ಸೋಮವಾರ, ಜೂನ್ 22, 2009

ತುಂಗೆಗೆ ಮಳೆರಾಯನೊಂದಿಗೆ ಮದುವೆಯಾಯಿತಂತೆ!


ಹರಿವ ಒರತೆಯನ್ನು ಕಾಪಿಟ್ಟುಕೊಂಡು ಗಂಭೀರವಾಗಿ ನಡೆಯುವ ಹುಡುಗಿ, ಅದು ಹೇಗೆ ಬದಲಾದಳೋ! ನಿತ್ಯ ನೋಡುವವರಿಗೇ ಬೆರಗು. ತಲೆ ಬಗ್ಗಿಸಿ ದಾರಿ ತುಳಿಯುತ್ತಿದ್ದವಳು ಬಿಗುಮಾನ ಸಡಿಲಿಸಿ ಚಿಮ್ಮುತ್ತಿದ್ದಾಳೆ, ನಡಿಗೆಯಲ್ಲಿ ಅಪರಿಚಿತರೂ ಗುರುತಿಬಹುದಾದ ಹೊಸ ಒನಪು, ವಯ್ಯಾರ. ಬಿಸಿಲು ಚೆಲ್ಲಿ ನಕ್ಕಂತೆ ಮಾಡಿ ಕದ್ದೋಡಿ ಬಂದು ಮುತ್ತಿಡುತ್ತಿರಬೇಕು ಅವಳ ಗಂಡ, ಸಾಕ್ಷಿ ಬೇಕಾದರೆ ಅವಳ ಮುಖ ನೋಡಿ, ದಟ್ಟ ಕೆಂಪು. ಕಾಲನ ಮೇಲೆ ಭರವಸೆಯಿಟ್ಟು ವಿರಹದ ಬಿಸಿ ಸಹಿಸಿದ್ದ ಮನಕ್ಕೆ ತಂಪಿನ ಮೊದಲ ಮುತ್ತು ಬಿದ್ದಿದ್ದೇ ಸಂಭ್ರಮದ ಮಿಂಚು ಹರಿದಿದೆ. ಒಂದು ಎರಡು ಮೂರು... ಸುರಿದ ಹನಿಗಳ ಲೆಕ್ಕವಿಲ್ಲ. ಹರಿದಷ್ಟೂ ಪ್ರೀತಿ, ಉಕ್ಕಿದಷ್ಟೂ ಖುಷಿ. ಛತ್ರಿಯ ಸಂದಿಯಿಂದ ನವದಂಪತಿಯ ರಾಸಲೀಲೆ ಕದ್ದು ನೋಡಿದವರಿಗೆ ಕಂಡದ್ದು ಅವರಿಬ್ಬರ ನಡುವೆ ಬಾಗಿ ನಿಂತ ಕಾಮನಬಿಲ್ಲು ಮಾತ್ರ.

ಉಕ್ಕಿ ಹರಿದಿದೆಯಂತೆ ಪಕ್ಕದೂರಲಿ ಪುಟ್ಟ ಕೆರೆ ಕೋಡಿ ಎಂದು ಮಾತನಾಡುತ್ತಿದ್ದವರು ನೋಡುನೋಡುತ್ತಿದ್ದಂತೆ ಇಲ್ಲಿ ಹರವು ಹೆಚ್ಚಿದೆ, ಹನಿ ಬಿದ್ದಷ್ಟೂ ಬಾಚಿ ಒಳಗೆಳೆದುಕೊಳ್ಳುವ ಆಸೆ. ಸುಖದ ಸ್ಪರ್ಶದಿಂದ ಅರೆಬಿರಿದ ಕಣ್ಣಲ್ಲಿ ಮುಗಿಲು ಕಟ್ಟಿದ ಕಪ್ಪು ಮೋಡದ ಕನಸು. ಸಡಗರದ ನಡೆಗೆ ಅಡ್ಡವಾಗುವ ಕೃತಕ ಅಣೇಕಟ್ಟು ಅವಳಿಗಿಷ್ಟವಿಲ್ಲವಂತೆ. ದುಮುದುಮು ಎನ್ನುತ್ತಲೇ ತುಂಬುತ್ತದೆ, ದಾಟಿ ನುಗ್ಗುತ್ತದೆ ಸಿರಿಯ ಹೆರುವ ಬಯಕೆ. ಕಾದು ನಿಂತಿದೆ ಅವಳ ತವರು ಮನೆ ಸೀಮಂತದ ಸೀರೆ ಉಡಿಸಲು. ಮೊಳಕೆಯೊಡೆದ ಬೀಜದಲಿ ಇಣುಕಿ ನೋಡುತಿದೆ ಹಸಿರ ಉಸಿರು. ಹೊಳೆಯುತಿದೆ ಉಬ್ಬಿದ ಹಸಿರ ಒಡಲಿನಂಚಿನಲ್ಲಿ ಹೊಳೆವ ಚಿನ್ನದ ಮಿಂಚು. ಏಳನೆಯ ತಿಂಗಳಲಿ ಮಡಿಲು ತುಂಬಲಿಕ್ಕಿದೆಯಂತೆ, ಮುಂಬರುವ ನನಸಿಗೆ ಇಂದೇ ತೊಟ್ಟಿಲು ಕಟ್ಟುವ ತವಕ. ಆದರೇನಂತೆ ಅವಳೀಗ ಸಂತೃಪ್ತೆ , ಮುಂಬರುವ ದಿನಗಳಲಿ ತೂಗಿ ತೊನೆಯಲಿದೆ ಫಸಲು... ಕನಸು ಕಣ್ಣಿನ ರೈತನ ಮನೆಯಿಂದ ತೇಲಿ ಬರುತಲಿದೆ ಮಗುವಿನ ನಗುವು.

4 ಕಾಮೆಂಟ್‌ಗಳು:

  1. ವಿಜಯ ಕರ್ನಾಟಕದಲ್ಲಿ ನಿಮ್ಮ ಲೇಖನ ಓದಿದ್ದೆ. ಕಾಕತಾಳಿಯವೆಂಬಂತೆ ಮರುದಿನ ಅಂತರ್ಜಾಲದಲ್ಲಿ ನಿಮ್ಮ ಬ್ಲಾಗ್ ಲಿಂಕ್ ಸಿಕ್ಕಿತು. ತುಂಗೆಯ ವರ್ಣನೆ ಸೊಗಸಾಗಿದೆ, ಭಿನ್ನವಾಗಿದೆ. ಇದೆ ದಿನ ತುಂಗೆಯಲ್ಲಿ ಲೀನವಾದ 19 ಮಂದಿಯ ಕುರಿತು ನೋವಾಯಿತು
    -ವೀರೇಶ್

    ಪ್ರತ್ಯುತ್ತರಅಳಿಸಿ