ಗುರುವಾರ, ಏಪ್ರಿಲ್ 23, 2009

ವಸಂತನ ಕರೆ


"ಮಳೆರಾಯ ಕೊಟ್ಟ ಮುತ್ತಿಗೆ...ಮತ್ತೇರಿದೆ ಭೂಮಿಗೆ" ಎಂದು ಬೆಳಗ್ಗೆಯೇ ಕಳಿಸಿದ ಗೆಳೆಯನ ಮೆಸೇಜನ್ನು ಓದಿ ಕಿಟಕಿಯಾಚೆ ಕಣ್ಣಾಯಿಸಿದವಳಿಗೆ ಹೊರಗಡೆ ಹೊಸ ಲೋಕವೊಂದು ಬಂದಿಳಿದಂತೆನಿಸತೊಡಗಿತು. ನಿನ್ನೆಯವರೆಗೂ ಧೂಳು ಮೆತ್ತಿಕೊಂಡು, ಬೆವರಿನಿಂದ ಜಿಡ್ಡುಜಿಡ್ಡಾಗಿದ್ದ ಲೋಕ, ಕತ್ತಲು ಕಳೆದು ಬೆಳಗಾಗುವುದರ ಒಳಗೆ ಈಗಷ್ಟೆ ಸ್ನಾನ ಮಾಡಿಬಂದ ಅಪ್ಸರೆಯಂತೆ ಹೊಳೆಯತೊಡಗಿದ್ದಾದರೂ ಹೇಗೆ? ಗಿಡ ಮರವೆಲ್ಲಾ ಹೊಸ ಹಸಿರು ಸೀರೆಯುಟ್ಟಿದ್ದರೆ, ರಸ್ತೆಯುದ್ದಕ್ಕೂ ಗುಲ್‌ಮೊಹರ್ನ ಕೆಂಪುಹಾಸು! ಎಷ್ಟೆಂದರೂ ಋತುರಾಜ ವಸಂತನ ಆಳ್ವಿಕೆಯ ಕಾಲವಲ್ಲವೇ? ಐದಂಕಿಯ ಸಂಬಳಕ್ಕಾಗಿ ಹಳೆಯ ನೆನಪುಗಳನ್ನು ಊರಿನಲ್ಲಿಯೇ ಗಂಟುಕಟ್ಟಿ ಇಟ್ಟುಬಂದರೂ ಬೆಂಗಳೂರಂಥ ಬೆಂಗಳೂರಲ್ಲೂ ವಸಂತನ ನೆನಪಾಗುತಿದೆಯೆಂದರೆ ವೈ.ಎನ್.ಕೆ ಹೇಳಿದ್ದು ಸರಿಯೆ.
"ವಸಂತ ಕಾಲದಲ್ಲಿ
ಯಾರೂ ಸಂತರಲ್ಲವಂತೆ,
ಕಂತುಪಿತ ಭಗವಂತ
ಕೂಡ ರಮೆಯನ್ನು
ರಮಿಸುವ ಮಂತ್
ಇದಂತ’
"ಚೈತ್ರ ವೈಶಾಖ, ವಸಂತ ಋತು, ಜೇಷ್ಠ ಆಶಾಢ ವರ್ಷ ಋತು" ಅಂತ ಮನೆ ಮಕ್ಕಳೆಲಾ ರಾಗವಾಗಿ ಬಾಯಿಪಾಠ ಮಾಡುತ್ತಿದ್ದೆವಲ್ಲ, ಇದೇ ಬೋಗನ್‌ವಿಲ್ಲಾಗೆ ತಾನೆ ನಮ್ಮೂರಲ್ಲಿ "ಕಾಗದದ ಹೂವು" ಅಂತ ಕರೆಯುತ್ತಿದ್ದುದು, ಹತ್ತು ರೂಪಾಯಿಗೆ ಎರಡರಂತೆ ಕೊಳ್ಳುವ ಇದೇ ತೋತಾಪುರಿಗೆ ಅಲ್ಲವೇ ಪಕ್ಕದ ಮನೆಯ ಶಿವರಾಜುಗೆ ಬಳಪ ಲಂಚ ಕೊಟ್ಟು ತಿನ್ನುತ್ತಿದ್ದುದು, ಮಾವಿನ ಕಾಯಿಯ ಸೊನೆ ತುಟಿಗೆ ತಾಕಿ ಸುಟ್ಟಂತೆ ಕಪ್ಪು ಗಾಯವಾಗಿ, ನಂಜಾಗಿ, ಕೊನೆಗೆ ಅಪ್ಪನ ಹತ್ತಿರ ಹೊಡೆಸಿಕೊಳ್ಳುತ್ತಿದ್ದುದೂ ಅದೊಂದೇ ಕಾರಣಕ್ಕಲ್ಲವೇ? ಪಕ್ಕದ ಊರಿನ ಜಾತ್ರೆ ಇದೇ ತಿಂಗಳಲ್ಲೇ ನಡೆಯುತ್ತಿದ್ದುದಾ...ಇರಬೇಕು. ಪದವಿಯ ಪರೀಕ್ಷೆ ಮುಗಿಸಿ ಊರಿಗೆ ಹೊರಟು ನಿಂತಾಗ ಬೀಳ್ಕೊಡಲು ಬಂದ "ಅವನ" ಕಣ್ಣಲ್ಲಿ ಏನೋ ಫಳಫಳಗುಟ್ಟಿದ್ದು ಇನ್ನೂ ನೆನಪಿದೆ, ಆಗಲೇ ಅದಕ್ಕೆ ಎರಡು ವರ್ಷವಾಗಿಬಿಟ್ಟಿತೇ..ಬೇಸಿಗೆಯಲ್ಲಿ ರಜಾ ಕೊಡುವುದೇ ಅಜ್ಜಿ ಮನೆಗೆ ಹೋಗಲಿಕ್ಕೆಂದು ಎಂದು ಬಲವಾಗಿ ನಂಬಿದ್ದ ನನಗೆ ಆ ಸಲ ಅದೂ ರುಚಿಸಿರಲಿಲ್ಲ. ಪ್ರತಿ ವರ್ಷದಂತೆ ಅಂಗಳದಲ್ಲಿ ಮೊದಲ ಮಳೆಯೊಂದಿಗೆ ಬಿದ್ದ ಆಲಿಕಲ್ಲುಗಳನ್ನು ಆರಿಸಿಕೊಳ್ಳಲು ಕಾಂಪಿಟೇಷನ್ ಮಾಡದೆ ಸುಮ್ಮನೆ ನಿಂತು ನೋಡುತ್ತಿದ್ದವಳಿಗೆ ಅವನ ಕಣ್ಣಲ್ಲಿ ಹೊಳೆದದ್ದು ಇದೇ ಎನಿಸಿಬಿಟ್ಟಿತ್ತಲ್ಲ...
"ಕಾದು ಕಾದು
ಕೆಂಪಾದ ಇಳೆಗೆ
ತಂಪಾಯ್ತು ಇಂದು,
ನೆನೆದೂ ನೆನೆದೂ
ಬೆಂದೋಯ್ತು ಮನಸು,
ಭೇಟಿ ಇನ್ನೆಂದು?’
ಅದೇ ಗೆಳೆಯನ ಇನ್ನೊಂದು ಮೆಸೇಜ್ ಮೊಬೈಲ್‌ನಲ್ಲಿ ಉತ್ತರಕ್ಕಾಗಿ ಕಾಯುತ್ತಿದೆ. ಕಾಯಿ ಹಣ್ಣಾಗುವ ಸಮಯ, ಇನ್ನೂ ಕಾಯಿಸುವುದು ಸರಿಯಲ್ಲ ಎನಿಸತೊಡಗಿತು. ಮಳೆ ಸುರಿಯುವ ಎಲ್ಲಾ ಲಕ್ಷಣಗಳಿದ್ದರೂ ಛತ್ರಿಯನ್ನು ಬೇಕೆಂದೇ ಮರೆತು, ಹೊರ ಕಾಲಿಟ್ಟೆ. ತಂಗಾಳಿ ಬೀಸತೊಡಗಿತ್ತು...

ಬುಧವಾರ, ಏಪ್ರಿಲ್ 15, 2009

ವಿಶ್ವೇಶ್ವರಯ್ಯ ಮ್ಯೂಸಿಯಂ ನೋಡಿದ್ದೀರಾ?


ಯಾವುದೇ ವಸ್ತು ಸಂಗ್ರಹಾಲಯಕ್ಕೆ ಹೋದರೂ ಅಲ್ಲಿ ನೀವು ಕಾಣುವ ಮೊದಲ ಸೂಚನೆ "Dont Touch' ಆದರೆ ಯುರೋಪಿನ ದೇಶಗಳ ಮ್ಯೂಸಿಯಂಗಳಲ್ಲಿ "Do It Yourself' ಎಂದಿರುತ್ತದೆ. ಆದರೆ ನಮ್ಮಲ್ಲೂ ಅಂಥದ್ದೇ ಒಂದು ಮ್ಯೂಸಿಯಂ ಇದೆ ಎಂದು ನನಗೆ ಗೊತ್ತಾದದ್ದು ಮೊನ್ನೆ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದಾಗಲೇ. ಮೊದಲಿಗೆ ನನಗೆ ಆಶ್ಚರ್ಯವಾಗಿದ್ದು ,ಅಲ್ಲಿ ಎಲ್ಲಾ ಮ್ಯೂಸಿಯಂಗಳಲ್ಲಿ ಕಾಣುವಂ ಘನಗಂಭೀರ ಮುಖಗಳು ಕಾಣದೇ, ಫನ್‌ವರ್ಲ್ಡ್‌ನಲ್ಲಿರುವಂತೆ ಮಕ್ಕಳ ನಗು, ಕೇಕೆ ಕಂಡಿದ್ದು. ನೂರಾರು ಮಕ್ಕಳು, ಆ ಬೃಹತ್ ವಿಜ್ಞಾನ, ತಂತ್ರಜ್ಞಾನದ ಎದುರು ಮಕ್ಕಳೇ ಆಗಿರುವ ದೊಡ್ಡವರೂ ಬೆರಗಿನಿಂದ ಅಗಲವಾದ ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದರು. 'ಅದು ಹೇಗೆ ಹೀಗಾಗತ್ತಪ್ಪ?' ಎನ್ನುವ ಮಕ್ಕಳ ಪ್ರಶ್ನೆಗೆ ಅಲ್ಲಿರುವ ವಿವಣೆ ಓದಿ ತಿಳಿ ಹೇಳುವ ಪ್ರಯತ್ನದಲ್ಲಿದ್ದರು. ಆದರೆ ಅಲ್ಲಿ 'ಅದನ್ನು ಮುಟ್ಟಬೇಡಿ', 'ಇದಕ್ಕೆ ಕೈ ತಾಕಿಸಬೇಡಿ' ಎನ್ನುವವರ್ಯಾರೂ ಇರಲೇ ಇಲ್ಲ.
ಮ್ಯೂಸಿಯಂನ ಹೊರಭಾಗದಲ್ಲಿರುವ ವಿಮಾನ, ರಾಕೆಟ್, ಡೈನೋಸಾರಸ್ ಮಕ್ಕಳನ್ನಾಗಲೇ ಚುಂಬಕದಂತೆ ಸೆಳೆದಿದ್ದವು. ಒಳ ಹೊಕ್ಕೊಡನೆ ಬೃಹತ್ ಡೈನೋಸಾರಸ್ ಕುಟುಂಬದ ಸ್ಪೈನೊಸಾರಸ್ ಘೀಳಿಡುತ್ತಾ ಎದುರುಗೊಂಡಿತು. ಅಲ್ಲಿಂದ ಮುಂದೆ ಹೋಗಲೊಪ್ಪದ ಮಕ್ಕಳನ್ನು ಬಲವಂತವಾಗಿ ಮುಂದಿನ ಕೊಠಡಿಗೆ ಕರೆದುಕೊಂಡು ಹೋಗಬೇಕಾಯಿತು. "ಇಂಜಿನ್ ಹಾಲ್"ನಲ್ಲಿ ವಿವಿಧ ಯಂತ್ರಗಳ ಸರಳ ಉಪಯೋಗಗಳ ಡೆಮೊ ಕುತೂಹಲ ಕೆರಳಿಸುವಂತಿದೆ. ಕಬ್ಬಿಣದ ಸರಳುಗಳ ಮಧ್ಯೆ ನಿರಂತರವಾಗಿ ಸುತ್ತುವ , ಎಲ್ಲಿಂದಲೋ ಜಾರಿ ಎಲ್ಲೋ ಹಾರಿ ಬುಟ್ಟಿಯೊಳಗೆ ಬಂದು ಬೀಳುವ ಚೆಂಡುಗಳನ್ನು ಕಣ್ಣರಳಿಸಿಕೊಂಡು ನೋಡುತ್ತಿದ್ದರು. ಸಿನಿಮಾಸಕ್ತರಿಗೆ " ಅಪ್ಪು ರಾಜಾ’ ದಲ್ಲಿ ಕಮಲ್ ಹಸನ್ ಕೇವಲ ಒಂದು ಚೆಂಡನ್ನು ಬಳಸಿ ಕೇಡಿಗನನ್ನು ಕೊಲ್ಲುವ ತಂತ್ರವನ್ನು ನೆನಪಾದರೆ ಆಶ್ಚರ್ಯವಿಲ್ಲ. ಇಲ್ಲಿ ಬೇರೆಲ್ಲೂ ನೋಡಲು ಸಿಗದ ರೈಟ್ ಸಹೋದರರು ನಿರ್ಮಿಸಿದ ಮೊದಲ ವಿಮಾನದ ಪ್ರತಿಕೃತಿಯೂ ಇದೆ.
ಎರಡನೇ ಅಂತಸ್ತಿನ "ಎಲೆಕ್ಟ್ರೋ ಟೆಕ್ನಿಕ್ ಗ್ಯಾಲೆರಿ"ಯಂತೂ ಅಚ್ಚರಿಗಳ ಸಂತೆ. ತಳವೇ ಇಲ್ಲದ ಬಾವಿ, ಎಲ್ಲೋ ಪಿಸುಗುಟ್ಟಿದರೆ ಇನ್ನೆಲ್ಲೋ ಕಿವಿಗೊಟ್ಟು ಆಲಿಸಬಹುದಾದ ತಂತ್ರ, ದೃಷ್ಟಿ ಭ್ರಮೆ ಹುಟ್ಟಿಸುವ ವಿವಿಧ ಆಟಗಳು, ದೇಹ ತೂಕದ ಜತೆಗೆ ಅದರಲ್ಲಿರುವ ನೀರಿನ ತೂಕವನ್ನೂ ತಿಳಿಸುವ ಯಂತ್ರ, ನಮ್ಮದೇ ಬೆನ್ನನ್ನು ಕಣ್ಣೆದುರು ತೋರಿಸುವ ಕನ್ನಡಿ, ಒಂದೇ ಎರಡೇ. ವಿವಿಧ ಗ್ರಹಗಳ ಮೇಲೆ ನಮ್ಮ ತೂಕ ಎಷ್ಟು ಎಂದು ತೋರಿಸುವ ಯಂತ್ರ ನೋಡುಗರಲ್ಲಿ ಆ ಬಗ್ಗೆ ಕುತೂಹಲ ಹುಟ್ಟಿಸುವುದು ಖಂಡಿತ. ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ವಿವಿಧ ಆಟಗಳ ಮೂಲಕ ಕಂಪ್ಯೂಟರ್ ಹೇಗೆ ಸ್ಪರ್ಶವನ್ನು ಗಮನಿಸುತ್ತದೆ ಎಂದು ತೋರಿಸುವುದೂ ಒಳ್ಳೇ ಪ್ರಯೋಗ.
ಈಗೆರೆಡು ವರ್ಷಗಳ ಹಿಂದೆ ನಿರ್ಮಿಸಲ್ಪಟ್ಟ "ಬಾಲ ವಿಜ್ಞಾನ" ವಿಭಾಗದಲ್ಲಿ ಕುಳ್ಳಗಾಗಿ, ದಪ್ಪವಾಗಿ, ಉದ್ದವಾಗಿ ತೋರುವ ಕನ್ನಡಿಗಳು, ನಡೆದರೆ ನುಡಿಯುವ ಪಿಯಾನೊ ಇರುವ ಜಾಗವನ್ನೇ ಮರೆಸಿಬಿಡಬಲ್ಲವು. ಅಲ್ಲಿರುವ ೩ಈ ಚಿತ್ರಮಂದಿರದಲ್ಲಿ ವಿಶೇಷ ಕನ್ನಡಕ ಧರಿಸಿಕೊಂಡು ಚಿತ್ರ ನೋಡುವಾಗ ಮಕ್ಕಳಿರಲಿ, ದೊಡ್ಡವರೂ ಬೆರಗಾಗುವುವುದು ಅವರ ಕೇಕೆ, ಉದ್ಗಾರದಲ್ಲೇ ಗೊತ್ತಾಗುತ್ತಿತ್ತು.
ಸರ್. ಎಂ. ವಿಶ್ವೇ ಶ್ವರಯ್ಯನವರ ಜನ್ಮಶತಮಾನೋತ್ಸವದ ಅಂಗವಾಗಿ ೧೯೬೨ ಈ ಸಂಗ್ರಹಾಲಯವನ್ನು ಸ್ಥಾಪಿಸಿದ್ದಾದರೂ ಅಪ್‌ಡೇಟ್ ಆಗುತ್ತಿದೆ ಎನ್ನುವುದಕ್ಕೆ ಅಲ್ಲಿ ಸಾಕ್ಷಿಗಳಿದ್ದವು. ಪ್ರತಿ ದಿನ ನೂರಾರು ವೀಕ್ಷಕರಿರುವ , ಪ್ರತಿ ವಸ್ತುವನ್ನೂ ಮುಟ್ಟಿ, ತಟ್ಟಿ ನೋಡುವ ಈ ಸಂಗ್ರಹಾಲಯವನ್ನು ನೋಡಿಕೊಳ್ಳುವುದು ಸಾಮಾನ್ಯದ ಮಾತಲ್ಲ. ಆ ಕೆಲಸವನ್ನು ರಾಷ್ಟ್ರೀಯ ವಿಜ್ಞಾನ ವಸ್ತುಸಂಗ್ರಹಾಲಯ ಸೊಸೈಟಿಯು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ. ಬಹು ಅಂತಸ್ತಿನ ಕಟ್ಟಡದಲ್ಲಿ ಲಿಫ್ಟ್ ಇಲ್ಲ ಎನ್ನುವುದೊಂದು ಕೊರತೆ. ಆದರೂ ಅಲ್ಲಲ್ಲಿ ಕೂರಲು ಕುರ್ಚಿಗಳು, ಸ್ವಚ್ಛ ಶೌಚಾಲಯಗಳೂ ನೋಡುಗರನ್ನು ಹಗುರಾಗಿಸುತ್ತವೆ. ಮೇಲಂತಸ್ತನಲ್ಲಿರುವ ಕ್ಯಾಂಟೀನ್ ಮಾತ್ರ ಕೊಂಚ ದುಬಾರಿಯೇ.
ನಮ್ಮೊಂದಿಗೆ ವಿವಿಧ ವಯಸ್ಸಿನ ಮಕ್ಕಳನ್ನು ಕರೆದುಕೊಂಡು, "ಮಕ್ಕಳಿಗೆ ಬೋರ್ ಆಗುತ್ತದೆಯೇನೋ, ಆದರೂ ಇವನ್ನೆಲ್ಲಾ ತಿಳಿದಿರಬೇಕು" ಎಂದು ದೊಡ್ಡವರ ಪೋಸ್ ಕೊಡುತ್ತಾ ಬಂದಿದ್ದ ನಮಗೂ ಇದು ವಿಶಿಷ್ಟ ಅನುಭವ. ವಿವರವಾಗಿ ನೋಡಲು ಇಡೀ ದಿನ ಸಾಲದು. ಭಾನುವಾರವೂ ತೆರೆದಿರುತ್ತದೆ ಎನ್ನುವುದು ಪ್ಲಸ್ ಪಾಯಿಂಟ್. ನೀವು ನೋಡಿಲ್ಲದಿದ್ದರೆ ಒಮ್ಮೆ ಭೇಟಿ ನೀಡಲೇಬೇಕಾದ ಸ್ಥಳವಿದು. ನಿಮ್ಮೊಡನೆ ಮಕ್ಕಳಿದ್ದರೆ ಬೇಸಿಗೆ ರಜೆ ಮುಗಿಯುವ ಮುನ್ನ ಹೋಗಿಬಂದು ಬಿಡಿ. ರಜೆ ಸಾರ್ಥಕವಾದೀತು.
ವಿಳಾಸ: ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ. ಕಸ್ತೂರಬಾ ರಸ್ತೆ. ಬೆಂಗಳೂರು.

ಗುರುವಾರ, ಏಪ್ರಿಲ್ 2, 2009

ಬಿಸಿಲೇ ಗೊತ್ತಿಲ್ಲದ ಮೇಲೆ ಬೆಳದಿಂಗಳ ಮಾತೇಕೆ...?

ಮೊನ್ನೆ ಉತ್ತರ ಕರ್ನಾಟಕದಲ್ಲಿರುವ ನಮ್ಮ ಹಳ್ಳಿಗೆ ಹೋಗಿದ್ದೆನಲ್ಲ, ಎಂಥ ಬಿಸಿಲು ಅಂತಿರಿ ಅಲ್ಲಿ? ಬಸ್ಸಿಲ್ಲದ ನಮ್ಮೂರಿಗೆ ಎರಡು ಕಿಲೋ ಮೀಟರ್ ನಡೆದು ಹೋಗುವಷ್ಟರಲ್ಲಿ ಸುಟ್ಟ ಸೋರೇಕಾಯಂತಾಗಿಬಿಟ್ಟಿದ್ದೆ. ಅಮ್ಮ ಮಾಡಿಕೊಟ್ಟ ನಿಂಬೆ ಹಣ್ಣಿನ ಪಾನಕ ಕುಡಿಯುವ ತನಕ ಮಾತಾಡಲೂ ಶಕ್ತಿ ಇರಲಿಲ್ಲ. 'ಎನ್ ಬಿಸಿಲಮ್ಮಾ ಇಲ್ಲಿ. ಬೆಂಗಳೂರಿನಲ್ಲಿ ಬಿಸಿಲೇ ಇಲ್ಲ ಗೊತ್ತಾ' ಅಂದೆ. ಅಮ್ಮ 'ಪುಣ್ಯವಂತರ ಊರಪ್ಪಾಅದು' ಅಂದಿದ್ದರು. ಎರಡು ದಿನ ಕಳೆಯುವಷ್ಟರಲ್ಲಿ ಉರಿವ ಬಿಸಿಲು, ಸುಡುವ ಧಗೆ, ಕಣ್ಣುಮುಚ್ಚಾಲೆಯಾಡುವ ಕರೆಂಟ್‌ಗೆ ಬೇಸತ್ತು ಬೆಂಗಳೂರಿಗೆ ಹೋದರೆ ಸಾಕಪ್ಪನ್ನಿಸಿಬಿಟ್ಟಿತ್ತು.ಇಲ್ಲಿಯ ಜನ ಹ್ಯಾಗೆ ಬದುಕಿರ್‍ತಾರೋ ಇಲ್ಲಿಯೇ ಎಂದೆನಿಸಿದ್ದೂ ನಿಜ.
'ಬೆಂಗಳೂರಿನಲ್ಲಿದೊಡ್ಡ ದೊಡ್ಡಟ್ಟಡ ಇರೋದ್ರಿಂದ ಅಲ್ಲಿಗೆ ಸೂರ್ಯನ ಬಿಸಿಲೇ ತಾಕಲ್ವಂತೆ, ಯಾವಾಲೂ ಅಲ್ಲಿ ನೆರಳಿರೋದ್ರಿಂದ ತಣ್ಣಗಿರುತ್ತಂತೆ' ಅಂತ ಎಂದೂ ಬೆಂಗಳೂರು ನೋಡದ ನನ್ನ ಅಣ್ಣನ ಮಗ ಮಧ್ಯಾಹ್ನ ಆಟವಾಡುತ್ತಾ ಗೆಳೆಯರ ಎದುರಿಗೆ ಹೇಳುತ್ತಿದ್ದ. ಫ್ಯಾನ್ ಇಲ್ಲದೆ ಸೆಖೆಗೆ ನಿದ್ದೆಬಾರದೆ ನಡುಮನೆಯಲ್ಲಿ ಮಲಗಿ ಒದ್ದಾಡುತ್ತಿದ್ದ ನನಗೆ ಅದನ್ನು ಕೇಳಿ ನಗುಬಂದಿತ್ತು.
ಈಗ ಯೋಚಿಸಿದರೆ ಬೆಂಗಳೂರಿನಲ್ಲಿ ಬಿಸಿಲೇ ಇಲ್ಲವೋ ಅಥವಾ ನಾನು ಬಿಸಿಲನ್ನು ನೋಡಿಲ್ಲವೋ ಎಂಬ ಅನುಮಾನ ಹುಟ್ಟುತ್ತಿದೆ. ಬೆಳಿಗ್ಗೆ ೭. ೩೦ಕ್ಕೆ ಮನೆ ಬಿಟ್ಟು ಆಫೀಸ್ ಹೊಕ್ಕರೆ ಹೊರ ಬರುವುದು ರಾತ್ರಿ ೮ ಗಂಟೆ ನಂತರವೇ. ಅಲ್ಲಿ ಸದಾ ಬೀಸುವ ಫ್ಯಾನ್, ಏಸಿ, ಫಳಗುಟ್ಟುವ ಟ್ಯೂಬ್‌ಲೈಟ್‌ನಿಂದಾಗಿ ಹಗಲೋ ರಾತ್ರಿಯೋ ಗೊತ್ತಾಗುವುದೇ ಇಲ್ಲ. ಕಿಟಕಿಯ ಗಾಜುಗಳಿಗೂ ಕೂಲಿಂಗ್ ಪೇಪರ್ ಅಂಟಿಸಿರುವುದರಿಂದ ಒಳಗಿಂದ ನೋಡುವವರಿಗೆ ಹೊರಗಡೆ ಜಗತ್ತು ಸದಾ ಕೂಲ್. ಇನ್ನು ವೀಕೆಂಡ್‌ಗಳಲ್ಲಿ ಹಗಲೆಲ್ಲಾ ನಿದ್ದೆ, ಸಂಜೆ ಆರರ ನಂತರವೇ ಶಾಪಿಂಗ್. ಬಿಸಿಲು ನೋಡುವುದಾದರೂ ಯಾವಾಗ? ಹುಟ್ಟಿದಾಗಿನಿಂದಲೇ ಜತೆಯಲ್ಲಿರುವ ಕವಚ ಕುಂಡಲಗಳಂತೆ ಸದಾ ಕಾಲಿಗೆ ಶೂಸ್, ಕಣ್ಣಿಗೆ ಕೂಲಿಂಗ್ ಗ್ಲಾಸ್ ಅಂಟಿಸಿಕೊಂಡಿರುವಾಗ ಬಿಸಿಲು ತಾಕೀತಾದರೂ ಹೇಗೆ?
ಪ್ರಶ್ನೆಗಳ ಜತೆಜತೆಯಲ್ಲೇ ಯಾಕೋ ಅರವತ್ತರ ವಯಸ್ಸಿನಲ್ಲೂ ಮಟಮಟ ಎರಡು ಗಂಟೆಯವರೆಗೆ ಗದ್ದೆಯಲ್ಲಿ ಮೈ ಮುರಿದು ಕೆಲಸ ಮಾಡಿ ಬಂದು ಅಮ್ಮನೊಡನೆ ನಗುತ್ತಾ ಊಟ ಮಾಡುವ ಅಪ್ಪನ ನೆನಪಾಗುತ್ತದೆ. ಎಂಥಾ ಬಿರು ಬಿಸಿಲಲ್ಲೂ ದೇವಸ್ಥಾನಕ್ಕೆ ಬರಿಗಾಲಲ್ಲೇ ನಡೆದು ಹೋಗುವ ಅಮ್ಮನ ಪಾದದ ಬಗ್ಗೆ ಅಚ್ಚರಿಯಾಗುತ್ತದೆ. ತನ್ನ ಭವಿಷ್ಯದ ಬಗ್ಗೆ ಒಂದಿನಿತೂ ಯೋಚನೆಯಿಲ್ಲದೆ ದನಗಳನ್ನು ಮೇಯಲು ಬಿಟ್ಟು ಆಲದ ಮರದ ಬಿಳಿಲಿನಲ್ಲಿ ತಣ್ಣಗೆ ಜೋಕಾಲಿಯಾಡುವ ದನಗಾಹಿ ಕಾಳನ ಸುಖದ ಬಗ್ಗೆ ಅಸೂಯೆಯಾಗುತ್ತದೆ. ನನಗೂ ಅವರಂತೆ ಬಿಸಿಲಿಳಿದ ನಂತರ ಮನೆಯ ಹಿಂದಿನ ಮಲ್ಲಿಗೆ ಬಳ್ಳಿಯ ಕೆಳಗಿರುವ, ಇನ್ನೂ ಬಿಸಿಯಾರಿರದ ಕಟ್ಟೆಯ ಮೇಲೆ ಕುಳಿತು ಚುಕ್ಕಿ ಚಂದ್ರಮರ ಬೆಳಕಲ್ಲೇ ಹರಟಿ, ಉಂಡು ಮಲಗಿ ಕಾಲ ಕಳೆಯುವ ಆಸೆಯಾಗುತ್ತಿದೆ. ಆದರೆ ಬೆಂಗಳೂರಿನಲ್ಲಿ ಅದು.... ಬಿಡಿ, ನಾವು ಬಿಸಿಲೇ ಕಂಡಿಲ್ಲವೆಂದರೆ ಇನ್ನು ಬೆಳದಿಂಗಳ ಮಾತೇಕೆ?