ಮಂಗಳವಾರ, ಸೆಪ್ಟೆಂಬರ್ 1, 2009

"ಸುಪರ್" ಗುರುವಿಗೆ ಸಲಾಮ್

ಸತೀಶ ಕುಮಾರನಿಗೆ ಚಿಕ್ಕಂದಿನಿಂದಲೂ ಓದುವ ಹುಚ್ಚು. ಆದರೆ ಅವನ ತಾಯಿಗೆ ಅದೇ ಚಿಂತೆ. ತನಗೆ ಬರುವ 200 ರೂ. ವಿಧವಾ ವೇತನದಲ್ಲಿ ಊಟಕ್ಕೆ ಅಕ್ಕಿ ಕೊಳ್ಳದೇ, ಅವನನ್ನು ಉತ್ತಮ ಶಾಲೆಗೆ ಕಳಿಸುವುದು ಕನಸಿನ ಮಾತೇ ಸರಿ. ಆದರೆ ಈ ವರುಷದ ಐಐಟಿ ಪ್ರವೇಶ ಪರೀಕ್ಷೆಯಲ್ಲಿ ,ರಾಷ್ಟ್ರಮಟ್ಟದಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರ ಪಟ್ಟಿಯಲ್ಲಿ ಇವನ ಹೆಸರೂ ಇದೆ !

ಜಾಡಮಾಲಿಯೊಬ್ಬನ ಮಗ ನಾಗೇಂದ್ರ ಓದಿದ್ದು ಹಳ್ಳಿಯ ಸರಕಾರಿ ಶಾಲೆಯಲ್ಲಿ. ಆದರೆ ಯಾವತ್ತೂ ಶಾಲೆಗೆ ಈತನೇ ಮೊದಲಿಗ. ಆದರೆ ಮನೆಯಲ್ಲಿ ಊಟಕ್ಕೂ ಗತಿ ಇಲ್ಲದ ಬಡತನ. ಶಾಲೆಗೆ ಪ್ರವೇಶ ಪಡೆಯಲಿಕ್ಕೇ ಇವನು ತುಂಬಾ ಹೋರಾಟ ಮಾಡಬೇಕಾಗಿತ್ತು. ಪರೀಕ್ಷೆ ಸಮಯದಲ್ಲಿ ಪುಸ್ತಕಗಳನ್ನು ಕಡ ತಂದು ಓದಬೇಕಾಗುತ್ತಿತ್ತು. ಆದರೆ ಇಂದು ರಾಷ್ಟ್ರದ ಪ್ರಖ್ಯಾತ ಶಿಕ್ಷಣ ಸಂಸ್ಥೆ ಐಐಟಿಯಲ್ಲಿ ವಿದ್ಯಾರ್ಥಿ!

ಬಿಹಾರದಲ್ಲೀಗ ಇಂಥ ಪವಾಡಗಳು ಜರುಗುತ್ತಿವೆ. ಇವರ್‍ಯಾರೂ ಆರ್ಥಿಕವಾಗಿ ಸದೃಢರಲ್ಲ, ಆದರೆ ಎಲ್ಲರೂ ಬುದ್ಧಿವಂತರು ಹಾಗೂ ಎಲ್ಲರೂ ರಾಮಾನುಜನ್ ಸ್ಕೂಲ್ ಆಫ್ ಮ್ಯಾಥಮ್ಯಾಟಿಕ್ಸ್‌ನಲ್ಲಿ ತರಬೇತಿ ಪಡೆದವರು. ಬಡತನದ ಬೇಗೆಯಲ್ಲಿ ಕಮರಿ ಹೋಗಬೇಕಾಗಿದ್ದ ಈ ಪ್ರತಿಭೆಗಳಿಗೆ ಸಾಣೆ ಹಿಡಿದು ಬೆಳಕಿಗೆ ತಂದಿದ್ದೇ ಒಂದು ಯಶೋಗಾಥೆ.

ಪ್ರತಿ ಏಪ್ರಿಲ್‌ನಲ್ಲಿ ಸುಮಾರು ಎರಡೂವರೆ ಲಕ್ಷ ವಿದ್ಯಾರ್ಥಿಗಳು, ಭಾರತದ ಏಳು ಪ್ರಖ್ಯಾತ ವಿದ್ಯಾಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಹಲವು ತಿಂಗಳ ಪೂರ್ವ ಸಿದ್ಧತೆಯೊಂದಿಗೆ ಐಐಟಿ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಪ್ರವೇಶ ಪರೀಕ್ಷೆ ಬರೆಯುತ್ತಾರೆ. ಆರು ಗಂಟೆಗಳ ಕ್ಲಿಷ್ಟಕರ ಪರೀಕ್ಷೆಯಲ್ಲಿ ಆಯ್ಕೆಯಾಗುವುದು ಕೇವಲ ಐದು ಸಾವಿರ ವಿದ್ಯಾರ್ಥಿಗಳು! ಸಾಮಾನ್ಯವಾಗಿ ಆಯ್ಕೆಯಾಗುವ ಮಧ್ಯಮ ವರ್ಗ ಮತ್ತು ಮೇಲ್ಮಧ್ಯಮ ವರ್ಗದ ವಿದ್ಯಾರ್ಥಿಗಳು ಇದಕ್ಕಾಗಿ ಖಾಸಗಿ ಟ್ಯೂಶನ್ ತೆಗೆದುಕೊಂಡಿರುತ್ತಾರೆ. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ತೀರಾ ಕೆಳವರ್ಗದ, ಬಡತನ ರೇಖೆಗಿಂತ ಎಷ್ಟೋ ಕೆಳಗಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳೂ ಐಐಟಿಗೆ ಪ್ರವೇಶ ಪಡೆಯುತ್ತಿದ್ದಾರೆ. ಆದರ ಸಂಪೂರ್ಣ ಕ್ರೆಡಿಟ್ ಸಲ್ಲಬೇಕಾಗಿರುವುದು - ಸದಾ ಅನಕ್ಷರತೆ, ಬಡತನ, ಭ್ರಷ್ಟಾಚಾರದಿಂದಲೇ ಕುಖ್ಯಾತಿಗೊಳಗಾಗಿರುವ ಬಿಹಾರದ ರಾಜಧಾನಿ ಪಾಟ್ನಾದಲ್ಲಿರುವ - ಆನಂದ ಕುಮಾರ್‌ಗೆ ಮತ್ತು ಅವರ ಸಂಸ್ಥೆ 'ರಾಮಾನುಜನ್ ಸ್ಕೂಲ್ ಆಫ್ ಮ್ಯಾಥಮೆಟಿಕ್ಸ'ಗೆ.


ಪ್ರತಿ ವರುಷ, ಆರ್ಥಿಕವಾಗಿ ಹಿಂದಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ಐಐಟಿ ತರಬೇತಿ ನೀಡುವ ’ಸುಪರ್ ೩೦’ ಎಂಬ ಪರಿಕಲ್ಪನೆ ಆನಂದಕುಮಾರ್‌ಗೆ ಬಂದದ್ದೇ "ರಾಮಾನುಜನ್ ಸ್ಕೂಲ್ ಆಫ್ ಮ್ಯಾಥಮ್ಯಾಟಿಕ್ಸ್’ ಸಂಸ್ಥೆಯ ಸ್ಥಾಪನೆಗೆ ಕಾರಣವಾಯ್ತು. ಗಣಿತದ ಶಿಕ್ಷಕ ಹಾಗೂ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪತ್ರಿಕೆಗಳ ಅಂಕಣಕಾರರಾಗಿರುವ ಆನಂದಕುಮಾರ್ ಬಂದಿದ್ದೂ, ಮನೆಯಲ್ಲಿ ಹಪ್ಪಳ ಮಾಡಿ ಮಾರುವುದನ್ನೇ ಉದ್ಯೋಗ ಮಾಡಿಕೊಂಡಿದ್ದ ಕುಟುಂಬದಿಂದಲೇ. ಹೀಗಾಗಿಯೇ ಬಡತನದ ಪರಿಣಾಮಗಳೂ ಮತ್ತು ಕೇವಲ ಹುಟ್ಟಿನಿಂದ ಬರುವ ಬುದ್ಧಿವಂತಿಕೆಯೊಂದೇ ಜೀವನದಲ್ಲಿ ಯಶಸ್ಸು ತಂದುಕೊಡಲು ಸಾಧ್ಯವಿಲ್ಲ ಎಂಬುದು ಅವರಿಗೆ ಚೆನ್ನಾಗಿಯೇ ಗೊತ್ತಿತ್ತು. ಪಾಟ್ನಾದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಅಭಯಾನಂದ್ (ಈಗ ಅವರೂ ತರಬೇತಿ ಕೇಂದ್ರ ಆರಂಭಿಸಿದ್ದು, ಅದೂ ಯಶಸ್ವಿಯಾಗಿದೆ) ಜತೆ ಕೆಲಸ ಮಾಡುತ್ತಿದ್ದ ಆನಂದಕುಮಾರ್ 2002ರಲ್ಲಿ ತಮ್ಮ ಮನೆಯ ಒಂದು ಭಾಗದಲ್ಲೇ ವಿದ್ಯಾರ್ಥಿಗಳಿಗೆ ಐಐಟಿ ತರಬೇತಿ ನೀಡಲು ಪ್ರಾರಂಭಿಸಿದರು. ಅದು ತರಗತಿ ಎನ್ನುವುದಕ್ಕಿಂತ ತಗಡಿನ ಹೊದಿಕೆ ಹೊದೆಸಿದ ದನದ ಕೊಟ್ಟಿಗೆಯಂತಿದೆ. ಕುಳಿತುಕೊಳ್ಳಲು ಉದ್ದನೆಯ ಮರದ ಬೆಂಚುಗಳು. ಅಲ್ಲಿಯ ಪಾಠ ಕೇಳುವುದಕ್ಕೆ ಅಕ್ಕಪಕ್ಕದ ಹಳ್ಳಿಗಳಿಂದ ಬಸ್ಸಿನಲ್ಲಿ, ಸೈಕಲ್ಲಿನಲ್ಲಿ, ಅಥವಾ ಪಕ್ಕದ ಉಚಿತ ಹಾಸ್ಟೆಲ್‌ನಿಂದ ಬರಿಯ ಕಾಲಿನಲ್ಲಿ ನಡೆಯುತ್ತಾ ವಿದ್ಯಾರ್ಥಿಗಳು ಬರುತ್ತಾರೆ. ಆದರೆ ಅಲ್ಲಿ ಸೇರಿದ ಮೂವತ್ತಕ್ಕೆ ಮೂವತ್ತೂ ವಿದ್ಯಾರ್ಥಿಗಳು ಐಐಟಿಯಲ್ಲಿ ಪ್ರವೇಶ ಪಡೆದಿದ್ದಾರೆ !

ಶ್ರೇಷ್ಠ ಗಣಿತಜ್ಞ ರಾಮಾನುಜನ್ ಹೆಸರನ್ನೇ ಹೊತ್ತ ಈ ಸಂಸ್ಥೆಗೆ ಸೇರಲು ಸಾವಿರಾರು ವಿದ್ಯಾರ್ಥಿಗಳು ಸಾಲುಗಟ್ಟುತ್ತಾರೆ. ಆದರೆ ಅಲ್ಲಿ ಸೇರಲು ಬೇಕಾದ ಎರಡು ವಿಶೇಷ ಅರ್ಹತೆಗಳೆಂದರೆ ಅಪಾರ ಬುದ್ಧಿವಂತಿಕೆ ಹಾಗೂ ಬಡತನ! ಕೇವಲ ಅರುವತ್ತು ರೂಪಾಯಿಯ ಅರ್ಜಿಯನ್ನು ಸುಮಾರು ಆರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಖರೀದಿಸುತ್ತಾರೆ. ಅದರಲ್ಲಿ ಮೂವತ್ತು ವಿಶೇಷ ಬುದ್ಧಿವಂತಿಕೆಯ ವಿದ್ಯಾರ್ಥಿಗಳನ್ನು ಆರಿಸಲು ಮೂರು ವಿಧವಾದ ಪರೀಕ್ಷೆಗಳನ್ನು ಬರೆಯಬೇಕಾಗುತ್ತದೆ. ಕ್ಲಿಷ್ಟ, ಹೆಚ್ಚು ಕ್ಲಿಷ್ಟ, ಅತ್ಯಂತ ಹೆಚ್ಚು ಕ್ಲಿಷ್ಟದ ಈ ಪರೀಕ್ಷೆಗಳಲ್ಲಿ ವಿದ್ಯಾರ್ಥಿಯ ಐ.ಕ್ಯು. (ಬುದ್ಧಿಮತ್ತೆ)ಪರೀಕ್ಷಿಸಲಾಗುತ್ತದೆ. ಆಯ್ದ "ಸುಪರ್ 30 ವಿದ್ಯಾರ್ಥಿಗಳಿಗೆ ಮುಂದಿನ ಒಂದು ವರುಷ ಉಚಿತ ಹಾಸ್ಟೆಲ್, ಪಾಠ, ತರಬೇತಿ. ಆದರೆ ಒಂದೇ ಒಂದು ತರಗತಿಯನ್ನೂ ತಪ್ಪಿಸುವಂತಿಲ್ಲ.

ಇಲ್ಲಿ ಇತರ ಕೋಚಿಂಗ್ ಕ್ಲಾಸ್‌ಗಳ ರೀತಿಯಲ್ಲಿ , ಸುಲಭವಾಗಿ ಐಐಟಿಯಲ್ಲಿ ಪ್ರವೇಶ ಪಡೆಯುವುದು ಹೇಗೆ ಎಂದು ಹೇಳಿಕೊಡುವುದಿಲ್ಲ. ಯಾವುದೇ ಅಡ್ಡ ದಾರಿಗಳಿಲ್ಲ. ಏನು ಪಡೆಯಬೇಕೆಂದರೂ ಕಷ್ಟಪಡಲೇಬೇಕು ಎನ್ನುವುದು ಇಲ್ಲಿಯ ಅಲಿಖಿತ ನಿಯಮ. ಆದ್ದರಿಂದಲೇ ಇಲ್ಲಿಯ ವಿದ್ಯಾರ್ಥಿಗಳು ಒಂದು ವರುಷವನ್ನು ಸಂಪೂರ್ಣವಾಗಿ ವಿದ್ಯಾಭ್ಯಾಸದ ಮೇಲೆ ಕೇಂದ್ರೀಕರಿಸಬೇಕು. ಆ ಒಂದು ವರುಷ ಓದುವುದನ್ನು ಬಿಟ್ಟು ಬೇರೇನು ಮಾಡಲೂ ಅವಕಾಶವಿಲ್ಲ. ಅವರಿರುವ ಹಾಸ್ಟೆಲ್‌ನಲ್ಲಿ ಟಿವಿ ಇಲ್ಲ, ಕಂಪ್ಯೂಟರ್ ಇಲ್ಲ. ಆಟವಾಡುವಂತಿಲ್ಲ, ಸಿನಿಮಾ ಇಲ್ಲವೇ ಇಲ್ಲ. ಹಾಗೂ ಅಲ್ಲಿಯ ವಿದ್ಯಾರ್ಥಿಗಳು ಅದನ್ನು ಬಯಸುವುದೂ ಇಲ್ಲ. ಏಕೆಂದರೆ ಇಡೀ ಜಗತ್ತನ್ನೇ ಗೆಲ್ಲುವಷ್ಟು ಬುದ್ಧಿವಂತಿಕೆ ಇದ್ದೂ ಬಡತನದಿಂದಾಗಿ ಕಟ್ಟಿ ಹಾಕಲ್ಪಟ್ಟಿದ್ದೇವೆ ಎಂದು ಅರಿವಾದಾಗ, ಆ ಕಟ್ಟನ್ನು ಒಡೆದುಹಾಕಲು ಏನು ಬೇಕಾದರೂ ಮಾಡಲು ಸಿದ್ಧರಾಗುತ್ತಾರೆ. ಅದಕ್ಕೆ ಇಲ್ಲಿಯ ವಿದ್ಯಾರ್ಥಿಗಳ ಶ್ರಮ ಹಾಗೂ ಅದರ ಪ್ರತಿಫಲವೇ ಸಾಕ್ಷಿ. ಬಹುಶಃ "ಸುಪರ್ 30'ಯ ಯಶಸ್ಸಿನ ಹಿಂದಿರುವ ಗುಟ್ಟೂ ಸಹ ಅದೇ.

ಉದಾಹರಣೆಗೆ "ಸುಪರ್ 30’ಯಲ್ಲಿ ಒಬ್ಬನಾಗಿದ್ದ ಸಂತೋಷ ಕುಮಾರ ಪ್ರತಿ ದಿನ ಬೆಳಗ್ಗೆ ನಾಲ್ಕು ಗಂಟೆ ಓದಿನಲ್ಲಿ ತೊಡಗುತ್ತಿದ್ದ. ಆನಂತರ ಮೂರು ಗಂಟೆ, ಗಣಿತ, ರಸಾಯನ ಶಾಸ್ತ್ರ ಅಥವಾ ಭೌತವಿಜ್ಞಾನದ ಪತ್ರಿಕೆ ಬಿಡಿಸುತ್ತಿದ್ದ. ಸ್ವಲ್ಪ ಸಮಯದ ವಿರಾಮದ ನಂತರ ಸಂಜೆ ಆರರಿಂದ ಒಂಬತ್ತರವರೆಗೆ ಅಂದಿನ ತರಗತಿ. ಆನಂತರ ಮರುದಿನದ ಪರೀಕ್ಷೆಗಾಗಿ ರಾತ್ರಿ ಎರಡು ಗಂಟೆಯವರೆಗೆ ತಯಾರಿ. ಅವನ ಈ ಕಠಿಣ ಶ್ರಮದಿಂದಾಗಿಯೇ ಈ ವರುಷ ಐಐಟಿಗೆ ಆಯ್ಕೆಯಾದ 5000 ವಿದ್ಯಾರ್ಥಿಗಳಲ್ಲಿ ಈತನಿಗೆ 3537ನೇ ಸ್ಥಾನ ದೊರಕಿದೆ.

ವಿದ್ಯಾರ್ಥಿಗಳಿಂದ ಸಾವಿರಾರು ರೂಪಾಯಿ ಪಡೆಯುವ, ವಿದ್ಯಾರ್ಥಿಗಳನ್ನು ಸೆಳೆಯಲು ಯಾವ ಮಟ್ಟದ ಸ್ಪರ್ಧೆಗೂ ಇಳಿಯಲು ಸಿದ್ಧವಿರುವ ಖಾಸಗಿ ಟ್ಯುಟೋರಿಯಲ್‌ಗಳಿಗೆ "ರಾಮಾನುಜನ್ ಶಾಲೆ’ ಸಿಂಹಸ್ವಪ್ನ. ಆದ್ದರಿಂದಲೇ ಅನೇಕ ಬಾರಿ ಆನಂದಕುಮಾರ್ ಅವರ ಮೇಲೆ ಬಾಂಬ್ ದಾಳಿಯಂಥ ಹಲವು ಬಗೆಯ ಕೊಲೆ ಯತ್ನಗಳೂ ನಡೆದಿವೆ. ಈಗಲೂ ಸುತ್ತ ಅಂಗರಕ್ಷಕರನ್ನು ಇಟ್ಟುಕೊಂಡು ಬೀದಿಗಿಳಿಯಬೇಕಾದ ಪರಿಸ್ಥಿತಿ ಇದೆ. ಆದರೂ ಆನಂದಕುಮಾರ್ ಪಾಠ ಮಾಡುವುದನ್ನು ಬಿಟ್ಟಿಲ್ಲ!

ಕೃಪೆ: ಔಟ್‌ಲುಕ್‌‌

1 ಕಾಮೆಂಟ್‌: