ಅಬ್ಬಾ! ಅಂತೂ ಆಷಾಢ ಮುಗಿಯಿತು ! ಈ ನಿರಾಳತೆಯ ನಿಟ್ಟುಸಿರೆಳೆಯಲು ಕಾದ ದಿನಗಳೆಷ್ಟು? ಎಲ್ಲರೂ ಕ್ಯಾಲೆಂಡರ್ ನೋಡಿ ಒಂದೇ ತಿಂಗಳು ಎನ್ನುತ್ತಾರೆ. ಇವರೆಲ್ಲಾ ಗಡಿಯಾರದ ಸೆಕೆಂಡಿನ ಮುಳ್ಳು ತಿರುಗುವುದು ನೋಡುವುದೇ ಇಲ್ಲವೆನಿಸುತ್ತದೆ. ಆ ಮುಳ್ಳೋ, ಯಾರೋ ಕಾಯುವವರೇ ಹಾಗೆಂದು ಹೆಸರಿಟ್ಟಿರಬೇಕು, ನಿಧಾನವಾಗಿ ಚಲಿಸುತ್ತಾ ಪದೇ ಪದೆ ನೋಡುವ ಕಣ್ಣಿಗೆ ಮುಳ್ಳಾಗಿ ಚುಚ್ಚುತ್ತಿರುತ್ತದೆ.
ನನಗಾದರೂ ಏನು ಗೊತ್ತು, ಹೀಗೆ ಆಗುತ್ತದೆಯೆಂದು. ಆಷಾಢ ಪ್ರಾರಂಭವಾಗುವ ನಾಲ್ಕು ದಿನ ಮೊದಲೇ ನಾನು ಊರಿಗೆ ಹೋಗಲು ತುದಿಗಾಲಲ್ಲಿ ನಿಂತಿದ್ದೆನಲ್ಲ. "ಹೇಗಿರುವೆಯೇ ಹುಡುಗಿ, ನನ್ನ ಬಿಟ್ಟು?’ ಎಂಬ ಪಿಸುಮಾತಿನ ಪ್ರಶ್ನೆ ನನ್ನ ಸಂಭ್ರಮದಲ್ಲಿ ಕಿವಿಗೇ ತಾಕಿರಲಿಲ್ಲ. ಅಣ್ಣ ಬಂದು ಕರೆಯುತ್ತಿದ್ದಂತೆ ಊರಿಗೆ ಹಾರಿಬಿಟ್ಟಿದ್ದೆ.
ಮೊದಲೆರಡು ದಿನ ಏನೆಲ್ಲಾ ಸಂಭ್ರಮ, ಅಮ್ಮನೊಡನೆ ಮಾತನಾಡುವಾಗ ’ನಮ್ಮನೆ’ ಅಂತ ಯಾವುದಕ್ಕೆ ಹೇಳಬೇಕೋ ಗೊತ್ತಾಗದೆ ಹೇಳಿ ನಾಲಿಗೆ ಕಚ್ಚಿಕೊಳ್ಳುತ್ತಿದ್ದೆನಲ್ಲ. ಆದರೆ ಮೂರನೆಯ ದಿನ ಸುರಿದ ಮಳೆಗೆ ಫೋನ್ ಡೆಡ್ ಆಯ್ತಲ್ಲ, ಆಗಲೇ ಶುರುವಾಗಿದ್ದುದು ನಿಜವಾದ ಆಶಾಢ. ಐದನೇ ದಿನ ಕಳೆಯುವಷ್ಟರಲ್ಲಿ ಕಣ್ಣು ಕ್ಯಾಲೆಂಡರ್ ಹುಡುಕುತ್ತಿತ್ತು. ಮನಸಿನಲ್ಲಾಗಲೇ ಶ್ರಾವಣನ ಬಯಕೆ.
ರಚ್ಚೆ ಹಿಡಿವಂತೆ ಸುರಿವ ಮಳೆಯನ್ನು ನೋಡುತ್ತಾ ಕುಳಿತಿರುವಾಗೇಕೋ ಕೆ.ಎಸ್.ನ ರವರ ’ತೌರ ಸುಖದೊಳಗೆನ್ನ ಮರೆತಿಹೆನು ಎನ್ನದಿರಿ, ನಿಮ್ಮ ಪ್ರೇಮವ ನೀವೇ ಒರೆಯಲಿಟ್ಟು’ ಹಾಡು ಅಚಾನಕ್ಕಾಗಿ ಬಾಯಿಗೆ ಬಂದಿದ್ದಾದರೂ ಹಗಲಿನಲಿ ನೆನಪು ಹಿಂಡುವುದು, ಇರುಳಿನಲಿ ಕನಸು ಕಾಡುವುದು ಸುಳ್ಳಾಗಿರಲಿಲ್ಲವಲ್ಲ. ಆಮೇಲೆ ತಾನೆ ತುಳಸಿಗೆ ನಮಸ್ಕರಿಸುವಾಗ ಪಕ್ಕದಲ್ಲಿ ಕೃಷ್ಣನಿರುವುದೂ, ಆಕಾಶ ನೋಡುವಾಗ ಜೋಡಿ ನಕ್ಷತ್ರ ನಗುತ್ತಿರುವುದೂ, ಕ್ಯಾಲೆಂಡರ್ನಲ್ಲಿರುವ ದೇವರೆಲ್ಲರೂ ದಂಪತ್ ಸಮೇತ ಕುಳಿತಿರುವುದೂ ಕಣ್ಣಿಗೆ ಬೀಳತೊಡಗಿದ್ದುದು. ಆಮೇಲೇನು? ’ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ...’
ಅಮ್ಮನ ಥರಾವರಿ ಉಂಡೆಗಳ ಸಿದ್ಧತೆ, ಮಕ್ಕಳು ಬಾಗಿಲಿಗೆ ಜೋಕಾಲಿ ಕಟ್ಟತೊಡಗಿದ್ದು "ತೌರ ಪಂಜರದೊಳಗೆ ಸೆರೆಯಾದ ಗಿಳಿ’ಗೆ ಕಂಡಿದ್ದೇ ಉಸಿರು ಬಂದಂತಾಗಿಬಿಟ್ಟಿತು. ಇನ್ನೇನು ಶ್ರಾವಣ ದೂರವಿಲ್ಲ. ಆದರೂ ಬಾಗಿಲಿಗೆ ಕಟ್ಟಿದ ಜೋಕಾಲಿಯಲ್ಲಿ ಕುಳಿತು ಎಷ್ಟು ಜೋರಾಗಿ ಚಿಮ್ಮಿದರೂ ಹೊರಗೆ ಹೋದಂತಾಗುತ್ತದೆ ಅಷ್ಟೇ, ಆದರೆ ಮತ್ತೆ ಅಷ್ಟೇ ಒಳ ತಳ್ಳುತ್ತದೆ...ನಿರಾಶೆಯ ಮಡುವಿಗೆ.
ಇಲ್ಲ, ಅದೇನು ನಿರಂತರವಲ್ಲ, ಯಾವುದೋ ಒಂದು ಆಶಾಢದ ರಾತ್ರಿಗಾದರೂ ಶ್ರಾವಣದ ಬೆಳಗು ಕಾಯುತ್ತಿರುತ್ತದೆಯಂತೆ. ಅದೇ ಕನಸಿನಲ್ಲಿ ಬೆಳಗಾಗಿ ಬಾಗಿಲು ತೆಗೆದರೆ ಎದುರಿಗೆ ನಿಂತಿದ್ದಾನಲ್ಲ ಶ್ರಾವಣ. ಅವನೊಂದಿಗೆ ನಗುತ್ತಿರುವ ಹಬ್ಬಗಳ ಕಲರವ...
ಶುಕ್ರವಾರ, ಜುಲೈ 24, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ರಂಜನಿ
ಪ್ರತ್ಯುತ್ತರಅಳಿಸಿಚೆನ್ನಾಗಿ ಇದೆ ಆಷಾಡ ಮಾಸದಲ್ಲಿ ಹೆಣ್ಣಿನ ಮನಸಿನ ತಳಮಳ......ವೆರಿ ನೈಸ್....
ಆಷಾಡದಲ್ಲಿ ಹೆಣ್ಣಿನ ಮನಸ್ಸಿನ ದುಗುಡವನ್ನು ತುಂಬಾ ಚೆನ್ನಾಗಿ ಬರೆದಿದ್ದೀರಿ. ಹೀಗೂ ಇರಬಹುದಲ್ವ ಅನ್ನಿಸಿ ಖುಷಿಯಾಯ್ತು. ನಮ್ಮ ಮೊದಲ ಆಷಾಡದಲ್ಲಿ ತಿರುಪತಿ ಇತ್ಯಾದಿ ಊರುಗಳನ್ನು ಸುತ್ತಿ ಕಳೆದದ್ದು ನೆನಪಾಯ್ತು!
ಪ್ರತ್ಯುತ್ತರಅಳಿಸಿಶ್ರಾವಣನ ನಿರೀಕ್ಷೆಯನ್ನು ಸೊಗಸಾಗಿ ವರ್ಣಿಸಿದ್ದೀರಿ... "ಇಲ್ಲ, ಅದೇನು ನಿರಂತರವಲ್ಲ, ಯಾವುದೋ ಒಂದು ಆಶಾಢದ ರಾತ್ರಿಗಾದರೂ ಶ್ರಾವಣದ ಬೆಳಗು ಕಾಯುತ್ತಿರುತ್ತದೆಯಂತೆ. ಅದೇ ಕನಸಿನಲ್ಲಿ ಬೆಳಗಾಗಿ ಬಾಗಿಲು ತೆಗೆದರೆ ಎದುರಿಗೆ ನಿಂತಿದ್ದಾನಲ್ಲ ಶ್ರಾವಣ. ಅವನೊಂದಿಗೆ ನಗುತ್ತಿರುವ ಹಬ್ಬಗಳ ಕಲರವ... " ಈ ಸಾಲುಗಳು ಇಷ್ಟವಾದವು... ಹಾಗು ಯಾವುದು ನಿರಂತರವಲ್ಲ ಎನ್ನುವ ಭಾವನೆ ಎಲ್ಲರಲ್ಲೂ ಮೂಡಬೇಕು... ಚಂದದ ಬರಹಕ್ಕೆ ಧನ್ಯವಾದಗಳು..
ಪ್ರತ್ಯುತ್ತರಅಳಿಸಿಶರಶ್ಚಂದ್ರ ಕಲ್ಮನೆ
ಶ್ರಾವಣ ಮಾಸ ಬಂದಾಗ ಬ್ಲಾಗ್ ಬರಹ ತಂದಾಗ ..
ಪ್ರತ್ಯುತ್ತರಅಳಿಸಿ"ಬಾಗಿಲಿಗೆ ಕಟ್ಟಿದ ಜೋಕಾಲಿಯಲ್ಲಿ ಕುಳಿತು ಎಷ್ಟು ಜೋರಾಗಿ ಚಿಮ್ಮಿದರೂ ಹೊರಗೆ ಹೋದಂತಾಗುತ್ತದೆಯಷ್ಟೇ, ಆದರೆ ಮತ್ತೆ ಅಷ್ಟೇ ಒಳ ತಳ್ಳುತ್ತದೆ...ನಿರಾಶೆಯ ಮಡುವಿಗೆ’
ಪ್ರತ್ಯುತ್ತರಅಳಿಸಿಅಬ್ಬಾ! ಅದೆಷ್ಟು ಚೆಂದದ ಉಪಮೆ! ನಿಜವಾಗಿಯೂ ಅನುಭವಿಸಿ ಬರೆದಿದ್ದಿರಾ ಅನಿಸುತ್ತಿದೆ... :)
ರಜನಿ ಮೇಡಂ
ಪ್ರತ್ಯುತ್ತರಅಳಿಸಿನಿಮಗೆ ಸಣ್ಣ ಕತೆ ಬರೆಯೋ ಕಲೆ ಇದೆ. ಲಹರಿ ಥರ ಬರೆಯದೆ ಕತೆಯನ್ನೇ ಕಟ್ಟಿ. ಅದಕ್ಕೆ ಆಯಸ್ಸು ಜಾಸ್ತಿ
ರೀ ರಜನಿಯವರೇ ಚೆನ್ನಾಗಿ ಬರೆದಿದ್ದೀರ
ಪ್ರತ್ಯುತ್ತರಅಳಿಸಿ