ಬುಧವಾರ, ಮೇ 13, 2009

ಬೆಳೆಯುವ ಪರಿ ಸೋಜಿಗದಲಿ ನೋಡಿ


'ನೋಡ್ರೀ, ಅವನ ಚಡ್ಡಿ ಅವನೇ ಹಾಕಿಕೊಳ್ಳುತ್ತಿದ್ದಾನೆ. ಅಂತೂ ನನ್ ಮಗ ದೊಡ್ಡವನಾಗಿಬಿಟ್ಟ!' ಅಂತ ಸಂಭ್ರಮದ ದನಿಯಲ್ಲಿ ತಾಯೊಬ್ಬಳು ಹೇಳುತ್ತಿದ್ದರೆ ಉಳಿದವರ ಮುಖದಲ್ಲಿ ಮುಸಿ ಮುಸಿ ನಗು. ಅವರಿಗೆ ಚನ್ನಾಗಿ ನೆನಪಿದೆ, ಆ ಮಗು ಮೊದಲು ಅಂಬೆಗಾಲಿಟ್ಟಾಗ, ಎದ್ದು ನಿಲ್ಲಲು ಕಲಿತಾಗ, ಅಮ್ಮಾ ಎಂದಾಗ, 'ನಾನು ಚೂಲಿಗೆ ಹೋತಿನಮ್ಮಾ..'ಎಂದು ರಾಗ ಎಳೆದಾಗ ಅವಳು ಅದೇ ಮಾತನ್ನು ಇಷ್ಟೇ ಸಂಭ್ರಮದಲ್ಲಿ ಹೇಳಿದ್ದಳು. ಈಗಲೂ ಅವಳ ಆ ವಾಕ್ಯದಲ್ಲಿ ಅದೇ ಬೆರಗು.

ಹತ್ತು ವರ್ಷಗಳ ನಂತರ ಬಂದು 'ಓಓ.. ಎಷ್ಟೊಂದು ದೊಡ್ಡವನಾಗಿದ್ದಾನೆ!' ಎಂದು ಉದ್ಗರಿಸುವುದು ಒಂದು ರೀತಿ. ಆದರೆ ಪ್ರತಿ ನಿತ್ಯ, ಪ್ರತಿ ಕ್ಷಣ ಆ ಮಗುವಿನ ಆಟ ಪಾಠಗಳಲ್ಲಿ ಭಾಗಿಯಾಗುತ್ತಿದ್ದರೂ ಯಾವುದೋ ಒಂದು ಕ್ಷಣದಲ್ಲಿ ಅರೇ! ಇವನು ಯಾವಾಗ ಇಷ್ಟೊಂದು ದೊಡ್ಡವನಾದ, ನನಗೆ ಗೊತ್ತೇ ಆಗಲಿಲ್ಲವಲ್ಲ! ಎಂದು ಸೋಜಿಗ ಪಡುವುದಿದೆಯಲ್ಲ, ಅದು ಬೇರೆಯದೇ ರೀತಿಯದು. ಮೊದಲ ಬಾರಿ ಸ್ಕೂಲ್ ಯೂನಿಫಾರ್ಮ್ ಹಾಕಿಕೊಂಡು ಮಗು ಸ್ಕೂಲ್‌ಗೆ ಹೊರಟಾಗ, ಹತ್ತಾರು ಬಾರಿ ಬಿದ್ದು ಸೈಕಲ್ ಹೊಡೆಯಲು ಕಲಿತವ ಒಮ್ಮಲೆ ಬೈಕ್‌ನಲ್ಲಿ ಬುರ್‌ಎಂದು ಬಂದಾಗ, ಹೊಸ ಸೆಲ್ ಫೋನ್ ಬಳಸುವುದು ಹೇಗೆಂದು ಎಂಟು ವರ್ಷದ ಮಗನಿಂದ ಕಲಿಯುವಾಗ, ಮಗಳು ಮದುವೆಯಾಗಿ ಗಂಡನ ಜತೆ ನಿಂತಾಗ ಹೀಗೆ ಅನ್ನಿಸುವುದುಂಟು.

ಊರಿಗೆ ಹೋದಾಗಲೆಲ್ಲಾ ಮೊದಲು ನಾನು ನೆಟ್ಟ ತೆಂಗಿನ ಮರದೆಡೆ ಓಡುತ್ತೇನೆ, ನನಗಿಂತ ಎತ್ತರ ಬೆಳೆದಿದೆ ಎಂದು ಕಣ್ಣಲ್ಲೇ ಅಳೆಯುತ್ತಾ ಖುಷಿ ಪಡುತ್ತಿದ್ದಾಗ, ಪುಟ್ಟ ತಂಗಿ ಮೆಲ್ಲನೆ ನನ್ನ ದುಪ್ಪಟ್ಟ ಎಗರಿಸಿರುತ್ತಾಳೆ. ಬಾಗಿಲ ಹೊರಗೆ ಬಿಟ್ಟಿದ್ದ ನನ್ನ ಹೀಲ್ಡ್ ಚಪ್ಪಲಿ ಹಾಕಿಕೊಂಡು, ನನ್ನದೇ ದುಪ್ಪಟ್ಟವನ್ನ ತನ್ನ ಫ್ರಾಕ್ ಮೇಲೆ ಹಾರಾಡಿಸುತ್ತಾ ರಸ್ತೆಗಿಳಿಯುತ್ತಾಳೆ. ಅಭ್ಯಾಸವಿಲ್ಲದ, ಸರಿಯಾದ ಅಳತೆಯದೂ ಅಲ್ಲದ ಚಪ್ಪಲಿ ಕಾಲಿಗೆ ತೊಡರಿ ಬೀಳುತ್ತಿದ್ದರೂ ತಾನೂ 'ಅಕ್ಕನಂತಾದೆ' ಎಂದು ಬೀಗುತ್ತಾ ಸಾಗುವ ಅವಳ ನಡಿಗೆ ನನಗ್ಯಾವತ್ತೂ ಸೋಜಿಗ.

ಆದರೆ ಕೆಲವರಿಗೆ ಬೆಳವಣಿಗೆ ಬೇಕಿಲ್ಲ. ನಾಳೆ ಏನಾದೀತೆಂಬ ಸಹಜ ಕುತೂಹಲದ ಜತೆಗೇ ಚೂರು ದಿಗಿಲು, ಮೂವತ್ತು ದಾಟಿದವರ ಹುಟ್ಟುಹಬ್ಬದಂತೆ ಅದು ಅನಪೇಕ್ಷಿತ ಅತಿಥಿ. ಆದರೂ ಕಾಲ ನಿಲ್ಲುವುದಿಲ್ಲ. 'ನನ್ನ ಮಗ ಬೇರೆ ಜಾತಿ ಹುಡುಗಿಯನ್ನು ಮದುವೆಯಾಗುತ್ತೇನೆಂದಾಗ ಅವನನ್ನು ಮನೆ ಬಿಟ್ಟು ಓಡಿಸಿಬಿಟ್ಟಿದ್ದೆ. ಈಗ ನನ್ನ ಮುಪ್ಪಿನ ಕಾಲಕ್ಕೆ ಮಗ-ಸೊಸೆ ತಮ್ಮ ಮನೆಯಲ್ಲಿಟ್ಟುಕೊಂಡಿದ್ದಾರೆ. ಒಂದು ದಿನವೂ ಆ ಘಟನೆಯ ಬಗ್ಗೆ ಚಕಾರವೆತ್ತಿಲ್ಲ, ಕೊನೆಗೂ ನನ್ನ ಮಗ ನನಗಿಂತ ದೊಡ್ಡವನಾಗಿಬಿಟ್ಟ!' ಎಂದು ಹಿರಿಯರೊಬ್ಬರು ಕಣ್ದುಂಬಿಕೊಂಡರು. ಆ ಸೋತ ದನಿಯಲ್ಲೂ ಅಚ್ಚರಿಯ ಹೊಳಪಿತ್ತು.

4 ಕಾಮೆಂಟ್‌ಗಳು:

 1. ನಿಮ್ಮ ಲೇಖನ ತುಂಬಾ ಇಷ್ಟವಾಯಿತು, ಜೀವನದಲ್ಲಿ ನೆಡೆಯುತ್ತಿರುವುದೇ ಹೀಗೆ!!!

  ಪ್ರತ್ಯುತ್ತರಅಳಿಸಿ
 2. ಗುಡ್ ಚೆನ್ನಾಗಿ ಇದೆ article.. ಜೀವನ ದಲ್ಲಿ ಆಗುತ್ತಿರುವುದೇ ಹೀಗೆ.....
  ನನ್ನ ಬ್ಲಾಗಿನಲ್ಲಿ ನನ್ನ ಅಮ್ಮನ ಬಗ್ಗೆ ಅವರ ಹವ್ಯಾಸದ ಬಗ್ಗೆ ಬರೆದಿರುವೆ,, ಒಮ್ಮೆ ಬಂದು ಹೋಗಿ.....

  ಗುರು

  ಪ್ರತ್ಯುತ್ತರಅಳಿಸಿ
 3. ರಜನಿ ಮೇಡಮ್,

  ಬರಹ ಬಲು ಸುಂದರವಾಗಿದೆ..ಮನತಟ್ಟುತ್ತದೆ. ಬೆರಗುಗಳಲ್ಲಿ ಅಮ್ಮನದೆಂದರೇ ಅದನ್ನು ವರ್ಣಿಸಲು ಪದಗಳಿಲ್ಲ...ಧನ್ಯವಾದಗಳು

  ಪ್ರತ್ಯುತ್ತರಅಳಿಸಿ