ಬುಧವಾರ, ಮೇ 20, 2009

ಸುಕುಮಾರ್ ಸೇನ್ ಜಯ್ ಹೋ !!

ಈಗಷ್ಟೇ ಫಲಿತಾಂಶ ಹೊರಬಿದ್ದಿದೆ. ಯಾವ ಪಕ್ಷಕ್ಕೂ ಬಹುಮತ ನೀಡದೆ, ಹಾಗೆಂದು ಸ್ಥಿರ ಸರ್ಕಾರ ರಚನೆಗೆ ತೊಂದರೆಯೂ ಆಗದಂತೆ ಮತದಾರ ಬುದ್ದಿವಂತಿಕೆಯಿಂದ ಮತ ಚಲಾಯಿಸಿದ್ದಾನೆ. ಪ್ರಜಾಪ್ರಭುತ್ವದ ಗಜಗಮನಕೆ ಚುನಾವಣೆಯೇ ಅಂಕುಶ ಎಂಬುದನ್ನು ಅವನು ಅರ್ಥ ಮಾಡಿಕೊಂಡಿರುವುದಕ್ಕೆ ಸಾಕ್ಷಿ ಇದು. (ಮತ ಹಾಕದವರನ್ನು ಬಿಟ್ಟುಬಿಡಿ, ಅವರು ತೀರಾ "ಬುದ್ಧಿವಂತರು") ಆದರೆ ಭಾರತದ ಮೊದಲ ಚುನಾವಣೆಯ ಸಮಯದಲ್ಲಿ ಹೀಗಿರಲಿಲ್ಲ. ಆಗಷ್ಟೇ ಸ್ವತಂತ್ರ್ಯ ಬಂದಿತ್ತು.21 ವರ್ಷವಾದ ಪ್ರತಿಯೊಬ್ಬ ಭಾರತೀಯ ನಾಗರಿಕನಿಗೂ ಮತದಾನದ ಹಕ್ಕು ನೀಡುವ ಮಹತ್ವದ ನಿರ್ಧಾರ ಕೈಗೊಳ್ಳಲಾಯ್ತು (ಆಗಿನ್ನೂ ಅಮೆರಿಕದಂಥ ದೇಶದಲ್ಲೇ ಎಲ್ಲರಿಗೂ ಮತ ನೀಡುವ ಹಕ್ಕು ಕೊಡುವ ಕುರಿತು ಅನುಮಾನಗಳಿದ್ದವು. ಹಲವು ದೇಶಗಳಲ್ಲಿ ಟ್ಯಾಕ್ಸ್ ಕಟ್ಟುವ, ವಿದ್ಯಾವಂತರಿಗೆ ಮಾತ್ರ ಮತ ನೀಡುವ ಹಕ್ಕಿತ್ತು.) ಭಾರತದಲ್ಲಿ ಆಗ 21 ವರ್ಷ ದಾಟಿದವರ ಸಂಖ್ಯೆ ಹದಿನೇಳು ಕೋಟಿ ಅರವತ್ತು ಲಕ್ಷಕ್ಕೂ ಹೆಚ್ಚಿತ್ತು. ಅದರಲ್ಲಿ ಶೇ.85ರಷ್ಟು ಅನಕ್ಷರಸ್ಥರು. ಅವರಿಗೆ ಚುನಾವಣೆಯ ಬಗ್ಗೆ ತಿಳಿ ಹೇಳುವುದಾದರೂ ಹೇಗೆ?

ಇಂಥ ಸಮಸ್ಯೆ ಪರಿಹರಿಸಲು ಶ್ರಮಿಸಿದವ ಸುಕುಮಾರ್ ಸೇನ್ ಎಂಬ ಭಾರತದ ಪ್ರಜಾಪ್ರಭುತ್ವದ ತೆರೆಮರೆಯ ನಾಯಕ, ಆಗಿನ ಮುಖ್ಯ ಚುನಾವಣಾಕಾರಿ. ಬೆಂಗಾಲದ ಸುಕುಮಾರ್ ಸೇನ್ ಲಂಡನ್ ವಿಶ್ವವಿದ್ಯಾಲಯದಲ್ಲಿ ಬಂಗಾರದ ಪದಕ ಗಳಿಸಿದ ಪ್ರತಿಭೆ. ಅದುವರೆಗೂ ಪಶ್ಚಿಮ ಬಂಗಾಳದ ಮುಖದಯ ಸೆಕ್ರೆಟರಿಯಾಗಿದ್ದ ಸುಕುಮಾರರ ಹೆಗಲಿಗೆ ಮೊದಲ ಚುನಾವಣೆಯ ಭಾರ ಹೊರಿಸಲಾಯಿತು. ಭಾರತದಲ್ಲಿ ಚುನಾವಣೆ ಎಂದರೆ ಅದು ಪ್ರಜಾಪ್ರಭುತ್ವದ ಪರೀಕ್ಷೆ ಎಂದು ಜಗತ್ತು ಕುತೂಹಲದಿಂದ ನೋಡುತ್ತಿದೆ ಎಂದು ಅರಿತಿದ್ದ ಸುಕುಮಾರ್ ಹೊಸ ಪ್ರಯೊಗಗಳಿಗೆ ಮುಂದಾದರು.

ಮೊದಲು ಮತದಾರರ ಪಟ್ಟಿಯನ್ನು ಸಿದ್ಧಪಡಿಸಿಬೇಕಿತ್ತು. ಅದಕ್ಕೂ ಸಾಮಾಜಿಕ ಹಾಗೂ ತಾಂತ್ರಿಕ ಸಮಸ್ಯೆಗಳು ಬಹಳಷ್ಟಿದ್ದವು. ಹೆಣ್ಣುಮಕ್ಕಳು ತಮ್ಮ ಹೆಸರನ್ನು ಬರೆಸಲೊಪ್ಪದೆ, ಗಂಡ ಅಥವಾ ಅಪ್ಪನ ಹೆಸರಿಂದ ಗುರುತಿಸಿಕೊಳ್ಳುವುದನ್ನು ಸುಕುಮಾರ್ ವಿರೋಧಿಸಿದರು. ಮಹಿಳೆಯರು ತಮ್ಮ ಸ್ವಂತ ಹೆಸರಿನಲ್ಲಿಯೇ ಮತಪಟ್ಟಿಗೆ ನೊಂದಾಯಿಸಲು ಮನ ಒಲಿಸಬೇಕಾಯಿತು. ಅದಕ್ಕಾಗಿ ಕೆಲವು ಪ್ರಾಮಾಣಿಕ ಅಧಿಕಾರಿಗಳನ್ನು ಈ ಕೆಲಸಕ್ಕೆ ನಿಯೋಜಿಸಲಾಯಿತು. (ಸುಕುಮಾರರ ಈ ಎಲ್ಲಾ ಪ್ರಯತ್ನಗಳ ಮಧ್ಯೆಯೂ ಸುಮಾರು ಎರಡು ಲಕ್ಷದ ಎಂಬತ್ತು ಸಾವಿರ ಮಹಿಳೆಯರು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ಒಪ್ಪದೆ, ಮತದಾನದಿಂದ ವಂಚಿತರಾದರು) ವಿಧಾನ ಸಭಾ, ಲೋಕಸಭಾ ಕ್ಷೇತ್ರಗಳನ್ನು ಅಭ್ಯಸಿಸಿ, ಅವುಗಳ ಭೌಗೋಳಿಕ ನೀಲನಕ್ಷೆ ರಚಿಸುವುದಕ್ಕೇ ಆರು ತಿಂಗಳು ಬೇಕಾಯಿತು. ಮತಪತ್ರ ಹೇಗಿರಬೇಕು, ಪೆಟ್ಟಿಗೆ ಹೇಗಿರಬೇಕು ಎಂಬುದರ ಬಗ್ಗೆ ಪರಿಣತರೊಂದಿಗೆ ಚರ್ಚೆ ನಡೆಸಲಾಯಿತು.

ಮೊದಲ ಚುನಾವಣೆಯಾದರೂ ಕಣದಲ್ಲಿರುವವರ ಸಂಖ್ಯೆ ಕಡಿಮೆಯೇನಿರಲಿಲ್ಲ. ಲೋಕಸಭೆಯ 498 ಸ್ಥಾನಗಳೂ ಸೇರಿದಂತೆ ಲೋಕಸಭೆ ವಿಧಾನ ಸಭೆ ಎರಡರಿಂದ ಒಟ್ಟು ೪೪೧೨ ಸ್ಥಾನಗಳಿದ್ದವು. ಅಭ್ಯರ್ಥಿಗಳ ಸಂಖ್ಯೆ18.000! ಓದು ಬರಹ ಬಾರದವರೇ ಮತದಾರರೇ ಬಹುಸಂಖ್ಯಾತರಿರುವುದರಿಂದ ಅವರಿಗೆ ಪಕ್ಷಗಳನ್ನು, ಅಭ್ಯರ್ಥಿಗಳನ್ನು ಸುಲಭವಾಗಿ ಗುರುತಿಸಲು ಚಿಹ್ನೆಗಳನ್ನು ನೀಡಲಾಯಿತು. ಅವೂ ಸಹ ದಿನಬಳಕೆಯ, ಮತದಾರರಿಗೆ ಪರಿಚಿತವಿರುವ ವಸ್ತುಗಳಾಗಿರಬೇಕು ಎನ್ನುವುದೂ ಚುನಾವಣಾ ಆಯೋಗದ ನಿಯಮವಾಗಿತ್ತು.

ಅಂತೂ ಇಂತೂ 1951-52ಕ್ಕೆ ಚುನಾವಣೆಗೆ ಭಾರತ ತಯಾರಾಯಿತು. ಸುಮಾರು ಎರಡು ಲಕ್ಷದ ಇಪ್ಪತ್ನಾಲ್ಕು ಸಾವಿರ ಮತಗಟ್ಟೆಗಳು, 22 ಲಕ್ಷ ಸ್ಟೀಲ್ ಮತಪೆಟ್ಟಿಗೆಗಳು ಸಿದ್ಧಗೊಂಡವು. ಮತದಾನ ಪ್ರಕ್ರಿಯೆಗೆ ಸಹಾಯ ಮಾಡಲು ಸುಮಾರು ಮೂರೂವರೆ ಲಕ್ಷ ಅಧಿಕಾರಿಗಳು, ಮತಗಟ್ಟೆಗಳ ಬಳಿ ಕಾವಲು ಕಾಯಲು ಎರಡು ಲಕ್ಷದ ಇಪ್ಪತ್ನಾಲ್ಕು ಸಾವಿರ ಪೊಲೀಸ್ ಅಧಿಕಾರಿಗಳು ನಿಯುಕ್ತಗೊಂಡರು. ಮತಗಟ್ಟೆ ನಿರ್ಮಿಸುವುದೇನೂ ಸುಲಭದ ಮಾತಾಗಿರಲಿಲ್ಲ. ಎಷ್ಟೋ ಹಳ್ಳಿಗಳನ್ನು ತಲುಪಲು ರಸ್ತೆಗಳೇ ಇರಲಿಲ್ಲ. ಚುನಾವಣೆಗೆಂದೇ ವಿಶೇಷವಾಗಿ ಎಷ್ಟೋ ನದಿಗಳಿಗೆ ಸೇತುವೆಗಳನ್ನು ಕಟ್ಟಬೇಕಾಯಿತು. ಹಿಂದೂ ಮಹಾಸಾಗರದಲ್ಲಿರುವ ದ್ವೀಪಗಳಿಗೆ ಮತಪೆಟ್ಟಿಗೆಗಳನ್ನು ಒಯ್ಯಲು ನೌಕಾದಳದ ಹಡಗುಗಳನ್ನು ಬಳಸಿದರು.

ಅನಕ್ಷರಸ್ಥ ಮತದಾರರಿಗೆ ಗೊಂದಲವಾಗದಿರಲು ಸುಕುಮಾರ್ ಅನೇಕ ಉಪಾಯಗಳನ್ನು ಮಾಡಿದರು. ಒಂದು ಮತಗಟ್ಟೆಯಲ್ಲಿ ಒಂದೇ ಮತಪೆಟ್ಟಿಗೆ ಇಡದೆ, ಹಲವು ಮತಪೆಟ್ಟಿಗೆ ಇಡಲಾಯಿತು. ಪ್ರತಿ ಪಕ್ಷಕ್ಕೂ ಅದರ ಚಿಹ್ನೆ ಇರುವ ವಿಶೇಷ ಮತಪೆಟ್ಟಿಗೆ. ಇದರಿಂದ ಮತದಾರ ಮತಗಟ್ಟೆ ಹೊಕ್ಕೊಡನೆ ತಾನು ಬಯಸಿದ ಪಕ್ಷದ ಚಿಹ್ನೆಯನ್ನು ಗುರುತಿಸಿ, ಅದೇ ಪೆಟ್ಟಿಗೆಗೆ ಮತ ಹಾಕಲು ಸುಲಭವಾಗುತ್ತಿತ್ತು. ಅಲ್ಲದೆ ಒಮ್ಮೆ ಮತ ಹಾಕಿದವ ಮತ್ತೊಮ್ಮೆ ಹಾಕುವುದನ್ನು ತಪ್ಪಿಸಲು ಭಾರತೀಯ ವಿಜ್ಞಾನಿಗಳು ತಯಾರಿಸಿದ ವಿಶೇಷ ಶಾಹಿಯನ್ನು ಬಳಸಲಾಯಿತು.
ಈ ಎಲ್ಲ ಯೋಜನೆ, ಪರಿಶ್ರಮಗಳ ಹಿನ್ನೆಲೆಯಲ್ಲಿ 1952ರ ಚುನಾವಣೆ ಭರ್ಜರಿ ಯಶಸ್ಸು ಕಂಡಿತು. ಶೇ 62ರಷ್ಟು ಜನರು ಅಂದರೆ ಸುಮಾರು 17.6 ಕೋಟಿ ಮತದಾರರಲ್ಲಿ 11ಕೋಟಿ ಜನರು ಮತ ಚಲಾಯಿಸಿದರು. ಸ್ವತಂತ್ರ್ಯ ಬಂದು ಆರು ದಶಕ ನಂತರದ ಈ ಬಾರಿಯ ಮತದಾನದ ಶೇಕಡಾವಾರು ನೋಡಿದರೆ ಸುಕುಮಾರಸೇನರ ಪರಿಶ್ರಮ ಅರ್ಥವಾಗುತ್ತದೆ.

ಸುಕುಮಾರರ ಪ್ರಾಮಾಣಿಕತೆಗೆ, ದೂರದೃಷ್ಟಿಗೆ ಸಾಟಿಯೇ ಇಲ್ಲ.1957ರಲ್ಲಿ ನಡೆದ ಎರಡನೇ ಮಹಾ ಚುನಾವಣೆಗೂ ಸುಕುಮಾರಸೇನರೇ ಮುಖ್ಯ ಚುನಾವಣಾಧಿಕಾರಿಯಾಗಿದ್ದರು. ಸ್ವಾರಸ್ಯವೆಂದರೆ ಮೊದಲ ಚುನಾವಣೆಗಿಂತ ಎರಡನೇ ಚುನಾವಣೆಗೆ ನಾಲ್ಕು ಕೋಟಿ ಐವತ್ತು ಲಕ್ಷ ಕಡಿಮೆ ಖರ್ಚಾಯಿತು. ಏಕೆಂದರೆ ಮೊದಲ ಚುನಾವಣೆಗೆ ತಯಾರಿಸಿದ್ದ ಸುಮಾರು ಮೂವತ್ತೈದು ಲಕ್ಷ ಮತಪೆಟ್ಟಿಗೆಗಳನ್ನು ಸುಕುಮಾರ್ ಜತನವಾಗಿರಿಸಿದ್ದರು ! ಒಟ್ಟಿನಲ್ಲಿ ಇಂದು ಭಾರತದಲ್ಲಿ ಪ್ರಜಾಪ್ರಭುತ್ವ ಸದೃಢವಾಗಿ ಬೇರೂರಿ, ಸಶಕ್ತ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಗೆಲ್ಲಲು ಸುಕುಮಾರಸೇನರ ಕಾಣಿಕೆ ಮರೆಯುವಂತಿಲ್ಲ. ಜಯ್ ಹೋ ಹೇಳಬೇಕಾಗಿರುವುದು ತೆರೆಮರೆಯ ಇಂಥ ಹೀರೋಗಳಿಗೆ.

ಬುಧವಾರ, ಮೇ 13, 2009

ಬೆಳೆಯುವ ಪರಿ ಸೋಜಿಗದಲಿ ನೋಡಿ


'ನೋಡ್ರೀ, ಅವನ ಚಡ್ಡಿ ಅವನೇ ಹಾಕಿಕೊಳ್ಳುತ್ತಿದ್ದಾನೆ. ಅಂತೂ ನನ್ ಮಗ ದೊಡ್ಡವನಾಗಿಬಿಟ್ಟ!' ಅಂತ ಸಂಭ್ರಮದ ದನಿಯಲ್ಲಿ ತಾಯೊಬ್ಬಳು ಹೇಳುತ್ತಿದ್ದರೆ ಉಳಿದವರ ಮುಖದಲ್ಲಿ ಮುಸಿ ಮುಸಿ ನಗು. ಅವರಿಗೆ ಚನ್ನಾಗಿ ನೆನಪಿದೆ, ಆ ಮಗು ಮೊದಲು ಅಂಬೆಗಾಲಿಟ್ಟಾಗ, ಎದ್ದು ನಿಲ್ಲಲು ಕಲಿತಾಗ, ಅಮ್ಮಾ ಎಂದಾಗ, 'ನಾನು ಚೂಲಿಗೆ ಹೋತಿನಮ್ಮಾ..'ಎಂದು ರಾಗ ಎಳೆದಾಗ ಅವಳು ಅದೇ ಮಾತನ್ನು ಇಷ್ಟೇ ಸಂಭ್ರಮದಲ್ಲಿ ಹೇಳಿದ್ದಳು. ಈಗಲೂ ಅವಳ ಆ ವಾಕ್ಯದಲ್ಲಿ ಅದೇ ಬೆರಗು.

ಹತ್ತು ವರ್ಷಗಳ ನಂತರ ಬಂದು 'ಓಓ.. ಎಷ್ಟೊಂದು ದೊಡ್ಡವನಾಗಿದ್ದಾನೆ!' ಎಂದು ಉದ್ಗರಿಸುವುದು ಒಂದು ರೀತಿ. ಆದರೆ ಪ್ರತಿ ನಿತ್ಯ, ಪ್ರತಿ ಕ್ಷಣ ಆ ಮಗುವಿನ ಆಟ ಪಾಠಗಳಲ್ಲಿ ಭಾಗಿಯಾಗುತ್ತಿದ್ದರೂ ಯಾವುದೋ ಒಂದು ಕ್ಷಣದಲ್ಲಿ ಅರೇ! ಇವನು ಯಾವಾಗ ಇಷ್ಟೊಂದು ದೊಡ್ಡವನಾದ, ನನಗೆ ಗೊತ್ತೇ ಆಗಲಿಲ್ಲವಲ್ಲ! ಎಂದು ಸೋಜಿಗ ಪಡುವುದಿದೆಯಲ್ಲ, ಅದು ಬೇರೆಯದೇ ರೀತಿಯದು. ಮೊದಲ ಬಾರಿ ಸ್ಕೂಲ್ ಯೂನಿಫಾರ್ಮ್ ಹಾಕಿಕೊಂಡು ಮಗು ಸ್ಕೂಲ್‌ಗೆ ಹೊರಟಾಗ, ಹತ್ತಾರು ಬಾರಿ ಬಿದ್ದು ಸೈಕಲ್ ಹೊಡೆಯಲು ಕಲಿತವ ಒಮ್ಮಲೆ ಬೈಕ್‌ನಲ್ಲಿ ಬುರ್‌ಎಂದು ಬಂದಾಗ, ಹೊಸ ಸೆಲ್ ಫೋನ್ ಬಳಸುವುದು ಹೇಗೆಂದು ಎಂಟು ವರ್ಷದ ಮಗನಿಂದ ಕಲಿಯುವಾಗ, ಮಗಳು ಮದುವೆಯಾಗಿ ಗಂಡನ ಜತೆ ನಿಂತಾಗ ಹೀಗೆ ಅನ್ನಿಸುವುದುಂಟು.

ಊರಿಗೆ ಹೋದಾಗಲೆಲ್ಲಾ ಮೊದಲು ನಾನು ನೆಟ್ಟ ತೆಂಗಿನ ಮರದೆಡೆ ಓಡುತ್ತೇನೆ, ನನಗಿಂತ ಎತ್ತರ ಬೆಳೆದಿದೆ ಎಂದು ಕಣ್ಣಲ್ಲೇ ಅಳೆಯುತ್ತಾ ಖುಷಿ ಪಡುತ್ತಿದ್ದಾಗ, ಪುಟ್ಟ ತಂಗಿ ಮೆಲ್ಲನೆ ನನ್ನ ದುಪ್ಪಟ್ಟ ಎಗರಿಸಿರುತ್ತಾಳೆ. ಬಾಗಿಲ ಹೊರಗೆ ಬಿಟ್ಟಿದ್ದ ನನ್ನ ಹೀಲ್ಡ್ ಚಪ್ಪಲಿ ಹಾಕಿಕೊಂಡು, ನನ್ನದೇ ದುಪ್ಪಟ್ಟವನ್ನ ತನ್ನ ಫ್ರಾಕ್ ಮೇಲೆ ಹಾರಾಡಿಸುತ್ತಾ ರಸ್ತೆಗಿಳಿಯುತ್ತಾಳೆ. ಅಭ್ಯಾಸವಿಲ್ಲದ, ಸರಿಯಾದ ಅಳತೆಯದೂ ಅಲ್ಲದ ಚಪ್ಪಲಿ ಕಾಲಿಗೆ ತೊಡರಿ ಬೀಳುತ್ತಿದ್ದರೂ ತಾನೂ 'ಅಕ್ಕನಂತಾದೆ' ಎಂದು ಬೀಗುತ್ತಾ ಸಾಗುವ ಅವಳ ನಡಿಗೆ ನನಗ್ಯಾವತ್ತೂ ಸೋಜಿಗ.

ಆದರೆ ಕೆಲವರಿಗೆ ಬೆಳವಣಿಗೆ ಬೇಕಿಲ್ಲ. ನಾಳೆ ಏನಾದೀತೆಂಬ ಸಹಜ ಕುತೂಹಲದ ಜತೆಗೇ ಚೂರು ದಿಗಿಲು, ಮೂವತ್ತು ದಾಟಿದವರ ಹುಟ್ಟುಹಬ್ಬದಂತೆ ಅದು ಅನಪೇಕ್ಷಿತ ಅತಿಥಿ. ಆದರೂ ಕಾಲ ನಿಲ್ಲುವುದಿಲ್ಲ. 'ನನ್ನ ಮಗ ಬೇರೆ ಜಾತಿ ಹುಡುಗಿಯನ್ನು ಮದುವೆಯಾಗುತ್ತೇನೆಂದಾಗ ಅವನನ್ನು ಮನೆ ಬಿಟ್ಟು ಓಡಿಸಿಬಿಟ್ಟಿದ್ದೆ. ಈಗ ನನ್ನ ಮುಪ್ಪಿನ ಕಾಲಕ್ಕೆ ಮಗ-ಸೊಸೆ ತಮ್ಮ ಮನೆಯಲ್ಲಿಟ್ಟುಕೊಂಡಿದ್ದಾರೆ. ಒಂದು ದಿನವೂ ಆ ಘಟನೆಯ ಬಗ್ಗೆ ಚಕಾರವೆತ್ತಿಲ್ಲ, ಕೊನೆಗೂ ನನ್ನ ಮಗ ನನಗಿಂತ ದೊಡ್ಡವನಾಗಿಬಿಟ್ಟ!' ಎಂದು ಹಿರಿಯರೊಬ್ಬರು ಕಣ್ದುಂಬಿಕೊಂಡರು. ಆ ಸೋತ ದನಿಯಲ್ಲೂ ಅಚ್ಚರಿಯ ಹೊಳಪಿತ್ತು.

ಸೋಮವಾರ, ಮೇ 4, 2009

ಇದು 'ಯಾಂತ್ರಿಕ ಪ್ರೀತಿ'ಯಲ್ಲ!


ಶಿವಮೊಗ್ಗದಲ್ಲಿ ಇಕ್ಬಾಲ್ ಅಹಮದ್ ಎಂಬ ರೈಲ್ವೆ ಮೆಕಾನಿಕ್‌ಗೆ ಶಿವಮೊಗ್ಗ-ತಾಳಗುಪ್ಪ ಮಾರ್ಗದ ಪುಟಾಣಿ ರೈಲೆಂದರೆ ಅದೇನೋ ಅಕ್ಕರೆ.( ಅದೆಷ್ಟು ಪುಟಾಣಿ ಎಂದರೆ ಕೇವಲ 52 ಸೀಟಿನದು. ಅದಕ್ಕೆ ಟ್ರೈನ್ ಕಾರ್ ಎಂದೇ ಕರೆಯುವುದು.) ಹೊರಗಡೆ ಆಟವಾಡಿ ಗಾಯ ಮಾಡಿಕೊಂಡು ಬಂದ ಪುಟ್ಟ ಮಗುವನ್ನು ಸುಶ್ರೂಷೆ ಮಾಡುವಂತೆ ಆ ರೈಲನ್ನು ಆರೈಕೆ ಮಾಡುತ್ತಿದ್ದರು. ತಾವಿಲ್ಲದಿದ್ದಾಗ ಇತರ ಕೆಲಸಗಾರರು ಕುಡಿದು ಗಾಡಿಯನ್ನು ಮುಟ್ಟಿದರೆ ಇವರು ಕಿಡಿಕಿಡಿ. ಅದೇ ಆತಂಕದಲ್ಲಿ ಕೆಲಸಕ್ಕೆ ಎಂದೂ ರಜೆ ತೆಗೆದುಕೊಳ್ಳುತ್ತಿರಲಿಲ್ಲ. ಅದರ ಚಾಲಕನಿಗೂ ಇವರದೇ ತರಬೇತಿ. ಒಮ್ಮೆ ಅನಂತಪುರದ ಬಳಿ ೧೫ ದಿನಗಟ್ಟಲೇ ಕೆಟ್ಟುನಿಂತಾಗ, ಗಾಡಿ ಬಿಟ್ಟಿರಲಾರದೇ ಹಳಿ ಸರಿ ಇಲ್ಲದಿದ್ದರೂ ಸಾಹಸ ಮಾಡಿ ಶಿವಮೊಗ್ಗಕ್ಕೆ ತಂದಿದ್ದಿದೆ. ಆದರೆ ಇತ್ತೀಚೆಗೆ ತಾಳಗುಪ್ಪ ಮಾರ್ಗ ಬ್ರಾಡ್‌ಗೇಜ್‌ಗೆ ಬದಲಾಗುತ್ತಿದ್ದಂತೆ ಈ ರೈಲು ಮ್ಯೂಸಿಯಂ ಸೇರಿತು. ಮಗುವನ್ನು ಹಾಸ್ಟೆಲ್‌ಗೆ ಬಿಟ್ಟುಬಂದ ತಾಯಿಯಂತೆ ಇವರು ಕೊರಗಿದರು. ಈಗಲೂ ವಾರಕೊಮ್ಮೆಯೋ, ಹದಿನೈದು ದಿನಕ್ಕೊಮ್ಮೆಯೋ ನಂಜನಗೂಡಿನಲ್ಲಿರುವ ರೈಲ್ವೇ ಮ್ಯೂಸಿಯಂಗೆ ಗಾಡಿಯನ್ನು ನೋಡಲೆಂದೇ ಹೋಗುತ್ತಾರೆ. ಸ್ವಲ್ಪ ದೂರ ಚಲಾಯಿಸಿ, ಸರಿಯಾಗಿದೆ ಎಂದು ಸ್ಪಷ್ಟಪಡಿಸಿಕೊಂಡು ಮರಳುತ್ತಾರೆ, ಮತ್ತೆ ಅಲ್ಲಿಗೆ ಹೋಗುವ ದಿನಾಂಕ ನಿಗದಿ ಪಡಿಸಿಕೊಂಡೇ.

ಮೊನ್ನೆ ಮೇ ಒಂದರಂದು ನಾನು ರಜೆಯ ವಿರಾಮದಲ್ಲಿ ಮನೆಯಲ್ಲಿದ್ದೆ. ಟಿವಿಯಲ್ಲಿ ಕಾರ್ಮಿಕ ದಿನಾಚರಣೆ, ಶೋಷಣೆ, ಬಡತನ ಎಂದೇನೋ ಬರುತ್ತಿತ್ತು. ನಾನು ಜಯಂತ್ ಕಾಯ್ಕಿಣಿಯವರ ಕಥಾ ಸಂಕಲನದಲ್ಲಿ ಮುಳುಗಿದ್ದೆ. ಅದರ ಕಥೆಯೊಂದರಲ್ಲಿ ನಾಯಕ ತನ್ನ ಟ್ರಕ್ಕಿನೊಂದಿಗೆ ಅಂಥ ಭಾವನಾತ್ಮಕ ಸಂಬಂಧ ಇಟ್ಟುಕೊಂಡ ಪ್ರಸಂಗವಿದೆ. ಅಲ್ಲಿ ಟ್ರಕ್ ಅವನ ಗೆಳೆಯ, ಪ್ರೇಯಸಿ, ತುಂಟ ಮಗು, ಕಷ್ಟಕಾಲದಲ್ಲಿ ಗಂಭೀರವಾಗಿ ಸಮಾಧಾನಿಸಬಲ್ಲ ಹಿರಿಯ. ಕೂಡಲೇ ನನಗೆ ಇಕ್ಬಾಲರೂ, ಆ ಟ್ರೈನ್‌ಕಾರೂ ನೆನಪಾಯಿತು.
ಯಂತ್ರದೊಂದಿಗೆ ಕೆಲಸ ಮಾಡುತ್ತಾ ಮಾಡುತ್ತಾ ಮನುಷ್ಯನೂ ಯಂತ್ರದಂತಾಗುತ್ತಾನೆ ಎನ್ನುವುದು ಒಂದು ಸಾಮಾನ್ಯ ಅಭಿಪ್ರಾಯ. ಚಾರ್ಲಿ ಚಾಪ್ಲಿನಂಥ ಮಹಾನ್ ಪ್ರತಿಭಾವಂತರು, ಚಿಂತಕರು ಹಲವು ರೀತಿಯಲ್ಲಿ ಆ ಭಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಮನುಷ್ಯನ ಭಾವನಾ ಲೋಕ ಎಷ್ಟು ವಿಚಿತ್ರವೆಂದರೆ ಅಂಥ ಯಂತ್ರದೊಂದಿಗೂ ತನ್ನ ಸಂಬಂಧವನ್ನು ಸೃಷ್ಟಿಸಿಕೊಳ್ಳಬಲ್ಲದು. ತನ್ನ ಸಂವೇದನೆಯನ್ನೂ ರೂಪಿಸಿಕೊಳ್ಳಬಲ್ಲದು. ಬಹುಶ: ಮನುಷ್ಯರ ಜತೆಗಿದ್ದೂ ಇದ್ದೂ ಯಂತ್ರವೂ ಮನುಷ್ಯನಂತಾಗಿಬಿಟ್ಟಿರುತ್ತದೆಯೇನೋ, ಮನಸುಳ್ಳವರ ಪಾಲಿಗೆ!