯ.
ಬಾಲಿವುಡ್‌ನ ಜನಪ್ರಿಯ ಖಾನ್‌ದಾನಿನ ಕುಡಿಯಾದ ಕರೀಷ್ಮಾ ಕಪೂರ್‌ಳ ಮಗಳ ಹೆಸರು ಸಮೈರಾ. ಹಾಗೆಂದರೆ ಏನು ಅರ್ಥ? ಯಾವ ಭಾಷೆಯ ಪದವೋ ಯಾರಿಗೂ ಗೊತ್ತಿಲ್ಲ. ಅಂತೆಯೇ ದಕ್ಷಿಣ ಭಾರತದ ಚೆಲುವೆ ಮಧುರಿ ದೀಕ್ಷಿತ್, ಶ್ರೀರಾಮ್ ನೆನೆ ಎನ್ನುವ ಡಾಕ್ಟರ್‌ರನ್ನು ಮದುವೆಯಾಗಿ ಅಮೆರಿಕ ಸೇರಿದ ಮೇಲೆ ಅಲ್ಲಿ ಯಾವ ಜನಾಂಗದ ಹೆಸರಿನಿಂದ ಆಕರ್ಷಿತರಾಗಿದ್ದರೋ, ತಮ್ಮ ಇಬ್ಬರು ಗಂಡುಮಕ್ಕಳಿಗೆ ಅರಿನ್ ಹಾಗೂ ರ್ಯಾನ್ ಎಂದು ಹೆಸರಿಟ್ಟಿದ್ದಾರೆ. ಅದಕ್ಕೆ ಹೀಬ್ರೂ, ಅಥವಾ ಅರಾಬಿಕ್ ಭಾಷೆಯಲ್ಲಿ ಮಾತ್ರ ಅರ್ಥ ಸಿಕ್ಕೀತು !
ನೂತನ್, ತನುಜಾರಂಥವರ ಅಪ್ಪಟ ಪ್ರತಿಭೆ, ಚೆಲುವು ಎರಡನ್ನೂ ವಂಶಪಾರಾಂಪರ್‍ಯವಾಗಿ ದತ್ತು ತೆಗೆದುಕೊಂಡಂತೆ ಚೆಂದದ ಹೆಸರನ್ನೂ ಬಳುವಳಿಯಾಗಿ ಪಡೆದಾಕೆ ಕಾಜೋಲ್. ತನ್ನ ಸಹನಟ ಅಜಯ್ ದೇವಗನ್‌ನನ್ನು ಮದುವೆಯಾಗಿ ಹೆಣ್ಣು ಮಗುವನ್ನು ಪಡೆದಾಗ ಅದರ ಹೆಸರಿನ ಬಗ್ಗೆ ಎಲ್ಲರಿಗೂ ಕುತೂಹಲವಿತ್ತು. ಅದು ಗೊತ್ತಿದ್ದೇ ಕಾಜೋಲ್ ತನ್ನ ಮಗಳಿಗೆ ಹುಡುಕಿದ್ದು ಗ್ರೀಕ್ ಮೂಲದ ಹೆಸರು ನೀಸ ಎಂದು. ಹಾಗೆಂದರೆ ಗ್ರೀಕ್ ಭಾಷೆಯಲ್ಲಿ ಗುರಿ ಎಂದರ್ಥವಂತೆ !
೯೦ರ ದಶಕದ ಖ್ಯಾತ ನಾಯಕಿಯರಾಗಿದ್ದ ಶ್ರೀದೇವಿ (ಜಾಹ್ನವಿ, ಖುಷಿ) ಜೂಹಿ ಚಾವ್ಲಾ (ಜಾಹ್ನವಿ, ಅರ್ಜುನ್)ರಂಥವರು ತಮ್ಮ ಮಕ್ಕಳಿಗೆ ಸಾಂಪ್ರಾದಾಯಿಕ ಹೆಸರನ್ನಿಟ್ಟವರೇ. ೧೯೯೦ರಲ್ಲಿಯೇ ಎರಡು ಮಕ್ಕಳನ್ನು ದತ್ತು ತೆಗೆದುಕೊಂಡಿದ್ದ ರವೀನಾ ಟಂಡನ್ ಅವರಿಗೆ ಪೂಜಾ, ಛಾಯಾ ಎಂಬಂಥ ಹೆಸರನ್ನಿಟ್ಟಿದ್ದರೂ ಕಳೆದೆರಡು ವರ್ಷಗಳ ಹಿಂದೆ ಹುಟ್ಟಿದ ತಮ್ಮ ಸ್ವಂತ ಮಗುವಿಗೆ ಇಟ್ಟ ಹೆಸರು ರಷಾ ಎಂದು.
ಟ್ವಿಂಕಲ್ ಖನ್ನಾಳೊಂದಿಗೆ ಎರಡೆರಡು ಬಾರಿ ನಿಶ್ಚಿತಾರ್ಥ ಮಾಡಿಕೊಂಡು ಮದುವೆಯಾದ ಅಕ್ಷಯ್ ಕುಮಾರ್ ತಮ್ಮ ಮಗನಿಗೆ ಇಟ್ಟ ಹೆಸರು ಆರವ್. ಸಿಮ್ರಾನ್ ಎಂಬ ಮುದ್ದು ಮುಖದ ತಮಿಳು ನಟಿಯ ಮುದ್ದು ಮಗನ ಹೆಸರು ಅಧೀಪ್. ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಮಗುವೊಂದನ್ನು ದತ್ತು ತೆಗೆದುಕೊಂಡು ತಾನೇ ತಂದೆ ತಾಯಿ ಎರಡೂ ಆಗಿ(ಸಿಂಗಲ್ ಮದರ್) ಸಾಕುತ್ತಿರುವ ವಿಷಯ ಎಲ್ಲರಿಗೂ ಗೊತ್ತು. ಆ ಮಗುವಿಗೆ ಸುಶ್ಮಿತಾ ಕರೆದದ್ದು ರೇನಿ ಎಂದು. ಹಾಗೆಂದರೆ ಲ್ಯಾಟಿನ್ ಭಾಷೆಯಲ್ಲಿ ಪುನರ್ಜನ್ಮ ಎಂದರ್ಥವಂತೆ. ಫರ್ಹಾನ್ ಅಕ್ತರ್‌ಗಿರುವ ಎರಡು ಮಕ್ಕಳಲ್ಲಿಮೊದಲನೆಯ ಮಗುವಿನ ಹೆಸರು ಶಾಕ್ಯ ಎಂದಾದರೆ, ಎರಡನೆಯದರ ಹೆಸರು ಅಕೀರಾ. ಅಕೀರಾ ಎಂದರೆ ಜಪಾನೀ ಭಾಷೆಯಲ್ಲಿ ಬುದ್ಧಿವಂತ ಎಂದರ್ಥ. ಕನ್ನಡದ ನಂಬರ್ ವನ್ ಹಾಡುಗಾರ (!?) ಎನಿಸಿರುವ ಸೋನು ನಿಗಮ್‌ನ ಆರು ತಿಂಗಳ ಮಗುವಿನ ಹೆಸರು ನೇವಾನ್.
ಈ ವಿಷಯದಲ್ಲಿ ಕ್ರೀಡಾಪಟುಗಳೇನು ಹಿಂದೆ ಬಿದ್ದಿಲ್ಲ. ಸಂಜಯ್ ದತ್ತ ಮೊದಲನೆ ಹೆಂಡತಿ ರಿಯಾ ಪಿಳ್ಳೈಳನ್ನು ಮದುವೆಯಾಗಿದ್ದ ಲಿಯಂಡರ್ ಪೇಸ್ ತನ್ನ ಮಗುವನ್ನು ಶುದ್ದ ಅಮೆರಿಕನ್ ಇಂಗ್ಲೀಷ್‌ನಲ್ಲಿ ಅಯ್ನಾ ಎಂದು ಕರೆಯುತ್ತಾನೆ. ಆದರೆ ಯಾವ ಇಂಗ್ಲೀಷ್ ಶಬ್ದಕೋಶ ಹುಡುಕಿದರೂ ಅದರ ಅರ್ಥ ಮಾತ್ರ ಸಿಗುವುದಿಲ್ಲ. ನಮ್ಮ ಕನ್ನಡಿಗ ಅನಿಲ್ ಕುಂಬ್ಳೆ, ತಮ್ಮ ಹೆಂಡತಿ ಚೇತನಾ ಮೊದಲನೆ ಮಗುವಿಗೆ ಅರುಣಿ ಎಂಬ ಅಪ್ಪಟ ಸಾಂಪ್ರದಾಯಿಕ ಹೆಸರಿದ್ದರೂ ತಮ್ಮ ಮಗುವಿಗೆ ಇಟ್ಟ ವಿಭಿನ್ನ ಹೆಸರು ಮಯಾಸ್.
ಹೀಗೆ ಮುಖ್ಯವಾಹಿನಿಯಲ್ಲಿ ಹೆಸರಿನ ಟ್ರೆಂಡ್ ಬದಲಾಗುತ್ತಿದ್ದರೂ ವಿರುದ್ಧ ಸೆಳೆತವೂ ಇದ್ದೇಇದೆ. ಮತ್ತೆ ಪಾಣಿನಿ, ಜೈಮಿನಿ, ವಿದ್ಯುಲ್ಲತಾ, ಅಚಿಂತ್ಯಾ, ಋತುಪರ್ಣ, ಸರ್ವಜಿತ್... ಮುಂತಾದ ಪೌರಾಣಿಕ, ಸಂಸ್ಕೃತ ಆದರೆ ಅನನ್ಯ ಹೆಸರನ್ನಿ ಡುವ ಪದ್ಧತಿಯೂ ನಿಧಾನವಾಗಿ ಹೆಚ್ಚಾಗುತ್ತಿದೆ. 'ದಿ ಟೆಲಿಗ್ರಾಫ್' 'ಏಷ್ಯನ್ ಏಜ್'ಪತ್ರಿಕೆಯ ಸಂಪಾದಕರಾಗಿದ್ದ ಖ್ಯಾತ ಪತ್ರಕರ್ತ ಎಂ.ಜೆ. ಅಕ್ಬರ್ರವರು ಒಬ್ಬ ಮುಸ್ಲಿಂ, ಮದುವೆಯಾಗಿದ್ದು ಮಲ್ಲಿಕಾ ಜೋಸೆಫ್ ಎಂಬ ಕ್ರಿಶ್ಚಿಯನ್‌ನನ್ನು. ಆದರೆ ತಮ್ಮ ಮಕ್ಕಳಿಗೆ ಇಟ್ಟ ಹೆಸರು ಮಾತ್ರ ಅಪ್ಪಟ ಸಂಸ್ಕೃತದ್ದು. ಮಗನ ಹೆಸರು ಪ್ರಯಾಗ್(ಎರಡು ನದಿಗಳು ಸೇರುವ ಪವಿತ್ರ ಸ್ಥಳ), ಮಗಳು ಮುಕುಲಿತಾ (ಮುಕುಲಿತಾ ಎಂದರೆ ಜೋಗುಳವೆಂದರ್ಥ).
ಸಾಹಿತ್ಯಾಸಕ್ತರಿಗಂತೂ ಮಕ್ಕಳಿಗೆ ಹೆಸರನ್ನಿಡುವುದೂ ಸೃಜನಶೀಲ ಅಭಿವ್ಯಕ್ತಿಯ ಮಾಧ್ಯಮ. ಕುವೆಂಪುರವರೇ ತಮ್ಮ ಮಕ್ಕಳಿಗೆ ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ ಮುಂತಾದ ಅಪರೂಪದ ಹೆಸರನ್ನಿಟ್ಟು ಮೇಲ್ಪಂಕ್ತಿ ಹಾಕಿದ್ದರು. ತೇಜಸ್ವಿ ಅದನ್ನು ಮುಂದುವರಿಸಿ ತಮ್ಮ ಮಗಳಿಗೆ ಈಶಾನ್ಯ ಎಂದು ಹೆಸರಿಟ್ಟಿದ್ದರು. ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ತಮ್ಮ ಮಗಳಿಗೆ ಹೂ ಎಂದು ಹೆಸರಿಟ್ಟಾಗ ಜನ ಹುಬ್ಬೇರಿಸಿದರು. ಮೊನ್ನೆ ತಾನೆ ಅಗಲಿದ ಚಿ. ಶ್ರೀನಿವಾಸರಾಜುರವರು ತಮ್ಮ ಮಕ್ಕಳಿಗೆ ಋತ, ಸುಗತ ಎಂದೂ, ಮೊಮ್ಮಕ್ಕಳಿಗೆ ರಾಕೇಂದು, ಸುಮೇರು, ವಿಯತಾ ಎಂಬ ವಿಶಿಷ್ಟ ಹೆಸರನ್ನುಗಳನ್ನು ಆರಿಸಿ ಇಟ್ಟಿದ್ದರು. ರೈತ ಹೋರಾಟಗಾರ ಕಡಿದಾಳ್ ಶಾಮಣ್ಣನವರ ಮಕ್ಕಳು ಉಲೂಪಿ, ಲಾಜವಂತಿ. ಚಿಂತಾಮಣಿ ಕೊಡ್ಲೆಕೆರೆ ಮಗಳು ಕುಂಕುಮ. ಹಿರಿಯ ಗಾಂಧೀವಾದಿ ಸುರೇಂದ್ರ ಕೌಲಗಿಯವರ ಮೊಮ್ಮಗನದು ಸಮನಸ್ ಎಂಬ ಹೆಸರು. ನಟರಾಜ್ ಹುಳಿಯಾರ್ ಆಫ್ರಿಕನ್ ಸಾಹಿತ್ಯದ ಬಗ್ಗೆ ಅಧ್ಯಯನ ಮಾಡುವ ಸಂದರ್ಭದಲ್ಲಿ ಹುಟ್ಟಿದ ಮಗನಿಗೆ ಆಫ್ರಿಕಾದ ನೊಬೆಲ್ ಪ್ರಶಸ್ತಿ ವಿಜೇತ ಸಾಹಿತಿ ವೋಲೆ ಶೋಯಿಂಕಾ ಹೆಸರೇ ಇಟ್ಟಿದ್ದಾರೆ. ಖ್ಯಾತ ಕೊಳಲುವಾದಕ ಪ್ರವೀಣ್ ಗೋಡ್ಖಿಂಡಿ, ತಮ್ಮ ಮಗನೂ ಸಂಗೀತದ ಸಾಥ್ ನೀಡಲೆಂದೇ ಏನೋ ಷಡ್ಜ ಎಂದು ಕರೆದಿದ್ದಾರೆ. ನೀನಾಸಂ ಸುಬ್ಬಣ್ಣ ತಮ್ಮ ಮಗನಿಗೆ ಅಕ್ಷರ ಎಂದು ಹೆಸರಿಟ್ಟು ತಮ್ಮ ಅಕ್ಷರಪ್ರೀತಿಯನ್ನು ತೋರ್ಪಡಿಸಿದ್ದರೆ, ಗಾಯಕ ಶಿವಮೊಗ್ಗ ಸುಬ್ಬಣ್ಣ ತಮ್ಮ ಮಗಳಿಗೆ ಬಾಗೇಶ್ರೀ ಎಂಬ ತಮ್ಮ ಇಷ್ಟವಾದ ರಾಗದ ಹೆಸರೇ ಇಟ್ಟಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ.
ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಹೆಸರು ಸ್ವಲ್ಪ ವಿಚಿತ್ರವಾಗಿದೆ ಎಂದು ಕೆಲವರಿಗಾದರೂ ಅನಿಸಿರಲಿಕ್ಕೇಬೇಕು. ರಾಬ್ಡಿ ಎಂದರೆ ಅರ್ಥವೇನೋ ಗೊತ್ತಿಲ್ಲ, ಅವರ ಮನೆಯ ಸಂಪ್ರದಾಯ ತಿಳಿದರೆ ಇವರ ಹೆಸರಿನ ಅರ್ಥವನ್ನು ಸುಲಭವಾಗಿ ಊಹಿಸಬಹುದು. ಮಗು ಹುಟ್ಟಿದ ಕೂಡಲೆ ತಾಯಿಗೆ ಇಷ್ಟವಾದ ತಿಂಡಿಯನ್ನು ತಿನ್ನಲು ಕೊಡುತ್ತಾರಂತೆ, ಆನಂತರ ಅದೇ ತಿಂಡಿಯ ಹೆಸರನ್ನು ಮಗುವಿಗೆ ಇಡುತ್ತಾರೆ. ಆದ್ದರಿಂದಲೇ ರಾಬ್ಡಿ ತಂಗಿಯರ ಹೆಸರು ಜಿಲೇಬಿ, ರಸಗುಲ್ಲಾವಾ, ಪಾನ್ವಾ.
ರಾಬ್ಡಿ ದಂಪತಿಗೆ ಹುಟ್ಟಿದ ಮಕ್ಕಳ ಹೆಸರುಗಳೂ ಸ್ವಾರಸ್ಯಕರವಾಗೇ ಇವೆ. ರಾಬ್ಡಿಗೆ ಮೊದಲ ಮಗು ಹುಟ್ಟಿದಾಗ ವಿದ್ಯಾರ್ಥಿ ನಾಯಕನಾಗಿದ್ದ ಲಾಲೂಪ್ರಸಾದ್ ಮೀಸಾ ಕಾಯ್ದೆಯಡಿ ಜೈಲು ಸೇರಿದ್ದರು. ಅದರ ನೆನಪಿಗಾಗೇ ಆ ಮಗುವಿಗೆ ಮೀಸಾ ಎಂದೇ ಹೆಸರಿಟ್ಟರು. ಎರಡನೆಯ ಮಗಳು ಚುನು ಹುಟ್ಟಿದ್ದು ಲೋಕಸಭೆ ಚುನಾವ್(ಚುನಾವಣೆ)ಗೆ ಲಾಲೂ ಸ್ಪರ್ಧಿಸಿದ್ದಾಗ. ಚಂದ್ರಗ್ರಹಣ ಆದ ಸಮಯದಲ್ಲಿ ಹುಟ್ಟಿದ್ದಕ್ಕಾಗಿ ಮೂರನೇ ಮಗಳಿಗೆ ಚಂದಾ ಎಂದೇ ಕರೆದರು. ಹೀಗೆ ರಾಬ್ಡಿ-ಲಾಲೂ ದಂಪತಿಯ ಏಳು ಹೆಣ್ಣುಮಕ್ಕಳು, ಇಬ್ಬರು ಗಂಡು ಮಕ್ಕಳ ಹೆಸರುಗಳಿ ಹಿಂದೆಯೂ ಒಂದೊಂದು ಕತೆಯೇ ಇದೆ.
ಹಕ್ಕಿಪಿಕ್ಕಿ ಜನಾಂಗದಲ್ಲಿ ಒಂದು ವಿಚಿತ್ರ ಪದ್ಧತಿ ಇದೆ. ಅಲ್ಲಿ ಮಗುವಿಗೆ ಹೆಸರಿಡಬೇಕೆಂದರೆ ಹೆಸರು ಹುಡುಕಬೇಕಾದದ್ದೇ ಇಲ್ಲ. ಯಾವುದು ಕಣ್ಣಿಗೆ ಕಾಣುತ್ತದೋ, ಯಾವ ಪದ ಅವರಿಗೆ ಗೊತ್ತಿದೆಯೋ ಅವುಗಳಲ್ಲಿ ಯಾವುದಾದರೂ ಹೆಸರಾಗಬಹುದು. ಹಾಗಾಗಿ ಅಲ್ಲಿ ಬಸ್ಸು , ಕಾರು, ಹೋಟೆಲ್, ಬೆಂಗಳೂರು, ರಥ, ಗಾಳಿ, ಮಾವಿನ ಮರ, ಹೀಗೆ ಎಲ್ಲವೂ ಹೆಸರುಗಳೇ. ಒಮ್ಮೆ ಹಿತಕಿದ ಬೇಳೆ ಎಂಬ ಹೆಸರಿನ ಕಳ್ಳನೊಬ್ಬ ಜೈಲು ಸೇರಿದನೆಂಬ ವರದಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದುದು ಆ ಹೆಸರಿನಿಂದಾದರೂ ಕೆಲವರಿಗೆ ನೆನಪಿರಬಹುದು. ಆತನೂ ಇದೇ ಹಕ್ಕಿಪಿಕ್ಕಿ ಜನಾಂಗಕ್ಕೆ ಸೇರಿದವನೆ.
ಹಾಗೆಂದು ಅನೂಹ್ಯ ಹೆಸರಿಡುವುದು ಕೇವಲ ಬುಡಕಟ್ಟು ಜನಾಂಗಗಳಷ್ಟೇ ಅಲ್ಲ, ಈ ಖಯಾಲಿ ಮೆಟ್ರೋ ನಗರಗಳಲ್ಲೂ ಇದೆ. ಕಾಸ್ಮೋಪಾಲಿಟನ್ ಜಗತ್ತನ್ನು ಹಸಿಹಸಿಯಾಗಿಯೇ ತೆರೆದಿಡುವ ಬರಹಗಾರ ನಾಗರಾಜ ವಸ್ತಾರೆಯವರ ಕತೆಗಳಲ್ಲಿನ ಹೆಸರುಗಳನ್ನು ಇದಕ್ಕೆ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಕೇಸರಿ,ಹಿಮ, ಗುಬ್ಬಿ, ತಾವರೆ, ಮುಗುಳ್,ಕೇತಕಿ, ನಿಯತಿ, ಓಜಸ್, ಶಚಿ, ರಿಷಬ್, ತಪತಿ, ಯಗಚಿ,ಅಭೀಪ್ಸಾ, ಉಚ್ಛ್ರಾಯ, ಸ್ಯಾಂರ್ಯಾಮ್(ಸಂಪಂಗಿರಾಮ), ಜೇಜಿ, ವೀವ್, ಸಾತ್ವತಿ, ಸುಶಿರ್, ಇನೇಶ್...
ಮಲ್ಲಿಗೆಗೆ ಬೇರೆ ಯಾವ ಹೆಸರಿನಿಂದ ಕರೆದರೂ ಅದರ ಪರಿಮಳ ಬದಲಾಗದು ನಿಜ. ಆದರೆ ,'ಪುಃ' ಎಂದು ಬಿಟ್ಟುಸಿರೆ ತಾನೆ ಹೆಸರಾಯ್ತು' ಎಂದು ಕವಿ ಬೇಂದ್ರೆ ಹೂ ಎಂಬ ಪದ ಹುಟ್ಟಿದ ಬಗ್ಗೆ ಹೇಳಿದ್ದರಲ್ಲೇ ಅದರ ಸಂಬಂಧವೂ ಕಂಡುಬಿಡುತ್ತದೆ. ಒಟ್ಟಿನಲ್ಲಿ ಮೂಲ ಎಲ್ಲಿಯದೇಇರಲಿ, ಅರ್ಥ ಇರಲಿ,ಬಿಡಲಿ,ಹೆಸರು ಮಾತ್ರ ವಿಭಿನ್ನವಾಗಿ ವಿಶಿಷ್ಟವಾಗಿರಲಿ (ವಿಚಿತ್ರವಾಗಿದ್ದರೂ ಪರವಾಗಿಲ್ಲ) ಎಂಬ ಹೆಸರು ಆರಿಸುವವರ ಆಶಯ ಈ ಟ್ರೆಂಡ್ ಹಿಂದೆ ಇರುವುದು ಸ್ಪಷ್ಟ.
(ವಿಜಯ ಕರ್ನಾಟಕ ಯುಗಾದಿ ವಿಶೇಷಾಂಕ-2008)