ಗುರುವಾರ, ಏಪ್ರಿಲ್ 2, 2009

ಬಿಸಿಲೇ ಗೊತ್ತಿಲ್ಲದ ಮೇಲೆ ಬೆಳದಿಂಗಳ ಮಾತೇಕೆ...?

ಮೊನ್ನೆ ಉತ್ತರ ಕರ್ನಾಟಕದಲ್ಲಿರುವ ನಮ್ಮ ಹಳ್ಳಿಗೆ ಹೋಗಿದ್ದೆನಲ್ಲ, ಎಂಥ ಬಿಸಿಲು ಅಂತಿರಿ ಅಲ್ಲಿ? ಬಸ್ಸಿಲ್ಲದ ನಮ್ಮೂರಿಗೆ ಎರಡು ಕಿಲೋ ಮೀಟರ್ ನಡೆದು ಹೋಗುವಷ್ಟರಲ್ಲಿ ಸುಟ್ಟ ಸೋರೇಕಾಯಂತಾಗಿಬಿಟ್ಟಿದ್ದೆ. ಅಮ್ಮ ಮಾಡಿಕೊಟ್ಟ ನಿಂಬೆ ಹಣ್ಣಿನ ಪಾನಕ ಕುಡಿಯುವ ತನಕ ಮಾತಾಡಲೂ ಶಕ್ತಿ ಇರಲಿಲ್ಲ. 'ಎನ್ ಬಿಸಿಲಮ್ಮಾ ಇಲ್ಲಿ. ಬೆಂಗಳೂರಿನಲ್ಲಿ ಬಿಸಿಲೇ ಇಲ್ಲ ಗೊತ್ತಾ' ಅಂದೆ. ಅಮ್ಮ 'ಪುಣ್ಯವಂತರ ಊರಪ್ಪಾಅದು' ಅಂದಿದ್ದರು. ಎರಡು ದಿನ ಕಳೆಯುವಷ್ಟರಲ್ಲಿ ಉರಿವ ಬಿಸಿಲು, ಸುಡುವ ಧಗೆ, ಕಣ್ಣುಮುಚ್ಚಾಲೆಯಾಡುವ ಕರೆಂಟ್‌ಗೆ ಬೇಸತ್ತು ಬೆಂಗಳೂರಿಗೆ ಹೋದರೆ ಸಾಕಪ್ಪನ್ನಿಸಿಬಿಟ್ಟಿತ್ತು.ಇಲ್ಲಿಯ ಜನ ಹ್ಯಾಗೆ ಬದುಕಿರ್‍ತಾರೋ ಇಲ್ಲಿಯೇ ಎಂದೆನಿಸಿದ್ದೂ ನಿಜ.
'ಬೆಂಗಳೂರಿನಲ್ಲಿದೊಡ್ಡ ದೊಡ್ಡಟ್ಟಡ ಇರೋದ್ರಿಂದ ಅಲ್ಲಿಗೆ ಸೂರ್ಯನ ಬಿಸಿಲೇ ತಾಕಲ್ವಂತೆ, ಯಾವಾಲೂ ಅಲ್ಲಿ ನೆರಳಿರೋದ್ರಿಂದ ತಣ್ಣಗಿರುತ್ತಂತೆ' ಅಂತ ಎಂದೂ ಬೆಂಗಳೂರು ನೋಡದ ನನ್ನ ಅಣ್ಣನ ಮಗ ಮಧ್ಯಾಹ್ನ ಆಟವಾಡುತ್ತಾ ಗೆಳೆಯರ ಎದುರಿಗೆ ಹೇಳುತ್ತಿದ್ದ. ಫ್ಯಾನ್ ಇಲ್ಲದೆ ಸೆಖೆಗೆ ನಿದ್ದೆಬಾರದೆ ನಡುಮನೆಯಲ್ಲಿ ಮಲಗಿ ಒದ್ದಾಡುತ್ತಿದ್ದ ನನಗೆ ಅದನ್ನು ಕೇಳಿ ನಗುಬಂದಿತ್ತು.
ಈಗ ಯೋಚಿಸಿದರೆ ಬೆಂಗಳೂರಿನಲ್ಲಿ ಬಿಸಿಲೇ ಇಲ್ಲವೋ ಅಥವಾ ನಾನು ಬಿಸಿಲನ್ನು ನೋಡಿಲ್ಲವೋ ಎಂಬ ಅನುಮಾನ ಹುಟ್ಟುತ್ತಿದೆ. ಬೆಳಿಗ್ಗೆ ೭. ೩೦ಕ್ಕೆ ಮನೆ ಬಿಟ್ಟು ಆಫೀಸ್ ಹೊಕ್ಕರೆ ಹೊರ ಬರುವುದು ರಾತ್ರಿ ೮ ಗಂಟೆ ನಂತರವೇ. ಅಲ್ಲಿ ಸದಾ ಬೀಸುವ ಫ್ಯಾನ್, ಏಸಿ, ಫಳಗುಟ್ಟುವ ಟ್ಯೂಬ್‌ಲೈಟ್‌ನಿಂದಾಗಿ ಹಗಲೋ ರಾತ್ರಿಯೋ ಗೊತ್ತಾಗುವುದೇ ಇಲ್ಲ. ಕಿಟಕಿಯ ಗಾಜುಗಳಿಗೂ ಕೂಲಿಂಗ್ ಪೇಪರ್ ಅಂಟಿಸಿರುವುದರಿಂದ ಒಳಗಿಂದ ನೋಡುವವರಿಗೆ ಹೊರಗಡೆ ಜಗತ್ತು ಸದಾ ಕೂಲ್. ಇನ್ನು ವೀಕೆಂಡ್‌ಗಳಲ್ಲಿ ಹಗಲೆಲ್ಲಾ ನಿದ್ದೆ, ಸಂಜೆ ಆರರ ನಂತರವೇ ಶಾಪಿಂಗ್. ಬಿಸಿಲು ನೋಡುವುದಾದರೂ ಯಾವಾಗ? ಹುಟ್ಟಿದಾಗಿನಿಂದಲೇ ಜತೆಯಲ್ಲಿರುವ ಕವಚ ಕುಂಡಲಗಳಂತೆ ಸದಾ ಕಾಲಿಗೆ ಶೂಸ್, ಕಣ್ಣಿಗೆ ಕೂಲಿಂಗ್ ಗ್ಲಾಸ್ ಅಂಟಿಸಿಕೊಂಡಿರುವಾಗ ಬಿಸಿಲು ತಾಕೀತಾದರೂ ಹೇಗೆ?
ಪ್ರಶ್ನೆಗಳ ಜತೆಜತೆಯಲ್ಲೇ ಯಾಕೋ ಅರವತ್ತರ ವಯಸ್ಸಿನಲ್ಲೂ ಮಟಮಟ ಎರಡು ಗಂಟೆಯವರೆಗೆ ಗದ್ದೆಯಲ್ಲಿ ಮೈ ಮುರಿದು ಕೆಲಸ ಮಾಡಿ ಬಂದು ಅಮ್ಮನೊಡನೆ ನಗುತ್ತಾ ಊಟ ಮಾಡುವ ಅಪ್ಪನ ನೆನಪಾಗುತ್ತದೆ. ಎಂಥಾ ಬಿರು ಬಿಸಿಲಲ್ಲೂ ದೇವಸ್ಥಾನಕ್ಕೆ ಬರಿಗಾಲಲ್ಲೇ ನಡೆದು ಹೋಗುವ ಅಮ್ಮನ ಪಾದದ ಬಗ್ಗೆ ಅಚ್ಚರಿಯಾಗುತ್ತದೆ. ತನ್ನ ಭವಿಷ್ಯದ ಬಗ್ಗೆ ಒಂದಿನಿತೂ ಯೋಚನೆಯಿಲ್ಲದೆ ದನಗಳನ್ನು ಮೇಯಲು ಬಿಟ್ಟು ಆಲದ ಮರದ ಬಿಳಿಲಿನಲ್ಲಿ ತಣ್ಣಗೆ ಜೋಕಾಲಿಯಾಡುವ ದನಗಾಹಿ ಕಾಳನ ಸುಖದ ಬಗ್ಗೆ ಅಸೂಯೆಯಾಗುತ್ತದೆ. ನನಗೂ ಅವರಂತೆ ಬಿಸಿಲಿಳಿದ ನಂತರ ಮನೆಯ ಹಿಂದಿನ ಮಲ್ಲಿಗೆ ಬಳ್ಳಿಯ ಕೆಳಗಿರುವ, ಇನ್ನೂ ಬಿಸಿಯಾರಿರದ ಕಟ್ಟೆಯ ಮೇಲೆ ಕುಳಿತು ಚುಕ್ಕಿ ಚಂದ್ರಮರ ಬೆಳಕಲ್ಲೇ ಹರಟಿ, ಉಂಡು ಮಲಗಿ ಕಾಲ ಕಳೆಯುವ ಆಸೆಯಾಗುತ್ತಿದೆ. ಆದರೆ ಬೆಂಗಳೂರಿನಲ್ಲಿ ಅದು.... ಬಿಡಿ, ನಾವು ಬಿಸಿಲೇ ಕಂಡಿಲ್ಲವೆಂದರೆ ಇನ್ನು ಬೆಳದಿಂಗಳ ಮಾತೇಕೆ?

8 ಕಾಮೆಂಟ್‌ಗಳು:

 1. ರಜನಿಯವರೆ,
  ಈಗಷ್ಟೆ ನಿಮ್ಮ ಲೇಖನವನ್ನು ಸಂಪದದಲ್ಲಿ ಓದಿ ಅಲ್ಲಿರುವ ನಿಮ್ಮ ಬ್ಲಾಗ್ ವಿಳಾಸಕ್ಕೆ ಹಾರಿ ಇಲ್ಲಿ ಪ್ರತಿಕ್ರಿಯಿಸುತ್ತಿದ್ದೇನೆ. ಬಿಸಿಲಿನ ಬಗ್ಗೆ ತುಂಬಾ ಚನ್ನಾಗಿ ಬರೆದಿದ್ದೀರಿ. ಬಿಸಿಲು ನಮ್ಮ ಜೀವನದ ಅವಿಭಾಜ್ಯ ಅಂಗ. ಆದರೆ ಏಸಿ ರೂಮುಗಳಲ್ಲಿ ಕುಳಿತು ಕಾಲ ಕಳೆಯುವ ನಾವು ನಿಜಕ್ಕೂ ಬಿಸಿಲನ್ನು ಮರೆಯುತ್ತಿರುವದು ದುರಂತ. ನನಗೆ ಮೊದಲಿನಿಂದಲೂ ಬಿಸಿಲೆಂದರೆ ಇಷ್ಟ. ಹಾಗೆಂದೆ ನನ್ನ ಬ್ಲಾಗಿಗೆ "ಬಿಸಿಲ ಹನಿ" ಯೆಂದು ಹೆಸರಿಟ್ಟಿದ್ದೇನೆ. ಒಮ್ಮೆ ಭೇಟಿ ಕೊಡಿ www.bisilahani.blogspot.com

  ಪ್ರತ್ಯುತ್ತರಅಳಿಸಿ
 2. ರಜನಿಯವರೇ
  ನಿಮ್ಮ ಬ್ಲಾಗಿನ ಹೆಸರು ಮತ್ತು ನನ್ನ ಬ್ಲಾಗಿನ ಹೆಸರು ಒ೦ದೇ ಆಗಿರುವುದು ಕಾಕತಾಳೀಯ. ನಿಮ್ಮ ಬರಹ ಓದಿದೆ. ತು೦ಬಾ ಆಪ್ತವಾಗಿದೆ. ನನ್ನ ಬ್ಲಾಗಿಗೂ ಭೇಟಿ ಕೊಡುತ್ತಿರಿ.
  www.nirpars.blogspot.com

  ಪ್ರತ್ಯುತ್ತರಅಳಿಸಿ
 3. ರಜನಿ ಮೇಡಮ್,

  ಪರಂಜಪೆಯವರ ಬ್ಲಾಗಿನಿಂದ ನಿಮ್ಮ ಬ್ಲಾಗಿಗೆ ಹಾರಿಬಂದೆ...
  ನೀವು ಬಿಸಿಲಿನ ಬಗ್ಗೆ ಮತ್ತು ಬೆಂಗಳೂರಿನ ನಿತ್ಗ್ಯಪ್ರಪಂಚದ ವಿವರಣೆ ಆಪ್ತವೆನಿಸುತ್ತದೆ...ನನ್ನದು ಒಂದು ಬ್ಲಾಗಿದೆ...ಛಾಯಾಕನ್ನಡಿ ಅಂತ..
  ಬಿಡುವಿನಲ್ಲಿ ನನ್ನ ಬ್ಲಾಗಿಗು ಬೇಟಿಕೊಡಿ...

  ಪ್ರತ್ಯುತ್ತರಅಳಿಸಿ
 4. ರಜನಿಯವರೆ,

  ಆಪ್ತವಾಗಿತ್ತು ಬರಹ... ಜೊತೆಗೊಂದಿಷ್ಟು ನಿಮ್ಮೂರಿನ ಸಿಹಿಯೂ, ನಿಮ್ಮ ಮನೆಯವರ ಪ್ರೀತಿಯ ಕಲರವವೂ ಇತ್ತೆನ್ನಿ... ಮಳೆಗಾಲ ಬೇಗ ಬರಲಿ ಎನ್ನುವ ಆಗ್ರಹ ಗುಪ್ತಗಾಮಿನಿಯಂತೆ ನಿಮ್ಮ ಬರಹದಲ್ಲಿ ಪಸರಿಸಿದ್ದನ್ನು ತನ್ಮಯನಾಗಿ ಓದಿಕ್ಕೊಂಡೆ...
  ನಿಮ್ಮ ಬ್ಲಾಗ್ ನ ಹೆಸರು ಉತ್ಸಾಹಭರಿತವಾಗಿಯೂ, ಗುಣಾತ್ಮಕವಾಗಿಯೂ ಇರುವುದರಿಂದ ಬಲು ಇಷ್ಟವಾಯ್ತು....

  ಧನ್ಯವಾದಗಳು...
  -ಗಿರಿ

  ಪ್ರತ್ಯುತ್ತರಅಳಿಸಿ
 5. ಬೆಂಗಳೂರಿನಲ್ಲಿ ಬಿಸಿಲು ಮತ್ತು ಬೆಳದಿಂಗಳು - ಎರಡನ್ನೂ miss ಮಾಡಿಕೊಳ್ಳುತ್ತೇವೆ , ಎಂಬ ಮಾತು ವಾಸ್ತವ. ಆಗಾಗ ನಿಮ್ಮಂತೆ ಊರಿಗೆ ಹೋಗಿ ಬರುವುದು, ಇತ್ಯಾದಿ ಓಡಾಟಗಳನ್ನು ಹಮ್ಮಿಕೊಂಡು ಈ ಕೊರತೆ ನಿವಾರಿಸಿಕೊಳ್ಳಬೇಕು. ಬೆಳಗ್ಗೆಯಿಂದ ಸಂಜೆ ದಿನ ಕಳೆಯುವುದೇ ಗೊತ್ತಾಗುವುದಿಲ್ಲ. ಕಾಲ ಹರಿಯುವ ನದಿ. ನಮ್ಮ ಬೊಗಸೆಯಲ್ಲೂ ನೀರು ನಿಲ್ಲದಂತಹ ತೂತುಗಳು. ಎಷ್ಟು ಸಾಧ್ಯವೋ ಅಷ್ಟು ಮೊಗೆದುಕೊಳ್ಳೋಣ.

  ಪ್ರತ್ಯುತ್ತರಅಳಿಸಿ
 6. And Heat fever has also caught the Gods. Recently I visited Krishna temple in udupi and found it fully airconditioned.

  ಪ್ರತ್ಯುತ್ತರಅಳಿಸಿ
 7. ಸುಮಾರು ದಿನದಿಂದ ಇದನ್ನೆ ಯೊಚಿಸುತ್ತಿದ್ದೇನೆ...

  ಪ್ರತ್ಯುತ್ತರಅಳಿಸಿ