ಸೋಮವಾರ, ಜೂನ್ 22, 2009

ತುಂಗೆಗೆ ಮಳೆರಾಯನೊಂದಿಗೆ ಮದುವೆಯಾಯಿತಂತೆ!


ಹರಿವ ಒರತೆಯನ್ನು ಕಾಪಿಟ್ಟುಕೊಂಡು ಗಂಭೀರವಾಗಿ ನಡೆಯುವ ಹುಡುಗಿ, ಅದು ಹೇಗೆ ಬದಲಾದಳೋ! ನಿತ್ಯ ನೋಡುವವರಿಗೇ ಬೆರಗು. ತಲೆ ಬಗ್ಗಿಸಿ ದಾರಿ ತುಳಿಯುತ್ತಿದ್ದವಳು ಬಿಗುಮಾನ ಸಡಿಲಿಸಿ ಚಿಮ್ಮುತ್ತಿದ್ದಾಳೆ, ನಡಿಗೆಯಲ್ಲಿ ಅಪರಿಚಿತರೂ ಗುರುತಿಬಹುದಾದ ಹೊಸ ಒನಪು, ವಯ್ಯಾರ. ಬಿಸಿಲು ಚೆಲ್ಲಿ ನಕ್ಕಂತೆ ಮಾಡಿ ಕದ್ದೋಡಿ ಬಂದು ಮುತ್ತಿಡುತ್ತಿರಬೇಕು ಅವಳ ಗಂಡ, ಸಾಕ್ಷಿ ಬೇಕಾದರೆ ಅವಳ ಮುಖ ನೋಡಿ, ದಟ್ಟ ಕೆಂಪು. ಕಾಲನ ಮೇಲೆ ಭರವಸೆಯಿಟ್ಟು ವಿರಹದ ಬಿಸಿ ಸಹಿಸಿದ್ದ ಮನಕ್ಕೆ ತಂಪಿನ ಮೊದಲ ಮುತ್ತು ಬಿದ್ದಿದ್ದೇ ಸಂಭ್ರಮದ ಮಿಂಚು ಹರಿದಿದೆ. ಒಂದು ಎರಡು ಮೂರು... ಸುರಿದ ಹನಿಗಳ ಲೆಕ್ಕವಿಲ್ಲ. ಹರಿದಷ್ಟೂ ಪ್ರೀತಿ, ಉಕ್ಕಿದಷ್ಟೂ ಖುಷಿ. ಛತ್ರಿಯ ಸಂದಿಯಿಂದ ನವದಂಪತಿಯ ರಾಸಲೀಲೆ ಕದ್ದು ನೋಡಿದವರಿಗೆ ಕಂಡದ್ದು ಅವರಿಬ್ಬರ ನಡುವೆ ಬಾಗಿ ನಿಂತ ಕಾಮನಬಿಲ್ಲು ಮಾತ್ರ.

ಉಕ್ಕಿ ಹರಿದಿದೆಯಂತೆ ಪಕ್ಕದೂರಲಿ ಪುಟ್ಟ ಕೆರೆ ಕೋಡಿ ಎಂದು ಮಾತನಾಡುತ್ತಿದ್ದವರು ನೋಡುನೋಡುತ್ತಿದ್ದಂತೆ ಇಲ್ಲಿ ಹರವು ಹೆಚ್ಚಿದೆ, ಹನಿ ಬಿದ್ದಷ್ಟೂ ಬಾಚಿ ಒಳಗೆಳೆದುಕೊಳ್ಳುವ ಆಸೆ. ಸುಖದ ಸ್ಪರ್ಶದಿಂದ ಅರೆಬಿರಿದ ಕಣ್ಣಲ್ಲಿ ಮುಗಿಲು ಕಟ್ಟಿದ ಕಪ್ಪು ಮೋಡದ ಕನಸು. ಸಡಗರದ ನಡೆಗೆ ಅಡ್ಡವಾಗುವ ಕೃತಕ ಅಣೇಕಟ್ಟು ಅವಳಿಗಿಷ್ಟವಿಲ್ಲವಂತೆ. ದುಮುದುಮು ಎನ್ನುತ್ತಲೇ ತುಂಬುತ್ತದೆ, ದಾಟಿ ನುಗ್ಗುತ್ತದೆ ಸಿರಿಯ ಹೆರುವ ಬಯಕೆ. ಕಾದು ನಿಂತಿದೆ ಅವಳ ತವರು ಮನೆ ಸೀಮಂತದ ಸೀರೆ ಉಡಿಸಲು. ಮೊಳಕೆಯೊಡೆದ ಬೀಜದಲಿ ಇಣುಕಿ ನೋಡುತಿದೆ ಹಸಿರ ಉಸಿರು. ಹೊಳೆಯುತಿದೆ ಉಬ್ಬಿದ ಹಸಿರ ಒಡಲಿನಂಚಿನಲ್ಲಿ ಹೊಳೆವ ಚಿನ್ನದ ಮಿಂಚು. ಏಳನೆಯ ತಿಂಗಳಲಿ ಮಡಿಲು ತುಂಬಲಿಕ್ಕಿದೆಯಂತೆ, ಮುಂಬರುವ ನನಸಿಗೆ ಇಂದೇ ತೊಟ್ಟಿಲು ಕಟ್ಟುವ ತವಕ. ಆದರೇನಂತೆ ಅವಳೀಗ ಸಂತೃಪ್ತೆ , ಮುಂಬರುವ ದಿನಗಳಲಿ ತೂಗಿ ತೊನೆಯಲಿದೆ ಫಸಲು... ಕನಸು ಕಣ್ಣಿನ ರೈತನ ಮನೆಯಿಂದ ತೇಲಿ ಬರುತಲಿದೆ ಮಗುವಿನ ನಗುವು.

ಗುರುವಾರ, ಜೂನ್ 4, 2009

ಬಣ್ಣ ಬಿಳಿಯಾಗದಿರಲಿ, ಬೇಗನೆ ಬೆಳಕಾಗದಿರಲಿ!


"ಬೆಡ್‌ಲೈಟೇ ಇಲ್ಲದಿದ್ದರೆ ಕನಸು ಕಾಣಿಸೋದೇ ಇಲ್ಲ, ಅಲ್ವಾ ಅತ್ತೆ?" ಐದು ವರ್ಷದ ಸೊಸೆಯ ಮುದ್ದು ಪ್ರಶ್ನೆ. ಹೊಸದಾಗಿ ತಂದಿದ್ದ ಬೆಡ್‌ಲೈಟಿನ ಬಣ್ಣಬಣ್ಣದ ಬೆಳಕ ನೋಡುತ್ತಾ ಅದರಲ್ಲಿ ಚಲಿಸುವ ಥರಾವರಿ ಮೀನಿನ ಚಿತ್ರಗಳನ್ನ ನೋಡುತ್ತಾ ಕೂತವಳ ಕಣ್ಣಲ್ಲಿಯೂ ಬೆರಗಿನ ಬಣ್ಣ. ಪ್ರಕಾಶಮಾನವಾದ ರೂಮಿನ ಟ್ಯೂಬ್‌ಲೈಟ್ ಆರಿದ ನಂತರ ಹತ್ತುವ ಬೆಡ್‌ಲೈಟ್ ಸೃಷ್ಟಿಸುವ ಆಪ್ಯಾಯಮಾನವಾದ ನಸುಕೆಂಪು ಬೆಳಕು ಅವಳಿಗಿಷ್ಟ. ಪ್ರತಿ ದಿನದಂತೆ ನಾನು ರಾಜಕುಮಾರಿಯನ್ನು ಹುಡುಕುತ್ತಾ ಕುದುರೆಯೇರಿ ಬರುವ ರಾಜಕುಮಾರನ ಕತೆ ನೆನಪಿಸಿಕೊಂಡು ಹೇಳುತ್ತಿದ್ದಂತೆ ಅವಳು ನಿದ್ದೆಗೆ ಜಾರಿದರೂ ಗುಲಾಬಿ ಎಸಳಿನಂಥ ತುಟಿಗಳ ಮೇಲೆ ಆ ಬಣ್ಣದ ದೀಪ ಚುಂಬಿಸಿ ಮತ್ತಷ್ಟು ಕೆಂಪಾಗಿತ್ತು...

ನನಗೆ ಗೊತ್ತಿಲ್ಲವೇ, ಈ ಬಣ್ಣದ ದೀಪ ಹೊತ್ತು ತರುವ ಜಾದೂ ಜಗತ್ತು? ಚಿಕ್ಕವಳಿದ್ದಾಗ ನಮ್ಮ ಊರಿನಲ್ಲಿ ಸುಗ್ಗಿಕಾಲದಲ್ಲಿ ಪೇರಿಸಿಟ್ಟ ಬಣವೆ ಕಾಯಲು ಅಪ್ಪ ಹೋಗುತ್ತಿದ್ದ. ಅಪ್ಪನೊಂದಿಗೆ ಮಕ್ಕಳ ದಂಡೂ ಹೋಗುತ್ತಿತ್ತು. ಆ ಕತ್ತಲಲ್ಲಿ ಗದ್ದೆಯ ಬಯಲಿನಲ್ಲಿ ಇರುತ್ತಿದ್ದ ಬೆಳಕು ಬರೀ ಚಂದ್ರ, ನಕ್ಷತ್ರಗಳದ್ದು ಮಾತ್ರವಾಗಿರಲಿಲ್ಲ, ಜತೆಗೆ ಮಿಂಚು ಹುಳಗಳದ್ದೂ ! ಹಾರುವ ಅವುಗಳನ್ನು ಹಿಡಿಯಲು ನಾವೂ ಹಾರಾಡುತ್ತಾ ಏನೆಲ್ಲಾ ಸರ್ಕಸ್ ಮಾಡಬೇಕಾಗುತ್ತಿತ್ತು... ಅದು ನಮ್ಮ ಕೈಗೆ ಸಿಕ್ಕಿಬಿಟ್ಟರೆ ಜಗತ್ತೇ ನಮ್ಮ ಕೈಗೆ ಸಿಕ್ಕಹಾಗೆ ಬೀಗುತ್ತಿದ್ದೆವು. ಅಲ್ಲಿರುತ್ತಿದ್ದ ಎರಡು ಮೂರು ಗಂಟೆಯಲ್ಲಿ ಹತ್ತಿಪ್ಪತ್ತು ಹುಳಗಳನ್ನಾದರೂ ಹಿಡಿದು ಅವನ್ನು ಖಾಲಿ ಬೆಂಕಿಪೆಟ್ಟಿಗೆಯಲ್ಲಿಟ್ಟು ಜೋಪಾನವಾಗಿ ಮನೆಗೆ ತಂದು ಯಾರಿಗೂ ಕಾಣದ ಹಾಗೆ ಮುಚ್ಚಿಡುತ್ತಿದ್ದೆವು.

ರಾತ್ರಿ ಮಲಗುವಾಗ ಸೊಳ್ಳೆ ಪರದೆ ಕಟ್ಟಿಕೊಂಡ ನಂತರ ಅದರೊಳಗೆ ಮಿಂಚು ಹುಳಗಳನ್ನು ಬಿಟ್ಟುಬಿಟ್ಟರೆ... ನಮ್ಮ ಹಾಸಿಗೆಯಲ್ಲಿಯೇ ಮಿನುಮಿನುಮಿನುಗುವ ನಕ್ಷತ್ರಲೋಕ. ಕರೆಂಟೇ ಇಲ್ಲದ ನಮ್ಮ ಮನೆಯಲ್ಲಿ ಸೊಳ್ಳೆ ಪರದೆಯೊಳಗೇ ಸುತ್ತಾಡುತ್ತಿರುವ ಈ ನಕ್ಷತ್ರಗಳು ಬೀರುವ ಹಸಿರು ಮಿಶ್ರಿತ ಹಳದಿ ಬಣ್ಣದ ಬೆಳಕಲ್ಲಿ ಮಲಗಿದರೆ... ಕಾಣುವ ಪ್ರತಿ ಕನಸಿಗೂ ಅಧ್ಭುತ ಲೈಟಿಂಗ್ ಎಫೆಕ್ಟ್! ಜತೆಗೆ ದೂರದಲ್ಲೆಲ್ಲೋ ರಾಜಕುಮಾರನ ಕುದುರೆಯ ಖುರಪುಟದ ಸದ್ದು ಕೇಳಿದಂತಾಗುತ್ತಿದ್ದರೆ ಕಂಬಳಿಯೊಳಗಿದ್ದೇ ನಾವೆಲ್ಲ ಪ್ರಾರ್ಥಿಸುತ್ತಿದ್ದೆವು: "ದೇವರೇ, ಬಣ್ಣಗಳೆಲ್ಲಾ ಬಿಳಿಯಾಗದಿರಲಿ... ಬೇಗನೆ ಬೆಳಕಾಗದಿರಲಿ...!’

ಚಿತ್ರ ಕೃಪೆ: ಈಸಿಡ್ರೀಂಅನಲಿಸಿಸ್‌.ಕಾಂ