ಸೋಮವಾರ, ಆಗಸ್ಟ್ 3, 2009

ತಕ್ಕಡಿಯಲ್ಲಿ ಎರಡು ಹಾಡು

ಕಳೆದೆರಡು ವಾರಗಳಲ್ಲಿ ಇಬ್ಬರು ದಿಗ್ಗಜರ ಅಗಲಿಕೆಯಿಂದಾಗಿ ಸಂಗೀತ ಕ್ಷೇತ್ರ ಬಡವಾಗಿದೆ. ಒಂದೆಡೆ ಮೈಕೆಲ್ ಜಾಕ್ಸನ್‌ನ ಸಾವು ಪಾಪ್ ಸಂಗೀತ ಲೋಕದ ಅಬ್ಬರವನ್ನು ತಣ್ಣಗಾಗಿಸಿದ್ದರೆ ಇನ್ನೊಂದೆಡೆ ಗಂಗೂಬಾಯಿ ಹಾನಗಲ್‌ರ ನಿಧನ ಶಾಸ್ತ್ರೀಯ ಸಂಗೀತ ಲೋಕವನ್ನು ಮಂದ್ರದಲ್ಲಿ ನಿಲ್ಲಿಸಿದೆ. ಇಬ್ಬರೂ ಮಹಾನ್ ಪ್ರತಿಭಾವಂತರೇ. ಅಲ್ಲಿ ಯಾರು ಹೆಚ್ಚು ಯಾರು ಕಡಿಮೆ ಎಂದು ತೂಗಲು ನನ್ನ ತಕ್ಕಡಿಗೆ ಸಾಮರ್ಥ್ಯವೇ ಇಲ್ಲ. ಇಬ್ಬರೂ ತಮ್ಮ ತಮ್ಮ ಮಿತಿಗಳನ್ನು ಅರಿತು ಅದನ್ನೇ ಅಸ್ತ್ರವನ್ನಾಗಿಸಿಕೊಂಡು ಸಾಧನೆಯ ಶಿಖರ ಮುಟ್ಟಿದವರು. ಕೀರ್ತಿಯ ಸವಿಯ ಉಂಡವರು.ಆದರೆ ಸಾವಿನ ಬೆಳಕು ಅವರಿಬ್ಬರ ಬದುಕಿನ ಶೈಲಿಯ ಅಂತರವನ್ನು ಕಣ್ಣಿಗೆ ರಾಚುವಂತೆ ತೆರೆದಿಟ್ಟುಬಿಟ್ಟಿದೆ.

ಮೂಳೆಗಳೇ ಇಲ್ಲವೆನೋ ಎಂಬಂತೆ ಮೈಡೊಂಕಿಸಿ ಕುಣಿಯುತಿದ್ದ ಮೈಕೆಲ್‌ನ ಮೈಯಲ್ಲಿ ಸಾಯುವ ವೇಳೆಗೆ ಮೂಳೆಯಲ್ಲದೇ ಬೇರೇನು ಇರಲಿಲ್ಲ. ಹೊಟ್ಟೆಯಲ್ಲಿ ಒಂದಗಳು ಅನ್ನಕ್ಕೂ ಜಾಗವಿಲ್ಲದಂತೆ ಮಾತ್ರೆಗಳೇ ತುಂಬಿದ್ದವಂತೆ. ಬರಬಾರದ ರೋಗಗಳನ್ನೆಲ್ಲಾ ತಂದುಕೊಂಡು ತನ್ನ ಐವತ್ತನೇ ವರ್ಷದಲ್ಲಿಯೇ ಅಸಹಜ ರೀತಿಯಲ್ಲಿ ಸಾವನ್ನಪ್ಪಿದ. ೯೭ ವರ್ಷದ ತನಕ ಹಾಡುತ್ತಲೇ ಜೀವನ ಸಾಗಿಸಿದ ಗಂಗಜ್ಜಿಗೆ ವಯಸ್ಸಾಗಿತ್ತೇ ಹೊರತು ಆರೋಗ್ಯಕ್ಕೇನೂ ಕೊರತೆಯಾಗಿರಲಿಲ್ಲ. "ನಾಳೆ ಊಟ ಮಾಡಲು ನಾನಿರುವುದಿಲ್ಲ. ಊಟ ತರಬೇಡವೋ" ಎಂದು ಅಪ್ಪಣೆ ಕೊಟ್ಟೇ ವಿದಾಯ ಹೇಳಿದ ನಿಶ್ಚಿಂತೆ. ಚಿರನಿದ್ರೆಯಲ್ಲಿದ್ದ ಅವರ ಮುಖ ನೋಡಿದರೆ ಸಾವೂ ಸಹ ಅವರ ಬಳಿ ತಲೆಬಾಗಿ ಬಂದಿತ್ತು ಎಂಬುದು ಯಾರಿಗಾದರೂ ತಿಳಿಯುವಂತಿತ್ತು.

ತನ್ನ ಅಂದಚೆಂದಗಳಿಗೆ ಅಪಾರ ಗಮನ ಕೊಡುತ್ತಿದ್ದ ಮೈಕೆಲ್‌ನ ದೇಹಕ್ಕೆ ಇನ್ನೂ ಸರಿಯಾದ ರೀತಿಯಲ್ಲಿ ಅಂತ್ಯ ಸಂಸ್ಕಾರವೇ ಆಗಿಲ್ಲ. ಅವನ ಖ್ಯಾತಿ, ಕುಖ್ಯಾತಿ ಎರಡನ್ನೂ ಬಿತ್ತರಿಸಿದ್ದ ಮಧ್ಯಮಗಳಿಗೆ ಅವನ ಸಾವನ್ನೂ ಸೆನ್ಸೇಷನ್ ಮಾಡುವ ಅವಕಾಶ. ಆದರೆ ನೆಮ್ಮದಿಯುತ ಜೀವನ ನಡೆಸಿದ ಗಂಗಜ್ಜಿ ಕೊನೆಯ ತನಕ ಅಜಾತಶತ್ರು. ಪ್ರಾಯದಲ್ಲೂ ಹಳಿಕೊಳ್ಳುವಂಥ ಚಂದಗಾತಿಯಲ್ಲದಿದ್ದರೂ ಜೀವನ ಮುಗಿಸಿದ ಮೇಲೆ ತಮ್ಮ ಕಣ್ಣುಗಳನ್ನು ದಾನ ಮಾಡಿದ ಗುಣವಂತೆ.

ಕೋಟಿಗಟ್ಟಲೇ ಹಣವನ್ನು ಡಾಲರ್ ಲೆಕ್ಕದಲ್ಲಿ ಗಳಿಸುತ್ತಿದ್ದ ಮೈಕೆಲ್ ತೀರಿಕೊಂಡಾಗ ಆತನಿಗಿದ್ದ ರೋಗದ ಪಟ್ಟಿಯಂತೆಯೇ ಸಾಲದ ಪಟ್ಟಿಯೂ ದೊಡ್ಡದಿತ್ತು. "ಗಳಿಸಿದ ದುಡ್ಡು ಹೋದದ್ದೆಲ್ಲಿ?' ಎಂಬುದು ಅವನ ಅಭಿಮಾನಿಗಳ ಪ್ರಶ್ನೆ. ಗಂಗಜ್ಜಿಯೂ ಬಡತನದಲ್ಲೇ ಬೆಳೆದವರು. ಸಾಲ ತೀರಿಸಲು ಮೈಮೇಲಿನ ಒಡವೆ ಮಾರಿದವರು. ಆದರೆ ಅವರ ಮನೆ ಬೇರೆಯವರ ಪಾಲಾಗುವ ಸಂದರ್ಭದಲ್ಲಿ ಸಾಲ ಕೊಟ್ಟವನು ಬಂದು "ನಿಮಗೆ ಸಾಧ್ಯವಾದಾಗ ಕೊಡಿ ತಾಯಿ" ಎಂದು ಕೈಮುಗಿದು ಹೋದನಂತೆ. "ಅವರು ಗಳಿಸಿದ್ದು ಈ ಅಭಿಮಾನವನ್ನೇ' ಎಂದು ಉತ್ತರಿಸಿತ್ತಾರೆ ಅವರನ್ನು ತಿಳಿದವರು.

ಲಕ್ಷಾಂತರ ಜನರ ಅರಾಧ್ಯ ದೈವವಾಗಿದ್ದ ಮೈಕೆಲ್‌ನ ಕೊನೆಗಾಲದಲ್ಲಿ ಅವನ ಮೈಯ ಬಣ್ಣ , ತಲೆಯ ಕೂದಲು, ಮೂಗು, ಮುಖದ ಆಕಾರ ಯಾವುದೂ ನಿಜವಾಗಿರಲಿಲ್ಲ, ಕೊನೆಗೆ ಅವನ ಮಕ್ಕಳೂ ಅವನದಾಗಿ ಉಳಿಯಲಿಲ್ಲ. ಆದರೆ ಕೆಲವೇ ಕೇಳುಗರಿರುವ ಶಾಸ್ತ್ರೀಯ ಸಂಗೀತದ ಸೇವೆ ಮಾಡಿದ ಗಂಗೂಬಾಯಿ ಎಂಬಾಕೆ ಹಾಡು ಮುಗಿಸುವಷ್ಟರಲ್ಲಿ ಕೇಳುಗರೆಲ್ಲಾ ಮಕ್ಕಳಾಗಿದ್ದರು. ನಾಡಿನ ಜನರಿಗೆಲ್ಲಾಆಕೆ "ಗಂಗೂ ತಾಯಿ' ಯಾಗಿದ್ದರು.

4 ಕಾಮೆಂಟ್‌ಗಳು:

  1. ಲೇಖನ ಚೆನ್ನಾಗಿದೆ. ಹೋಲಿಕೆ ಹಲವು ವಿಷಯ ತಿಳಿಸುತ್ತದೆ.

    ಪ್ರತ್ಯುತ್ತರಅಳಿಸಿ
  2. ರಂಜನಿ,,
    ಲೇಖನ ಚೆನ್ನಾಗಿ ಇದೆ....ಆದರೆ ಅವರಿಗೂ ಇವರಿಗೂ ಯಾಕೆ ಹೋಲಿಕೆ ಮಾಡಿದ್ದಿರ ಅಂತ ಗೊತ್ತಾಗಲಿಲ್ಲ.... :-)

    ಪ್ರತ್ಯುತ್ತರಅಳಿಸಿ
  3. ಇಬ್ಬರ ಅನುಪಸ್ಥಿತಿಯ ನೋವು ಅಪಾರ. ಅಗಲಿಕೆಯ ಕಾಲ ಒಂದೇ ಆದ್ದರಿಂದ ಲೇಖನ ಪ್ರಸ್ತುತ. We need both of them here. But God needed them for more!!
    ಮತ್ತೆ ಬರೆಯಿರಿ...

    ಪ್ರತ್ಯುತ್ತರಅಳಿಸಿ
  4. ಗಂಗೂಬಾಯಿ ಹಾಗು ಮೈಕಲ್ ಜಾಕ್ಸನ್ ಇಬ್ಬರೂ ನನ್ನ ಮೆಚ್ಚಿನ ಕಲಾವಿದರು, ಇಬ್ಬರೂ ಅವರವರ ಸಂಗೀತ ಪ್ರಕಾರಗಳಲ್ಲಿ ಸಾಧನೆ ಮಾಡಿದವರು. ಇಬ್ಬರನ್ನೂ ಕಳೆದುಕೊಂಡು ತುಂಬಾ ನೋವಾಗಿದೆ. ಇಬ್ಬರನ್ನು ಮತ್ತೊಮ್ಮೆ ನೆನಪಿಸಿದ ನಿಮ್ಮ ಲೇಖನಕ್ಕೆ ಧನ್ಯವಾದಗಳು....

    ಪ್ರತ್ಯುತ್ತರಅಳಿಸಿ