ಸೋಮವಾರ, ಅಕ್ಟೋಬರ್ 12, 2009

ಛೇ! ಅಪ್ಪನಿಗೂ ವಯಸ್ಸಾಗಿಬಿಡ್ತೇ?
ಕಾಲ ಎಷ್ಟು ಬೇಗ ಬದಲಾಗಿಬಿಡತ್ತಲ್ವಾ? ಪ್ರತೀ ದಿನ ಅದೇ ಸೂರ್ಯ ಅಲ್ಲೇ ಮುಳುಗುತ್ತಿದ್ದರೂ ನಿನ್ನೆ ಇದ್ದ ಹಾಗೆ ಇಂದಿಲ್ಲ. ಚಿಕ್ಕವಳಿದ್ದಾಗ ಎಂದಾದರೂ ಅಪ್ಪನಿಗೂ ವಯಸ್ಸಾಗುತ್ತದೆ ಎಂಬುದನ್ನು ಊಹಿಸಿಯೇ ಇರಲಿಲ್ಲ. "ಅಪ್ಪನಿಗೆ ವಯಸ್ಸಾಗತ್ತಾ? ಅಜ್ಜನಿಗೆ ಮಾತ್ರ ವಯಸ್ಸಾಗುವುದು ’ ಎಂದೇ ನಮ್ಮ ತಿಳುವಳಿಕೆ. ಹಾಗೆ ನೋಡಿದರೆ ಅಪ್ಪ ನಾನು ಭಾರೀ ಫ್ರೆಂಡ್ಸ್. ಚಿಕ್ಕವಳಿದ್ದಾಗ ಶಾಲೆ ಮುಗಿದ ತಕ್ಷಣ ತೋಟಕ್ಕೆ ಓಡ್ತಿದ್ದೆ. ಕೆಲಸ ಮುಗಿದ ಮೇಲೆ ಅಪ್ಪನ ಜತೆ ಮಾತಾಡುತ್ತಾ ಕೆರೆಯ ಏರಿಯ ಮೇಲೆ ಬರುವುದು ನನ್ನ ನೆಚ್ಚಿನ ಸಂಗತಿ. ಆಗಲೇ ನಾನು ಶಾಲೆಯ ಬಗ್ಗೆ , ಗೆಳತಿಯರ ಬಗ್ಗೆ, ಮಾಡಿದ ಪಾಠ, ನಡೆಸಿದ ದಾಂದಲೆಗಳ ಬಗ್ಗೆ ಅಪ್ಪನಿಗೆ ಹೇಳುತ್ತಿದ್ದುದು. ಅಪ್ಪ ಯಾವುದಕ್ಕೂ ಬಯ್ಯದೇ ನನ್ನ ಮಾತು ಕೇಳುತ್ತಾ , ಹೊಸ ಹೊಸ ಆಟ ಹೇಳಿಕೊಡುತ್ತಾ, ದಾರಿಯಲ್ಲಿ ಎದುರಾಗುವ ಹಸು ಕರುಗಳಿಗೆ ದಾರಿ ಮಾಡಿಕೊಡುತ್ತಾ ನನ್ನ ಕೈ ಹಿಡಿದು ಕರೆತರುತ್ತಿದ್ದರು. ನಾನು ಅಷ್ಟೆಲ್ಲಾ ಪಟ್ಟಾಂಗ ಹೊಡೆಯುತ್ತಿದ್ದರೂ ನನ್ನ ದೃಷ್ಟಿ ಮಾತ್ರ ನಮ್ಮ ನೆರಳ ಮೇಲೆಯೆ. ಸೂರ್ಯನಿಗೆ ಬೆನ್ನು ಹಾಕಿ ನಡೆಯುತ್ತಿದ್ದ ನಮ್ಮ ಮುಂದೆ ಉದ್ದೂದ್ದ ನೆರಳುಗಳು. ಆದರೂ ನನ್ನ ನೆರಳು ಅಪ್ಪನ ನೆರಳಿಗಿಂತ ಚಿಕ್ಕದು. ನನ್ನ ನೆರಳು ಅಪ್ಪನ ನೆರಳಿಗಿಂತ ಉದ್ದ ಕಾಣಬೇಕೆಂದು ಮುಂದೆ ಮುಂದೆ ಓಡುತ್ತಿದ್ದೆ. ಅಥವಾ ಅಪ್ಪನ ನೆರಳನ್ನ ತುಳಿಯುತ್ತಾ ಹಿಂದೆ ಹಿಂದೆ ಬರುತ್ತಿದ್ದೆ. ಅಪ್ಪ ನಗುತ್ತಿದ್ದರು.

ಇತ್ತೀಚೆಗೆ ನನ್ನ ಓದು ಮುಗಿಸಿ ಕೆಲಸ ಸಿಕ್ಕ ನಂತರ ಊರಿಗೆ ಹೋದಾಗ ಅಪ್ಪ ಯಾಕೋ ನಿಧಾನವಾಗಿ ನಡೆಯುತ್ತಿದ್ದಾರಲ್ಲ ಅನಿಸಿತ್ತು. ಆಮೇಲೆ ಅದನ್ನು ಮರೆತೇ ಬಿಟ್ಟಿದ್ದೆ. ಆದರೆ ನಿನ್ನ ಬಿಟ್ಟು ಇಲ್ಲಿರಲಾರೆವು, ನಾವೂ ಅಲ್ಲಿಗೇ ಬರುತ್ತೇವೆ ಎಂದು ಪತ್ರ ಬರೆದು ಇಲ್ಲಗೇ ಬಂದರಲ್ಲ, ಅವತ್ತು ಮಾತ್ರ ಇದ್ದಕ್ಕಿದ್ದಂತೆ ಅಪ್ಪನಿಗೆ ವಯಸ್ಸಾಗುತ್ತಿದೆ ಎನಿಸಿ ಕಸಿವಿಸಿಯಾಗತೊಡಗಿತ್ತು. ಸಂಜೆ ಅಪ್ಪನೊಂದಿಗೆ ವಾಕಿಂಗ್ ಹೊರಟರೆ ಅರೇ! ನನ್ನ ನೆರಳು ಅಪ್ಪನ ನೆರಳಿಗಿಂತ ಉದ್ದ! ಅಪ್ಪ ಕುಗ್ಗಿದ್ದಾರೆ ಅನಿಸಿ ಅಪ್ಪನ ಮುಖ ನೋಡಿದರೆ ಅವರಿಗೆ ಮುಳುಗುತ್ತಿರುವ ಸೂರ್ಯನ ಕಿರಣಗಳೂ ಕಣ್ಣಿಗೆ ಚುಚ್ಚಿದಂತಾಗುತ್ತಿತ್ತೇನೋ, ಸೂರ್ಯನಿಗೆ ನನ್ನನ್ನು ಅಡ್ಡ ಮಾಡಿಕೊಂಡು ನನ್ನ ನೆರಳಿನಲ್ಲಿ ಬರುತ್ತಿದ್ದರು. ಖುಷಿಯೋ, ದುಃಖವೋ, ಉಕ್ಕಿಬಂದ ಮಮತೆಯೋ ಗೊತ್ತಾಗದೇ ನಿಧಾನವಾಗಿ ಅವರ ಕೈ ಹಿಡಿದುಕೊಂಡು ನಡೆಯತೊಡಗಿದೆ...

8 ಕಾಮೆಂಟ್‌ಗಳು:

 1. ಒಳ್ಳೆಯ ಲೇಖನ....ಹೌದು ಕೆಲವೊಂದು ಸರ್ತಿ ಗೊತ್ತೇ ಆಗುವದಿಲ್ಲ.. ಇಂತಹ ಸಮಯದಲ್ಲಿ ನಾವು ಅವರ ಜೊತೆಗೆ ಇದ್ದು, ನೋಡಿಕೊಳ್ಳ ಬೇಕು... ನಮ್ಮ ಅವಶ್ಯಕತೆ ತುಂಬ ಇರುತ್ತೆ...
  ನಿಮ್ಮ ಅಪ್ಪ ಅಮ್ಮ ನಿಮ್ಮ ಜೊತೆ ಬಂದು ಇದ್ದಾರೆಂದು ತಿಳಿದು ಕುಶಿ ಆಯಿತು... ಚೆನ್ನಾಗಿ ನೋಡಿಕೊಳ್ಳಿ....:-)

  ಪ್ರತ್ಯುತ್ತರಅಳಿಸಿ
 2. ನೆರಳು ಅನ್ನೋದು ತುಂಬಾ ಸಿಂಬಾಲಿಕ್‌ ಆಗಿ ಬಂದಿದೆ ಇಲ್ಲಿ. ನಂಗೆ ತುಂಬಾ ಇಷ್ಟವಾಯ್ತು

  ಪ್ರತ್ಯುತ್ತರಅಳಿಸಿ
 3. ಬಹಳ ಚೆನ್ನಾಗಿದೆ ವಿವರಣೆ :) ನನ್ನ ಬಾಲ್ಯದ ನೆನಪು ಮರುಕಳಿಸಿತು. ನಾನು ಕೂಡ ಅಪ್ಪನ ಜೊತೆಗೆ ಅಡಿಕೆ ತೋಟ ಸುತ್ತುತಿದ್ದೆ.
  ನೆರಳಿನ ಭಾಗ ತುಂಬಾ ಇಷ್ಟ ಆಯ್ತು

  ಪ್ರತ್ಯುತ್ತರಅಳಿಸಿ
 4. nimma baraha oadutta iruttene vijay karnataka li:)antu bloginalli nimmannu noadi santasavaaytu.

  ಪ್ರತ್ಯುತ್ತರಅಳಿಸಿ
 5. "Child Is the Father of Man" ಅಂತಾರೆ , ನಿಮ್ಮ ಅಪ್ಪನ್ನ ಕೇಳಿ ನೋಡಿ !!

  ಯಾರೂ ನನ್ನ ಅಮ್ಮನನ್ನು "ಅಜ್ಜಿ" ಅಂದಾಗ - ಅಮ್ಮ ಆಗಲೇ ಅಜ್ಜಿ ಆಗಿ ಹೊದ್ಲಾ ? ಮನಸ್ಸಿಗೆ ತುಂಬಾ ಬೇಜಾರಾಗಿತ್ತು. ತುಂಬಾ ಡಿಸ್ಟರ್ಬ್ ಆಗ್ತೀನಿ, ಅಮ್ಮ ಅಜ್ಜಿಯಾಗುವುದನ್ನು ನನ್ ಮನಸ್ಸು ಇಂದಿಗೂ ಒಪ್ತಾ ಇಲ್ಲ...

  ಪ್ರತ್ಯುತ್ತರಅಳಿಸಿ
 6. chanda ide marayti... kushi aytu.

  manjunath.m.d
  sr.artist
  vk

  ಪ್ರತ್ಯುತ್ತರಅಳಿಸಿ
 7. Hi,
  Your article is haunting me.. it makes me to miss my abba.. From so many days, i am more of a father than the normal guys feel to their mother. Thanks for great write up..


  Sulthan Mansoor, Bangalore(Mangalore)

  ಪ್ರತ್ಯುತ್ತರಅಳಿಸಿ