
ಶ್.... ಗಣಪತಿ ಬಪ್ಪಾ.... ಮೋರ್ಯಾ...
ಕೈಲಿದ್ದ ಗಣಪತಿಯನ್ನು ಕಂಡವರ ಮನೆ ಮುಂದೆ ಇಟ್ಟು ಹೀಗೆ ಜೋರಾಗಿ ಒಮ್ಮೆಲೆ ಕೂಗಿ ಎದ್ದುಬಿದ್ದು ಓಡಿಬಿಡುತ್ತಿತ್ತು ನಮ್ಮ ಗುಂಪು. ಅರೆ ಕ್ಷಣ ನಮ್ಮ ಗಣಪತಿ ಅಲ್ಲಿ ಅನಾಥ. ಮರು ಕ್ಷಣದಲ್ಲೇ ಆ ಮನೆಯ ಬಾಗಿಲು ತೆರೆಯುತ್ತಿತ್ತು. ನೋಡಿದರೆ ಎದುರಿಗೇ ಸಾಕ್ಷಾತ್ ಗಣಪತಿ. ಹಬ್ಬದ ದಿನ ಬಾಗಿಲಿಗೆ ಬಂದ ಗಣಪತಿಯನ್ನು ಹಾಗೆ ಕಳಿಸುವುದಕ್ಕಾಗುತ್ತದೆಯೇ? ಆರತಿ ಮಾಡಿ ಒಳಗೆ ಕೊಂಡೊಯ್ದು ಮಂಟಪ, ನೈವೇದ್ಯಕ್ಕೆ ಸಿದ್ಧ ಮಾಡಿಕೊಳ್ಳಬೇಕು. ಪಾಪ! ಕಣ್ಣು ತಿಕ್ಕಿಕೊಳ್ಳುತ್ತಾ ಹೊರಗೆ ಬಂದಿದ್ದ ಮನೆಯೊಡೆಯನ ನಿದ್ದೆ ಅದೆಲ್ಲಿ ಹಾರಿಹೋಗುತ್ತಿತ್ತೋ?
ಗಣಪತಿ ತಯಾರಿಸುವ ಕಿಟ್ಟಣ್ಣ ಇನ್ನೂ ಮಣ್ಣು ತಂದಿರುತ್ತಿದ್ದನೋ ಇಲ್ಲವೋ. ನಮ್ಮ ಹುಡುಗರ ಗುಂಪಂತೂ ಶ್ರಾವಣ ಮಾಸ ಪ್ರಾರಂಭವಾದಾಗಲಿಂದ ಬಹಳ ರಹಸ್ಯವಾಗಿ, ಮತ್ತು ಅಷ್ಟೇ ಶ್ರದ್ಧೆಯಿಂದ ಕಳ್ಳ ಗಣಪತಿ ತಯಾರಿಸಲು ಕೂತುಬಿಡುತ್ತಿತ್ತು. ಗಣಪತಿ ಮಾಡಲು ಸರಿಯಾಗಿ ಬಾರದಿದ್ದರೂ ಅದಕ್ಕೆ ದೊಡ್ಡ ಕಿರೀಟ, ಉದ್ದ ಸೊಂಡಿಲು, ದಪ್ಪ ಹೊಟ್ಟೆ ಇಟ್ಟು ಹೇಗೋ ಮೂರ್ತಿಯೊಂದನ್ನು ಮಾಡಿಬಿಡುತ್ತಿದ್ದೆವು. ಯಾರದ್ದೋ ಮನೆಗೆ ಹಚ್ಚಲು ತಂದಿರುವ ಬಣ್ಣವನ್ನು ಕದ್ದುತಂದು ಆ ಮೂರ್ತಿಗೆ ಹಚ್ಚಿದರೆ... ಆಹಾ! ಗಣಪತಿ ಸಿದ್ಧ. ಅದು ದೊಡ್ಡವರಿಗೆ ಕಾಣದಂತೆ ಕಾಯುವ, ಸುರಿವ ಮಳೆಯಿಂದ ಕಾಪಾಡುವ ಹೊಣೆ ಬೇರೆ. ಹಬ್ಬಕ್ಕೆ 2-3 ದಿನವಿದ್ದಾಗ ಹುಡುಗರ ಗುಂಪು ರಹಸ್ಯ ಸಭೆ ಸೇರಿ ಯಾರ ಮನೆಯಲಿ ಗಣಪತಿ ಇಡಬೇಕೆಂಬ ತೀರ್ಮಾನ ಕೈಗೊಳ್ಳುತ್ತಿತ್ತು. ಸಾಮಾನ್ಯವಾಗಿ ಮಾವಿನ ಕಾಯಿ ಕೊಯ್ಯಲು ಬಿಡದ, ಮಕ್ಕಳಿಗೆ ಬೈಯುವ, ತೀರಾ ಜುಗ್ಗತನ ತೋರುವ, ಗಣಪತಿ ಹಬ್ಬ ಮಾಡದ ಮನೆಯೊಂದನ್ನು ಆರಿಸಿಕೊಳ್ಳಲಾಗುತ್ತಿತ್ತು. ಹಬ್ಬದ ದಿನ ಬೆಳಗ್ಗೆ ನಾಲ್ಕು-ನಾಲ್ಕೂವರೆಗೆ ಎದ್ದು ಎಲ್ಲರೂ ಸೇರಿ ಯಾರಿಗೂ ಗೊತ್ತಾಗದಂತೆ ಆ ಮೂರ್ತಿಯನ್ನು ಎತ್ತಿಕೊಂಡು ಹೋಗಿ ಆ ಮನೆಯ ಬಾಗಿಲಲ್ಲಿ ಇಟ್ಟು ....ಗಣಪತಿ ಬಪ್ಪಾ...ಮೋರ್ಯಾ..
ಪಾಪ! ಹಬ್ಬಕ್ಕೆಂದು ಯಾವ ತಯಾರಿಯನ್ನೂ ಮಾಡಿಕೊಂಡಿರದ ಆ ಮನೆಯವರ ಸ್ಥಿತಿ ಅಂದು ದೇವರಿಗೇ ಪ್ರೀತಿ. ಒಂದೆಡೆ ನಮ್ಮನ್ನು ಬೈಯುತ್ತಾ... ಇನ್ನೊಂದೆಡೆ ಆವತ್ತಿನ ಪೂಜೆಗೆ ಪುರೋಹಿತರನ್ನು ಕರೆಸುವ, ಅಡುಗೆಗೆ ದಿನಸಿ ತರುವುದರ ಜತೆಗೆ ಒಂದು ವರ್ಷ ಗಣಪತಿ ಇಟ್ಟವರು ಕನಿಷ್ಠ ಮೂರು ವರ್ಷ ಇಡಲೇ ಬೇಕು ಎಂಬ ಅಲಿಖಿತ ನಿಯಮದ ಯೋಚನೆ. ಮೂರು ವರ್ಷ ಗಣಪತಿ ತಂದು ಪೂಜೆ ಮಾಡಿ ಅಭ್ಯಾಸವಾದರೆ ಆನಂತರ ಎಂದೂ ಗಣಪತಿ ಹಬ್ಬವನ್ನು ಬಿಡುವುದಿಲ್ಲವೆಂಬುದು ನಮ್ಮ ನಂಬಿಕೆ.

ಸಂಜೆ 21 ಗಣಪತಿ ನೋಡಬೇಕೆಂದು ಮನೆ ಮನೆಗೆ ತಿರುಗಲು ಹೊರಡುತ್ತಿದ್ದ ನಮ್ಮ ಗುಂಪಿಗೆ ಕಳ್ಳ ಗಣಪತಿ ಇಟ್ಟಿರುವ ಮನೆಗೆ ಹೋಗಲು ಭಾರಿ ಸಂಭ್ರಮ. "ಅವಸರಕ್ಕೆ ಮಾಡಿದ್ದಾದರೂ ಪಂಚಕಜ್ಜಾಯ ತುಂಬಾ ರುಚಿ ಇದೆ ಮರಾಯ್ರೇ' ಎಂದು ಅವರನ್ನು ಕಿಚಾಯಿಸುವುದು ಬೇರೆ. ನಮ್ಮನ್ನು ಕೊಂದು ಬಿಡುವಷ್ಟು ಕೋಪ ಉಕ್ಕಿಬರುತ್ತಿದ್ದರೂ ಅವರು ಏನೂ ಮಾಡುವಂತಿಲ್ಲ. ಏಕೆಂದರೆ ನಮ್ಮ ಗಣಪತಿ ಅಲ್ಲೇ ನಗುತ್ತಿರುತ್ತಾನಲ್ಲ!