ಬುಧವಾರ, ಅಕ್ಟೋಬರ್ 21, 2009

ರಾತ್ರಿ ರಾಹುಕಾಲ, ಬೆಳಗ್ಗೆ ಗುಳಿಗೆ ಕಾಲ

ಮೊದಲ ಬಾರಿ ಸ್ಯಾನಿಟರಿ ನ್ಯಾಪ್‌ಕಿನ್  ಜಾಹೀರಾತು ಟಿವಿಯಲ್ಲಿ ಪ್ರಸಾರವಾಗಿದ್ದು ನೆನಪಿದೆಯೇ? ರೇಣುಕಾ ಶಹಾನೆ ("ಸುರಭಿ' ಕಾರ್ಯಕ್ರಮದಿಂದ ಜನಪ್ರಿಯಳಾಗಿದ್ದಳಲ್ಲ, ಅವಳೇ!)ಸರಳವಾದ ಉಡುಪಿನಲ್ಲಿ ಬಂದುನಿಂತು 'ನಾನು ನಿಮ್ಮ ಬಳಿ ಹೇಳಲೇಬೇಕಾದ ವಿಷಯವೊಂದಿದೆ. ಆದರೆ ಹೇಗೆ ಹೇಳಲಿ?’ ಎಂದು ಸಂಕೋಚದಿಂದ, ಮೆಲುದನಿಯಲ್ಲಿ ಅದರ ಬಗ್ಗೆ ಸೂಚ್ಯವಾಗಿ ಹೇಳುವ  ಜಾಹೀರಾತದು. ಸಂಪ್ರದಾಯವಾದಿಗಳು ಅಂದು ಮೂಗು ಮುರಿದಿದ್ದರು. ಮಕ್ಕಳು ಇದೇನೆಂದು ಕೇಳಿದರೆ ಏನು ಹೇಳುವುದು ಎಂದು ಹೌಹಾರಿದ್ದರು. ಆದರೆ ಮಕ್ಕಳ ಗಮನ ಸೆಳೆಯುವಂಥದ್ದೇನೂ ಅದರಲ್ಲಿರಲಿಲ್ಲ.   ಹೈಸ್ಕೂಲು, ಕಾಲೇಜಿಗೆ ಹೋಗುವ ತರುಣಿಯರು ಮಾತ್ರ  ಪರಸ್ಪರ ಕಿವಿಯಲ್ಲಿ ಪಿಸುಗುಟ್ಟಿಕೊಂಡು ಕಿಲಕಿಲ ನಕ್ಕಿದ್ದರು. ಅಷ್ಟು ವರ್ಷಗಳಿಂದ ಆರೋಗ್ಯ ಇಲಾಖೆ ಹೇಳಲು ವಿಫಲವಾಗಿದ್ದ ನೈರ್ಮಲ್ಯದ ಪಾಠವನ್ನು ಕೇವಲ ಒಂದು ಜಾಹೀರಾತು  ಸಾಧಿಸಿ ತೋರಿಸಿತ್ತು. ಮಾತ್ರವಲ್ಲ, ಜಾಹೀರಾತು ಲೋಕದಲ್ಲಿದ್ದ ಮಡಿವಂತಿಕೆಯನ್ನೂ ಕಳಚಿತ್ತು. ಅದರ ಪರಿಣಾಮವಾಗಿಯೇ ಇಂದು ಅದೇ ನ್ಯಾಪ್ಕಿನ್ ಕಂಪೆನಿ ಯಾವುದೇ ಸಂಕೋಚ, ಮುಜುಗರಗಳಿಗೆ ಅವಕಾಶವಿಲ್ಲದಂತೆ "ಹ್ಯಾವ್ ಅ ಹ್ಯಾಪಿ ಪಿರಿಯಡ್’ ಎಂದು ವಿಶ್ ಮಾಡಿಕೊಳ್ಳುವಂಥ ಆರೋಗ್ಯಕರ ಪರಿಸರವನು  ರೂಪಿಸಿಕೊಂಡಿತು.

 ಸ್ಯಾನಿಟರಿ ನ್ಯಾಪ್‌ಕಿನ್‌ಗಳಷ್ಟೇ ಗರ್ಭ ನಿರೋಧಕ ಮಾತ್ರೆ ಮತ್ತು ಕಾಂಡೋಮ್‌ಗಳ ಬಗ್ಗೆಯೂ ಮಡಿವಂತಿಕೆ ಇತ್ತು. ಜಾಗೃತಿಯ ಅಗತ್ಯವಿತ್ತು. ಆದರೆ ಅದರ ಸುರಕ್ಷೆಗೆ ಒತ್ತು ಕೊಡದೇ,  ಕಾಮೋತ್ತೇಜಕ  ಮಾತ್ರೆಗಳೇನೋ ಎಂಬಂತೆ ದೃಶ್ಯಗಳನ್ನು ಬಳಸಿದ್ದರಿಂದಲೇ ನಿರೀಕ್ಷಿತ ಮಟ್ಟದಲ್ಲಿ ಜಾಗೃತಿ ಮೂಡಿಸಲಿಲ್ಲವೆನಿಸುತ್ತದೆ. ಪಡಖಾನೆಯಲ್ಲಿ ಕೂತು ಟಿವಿ ನೋಡುವ ನಮ್ಮ ಮಂದಿ ಅಂಥ ದೃಶ್ಯಗಳನ್ನು ಕಂಡಕೂಡಲೇ ಚಾನೆಲ್ ಬದಲಾಯಿಸುತ್ತಾರೆ ಎನ್ನುವುದನ್ನು ಆ ಜಾಹೀರಾತು  ಮಾಡಿದವರು ಮರೆತಿದ್ದರೇನೊ.

ಇತ್ತೀಚೆಗೆ ಟಿವಿಯಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿರುವ ಗರ್ಭ ನಿರೋಧಕ ಮಾತ್ರೆಗಳ ಜಾಹೀರಾತುಗಳನ್ನು ನೋಡಿದಾಗ ಇದೆಲ್ಲಾ ನೆನಪಾಯಿತು."ರಾತ್ರಿ ಏನೇ ನಡೆದಿರಲಿ, ಬೆಳಗಾಗೆದ್ದು ಒಂದು ಮತ್ರೆ ನುಂಗಿದರೆ ಮುಗಿದೇ ಹೋಯಿತು, ಗರ್ಭಿಣಿಯಾಗುವ ಭಯವಿಲ್ಲ’ ಎನ್ನುವ "ಮರುದಿನದ ಮಾತ್ರೆಗಳ’ (Morning after pills) ಜಾಹೀರಾತದು. ಹುಡುಗಿಯರಿಬ್ಬರು ತಮ್ಮ "ರಹಸ್ಯ’ಗಳನ್ನು ಹಂಚಿಕೊಳ್ಳುವುದು ಮತ್ತು ಗರ್ಭಪಾತ ಮಾಡಿಸಿಕೊಳ್ಳುವುದಕ್ಕಿಂತ ’ಇದು’ ಉತ್ತಮ ಎಂಬ ತೀರ್ಮಾನಕ್ಕೆ ಬರುವ ಆ  ಜಾಹೀರಾತು ಅದೇಕೋ ಕಳವಳವನ್ನು ಹುಟ್ಟಿಸಿತು. ಬಹುಶಃ ಆ  ಜಾಹೀರಾತಿನಲ್ಲಿ ಮದುವೆಯಾದ ಗೃಹಿಣಿ ಅಥವಾ ಆಕಸ್ಮಿಕ ಅವಘಢಕ್ಕೆ ತುತ್ತಾದ ಹುಡುಗಿಯೊಬ್ಬಳನ್ನು ತೋರಿಸಿದ್ದರೆ ಹೆಚ್ಚು ಸಮರ್ಥನೀಯವಾಗುತ್ತಿತ್ತೇನೊ. ಕುತೂಹಲದ ಕಣ್ಣಲ್ಲೇ ಎಲ್ಲವನ್ನೂ ನೋಡುವ ಮಕ್ಕಳು, ಯುವಜನರು ಇದನ್ನು ಪ್ರಯೋಗಿಸಲು ಹೊರಟರೆ ತಡೆಯುವವರ್‍ಯಾರು?

ಕೆಲವು ತಿಂಗಳುಗಳ ಹಿಂದೆ ಕೇರಳದಲ್ಲಿ ಇಂಥದ್ದೇ ಜಾಹೀರಾತೊಂದಕ್ಕೆ ಸಂಬಂಧಿಸಿದ್ದಂತೆ ಗಲಾಟೆಯಾಗಿತ್ತು. "ಮರುದಿನ’ದ ಮಾತ್ರೆಯೊಂದರ ಹೆಸರೇ "ಮಿಸ್-ಟೇಕ್’ ಎಂದಿದ್ದದ್ದೇ ಅದರ ಮಿಸ್ಟೇಕು.  ಈ ಬಗೆಯ ಮಾತ್ರೆಗಳು ಯಾರನ್ನ ತಮ್ಮ ಗುರಿಯನ್ನಾಗಿಸಿಕೊಂಡಿವೆ ಅನ್ನೋದು ಸಾಂಪ್ರದಾಯಿಕ ಸಮಾಜವಾಗಿರುವ ಕೇರಳಿಗರ ಪ್ರಶ್ನೆಯಾಗಿತ್ತು. ಇದು ಮಕ್ಕಳಲ್ಲಿ, ನವತರುಣರಲ್ಲಿ  ಜವಾಬ್ದಾರಿ ಇಲ್ಲದ ಸ್ವೇಚ್ಛೆಗೆ ಅನುವು ಮಾಡಿಕೊಡುಲಿದೆ ಎನ್ನುವ ಕಳವಳ ಅವರು  ಈ ಬಗೆಯ ಮಾತ್ರೆಗಳ ವಿರುದ್ಧ ತಿರುಗಿ ನಿಲ್ಲುವಂತೆ ಮಾಡಿತ್ತು.

ನಾವು ಮುಕ್ತ ಸಮಾಜವೆಂದು ಭಾವಿಸಿರುವ ಮುಂದುವರಿದ ದೇಶಗಳಲ್ಲೇ ’ಮರುದಿನದ ಮಾತ್ರೆಗಳ’ ಜಾಹೀರಾತಿಗಳಿಗೆ ಕಡಿವಾಣವಿದೆ. ಅಮೆರಿಕದಲ್ಲಿ ಈ ಬಗೆಯ ಜಾಹೀರಾತುಗಳು ಕೇವಲ ಕೆಲವು ಚಾನೆಲ್‌ಗಳಲ್ಲಿ ಮಾತ್ರ ಪ್ರಸಾರವಾಗುತ್ತದೆ. ಎಲ್ಲರೂ ನೋಡುವ ರೆಗ್ಯುಲರ್ ಚಾನೆಲ್‌ಗಳಲ್ಲಿ ಪ್ರಸಾರ ಮಾಡುವುದಿಲ್ಲ. ಬ್ರಿಟನ್ನಿನಲ್ಲಿ ಸಹ ಈ ಜಾಹೀರಾತು ಕಳೆದ ಏಪ್ರಿಲ್‌ನಿಂದಷ್ಟೇ ಪ್ರಸಾರವಾಗುತ್ತಿದೆ. ಅದೂ ರಾತ್ರಿ  9 ಗಂಟೆಯ ನಂತರವಷ್ಟೇ (ಆ ವೇಳೆಗೆ ಮಕ್ಕಳು ಮಲಗಿರುತ್ತಾರೆ). ಅಲ್ಲಿ ಈ ಜಾಹೀರಾತನ್ನು ಹುಡುಗಿಯೊಬ್ಬಳ ಸ್ವಗತವೆಂಬಂತೆ ಕಾರ್ಟೂನ್‌ನಲ್ಲಿ ಚಿತ್ರಿಸಲಾಗಿದೆ. ಹಾಗಿದ್ದೂ ಸಹ ಅದು ಯುವಕರಲ್ಲಿ ಸುರಕ್ಷಿತವಲ್ಲದ ಲೈಂಗಿಕ ಜೀವನವನ್ನು ಪ್ರಚೋದಿಸುತ್ತಿದೆ, ವಿಷಯದ ಗಂಭೀರತೆಯನ್ನು ಕ್ಷುಲ್ಲಕವೆಂಬಂತೆ ಬಿಂಬಿಸುತ್ತಿದೆ ಎಂದು ನೂರಾರು ದೂರುಗಳು ಬರುತ್ತಿವೆ. ಈ ಮಾತ್ರೆಯ ಜಾಹೀರಾತನ್ನು ತೋರಿಸಬಹುದಾದರೆ ಗರ್ಭಪಾತದ ಮಾತ್ರೆಯ ಜಾಹೀರಾತನ್ನು ಟಿವಿಯಲ್ಲಿ ಪ್ರಸಾರಮಾಡುವುದಿಲ್ಲವೆಂಬ ನಂಬಿಕೆ ನಮಗಿಲ್ಲ ಎನ್ನುತ್ತಾರೆ ಅದರ ವಿರುದ್ಧ ಪ್ರತಿಭಟಿಸುವವರು. ದುರಾದೃಷ್ಟವೆಂದರೆ ಭಾರತದಲ್ಲಿ , ಕೇರಳವನ್ನು ಹೊರತುಪಡಿಸಿದರೆ ಆ ಬಗ್ಗೆ ಸೊಲ್ಲೆತ್ತಿದ ಉದಾಹರಣೆಯೇ ಇಲ್ಲ.

ಇದರರ್ಥ ಈ ಮಾತ್ರೆಗಳನ್ನು ಸಂಪೂರ್ಣವಾಗಿ ವಿರೋಧಿಸಬೇಕು ಎಂದಲ್ಲ. ಮಹಿಳೆಯರಿಗೆ ಅವರ ಲೈಂಗಿಕ ಜೀವನದ ಮೇಲೆ, ಗರ್ಭಧಾರಣೆಯ ಮೇಲೆ ಸಂಪೂರ್ಣ ಸ್ವಾತಂತ್ರ ನೀಡಲಿಕ್ಕಾಗಿ, ಅದರ ಬಗ್ಗೆ ಅರಿವು ಮೂಡಿಸಲಿಕ್ಕಾಗಿಯೇ ಈ ಜಾಹೀರಾತುಗಳನ್ನು ಪ್ರಸಾರ ಮಾಡಲು ಸರಕಾರ ಒಪ್ಪಿಗೆ ನೀಡಿದೆ. ಆದರೆ ಲೈಂಗಿಕತೆಯೊಂದಿಗೆ  ಮಹಿಳೆಯರ ದೈಹಿಕ ಸ್ವಾಸ್ಥ್ಯ ಮತ್ತು ಸಮಾಜದ ಮಾನಸಿಕ ಸ್ವಾಸ್ಥ್ಯವೂ ಅಂಟಿಕೊಂಡಿರುವುದರಿಂದ ನೈತಿಕತೆಯೂ ಇಲ್ಲಿ ಪ್ರಮುಖ ಪಾತ್ರ ವಹಿಸಬೇಕಿತ್ತು. ಈ ಜಾಹೀರಾತುಗಳಲ್ಲಿ ಅದರ ಕುರುಹೇ ಇಲ್ಲದಿರುವ ಬಗ್ಗೆಯಷ್ಟೇ ನಮ್ಮ ಸಂತಾಪ. ಕೈ, ಕೈ ಹಿಡಿದು ನಗುತ್ತಾ ಬರುವ ಗಂಡು ಹೆಣ್ಣಿನ ಜೋಡಿ ’ಟೆನ್ಶನ್ ಫ್ರೀ’ ಎಂದು ಸಾರುವ ಈ ಜಾಹೀರಾತುಗಳು ಯುವ ಪೀಳಿಗೆಯನ್ನು ಮುಕ್ತ ಕಾಮಕ್ಕೆ ಪ್ರಚೋದಿಸುವ, ಲೈಂಗಿಕ ಸ್ವಾತಂತ್ರ್ಯ ನೀಡುವಂತಿದೆ ಎನ್ನುವುದು ಸ್ಪಷ್ಟ.  ಅದರ ಬದಲು ತುರ್ತು ಸಂದರ್ಭದಲ್ಲಿ ಮಾತ್ರ ಬಳಸುವಂತೆ ಸೂಚಿಸಿ, ಇನ್ನಷ್ಟು ಪಾಸಿಟೀವ್ ಆಗಿ, ನಮ್ಮ ಸಮಾಜದ ನಂಬಿಕೆಗಳಿಗೆ, ಆರೋಗ್ಯಕ್ಕೆ ತೊಂದರೆ ನೀಡದಂತೆ ಜಾಹೀರಾತನ್ನು ರೂಪಿಸಿಬಹುದಿತ್ತು.

ಯಾರೋ ದುಷ್ಟರು ಅರೆ ಕ್ಷಣದ ಸುಖಕ್ಕಾಗಿ ಹೆಣ್ಣೊಬ್ಬಳನ್ನು ಬಲಾತ್ಕರಿಸಿದರೆ, ಮುಂದಿನ ಪರಿಣಾಮಗಳನ್ನು ಯೋಚಿಸಿಯೇ ಸಾಯಲು ತೀರ್ಮಾನ ಮಾಡುವ ಮನಸ್ಥಿತಿಯ ಹುಡುಗಿಯರು ನಮ್ಮ ಸಮಾಜದಲ್ಲಿದ್ದಾರೆ. ಆಂಥ ಕ್ಷಣದಲ್ಲಿ ಈ ಮಾತ್ರೆ ಅವರಿಗೆ ಧೈರ್ಯವನ್ನು ಕೊಡುತ್ತದೆಯಲ್ಲದೆ, ಅವರ ಪ್ರಾಣವನ್ನೂ ಉಳಿಸುತ್ತದೆ. ಕೆಲವೊಮ್ಮೆ  ಬೇಜವಾಬ್ದಾರಿಯಿಂದಲೋ, ಅಸಹಾಯಕತೆಯಿಂದಲೋ ಸುರಕ್ಷಾ ಕ್ರಮಗಳನ್ನು ಕೈಗೊಳ್ಳದ ಗೃಹಿಣಿಯರಿಗೆ ಈ ಮಾತ್ರೆ ವರದಾನವಾಗುತ್ತದೆ. ನಿಜವೇ. ಅದರೆ ಅದೇ ಅಭ್ಯಾಸವಾದರೆ ಗತಿಯೇನು? ಸ್ವೇಚ್ಛತೆಗೆ ಬೇಜವಾಬ್ದಾರಿಯ ಸಾಥ್ ಸಿಕ್ಕಂತಾಗುವುದಿಲ್ಲವೇ? ಅಲ್ಲದೆ ಕಾಂಡೋಂ ಬಳಸಲು ಹಿಂಜರೆಯುವ ಗಂಡು "ಬಿಡು, ನೀನು ಬೆಳಗಾಗೆದ್ದು ಅದನೊಮ್ಮೆ ನುಂಗಿಬಿಡು’ ಎಂದು ಅಪ್ಪಣೆ ಮಾಡುವುದಿಲ್ಲ ಎಂಬುದಕ್ಕೆ ನಮ್ಮ ಸಮಾಜದಲ್ಲಿ ಖಾತ್ರಿಯೂ ಇಲ್ಲವಲ್ಲ.


ಜಾಹೀರಾತುಗಳಲ್ಲಿ ಈ ’ಮರುದಿನ’ದ ಮಾತ್ರೆಗಳ ಬಳಸುವಿಕೆಯ ಬಗ್ಗೆ ಸರಿಯಾದ ಮಾಹಿತಿಯೂ ಇಲ್ಲ. ಇದು ಕುಟುಂಬ ಯೋಜನೆಗೆ ಬಳಸುವ ಸಾಮಾನ್ಯ ಕುಟುಂಬ ನಿಯಂತ್ರಣ ಮಾತ್ರೆಯಂದು ತಪ್ಪು ತಿಳಿದುಕೊಂಡು ನಿತ್ಯ ಬಳಸುವವರೂ ಇದ್ದಾರೆ. ಆದರೆ ಇದು ಸಾಮಾನ್ಯ ಕುಟುಂಬ ನಿಯಂತ್ರಣ ಮಾತ್ರೆಯಂಥಲ್ಲ. ಅದರ ಹತ್ತರಷ್ಟು ಹೆಚ್ಚಿನ ಪ್ರಮಾಣದ ರಾಸಾಯನಿಕಗಳಿರುವ ಈ ಮಾತ್ರೆಗಳು ಖಂಡಿತಾ ಬಳಸಲು ಯೋಗ್ಯವಲ್ಲ. ಕೇವಲ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಬಳಸಬಹುದಾದಂಥವು. ಅಡ್ಡ ಪರಿಣಾಮಗಳೂ ಜಾಸ್ತಿ. ಕ್ಯಾನ್ಸರ್‌ಕಾರಕ ಅಂಶಗಳೂ ಅದರಲ್ಲಿರುವುದು ಸಂಶೋಧನೆಗಳಲ್ಲಿ ಪತ್ತೆಯಾಗಿದೆ. ಆದ್ದರಿಂದಲೇ ಈ ಮಾತ್ರೆಗಳು ಯಾವುದೇ ರೀತಿಯಲ್ಲೂ ಕುಟುಂಬ ಯೋಜನೆಗೆ ಪರ್ಯಾಯವಾಗುವುದು ಸಾಧ್ಯವಿಲ್ಲ. ಆದರೆ ಈ ಮಾತ್ರೆಗಳಿವೆಯೆಂಬ ಧೈರ್ಯದಲ್ಲಿ ಇತರ ಸುರಕ್ಷಾ ಮಾರ್ಗಗಳನ್ನು ಕೈಬಿಡುವ ಸಾಧ್ಯತೆ ಇರುವುದೂ ಪ್ರಜ್ಞಾವಂತರ ಆತಂಕಕ್ಕೆ ಕಾರಣ. ಏಕೆಂದರೆ ಈ ಮಾತ್ರೆಗಳು ಕಾಂಡೋಂನಂತೆ ಎಚ್‌ಐವಿ/ಏಡ್ಸ್‌ನಂಥ ಲೈಂಗಿಕ ರೋಗಗಳಿಂದ ಕಾಪಾಡಲಾರದು.

 ಈ ಮೊದಲೂ  ಅಂಥ ತುರ್ತು ಪರಿಸ್ಥಿತಿಯಲ್ಲಿ ಈ ಮಾತ್ರೆಗಳನ್ನೇ ವೈದ್ಯರು ಕೊಡುತ್ತಿದ್ದುದು. ಆದರೆ ಈ ಗ ಈ ಮಾತ್ರೆಗಳನ್ನು ಕೊಳ್ಳಲು ವೈದ್ಯರ ಸಲಹೆಯೇ ಬೇಕಿಲ್ಲ. ಪ್ರಿಸ್ಕ್ರಿಪ್ಷನ್ ಇಲ್ಲದೆಯೇ ಮೆಡಿಕಲ್ ಶಾಪ್‌ಗಳಲ್ಲಿ ಈ ಮಾತ್ರೆಗಳು ದೊರೆಯುತ್ತಿವೆ. ಅತ್ಯಾಚಾರಕ್ಕೊಳಗಾದ ಹುಡುಗಿಯರೇ ಈ ಮಾತ್ರೆಯನ್ನು ಬಳಸುತ್ತಾರೆಂದುಕೊಂಡರೂ, ಅವರಿಗೆ  ವೈದ್ಯರ ಸಲಹೆ, ಮಾನಸಿಕ ಸಾಂತ್ವಾನದ ಅಗತ್ಯವೂ ಇದೆ. ಅದನ್ನು ನೀಡುವವರ್‍ಯಾರು?

  ಧಾರಾವಾಹಿ ನೋಡುವ ಗೃಹಿಣಿಯೊಬ್ಬಳು ಹತ್ತನೇ ತರಗತಿ ಓದುತ್ತಿರುವ ತನ್ನ ಮಗಳೆಲ್ಲಿ ಈ ಜಾಹೀರಾತು ನೋಡುತ್ತಾಳೋ ಎಂಬ ಭಯದಿಂದ ತಕ್ಷಣ ಚಾನೆಲ್ ಬದಲಾಯಿಸುತ್ತಾಳೆ. ಆದರೂ ಭಾರತದಲ್ಲಿ ಪ್ರತಿ ತಿಂಗಳೂ ಸುಮಾರು  2  ಲಕ್ಷ  "ಮರುದಿನ’ದ ಮಾತ್ರೆಗಳು ಮಾರಾಟವಾಗುತ್ತಿವೆ ಎಂಬ ವರದಿ ಪತ್ರಿಕೆಗಳಲ್ಲಿ ಬರುತ್ತಿದೆ.

ಸೋಮವಾರ, ಅಕ್ಟೋಬರ್ 12, 2009

ಛೇ! ಅಪ್ಪನಿಗೂ ವಯಸ್ಸಾಗಿಬಿಡ್ತೇ?




ಕಾಲ ಎಷ್ಟು ಬೇಗ ಬದಲಾಗಿಬಿಡತ್ತಲ್ವಾ? ಪ್ರತೀ ದಿನ ಅದೇ ಸೂರ್ಯ ಅಲ್ಲೇ ಮುಳುಗುತ್ತಿದ್ದರೂ ನಿನ್ನೆ ಇದ್ದ ಹಾಗೆ ಇಂದಿಲ್ಲ. ಚಿಕ್ಕವಳಿದ್ದಾಗ ಎಂದಾದರೂ ಅಪ್ಪನಿಗೂ ವಯಸ್ಸಾಗುತ್ತದೆ ಎಂಬುದನ್ನು ಊಹಿಸಿಯೇ ಇರಲಿಲ್ಲ. "ಅಪ್ಪನಿಗೆ ವಯಸ್ಸಾಗತ್ತಾ? ಅಜ್ಜನಿಗೆ ಮಾತ್ರ ವಯಸ್ಸಾಗುವುದು ’ ಎಂದೇ ನಮ್ಮ ತಿಳುವಳಿಕೆ. ಹಾಗೆ ನೋಡಿದರೆ ಅಪ್ಪ ನಾನು ಭಾರೀ ಫ್ರೆಂಡ್ಸ್. ಚಿಕ್ಕವಳಿದ್ದಾಗ ಶಾಲೆ ಮುಗಿದ ತಕ್ಷಣ ತೋಟಕ್ಕೆ ಓಡ್ತಿದ್ದೆ. ಕೆಲಸ ಮುಗಿದ ಮೇಲೆ ಅಪ್ಪನ ಜತೆ ಮಾತಾಡುತ್ತಾ ಕೆರೆಯ ಏರಿಯ ಮೇಲೆ ಬರುವುದು ನನ್ನ ನೆಚ್ಚಿನ ಸಂಗತಿ. ಆಗಲೇ ನಾನು ಶಾಲೆಯ ಬಗ್ಗೆ , ಗೆಳತಿಯರ ಬಗ್ಗೆ, ಮಾಡಿದ ಪಾಠ, ನಡೆಸಿದ ದಾಂದಲೆಗಳ ಬಗ್ಗೆ ಅಪ್ಪನಿಗೆ ಹೇಳುತ್ತಿದ್ದುದು. ಅಪ್ಪ ಯಾವುದಕ್ಕೂ ಬಯ್ಯದೇ ನನ್ನ ಮಾತು ಕೇಳುತ್ತಾ , ಹೊಸ ಹೊಸ ಆಟ ಹೇಳಿಕೊಡುತ್ತಾ, ದಾರಿಯಲ್ಲಿ ಎದುರಾಗುವ ಹಸು ಕರುಗಳಿಗೆ ದಾರಿ ಮಾಡಿಕೊಡುತ್ತಾ ನನ್ನ ಕೈ ಹಿಡಿದು ಕರೆತರುತ್ತಿದ್ದರು. ನಾನು ಅಷ್ಟೆಲ್ಲಾ ಪಟ್ಟಾಂಗ ಹೊಡೆಯುತ್ತಿದ್ದರೂ ನನ್ನ ದೃಷ್ಟಿ ಮಾತ್ರ ನಮ್ಮ ನೆರಳ ಮೇಲೆಯೆ. ಸೂರ್ಯನಿಗೆ ಬೆನ್ನು ಹಾಕಿ ನಡೆಯುತ್ತಿದ್ದ ನಮ್ಮ ಮುಂದೆ ಉದ್ದೂದ್ದ ನೆರಳುಗಳು. ಆದರೂ ನನ್ನ ನೆರಳು ಅಪ್ಪನ ನೆರಳಿಗಿಂತ ಚಿಕ್ಕದು. ನನ್ನ ನೆರಳು ಅಪ್ಪನ ನೆರಳಿಗಿಂತ ಉದ್ದ ಕಾಣಬೇಕೆಂದು ಮುಂದೆ ಮುಂದೆ ಓಡುತ್ತಿದ್ದೆ. ಅಥವಾ ಅಪ್ಪನ ನೆರಳನ್ನ ತುಳಿಯುತ್ತಾ ಹಿಂದೆ ಹಿಂದೆ ಬರುತ್ತಿದ್ದೆ. ಅಪ್ಪ ನಗುತ್ತಿದ್ದರು.

ಇತ್ತೀಚೆಗೆ ನನ್ನ ಓದು ಮುಗಿಸಿ ಕೆಲಸ ಸಿಕ್ಕ ನಂತರ ಊರಿಗೆ ಹೋದಾಗ ಅಪ್ಪ ಯಾಕೋ ನಿಧಾನವಾಗಿ ನಡೆಯುತ್ತಿದ್ದಾರಲ್ಲ ಅನಿಸಿತ್ತು. ಆಮೇಲೆ ಅದನ್ನು ಮರೆತೇ ಬಿಟ್ಟಿದ್ದೆ. ಆದರೆ ನಿನ್ನ ಬಿಟ್ಟು ಇಲ್ಲಿರಲಾರೆವು, ನಾವೂ ಅಲ್ಲಿಗೇ ಬರುತ್ತೇವೆ ಎಂದು ಪತ್ರ ಬರೆದು ಇಲ್ಲಗೇ ಬಂದರಲ್ಲ, ಅವತ್ತು ಮಾತ್ರ ಇದ್ದಕ್ಕಿದ್ದಂತೆ ಅಪ್ಪನಿಗೆ ವಯಸ್ಸಾಗುತ್ತಿದೆ ಎನಿಸಿ ಕಸಿವಿಸಿಯಾಗತೊಡಗಿತ್ತು. ಸಂಜೆ ಅಪ್ಪನೊಂದಿಗೆ ವಾಕಿಂಗ್ ಹೊರಟರೆ ಅರೇ! ನನ್ನ ನೆರಳು ಅಪ್ಪನ ನೆರಳಿಗಿಂತ ಉದ್ದ! ಅಪ್ಪ ಕುಗ್ಗಿದ್ದಾರೆ ಅನಿಸಿ ಅಪ್ಪನ ಮುಖ ನೋಡಿದರೆ ಅವರಿಗೆ ಮುಳುಗುತ್ತಿರುವ ಸೂರ್ಯನ ಕಿರಣಗಳೂ ಕಣ್ಣಿಗೆ ಚುಚ್ಚಿದಂತಾಗುತ್ತಿತ್ತೇನೋ, ಸೂರ್ಯನಿಗೆ ನನ್ನನ್ನು ಅಡ್ಡ ಮಾಡಿಕೊಂಡು ನನ್ನ ನೆರಳಿನಲ್ಲಿ ಬರುತ್ತಿದ್ದರು. ಖುಷಿಯೋ, ದುಃಖವೋ, ಉಕ್ಕಿಬಂದ ಮಮತೆಯೋ ಗೊತ್ತಾಗದೇ ನಿಧಾನವಾಗಿ ಅವರ ಕೈ ಹಿಡಿದುಕೊಂಡು ನಡೆಯತೊಡಗಿದೆ...