ಸೋಮವಾರ, ಮಾರ್ಚ್ 16, 2009

ಜೋಕಾಲಿ ಜೀಕೋಣ ಬನ್ನಿರೋ...

ನೆಲ ಬಿಟ್ಟು ಗಾಳಿಗೆ ಹಾರಲು ಎಲ್ಲರಿಗೂ ಅದೆಷ್ಟು ಇಷ್ಟ ಅಲ್ವಾ?ನನಗೂ ಅಷ್ಟೆ. ಚಿಕ್ಕಂದಿನಲ್ಲಂತೂ ಮುಗಿಲಿಗೆ ಏಣಿ ಹಾಕುವುದು ಹೇಗೆಂದು ಅದೆಷ್ಟು ರೀತಿ ಯೋಚಿಸಿದ್ದೆನೋ. ಹಕ್ಕಿ ರೆಕ್ಕೇನ ಕಟ್ಟಿಕೊಂಡರೆ ಹಾರಲಾದೀತಾ ಎಂದು ಪರೀಕ್ಷಿಸಬೇಕು ಅಂತ ಅದೊಮ್ಮೆ ನೂರಾರು ಹಕ್ಕಿ ಪುಕ್ಕಗಳನ್ನೂ ಸಂಗ್ರಹಿಸಿಟ್ಟಿದ್ದೆ. ಕಾಗದದ ಗಾಳಿಪಟದ ಬದಲು ನಾನು ಕೂರಬಲ್ಲಷ್ಟು ಗಟ್ಟಿಯಾದ ಕಬ್ಬಿಣದ ಗಾಳಿಪಟ ಮಾಡಲಿಕ್ಕಾಗತ್ತಾ ಅಂತ ಅಣ್ಣನಲ್ಲಿ ಕೇಳಿ ಬೈಸಿಕೊಂಡಿದ್ದೆ. ಬೆಂಗಳೂರಿನ ಯುಟಿಲಿಟಿ ಕಟ್ಟಡದ ತುತ್ತತುದೀಲಿ ನಿಂತರೆ ಮೋಡ ಕೆಳಗಿರತ್ತೋ ಮೇಲಿರತ್ತೋ ಅಂತ ಯೋಚಿಸಿದ್ದೆ. ವಿಮಾನದಷ್ಟು ಮೇಲೂ ಹಾರದ, ನೆಲದ ಮೇಲೂ ಚಲಿಸದ, ಕೇವಲ ನೆಲದಿಂದ ಒಂದೋ,ಎರಡೋ ಅಡಿ ಎತ್ತರದಲ್ಲಿ ಸಾಗುವ ವಾಹನ ಯಾಕಿಲ್ಲ ಎಂದು ತಲೆಕೆಡಿಸಿಕೊಂಡಿದ್ದೂ ಇದೆ. ನೀನು ಹೇಳಿದಂತೆಯೇ ಇದ್ದಿದ್ದರೆ ರಸ್ತೆ ರಿಪೇರಿ, ಗುಂಡಿ ರಿಪೇರಿ, ಟೈರ್ ಪಂಚರ್‌ಗೆ ಹಾಕೋ ದುಡ್ಡೆಲ್ಲಾ ಉಳಿಯುತ್ತಿತ್ತಲ್ವಾ ಅಂತ ಅಣ್ಣನೂ ಅದನ್ನು ಒಪ್ಪಿಕೊಂಡಿದ್ದ. ಈವರೆಗೂ ಯಾವ ವಿಜ್ಞಾನಿಯೂ ಯಾಕೆ ಈ ಬಗ್ಗೆ ಯೋಚಿಸಿಲ್ಲವೋ?

ಅಂಥದ್ದೊಂದು ವಾಹನ(?!)ಒಂದು ಕಾಲದಲ್ಲಿ ನಮ್ಮ ಬಳಿ ಇತ್ತು ಅಂದ್ರೆ ನೀವು ಸುಳ್ಳು ಎನ್ನುತ್ತೀರೇನೋ. ಆದರೆ ಇದು ನಿಜ. ಅದಕ್ಕೆ ಚಕ್ರ ಅಥವಾ ಗಾಲಿ ಇರಲಿಲ್ಲ. ಆದರೂ ಸರಾಗವಾಗಿ ಮುಂದೆ ಮತ್ತುಹಿಂದೆ ಚಲಿಸುತ್ತಿತ್ತು. ಯಾವುದೇ ಇಂಧನವೂ ಬೇಡ. ಆದರೆ ಎಷ್ಟೇ ವೇಗವಾಗಿ ಹೋದರೂ, ಅದರ ವೇಗಕ್ಕೆ ಉಸಿರೇ ಕಟ್ಟುವಂತಾದರೂ ಅದು ಇದ್ದ ಜಾಗಕ್ಕೇ ಬಂದು ನಿಲ್ಲುತ್ತಿದ್ದುದು ಅದರ ವಿಶೇಷ. ಅದು ದೊಡ್ಡವರಿಗೆ ತಲೆ ತಿರುಗಿಸಿದರೂ, ಮಕ್ಕಳಿಗೆ ಮಾತ್ರ ಲಾಲಿ ಹಾಡುವ ಮೃದುಮಾಯಿ-ಅದೇ ಜೋಕಾಲಿ!

ನಮ್ಮ ಮನೆಯಲ್ಲಿ ಹತ್ತು ಮಕ್ಕಳು ಕೂರಬಹುದಾದಷ್ಟು ದೊಡ್ಡದಾದ ಅದ್ಭುತ ಕೆತ್ತನೆಗಳಿಂದ ಕೂಡಿದ ಮರದ ತೂಗುಮಂಚವಿತ್ತು. ಮನೆಗೆ ಬರುವ ಮಕ್ಕಳಿಗಂತೂ ಅದರ ಮೇಲೇ ಕಣ್ಣು. ವಿವಿಧ ಬಗೆಯಲ್ಲಿ ಉದ್ಗಾರಗೈಯುತ್ತಾ ಕುಳಿತ ಮಕ್ಕಳನ್ನು ಹೊತ್ತಾಗಲಂತೂ ಆ ತೂಗುಮಂಚ ರಾಮಾಯಣದಲ್ಲಿ ಬರುವ ವಾನರ ಸೈನ್ಯವನ್ನು ಹೊತ್ತ ಪುಷ್ಪಕ ವಿಮಾನವೇ ಸರಿ!

ಮನೆಯಲ್ಲೇ ಇಂಥಾ ತೂಗುಮಂಚವಿದ್ದರೂ ನನಗೆ ಜೋಕಾಲಿ ಎಂದರೆ ಪ್ರಾಣ. ತೂಗುಮಂಚಕ್ಕೆ ಮನೆಯ ಮಾಡೇ ಅಡ್ಡ. ಆದರೆ ಜೋಕಾಲಿಗೆ ಹಾಗಲ್ಲ, ಅದು ಮುಗಿಲಿಗೂ ಮುತ್ತಿಕ್ಕಬಹುದು. ಗದ್ದೆ ಬಳಿಯ ಯಾವುದಾದರೊಂದು ಮರದ ರೆಂಬೆಗೆ ಉದ್ದ ಹಗ್ಗ ನೇತುಬಿಟ್ಟು ಜೋಕಾಲಿ ಕಟ್ಟಿಬಿಟ್ಟರೆ ಮುಗಿದೇ ಹೋಯಿತು, ನಾನು ಮತ್ತು ನನ್ನ ಗೆಳತಿಯರ ಬಳಗ ಮನೆಯನ್ನೇ ಸೇರುತ್ತಿರಲಿಲ್ಲ! ಜೋಕಾಲಿ ಜೀಕಿದಷ್ಟೂ ಉತ್ಸಾಹ. ಹೊಟ್ಟೆಯೊಳಗೇ ಕಚಗುಳಿ ಇಟ್ಟಂಥ ನಗು, ಕಲರವ. ನಮ್ಮ ಕಾಲಿಗಾದರೂ ನೆಲದ ಮೇಲೆ ಅದೇನು ಬೇಜಾರಿರುತಿತ್ತೋ, ನೆಲಕ್ಕೆ ತಾಗುತ್ತಿದ್ದಂತೆ ಮತ್ತೆ ಮತ್ತೆ ಬಲ ಬಿಟ್ಟು ಮೀಟುತ್ತಿದ್ದವು, ಮುಗಿಲೆಡೆಗೆ. ಯಾವುದೋ ಕಾಣದ ಅದ್ಭುತ ಲೋಕಕ್ಕೆ ಕರೆದುಕೊಂಡು ಹೋಗುತ್ತದೆಯೇನೋ ಅದು ಎಂಬಂತಿರುತ್ತಿತ್ತು ನಮ್ಮ ಆವೇಗ. ಆ ಲೋಕ ನಮಗೆ ಸಿಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಅದರೆ ಅಷ್ಟೆಲ್ಲಾ ಮೇಲೆ ಹಾರಿದರೂ ಆ ರೋಮಾಂಚನಕಾರಿ ಪಯಣವು, ಮೋಜಿಗೆ ಮೇಲೆ ಹಾರಿಸಿದ ಮಗುವು ಮರಳಿ ಅಪ್ಪನ ತೋಳಲ್ಲೇ ಬೀಳುವಂತೆ, ಕಾಲು ನೆಲಕ್ಕೆ ತಾಗುವುದರೊಂದಿಗೇ ಯಾವಾಗಲೂ ಮುಗಿಯುತ್ತಿತ್ತು, ಸುಖಾಂತ್ಯವಾಗಿ!

3 ಕಾಮೆಂಟ್‌ಗಳು: