ನನಗಾದರೂ ಏನು ಗೊತ್ತು, ಹೀಗೆ ಆಗುತ್ತದೆಯೆಂದು. ಆಷಾಢ ಪ್ರಾರಂಭವಾಗುವ ನಾಲ್ಕು ದಿನ ಮೊದಲೇ ನಾನು ಊರಿಗೆ ಹೋಗಲು ತುದಿಗಾಲಲ್ಲಿ ನಿಂತಿದ್ದೆನಲ್ಲ. "ಹೇಗಿರುವೆಯೇ ಹುಡುಗಿ, ನನ್ನ ಬಿಟ್ಟು?’ ಎಂಬ ಪಿಸುಮಾತಿನ ಪ್ರಶ್ನೆ ನನ್ನ ಸಂಭ್ರಮದಲ್ಲಿ ಕಿವಿಗೇ ತಾಕಿರಲಿಲ್ಲ. ಅಣ್ಣ ಬಂದು ಕರೆಯುತ್ತಿದ್ದಂತೆ ಊರಿಗೆ ಹಾರಿಬಿಟ್ಟಿದ್ದೆ.
ಮೊದಲೆರಡು ದಿನ ಏನೆಲ್ಲಾ ಸಂಭ್ರಮ, ಅಮ್ಮನೊಡನೆ ಮಾತನಾಡುವಾಗ ’ನಮ್ಮನೆ’ ಅಂತ ಯಾವುದಕ್ಕೆ ಹೇಳಬೇಕೋ ಗೊತ್ತಾಗದೆ ಹೇಳಿ ನಾಲಿಗೆ ಕಚ್ಚಿಕೊಳ್ಳುತ್ತಿದ್ದೆನಲ್ಲ. ಆದರೆ ಮೂರನೆಯ ದಿನ ಸುರಿದ ಮಳೆಗೆ ಫೋನ್ ಡೆಡ್ ಆಯ್ತಲ್ಲ, ಆಗಲೇ ಶುರುವಾಗಿದ್ದುದು ನಿಜವಾದ ಆಶಾಢ. ಐದನೇ ದಿನ ಕಳೆಯುವಷ್ಟರಲ್ಲಿ ಕಣ್ಣು ಕ್ಯಾಲೆಂಡರ್ ಹುಡುಕುತ್ತಿತ್ತು. ಮನಸಿನಲ್ಲಾಗಲೇ ಶ್ರಾವಣನ ಬಯಕೆ.

ರಚ್ಚೆ ಹಿಡಿವಂತೆ ಸುರಿವ ಮಳೆಯನ್ನು ನೋಡುತ್ತಾ ಕುಳಿತಿರುವಾಗೇಕೋ ಕೆ.ಎಸ್.ನ ರವರ ’ತೌರ ಸುಖದೊಳಗೆನ್ನ ಮರೆತಿಹೆನು ಎನ್ನದಿರಿ, ನಿಮ್ಮ ಪ್ರೇಮವ ನೀವೇ ಒರೆಯಲಿಟ್ಟು’ ಹಾಡು ಅಚಾನಕ್ಕಾಗಿ ಬಾಯಿಗೆ ಬಂದಿದ್ದಾದರೂ ಹಗಲಿನಲಿ ನೆನಪು ಹಿಂಡುವುದು, ಇರುಳಿನಲಿ ಕನಸು ಕಾಡುವುದು ಸುಳ್ಳಾಗಿರಲಿಲ್ಲವಲ್ಲ. ಆಮೇಲೆ ತಾನೆ ತುಳಸಿಗೆ ನಮಸ್ಕರಿಸುವಾಗ ಪಕ್ಕದಲ್ಲಿ ಕೃಷ್ಣನಿರುವುದೂ, ಆಕಾಶ ನೋಡುವಾಗ ಜೋಡಿ ನಕ್ಷತ್ರ ನಗುತ್ತಿರುವುದೂ, ಕ್ಯಾಲೆಂಡರ್‌ನಲ್ಲಿರುವ ದೇವರೆಲ್ಲರೂ ದಂಪತ್ ಸಮೇತ ಕುಳಿತಿರುವುದೂ ಕಣ್ಣಿಗೆ ಬೀಳತೊಡಗಿದ್ದುದು. ಆಮೇಲೇನು? ’ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ...’
ಅಮ್ಮನ ಥರಾವರಿ ಉಂಡೆಗಳ ಸಿದ್ಧತೆ, ಮಕ್ಕಳು ಬಾಗಿಲಿಗೆ ಜೋಕಾಲಿ ಕಟ್ಟತೊಡಗಿದ್ದು "ತೌರ ಪಂಜರದೊಳಗೆ ಸೆರೆಯಾದ ಗಿಳಿ’ಗೆ ಕಂಡಿದ್ದೇ ಉಸಿರು ಬಂದಂತಾಗಿಬಿಟ್ಟಿತು. ಇನ್ನೇನು ಶ್ರಾವಣ ದೂರವಿಲ್ಲ. ಆದರೂ ಬಾಗಿಲಿಗೆ ಕಟ್ಟಿದ ಜೋಕಾಲಿಯಲ್ಲಿ ಕುಳಿತು ಎಷ್ಟು ಜೋರಾಗಿ ಚಿಮ್ಮಿದರೂ ಹೊರಗೆ ಹೋದಂತಾಗುತ್ತದೆ ಅಷ್ಟೇ, ಆದರೆ ಮತ್ತೆ ಅಷ್ಟೇ ಒಳ ತಳ್ಳುತ್ತದೆ...ನಿರಾಶೆಯ ಮಡುವಿಗೆ.
ಇಲ್ಲ, ಅದೇನು ನಿರಂತರವಲ್ಲ, ಯಾವುದೋ ಒಂದು ಆಶಾಢದ ರಾತ್ರಿಗಾದರೂ ಶ್ರಾವಣದ ಬೆಳಗು ಕಾಯುತ್ತಿರುತ್ತದೆಯಂತೆ. ಅದೇ ಕನಸಿನಲ್ಲಿ ಬೆಳಗಾಗಿ ಬಾಗಿಲು ತೆಗೆದರೆ ಎದುರಿಗೆ ನಿಂತಿದ್ದಾನಲ್ಲ ಶ್ರಾವಣ. ಅವನೊಂದಿಗೆ ನಗುತ್ತಿರುವ ಹಬ್ಬಗಳ ಕಲರವ...