ಮಂಗಳವಾರ, ಸೆಪ್ಟೆಂಬರ್ 29, 2009

ನಮ್ಮ ದಾರಿ ಬರಿ ಚಂದ್ರನವರೆಗೆ...?



ಅಂದು ಅಕ್ಟೋಬರ್ 22,2008. ಆಂಧ್ರಪ್ರದೇಶದ ಶ್ರೀಹರಿ ಕೋಟದಲ್ಲಿ ಮೊದಲ ಹೆರಿಗೆಯ ಸಂಭ್ರಮ ಹಾಗೂ ಆತಂಕ. ಇಡೀ ದೇಶ ಉಸಿರು ಬಿಗಿ ಹಿಡಿದು ಕುಳಿತಿತ್ತು. ಎಲ್ಲರ ಕಣ್ಣು ಟಿವಿಯಲ್ಲಿ ಬರುವ ಬ್ರೇಕಿಂಗ್ ನ್ಯೂಸ್‌ನತ್ತಲೇ. ಬೆಳಗ್ಗೆ 6.22ಕ್ಕೆ ಸರಿಯಾಗಿ ಹಾರಿತಲ್ಲ ಗಗನನೌಕೆ, ಪ್ರಾರಂಭವಾಯಿತಲ್ಲ ಚಂದ್ರಯಾನ, ಇಡೀ ದೇಶವೇ ಆತ್ಮವಿಶ್ವಾಸದ ಗೆಲುವಿನ ಸಂಭ್ರಮದಲ್ಲಿ ಮಿಂದೆದ್ದಿತು. ಅದಕ್ಕೆ ಕಾರಣವೂ ಇತ್ತು. ಅದು ಭಾರತದ ಮೊದಲ ಚಂದ್ರಯಾನ ಯೋಜನೆಯಾಗಿದ್ದುದು ಮಾತ್ರವಲ್ಲ ಸಂಪೂರ್ಣವಾಗಿ ಸ್ವದೇಶೀ ನಿರ್ಮಿತವಾಗಿತ್ತು.
1998ರಲ್ಲಿ ಪೋಖ್ರಾನ್‌ನಲ್ಲಿ ಭಾರತ ತನ್ನ ಅಣುಶಕ್ತಿ ಪ್ರದರ್ಶಿಸಿದ ದಿನವೂ ಹೀಗೆಯೇ ಸಂಭ್ರಮಾಚರಣೆ ನಡೆದಿತ್ತು. ಆದರೆ ಅದಕ್ಕೆ ಅಮೆರಿಕವೂ ಸೇರಿದಂತೆ ಹಲವು ಮುಂದುವರಿದ ದೇಶಗಳು ಕೆಂಗಣ್ಣು ಬೀರಿ, ಭಾರತಕ್ಕೆ ನೀಡುವ ತಮ್ಮೆಲ್ಲಾ ಸಹಾಯ, ಸಹಕಾರವನ್ನು ನಿಲ್ಲಿಸಿದ್ದವು. ಆದರೆ ಭಾರತೀಯ ವಿಜ್ಞಾನಿಗಳು ಅದನ್ನೇ ಸವಾಲಾಗಿ ಪರಿಗಣಿಸಿ ಸಂಪೂರ್ಣ ಸ್ವದೇಶಿ ನಿರ್ಮಿತ ರಾಕೆಟನ್ನು ತಯಾರಿಸಿದರು. ಅದೇ ಚಂದ್ರಯಾನದತ್ತ ಮೊದಲ ಹೆಜ್ಜೆಯಾಯಿತು.
ಚಂದ್ರಯಾನ ನಡೆದ ಈ ಒಂದು ವರುಷದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ತಲೆ ಎತ್ತಿನಡೆಯುವಂಥ ಹಲವು ಬದಲಾವಣೆಗಳಾಗಿವೆ. ಚಂದ್ರನತ್ತ ಬಾಹ್ಯಾಕಾಶನೌಕೆಯನ್ನು ಕಳಿಸಿದ ಪ್ರತಿಷ್ಠಿತ ನಾಲ್ಕನೇ ದೇಶವಾಗಿ ಭಾರತ ಹೊರಹೊಮ್ಮಿದೆ. ನಿಗದಿತ ಅವಗೆ ಮುಂಚೆಯೇ ಭೂಮಿಯೊಡನೆ ತನ್ನ ಸಂಪರ್ಕ ಕಳೆದುಕೊಂಡರೂ ಮೊದಲ ಚಂದ್ರಯಾನ ಅಂದುಕೊಂಡಿದ್ದ ಕೆಲಸವನ್ನೆಲ್ಲಾ ಮಾಡಿ ಮುಗಿಸಿದೆ. ಚಂದ್ರನ ಮೇಲೆ ನೀರಿದೆಯೇ ಎಂಬ ಪ್ರಶ್ನೆಗೆ ಸಾಕ್ಷಿ ಸಮೇತ ಉತ್ತರ ಕೊಟ್ಟಿದೆ. ಆರ್ಥಿಕ ಹಿಂಜರಿತವನ್ನು ಭಾರತ ದೃಢವಾಗಿ ಎದುರಿಸಿ ನಿಂತಿದೆ. "ಭಾರತ ಚಂದ್ರಯಾನದತ್ತ ಧಾಪುಗಾಲಿಡುತ್ತಿದೆ. ನಾವು ನಮ್ಮ ಸಾರ್ವಭೌಮತ್ವವನ್ನು ಬಿಟ್ಟುಕೊಡಬಾರದು' ಎಂದು ಅಧ್ಯಕ್ಷ ಒಬಾಮ ತನ್ನ ದೇಶಿಗರಿಗೆ ಎಚ್ಚರಿಸುವ ಮಟ್ಟಿಗೆ ಅಮೆರಿಕ ಹೆದರಿದೆ. ಈ ಎಲ್ಲ ಸಂಭ್ರಮಗಳ ಮಧ್ಯೆ ಭಾರತ ಮತ್ತೊಂದು ಚಂದ್ರಯಾನಕ್ಕೆ ಸಿದ್ಧಮಾಡಿಕೊಳ್ಳುತ್ತಿದೆ.
ಅಂದುಕೊಂಡಂತೆ ಆಗಿದ್ದರೆ ಈ ವರುಷದ ಕೊನೆಯಲ್ಲೇ ಎರಡನೇ ಚಂದ್ರಯಾನ ಪ್ರಾರಂಭವಾಗಬೇಕಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಅದೀಗ 2013ಕ್ಕೆ ಎಂದು ನಿರ್ಧಾರವಾಗಿದೆ. ನಿಜ ಹೇಳಬೇಕೆಂದರೆ ಭಾರತ ವಿಜ್ಞಾನಿಗಳ ಮೂಲ ಆಸಕ್ತಿ ಇರುವುದು ಈ ಎರಡನೇ ಚಂದ್ರಯಾನದ ಮೇಲೆಯೇ. ಮೊದಲನೆಯದು ಕೇವಲ ಮುನ್ನುಡಿಯಷ್ಟೆ. ಸುಮಾರು 386 ಕೋಟಿ ರೂಗಳ ವೆಚ್ಚದಲ್ಲಿ (ಜಗತ್ತಿನಲ್ಲಿಯೇ ಅತಿ ಅಗ್ಗದಲ್ಲಿ ತಯಾರಾದ ಗಗನನೌಕೆ ಇದು ಎಂಬುದೂ ಒಂದು ಸಾಧನೆ. ಮುಂದುವರಿದ ದೇಶಗಳಲ್ಲಿ ಇದೇ ಯೋಜನೆಗೆ ಸಾವಿರಾರು ಕೋಟಿ ರೂ.ಗಳು ಖರ್ಚಾಗಿದೆ.) ಚಂದ್ರಯಾನ ಮಾಡಿದ ಆ ನೌಕೆಯಿಂದ ಹಲವಾರು ವಿಷಯಗಳು ತಿಳಿದುಬಂದವು. ಸೆಕೆಂಡಿಗೆ ಒಂದರಂತೆ, ಚಂದ್ರನ ಮೇಲ್ಮೈಯನ್ನು ವಿವಿಧ ಕೋನಗಳಿಂದ ಸೆರೆ ಹಿಡಿದ ಸಾವಿರಾರು ಚಿತ್ರಗಳನ್ನು ಭೂಮಿಗೆ ಕಳುಹಿಸುತ್ತಿತ್ತು. ಇದರಿಂದ ಚಂದ್ರನ ಮೇಲಿನ ತಗ್ಗು, ದಿನ್ನೆ, ಮೇಲ್ಮೈರಚನೆಯ ಮಾಹಿತಿ, ಅಲ್ಲಿರಬಹುದಾದ ನೀರು, ಖನಿಜಗಳ ವಿವರ ನಮಗೆ ಲಭ್ಯವಾಗುತ್ತಿದೆ. ಅಲ್ಲದೆ ಮೊದಲನೇ ಚಂದ್ರಯಾನದಿಂದ ಚಂದ್ರನಲ್ಲಿ ಹೊರಸೂಸುವ ವಿಕಿರಣ ಈ ಮೊದಲು ಲೆಕ್ಕ ಹಾಕಿದ್ದಕ್ಕಿಂತ ಹೆಚ್ಚಿದೆ ಎಂಬುದು ತಿಳಿಯಿತು. ಆದ್ದರಿಂದಲೇ ನೌಕೆಯ ಕೆಲವು ಉಪಕರಣಗಳು ಸರಿಯಾಗಿ ವರ್ತಿಸದೆ, ನಿಗದಿತ ಅವಧಿಗೆ ಮೊದಲೇ ಮೊದಲ ಚಂದ್ರಯಾನ ಮುಗಿಯುವಂತಾಯಿತು. ಆದರೆ ಈಗ ತಿಳಿದ ಸರಿಯಾದ ಮಾಹಿತಿಯಿಂದ ಮುಂದಿನ ಚಂದ್ರಯಾನದಲ್ಲಿ ಮತ್ತಷ್ಟು ಸುರಕ್ಷತೆಯ, ಉಷ್ಣ ನಿರೋಧಕಗಳನ್ನು ಅಳವಡಿಸಿ ಕೊಳ್ಳಬಹುದು. ಹೀಗೆ ಹಲವು ಪ್ರಾಯೋಗಿಕ ಸಮಸ್ಯೆಗಳಿಗೆ ಮೊದಲ ಚಂದ್ರಯಾನ ಉತ್ತರ ದೊರಕಿಸಿಕೊಟ್ಟಿದೆ.

ಮೊದಲ ಚಂದ್ರಯಾನದಿಂದಾದ ಇನ್ನೊಂದು ಪ್ರಮುಖ ಲಾಭವೆಂದರೆ ಅಮೆರಿಕದೊಂದಿಗಿನ ರಾಜತಾಂತ್ರಿಕ ಸಂಬಂಧ ಸುಧಾರಿಸಿರುವುದು. ಚಂದ್ರನ ಮೇಲಿನ ತನ್ನ ಹಿಡಿತವನ್ನು ಬಡಪೆಟ್ಟಿಗೆ ಬಿಡಲೊಪ್ಪದ ಅಮೆರಿಕದ ಈಗ ಅನಿವಾರ್ಯವಾಗಿ ಸಂಧಾನಕ್ಕೆ ಬಂದಿದೆ. ಅದರ ಫಲವಾಗಿಯೇ ಕಳೆದ ಆಗಸ್ಟ್ ೨೦ರ ಮಧ್ಯರಾತ್ರಿ ಭಾರತದ ಚಂದ್ರಯಾನದ ಉಪಗ್ರಹದೊಂದಿಗೆ ಅಮೆರಿಕದ ನಾಸಾದ ಉಪಗ್ರಹವೂ ಸೇರಿ, ಚಂದ್ರನ ಮೇಲ್ಮೈಯಲ್ಲಿ ನೀರಿನ ಪಸೆಯನ್ನು ಪತ್ತೆ ಹಚ್ಚುವ ಜಂಟಿ ಕಾರ್ಯಾಚರಣೆ ನಡೆಸಿದ್ದು. ಈ ಎರಡೂ ಉಪಗ್ರಹಗಳು ಸೆಕೆಂಡಿಗೆ 1.6 ಕಿ.ಮೀ ವೇಗದಲ್ಲಿ ಚಂದ್ರನ ಉತ್ತರ ಧ್ರುವದ 200ಕಿ.ಮೀ ಮೇಲಿನಿಂದ ಒಟ್ಟಿಗೇ ಸಮೀಕ್ಷೆ ನಡೆಸಿದ್ದವು. ಈ ಸಮೀಕ್ಷೆಯಲ್ಲಿಯೇ ಚಂದ್ರನ ಮೇಲೆ ನೀರಿರುವ ಅಂಶ ಖಚಿತಗೊಂಡಿದ್ದು. ಇದು ಭಾರತದ ಬಾಹ್ಯಾಕಾಶ ಸಾಧನೆಗೆ ಸಂದ ಐತಿಹಾಸಿಕ ವಿಜಯ.


ಈ ಹೊತ್ತಿಗಾಗಲೇ 425 ಕೋಟಿ ರೂಪಾಯಿಗಳ ಎರಡನೇ ಚಂದ್ರಯಾನದ ಸಂಪೂರ್ಣ ನೀಲನಕ್ಷೆ ಸಿದ್ಧವಾಗಿದೆ. ನೌಕೆ ಎಲ್ಲಿ ಇಳಿಯಬೇಕು, ಅಲ್ಲಿ ಏನು ಮಾಡಬೇಕು ಎಂಬುದರ ರೂಪುರೇಷೆ ಗೊತ್ತುಮಾಡಲಾಗಿದೆ. ಇದರ ವಿಶೇಷವೆಂದರೆ ಅದರಲ್ಲಿ ಪ್ರಥಮವಾಗಿ ಬಳಸಲಾಗುತ್ತಿರುವ ಅಣು ಇಂಧನ. ಅದನ್ನು ನಮಗೆ ಕಾಣದ ಚಂದ್ರನ ಮುಖದ ಇನ್ನೊಂದು ಭಾಗದಲ್ಲಿ ಕೇವಲ ಕತ್ತಲಿರುವುದರಿಂದ (ಅಲ್ಲಿ ಸೌರಶಕ್ತಿ ದೊರೆಯುವುದಿಲ್ಲವಾದ್ದರಿಂದ) ಅಲ್ಲಿ ಅಣು ಇಂಧನವನ್ನು ಬಳಸಿಕೊಳ್ಳಲಿದ್ದಾರೆ. ಅಣು ಇಂಧನ ಇರುವುದರಿಂದಲೇ ಈ ನೌಕೆಗೆ ಹಿಂದೆಂದಿಗಿಂತಲೂ ಹೆಚ್ಚಿನ ಮಟ್ಟಿಗೆ ಸುರಕ್ಷೆಗೆ ಒತ್ತು ಕೊಡಲಾಗಿದೆಯಂತೆ. ಅದಕ್ಕಾಗಿ ಇತ್ತೀಚಿನ ಆಧುನಿಕ ಉಪಕರಣಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಎರಡನೇ ಚಂದ್ರಯಾನಕ್ಕೆ ರಷ್ಯಾದ ತಾಂತ್ರಿಕ ನೆರವಿದ್ದರೂ, ಅದು ಸಂಪೂರ್ಣವಾಗಿ ನಮ್ಮದೇ ಯೋಜನೆ. ಅದರ ಕುರಿತು ನಮ್ಮ ವಿಜ್ಞಾನಿಗಳಿಗೆ ಹಲವು ಕನಸುಗಳಿವೆ. ಚಂದ್ರನ ಧ್ರುವ ಭಾಗದಲ್ಲಿ ನಿರಂತರವಾಗಿ ಸೂರ್ಯನ ಬೆಳಕು ಬೀಳುತ್ತಿರುತ್ತದೆ. ಅಲ್ಲಿ ಸೌರಶಕ್ತಿಯ ಘಟಕವನ್ನೂ ಸ್ಥಾಪಿಸುವ ಯೋಜನೆಯೂ ಚಂದ್ರಯಾನ-2ರ ಮುಂದಿದೆ. ಅಲ್ಲಿಯೇ ಹಿಮ ಹಾಗೂ ಹೈಡ್ರೋಜನ್ ಇರಬಹುದಾದ ಸೂಚನೆಯೂ ಸಿಕ್ಕಿದೆ. ಅಲ್ಲಿಯ ಮಣ್ಣಿನಲ್ಲಿ ನೀರಿನ ಪಸೆ ಇರುವುದೀಗ ಖಚಿತವಾಗಿರುವುದರಿಂದ, ನೆಲವನ್ನು ಕೊರೆದು ಅಂತರ್ಜಲ ಹುಡುಕುವ ಪ್ರಯತ್ನವನ್ನೂ ಮಾಡಬಹುದು ಎಂದು ಅಬ್ದುಲ್ ಕಲಾಂ ಸಲಹೆ ನೀಡಿದ್ದಾರೆ. ಅಂಥ ಪ್ರದೇಶದಲ್ಲಿ ಒಂದು ಶಾಶ್ವತ ವಾಸ್ತವ್ಯ ರೂಪಿಸುವ ಯೋಜನೆಯೂ ಇದೆ. ಅದು ಮುಂದೆ ಚಂದ್ರನ ಅಂಗಳಕ್ಕೆ ಬರಬಹುದಾದ ಗಗನಯಾತ್ರಿಗಳಿಗೆ ಮನೆಯೂ ಅಗಬಹುದು! ಈ ಕನಸಿಗೂ ಕಾರಣವಿದೆ. 2020ರ ಒಳಗೆ ನಡೆಯುವ ಭಾರತದ ಮೂರನೇ ಚಂದ್ರಯಾನದಲ್ಲಿ ಭಾರತೀಯ ಗಗನಯತ್ರಿಯೊಬ್ಬ ಚಂದ್ರನಲ್ಲಿಗೆ ಹಾರಲಿದ್ದಾನೆ! ಭಾರತ ಈಗಾಗಲೇ ಅದಕ್ಕೆ 12,000ಕೋಟಿ ರೂ.ಗಳನ್ನು ಅದಕ್ಕಾಗಿ ಮೀಸಲಿರಿಸಿದೆ. ಅಲ್ಲದೆ ಈಗ ಮೊದಲ ಚಂದ್ರಯಾನದ ವಿಜಯದಿಂದಾಗಿ ಇತರ ದೇಶಗಳೂ ನಮ್ಮೊಡನೆ ಭಾಗವಹಿಸಲು ಹಾತೊರೆಯುತ್ತಿವೆ.


ಇಸ್ರೋದ ಅಧ್ಯಕ್ಷ ಮಾಧವನ್ ನಾಯರ್ ಹೇಳಿರುವಂತೆ ಕ್ಯಾಮೆರಾಗಳನ್ನು ಉಪಗ್ರಹದ ಆಯಕಟ್ಟಿನ ಜಾಗದಲ್ಲಿ ಸರಿಯಾಗಿ ಇಡಲಾಗುತ್ತಿದೆಯಂತೆ. ಅವರು ಅಷ್ಟೊಂದು ವಿಶ್ವಾಸದಿಂದ ಅದನ್ನು ಹೇಳಿರುವುದಕ್ಕೂ ಕಾರಣವಿದೆ. ಚಂದ್ರಯಾನ-1ರಲ್ಲಿಟ್ಟ ಕ್ಯಾಮೆರಾಗಳು ಅದೆಷ್ಟರ ಮಟ್ಟಿಗೆ ಸರಿಯಾಗಿ ಕಾರ್ಯ ನಿರ್ವಹಿಸಿವೆ ಎಂದರೆ ನಮ್ಮ ವಿಜ್ಞಾನಿಗಳು ಇತ್ತೀಚೆಗೆ ನಡೆದ ಸೂರ್ಯಗ್ರಹಣದ ಸಮಯದಲ್ಲಿ ಅದರ ಕ್ಯಾಮೆರಾಗಳನ್ನು ಇಲ್ಲಿಂದಲೇ ಸುಲಭವಾಗಿ ಭೂಮಿಯ ಕಡೆ ತಿರುಗಿಸಿದ್ದರು!


ಚಂದ್ರಯಾನ ಕೇವಲ ದುಂದುವೆಚ್ಚ, ಮುಂದುವರಿದ ದೇಶಗಳ ಷೋಕಿ, "...ಜುಟ್ಟಿಗೆ ಮಲ್ಲಿಗೆ ಹೂ' ಎಂದೆಲ್ಲಾ ಜರಿಯುವವರೂ ಇದ್ದಾರೆ. ಆದರೆ ಚಂದ್ರಯಾನದ ಹಿಂದೆ ಆರ್ಥಿಕ ಉದ್ದೇಶವೂ ಬಹಳಷ್ಟಿದೆ. ಚಂದ್ರಯಾನ-1ರ ಪ್ರಾಥಮಿಕ ಉದ್ದೇಶವೇ ಅಲ್ಲಿರುವ ಖನಿಜಗಳ ಪತ್ತೆ ಹಚ್ಚುವಿಕೆಯಾಗಿತ್ತು. ಅದರಲ್ಲಿ ಮುಖ್ಯವಾದದ್ದು ಹೀಲಿಯಂ ಹುಡುಕಾಟ. ಮುಂದಿನ ಜನಾಂಗದ ಶಕ್ತಿಯ ಮೂಲ ಎಂದೇ ಬಿಂಬಿತವಾಗಿರುವ ಹೀಲಿಯಂ ಅಲ್ಲಿ ಸಾವಿರಾರು ಟನ್ನುಗಟ್ಟಲೆ ವ್ಯರ್ಥವಾಗಿ ಬಿದ್ದಿರುವ ಸಾಧ್ಯತೆ ಇದೆ. (ಒಂದು ಟನ್ ಹೀಲಿಯಂ ಒಂದು ಸಾವಿರ ಕೋಟಿ ರೂಪಾಯಿಗೆ ಸಮ) ಅದೃಷ್ಟವಶಾತ್ ಅದನ್ನು ಅಲ್ಲಿಂದ ಇಲ್ಲಿಗೆ ತರುವುದು ಅತ್ಯಂತ ಸುಲಭ. ಹೀಲಿಯಂನ್ನು ಕಾಯಿಸಿದರೆ ಅದು ಅನಿಲರೂಪ ತಾಳುತ್ತದೆ. ಆನಂತರ ಅದನ್ನು ಸುಲಭವಾಗಿ ಭೂಮಿಗೆ ರವಾನಿಸಬಹುದು!


ಬಾಹ್ಯಾಕಾಶ ಸಂಶೋಧನೆಗಳನ್ನು ಅನಗತ್ಯ ಎಂದು ಹೀಗಳೆಯುವದರಲ್ಲಿ ಯಾವುದೇ ಅರ್ಥವಿಲ್ಲ. ಅದರಿಂದ ತತ್‌ಕ್ಷಣಕ್ಕೆ ಯಾವುದೇ ಆರ್ಥಿಕ ಲಾಭವಾಗದಿರಬಹುದು. ಆದರೆ ಅವು ಇಡೀ ದೇಶದ ಜನರ ಮನಸ್ಥಿತಿಯನ್ನು ಬದಲಾಯಿಸುತ್ತವೆ. ಕನಸುಗಳನ್ನು ಬಿತ್ತುತ್ತವೆ. ಚಂದ್ರಯಾನದ ಪ್ರತಿ ಹೆಜ್ಜೆಯೂ ಯುವಕರನ್ನು ಮೂಲ ವಿಜ್ಞಾನ ಕ್ಷೇತ್ರದತ್ತ ಆಕರ್ಷಿಸುವಂತೆ ಮಾಡಿದರೆ ಅದಕ್ಕಿಂತ ದೊಡ್ಡ ಲಾಭ ಬೇಕೆ? ಕೇವಲ ಬಹುರಾಷ್ಟ್ರೀಯ ಕಂಪನಿಗಳನ್ನು ಕಟ್ಟುವಲ್ಲಿ ತಮ್ಮ ಪ್ರತಿಭೆಯನ್ನು ಪಣಕ್ಕಿಡುತ್ತಿರುವ ನಮ್ಮ ವಿದ್ಯಾರ್ಥಿಗಳು ಇದರಿಂದಲಾದರೂ ಮೂಲ ವಿಜ್ಞಾನದ ಅಧ್ಯಯನ, ಸಂಶೋಧನೆ ಮಾಡುವತ್ತ ಮನಸ್ಸು ಹರಿಸಿದರೆ ದೇಶದ ಭವಿಷ್ಯವೇ ಬದಲಾಗದಿರದೇ?

ಮಂಗಳವಾರ, ಸೆಪ್ಟೆಂಬರ್ 1, 2009

"ಸುಪರ್" ಗುರುವಿಗೆ ಸಲಾಮ್

ಸತೀಶ ಕುಮಾರನಿಗೆ ಚಿಕ್ಕಂದಿನಿಂದಲೂ ಓದುವ ಹುಚ್ಚು. ಆದರೆ ಅವನ ತಾಯಿಗೆ ಅದೇ ಚಿಂತೆ. ತನಗೆ ಬರುವ 200 ರೂ. ವಿಧವಾ ವೇತನದಲ್ಲಿ ಊಟಕ್ಕೆ ಅಕ್ಕಿ ಕೊಳ್ಳದೇ, ಅವನನ್ನು ಉತ್ತಮ ಶಾಲೆಗೆ ಕಳಿಸುವುದು ಕನಸಿನ ಮಾತೇ ಸರಿ. ಆದರೆ ಈ ವರುಷದ ಐಐಟಿ ಪ್ರವೇಶ ಪರೀಕ್ಷೆಯಲ್ಲಿ ,ರಾಷ್ಟ್ರಮಟ್ಟದಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರ ಪಟ್ಟಿಯಲ್ಲಿ ಇವನ ಹೆಸರೂ ಇದೆ !

ಜಾಡಮಾಲಿಯೊಬ್ಬನ ಮಗ ನಾಗೇಂದ್ರ ಓದಿದ್ದು ಹಳ್ಳಿಯ ಸರಕಾರಿ ಶಾಲೆಯಲ್ಲಿ. ಆದರೆ ಯಾವತ್ತೂ ಶಾಲೆಗೆ ಈತನೇ ಮೊದಲಿಗ. ಆದರೆ ಮನೆಯಲ್ಲಿ ಊಟಕ್ಕೂ ಗತಿ ಇಲ್ಲದ ಬಡತನ. ಶಾಲೆಗೆ ಪ್ರವೇಶ ಪಡೆಯಲಿಕ್ಕೇ ಇವನು ತುಂಬಾ ಹೋರಾಟ ಮಾಡಬೇಕಾಗಿತ್ತು. ಪರೀಕ್ಷೆ ಸಮಯದಲ್ಲಿ ಪುಸ್ತಕಗಳನ್ನು ಕಡ ತಂದು ಓದಬೇಕಾಗುತ್ತಿತ್ತು. ಆದರೆ ಇಂದು ರಾಷ್ಟ್ರದ ಪ್ರಖ್ಯಾತ ಶಿಕ್ಷಣ ಸಂಸ್ಥೆ ಐಐಟಿಯಲ್ಲಿ ವಿದ್ಯಾರ್ಥಿ!

ಬಿಹಾರದಲ್ಲೀಗ ಇಂಥ ಪವಾಡಗಳು ಜರುಗುತ್ತಿವೆ. ಇವರ್‍ಯಾರೂ ಆರ್ಥಿಕವಾಗಿ ಸದೃಢರಲ್ಲ, ಆದರೆ ಎಲ್ಲರೂ ಬುದ್ಧಿವಂತರು ಹಾಗೂ ಎಲ್ಲರೂ ರಾಮಾನುಜನ್ ಸ್ಕೂಲ್ ಆಫ್ ಮ್ಯಾಥಮ್ಯಾಟಿಕ್ಸ್‌ನಲ್ಲಿ ತರಬೇತಿ ಪಡೆದವರು. ಬಡತನದ ಬೇಗೆಯಲ್ಲಿ ಕಮರಿ ಹೋಗಬೇಕಾಗಿದ್ದ ಈ ಪ್ರತಿಭೆಗಳಿಗೆ ಸಾಣೆ ಹಿಡಿದು ಬೆಳಕಿಗೆ ತಂದಿದ್ದೇ ಒಂದು ಯಶೋಗಾಥೆ.

ಪ್ರತಿ ಏಪ್ರಿಲ್‌ನಲ್ಲಿ ಸುಮಾರು ಎರಡೂವರೆ ಲಕ್ಷ ವಿದ್ಯಾರ್ಥಿಗಳು, ಭಾರತದ ಏಳು ಪ್ರಖ್ಯಾತ ವಿದ್ಯಾಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಹಲವು ತಿಂಗಳ ಪೂರ್ವ ಸಿದ್ಧತೆಯೊಂದಿಗೆ ಐಐಟಿ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಪ್ರವೇಶ ಪರೀಕ್ಷೆ ಬರೆಯುತ್ತಾರೆ. ಆರು ಗಂಟೆಗಳ ಕ್ಲಿಷ್ಟಕರ ಪರೀಕ್ಷೆಯಲ್ಲಿ ಆಯ್ಕೆಯಾಗುವುದು ಕೇವಲ ಐದು ಸಾವಿರ ವಿದ್ಯಾರ್ಥಿಗಳು! ಸಾಮಾನ್ಯವಾಗಿ ಆಯ್ಕೆಯಾಗುವ ಮಧ್ಯಮ ವರ್ಗ ಮತ್ತು ಮೇಲ್ಮಧ್ಯಮ ವರ್ಗದ ವಿದ್ಯಾರ್ಥಿಗಳು ಇದಕ್ಕಾಗಿ ಖಾಸಗಿ ಟ್ಯೂಶನ್ ತೆಗೆದುಕೊಂಡಿರುತ್ತಾರೆ. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ತೀರಾ ಕೆಳವರ್ಗದ, ಬಡತನ ರೇಖೆಗಿಂತ ಎಷ್ಟೋ ಕೆಳಗಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳೂ ಐಐಟಿಗೆ ಪ್ರವೇಶ ಪಡೆಯುತ್ತಿದ್ದಾರೆ. ಆದರ ಸಂಪೂರ್ಣ ಕ್ರೆಡಿಟ್ ಸಲ್ಲಬೇಕಾಗಿರುವುದು - ಸದಾ ಅನಕ್ಷರತೆ, ಬಡತನ, ಭ್ರಷ್ಟಾಚಾರದಿಂದಲೇ ಕುಖ್ಯಾತಿಗೊಳಗಾಗಿರುವ ಬಿಹಾರದ ರಾಜಧಾನಿ ಪಾಟ್ನಾದಲ್ಲಿರುವ - ಆನಂದ ಕುಮಾರ್‌ಗೆ ಮತ್ತು ಅವರ ಸಂಸ್ಥೆ 'ರಾಮಾನುಜನ್ ಸ್ಕೂಲ್ ಆಫ್ ಮ್ಯಾಥಮೆಟಿಕ್ಸ'ಗೆ.


ಪ್ರತಿ ವರುಷ, ಆರ್ಥಿಕವಾಗಿ ಹಿಂದಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ಐಐಟಿ ತರಬೇತಿ ನೀಡುವ ’ಸುಪರ್ ೩೦’ ಎಂಬ ಪರಿಕಲ್ಪನೆ ಆನಂದಕುಮಾರ್‌ಗೆ ಬಂದದ್ದೇ "ರಾಮಾನುಜನ್ ಸ್ಕೂಲ್ ಆಫ್ ಮ್ಯಾಥಮ್ಯಾಟಿಕ್ಸ್’ ಸಂಸ್ಥೆಯ ಸ್ಥಾಪನೆಗೆ ಕಾರಣವಾಯ್ತು. ಗಣಿತದ ಶಿಕ್ಷಕ ಹಾಗೂ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪತ್ರಿಕೆಗಳ ಅಂಕಣಕಾರರಾಗಿರುವ ಆನಂದಕುಮಾರ್ ಬಂದಿದ್ದೂ, ಮನೆಯಲ್ಲಿ ಹಪ್ಪಳ ಮಾಡಿ ಮಾರುವುದನ್ನೇ ಉದ್ಯೋಗ ಮಾಡಿಕೊಂಡಿದ್ದ ಕುಟುಂಬದಿಂದಲೇ. ಹೀಗಾಗಿಯೇ ಬಡತನದ ಪರಿಣಾಮಗಳೂ ಮತ್ತು ಕೇವಲ ಹುಟ್ಟಿನಿಂದ ಬರುವ ಬುದ್ಧಿವಂತಿಕೆಯೊಂದೇ ಜೀವನದಲ್ಲಿ ಯಶಸ್ಸು ತಂದುಕೊಡಲು ಸಾಧ್ಯವಿಲ್ಲ ಎಂಬುದು ಅವರಿಗೆ ಚೆನ್ನಾಗಿಯೇ ಗೊತ್ತಿತ್ತು. ಪಾಟ್ನಾದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಅಭಯಾನಂದ್ (ಈಗ ಅವರೂ ತರಬೇತಿ ಕೇಂದ್ರ ಆರಂಭಿಸಿದ್ದು, ಅದೂ ಯಶಸ್ವಿಯಾಗಿದೆ) ಜತೆ ಕೆಲಸ ಮಾಡುತ್ತಿದ್ದ ಆನಂದಕುಮಾರ್ 2002ರಲ್ಲಿ ತಮ್ಮ ಮನೆಯ ಒಂದು ಭಾಗದಲ್ಲೇ ವಿದ್ಯಾರ್ಥಿಗಳಿಗೆ ಐಐಟಿ ತರಬೇತಿ ನೀಡಲು ಪ್ರಾರಂಭಿಸಿದರು. ಅದು ತರಗತಿ ಎನ್ನುವುದಕ್ಕಿಂತ ತಗಡಿನ ಹೊದಿಕೆ ಹೊದೆಸಿದ ದನದ ಕೊಟ್ಟಿಗೆಯಂತಿದೆ. ಕುಳಿತುಕೊಳ್ಳಲು ಉದ್ದನೆಯ ಮರದ ಬೆಂಚುಗಳು. ಅಲ್ಲಿಯ ಪಾಠ ಕೇಳುವುದಕ್ಕೆ ಅಕ್ಕಪಕ್ಕದ ಹಳ್ಳಿಗಳಿಂದ ಬಸ್ಸಿನಲ್ಲಿ, ಸೈಕಲ್ಲಿನಲ್ಲಿ, ಅಥವಾ ಪಕ್ಕದ ಉಚಿತ ಹಾಸ್ಟೆಲ್‌ನಿಂದ ಬರಿಯ ಕಾಲಿನಲ್ಲಿ ನಡೆಯುತ್ತಾ ವಿದ್ಯಾರ್ಥಿಗಳು ಬರುತ್ತಾರೆ. ಆದರೆ ಅಲ್ಲಿ ಸೇರಿದ ಮೂವತ್ತಕ್ಕೆ ಮೂವತ್ತೂ ವಿದ್ಯಾರ್ಥಿಗಳು ಐಐಟಿಯಲ್ಲಿ ಪ್ರವೇಶ ಪಡೆದಿದ್ದಾರೆ !

ಶ್ರೇಷ್ಠ ಗಣಿತಜ್ಞ ರಾಮಾನುಜನ್ ಹೆಸರನ್ನೇ ಹೊತ್ತ ಈ ಸಂಸ್ಥೆಗೆ ಸೇರಲು ಸಾವಿರಾರು ವಿದ್ಯಾರ್ಥಿಗಳು ಸಾಲುಗಟ್ಟುತ್ತಾರೆ. ಆದರೆ ಅಲ್ಲಿ ಸೇರಲು ಬೇಕಾದ ಎರಡು ವಿಶೇಷ ಅರ್ಹತೆಗಳೆಂದರೆ ಅಪಾರ ಬುದ್ಧಿವಂತಿಕೆ ಹಾಗೂ ಬಡತನ! ಕೇವಲ ಅರುವತ್ತು ರೂಪಾಯಿಯ ಅರ್ಜಿಯನ್ನು ಸುಮಾರು ಆರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಖರೀದಿಸುತ್ತಾರೆ. ಅದರಲ್ಲಿ ಮೂವತ್ತು ವಿಶೇಷ ಬುದ್ಧಿವಂತಿಕೆಯ ವಿದ್ಯಾರ್ಥಿಗಳನ್ನು ಆರಿಸಲು ಮೂರು ವಿಧವಾದ ಪರೀಕ್ಷೆಗಳನ್ನು ಬರೆಯಬೇಕಾಗುತ್ತದೆ. ಕ್ಲಿಷ್ಟ, ಹೆಚ್ಚು ಕ್ಲಿಷ್ಟ, ಅತ್ಯಂತ ಹೆಚ್ಚು ಕ್ಲಿಷ್ಟದ ಈ ಪರೀಕ್ಷೆಗಳಲ್ಲಿ ವಿದ್ಯಾರ್ಥಿಯ ಐ.ಕ್ಯು. (ಬುದ್ಧಿಮತ್ತೆ)ಪರೀಕ್ಷಿಸಲಾಗುತ್ತದೆ. ಆಯ್ದ "ಸುಪರ್ 30 ವಿದ್ಯಾರ್ಥಿಗಳಿಗೆ ಮುಂದಿನ ಒಂದು ವರುಷ ಉಚಿತ ಹಾಸ್ಟೆಲ್, ಪಾಠ, ತರಬೇತಿ. ಆದರೆ ಒಂದೇ ಒಂದು ತರಗತಿಯನ್ನೂ ತಪ್ಪಿಸುವಂತಿಲ್ಲ.

ಇಲ್ಲಿ ಇತರ ಕೋಚಿಂಗ್ ಕ್ಲಾಸ್‌ಗಳ ರೀತಿಯಲ್ಲಿ , ಸುಲಭವಾಗಿ ಐಐಟಿಯಲ್ಲಿ ಪ್ರವೇಶ ಪಡೆಯುವುದು ಹೇಗೆ ಎಂದು ಹೇಳಿಕೊಡುವುದಿಲ್ಲ. ಯಾವುದೇ ಅಡ್ಡ ದಾರಿಗಳಿಲ್ಲ. ಏನು ಪಡೆಯಬೇಕೆಂದರೂ ಕಷ್ಟಪಡಲೇಬೇಕು ಎನ್ನುವುದು ಇಲ್ಲಿಯ ಅಲಿಖಿತ ನಿಯಮ. ಆದ್ದರಿಂದಲೇ ಇಲ್ಲಿಯ ವಿದ್ಯಾರ್ಥಿಗಳು ಒಂದು ವರುಷವನ್ನು ಸಂಪೂರ್ಣವಾಗಿ ವಿದ್ಯಾಭ್ಯಾಸದ ಮೇಲೆ ಕೇಂದ್ರೀಕರಿಸಬೇಕು. ಆ ಒಂದು ವರುಷ ಓದುವುದನ್ನು ಬಿಟ್ಟು ಬೇರೇನು ಮಾಡಲೂ ಅವಕಾಶವಿಲ್ಲ. ಅವರಿರುವ ಹಾಸ್ಟೆಲ್‌ನಲ್ಲಿ ಟಿವಿ ಇಲ್ಲ, ಕಂಪ್ಯೂಟರ್ ಇಲ್ಲ. ಆಟವಾಡುವಂತಿಲ್ಲ, ಸಿನಿಮಾ ಇಲ್ಲವೇ ಇಲ್ಲ. ಹಾಗೂ ಅಲ್ಲಿಯ ವಿದ್ಯಾರ್ಥಿಗಳು ಅದನ್ನು ಬಯಸುವುದೂ ಇಲ್ಲ. ಏಕೆಂದರೆ ಇಡೀ ಜಗತ್ತನ್ನೇ ಗೆಲ್ಲುವಷ್ಟು ಬುದ್ಧಿವಂತಿಕೆ ಇದ್ದೂ ಬಡತನದಿಂದಾಗಿ ಕಟ್ಟಿ ಹಾಕಲ್ಪಟ್ಟಿದ್ದೇವೆ ಎಂದು ಅರಿವಾದಾಗ, ಆ ಕಟ್ಟನ್ನು ಒಡೆದುಹಾಕಲು ಏನು ಬೇಕಾದರೂ ಮಾಡಲು ಸಿದ್ಧರಾಗುತ್ತಾರೆ. ಅದಕ್ಕೆ ಇಲ್ಲಿಯ ವಿದ್ಯಾರ್ಥಿಗಳ ಶ್ರಮ ಹಾಗೂ ಅದರ ಪ್ರತಿಫಲವೇ ಸಾಕ್ಷಿ. ಬಹುಶಃ "ಸುಪರ್ 30'ಯ ಯಶಸ್ಸಿನ ಹಿಂದಿರುವ ಗುಟ್ಟೂ ಸಹ ಅದೇ.

ಉದಾಹರಣೆಗೆ "ಸುಪರ್ 30’ಯಲ್ಲಿ ಒಬ್ಬನಾಗಿದ್ದ ಸಂತೋಷ ಕುಮಾರ ಪ್ರತಿ ದಿನ ಬೆಳಗ್ಗೆ ನಾಲ್ಕು ಗಂಟೆ ಓದಿನಲ್ಲಿ ತೊಡಗುತ್ತಿದ್ದ. ಆನಂತರ ಮೂರು ಗಂಟೆ, ಗಣಿತ, ರಸಾಯನ ಶಾಸ್ತ್ರ ಅಥವಾ ಭೌತವಿಜ್ಞಾನದ ಪತ್ರಿಕೆ ಬಿಡಿಸುತ್ತಿದ್ದ. ಸ್ವಲ್ಪ ಸಮಯದ ವಿರಾಮದ ನಂತರ ಸಂಜೆ ಆರರಿಂದ ಒಂಬತ್ತರವರೆಗೆ ಅಂದಿನ ತರಗತಿ. ಆನಂತರ ಮರುದಿನದ ಪರೀಕ್ಷೆಗಾಗಿ ರಾತ್ರಿ ಎರಡು ಗಂಟೆಯವರೆಗೆ ತಯಾರಿ. ಅವನ ಈ ಕಠಿಣ ಶ್ರಮದಿಂದಾಗಿಯೇ ಈ ವರುಷ ಐಐಟಿಗೆ ಆಯ್ಕೆಯಾದ 5000 ವಿದ್ಯಾರ್ಥಿಗಳಲ್ಲಿ ಈತನಿಗೆ 3537ನೇ ಸ್ಥಾನ ದೊರಕಿದೆ.

ವಿದ್ಯಾರ್ಥಿಗಳಿಂದ ಸಾವಿರಾರು ರೂಪಾಯಿ ಪಡೆಯುವ, ವಿದ್ಯಾರ್ಥಿಗಳನ್ನು ಸೆಳೆಯಲು ಯಾವ ಮಟ್ಟದ ಸ್ಪರ್ಧೆಗೂ ಇಳಿಯಲು ಸಿದ್ಧವಿರುವ ಖಾಸಗಿ ಟ್ಯುಟೋರಿಯಲ್‌ಗಳಿಗೆ "ರಾಮಾನುಜನ್ ಶಾಲೆ’ ಸಿಂಹಸ್ವಪ್ನ. ಆದ್ದರಿಂದಲೇ ಅನೇಕ ಬಾರಿ ಆನಂದಕುಮಾರ್ ಅವರ ಮೇಲೆ ಬಾಂಬ್ ದಾಳಿಯಂಥ ಹಲವು ಬಗೆಯ ಕೊಲೆ ಯತ್ನಗಳೂ ನಡೆದಿವೆ. ಈಗಲೂ ಸುತ್ತ ಅಂಗರಕ್ಷಕರನ್ನು ಇಟ್ಟುಕೊಂಡು ಬೀದಿಗಿಳಿಯಬೇಕಾದ ಪರಿಸ್ಥಿತಿ ಇದೆ. ಆದರೂ ಆನಂದಕುಮಾರ್ ಪಾಠ ಮಾಡುವುದನ್ನು ಬಿಟ್ಟಿಲ್ಲ!

ಕೃಪೆ: ಔಟ್‌ಲುಕ್‌‌