ಸ್ಯಾನಿಟರಿ ನ್ಯಾಪ್‌ಕಿನ್‌ಗಳಷ್ಟೇ ಗರ್ಭ ನಿರೋಧಕ ಮಾತ್ರೆ ಮತ್ತು ಕಾಂಡೋಮ್‌ಗಳ ಬಗ್ಗೆಯೂ ಮಡಿವಂತಿಕೆ ಇತ್ತು. ಜಾಗೃತಿಯ ಅಗತ್ಯವಿತ್ತು. ಆದರೆ ಅದರ ಸುರಕ್ಷೆಗೆ ಒತ್ತು ಕೊಡದೇ, ಕಾಮೋತ್ತೇಜಕ ಮಾತ್ರೆಗಳೇನೋ ಎಂಬಂತೆ ದೃಶ್ಯಗಳನ್ನು ಬಳಸಿದ್ದರಿಂದಲೇ ನಿರೀಕ್ಷಿತ ಮಟ್ಟದಲ್ಲಿ ಜಾಗೃತಿ ಮೂಡಿಸಲಿಲ್ಲವೆನಿಸುತ್ತದೆ. ಪಡಖಾನೆಯಲ್ಲಿ ಕೂತು ಟಿವಿ ನೋಡುವ ನಮ್ಮ ಮಂದಿ ಅಂಥ ದೃಶ್ಯಗಳನ್ನು ಕಂಡಕೂಡಲೇ ಚಾನೆಲ್ ಬದಲಾಯಿಸುತ್ತಾರೆ ಎನ್ನುವುದನ್ನು ಆ ಜಾಹೀರಾತು ಮಾಡಿದವರು ಮರೆತಿದ್ದರೇನೊ.
ಇತ್ತೀಚೆಗೆ ಟಿವಿಯಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿರುವ ಗರ್ಭ ನಿರೋಧಕ ಮಾತ್ರೆಗಳ ಜಾಹೀರಾತುಗಳನ್ನು ನೋಡಿದಾಗ ಇದೆಲ್ಲಾ ನೆನಪಾಯಿತು."ರಾತ್ರಿ ಏನೇ ನಡೆದಿರಲಿ, ಬೆಳಗಾಗೆದ್ದು ಒಂದು ಮತ್ರೆ ನುಂಗಿದರೆ ಮುಗಿದೇ ಹೋಯಿತು, ಗರ್ಭಿಣಿಯಾಗುವ ಭಯವಿಲ್ಲ’ ಎನ್ನುವ "ಮರುದಿನದ ಮಾತ್ರೆಗಳ’ (Morning after pills) ಜಾಹೀರಾತದು. ಹುಡುಗಿಯರಿಬ್ಬರು ತಮ್ಮ "ರಹಸ್ಯ’ಗಳನ್ನು ಹಂಚಿಕೊಳ್ಳುವುದು ಮತ್ತು ಗರ್ಭಪಾತ ಮಾಡಿಸಿಕೊಳ್ಳುವುದಕ್ಕಿಂತ ’ಇದು’ ಉತ್ತಮ ಎಂಬ ತೀರ್ಮಾನಕ್ಕೆ ಬರುವ ಆ ಜಾಹೀರಾತು ಅದೇಕೋ ಕಳವಳವನ್ನು ಹುಟ್ಟಿಸಿತು. ಬಹುಶಃ ಆ ಜಾಹೀರಾತಿನಲ್ಲಿ ಮದುವೆಯಾದ ಗೃಹಿಣಿ ಅಥವಾ ಆಕಸ್ಮಿಕ ಅವಘಢಕ್ಕೆ ತುತ್ತಾದ ಹುಡುಗಿಯೊಬ್ಬಳನ್ನು ತೋರಿಸಿದ್ದರೆ ಹೆಚ್ಚು ಸಮರ್ಥನೀಯವಾಗುತ್ತಿತ್ತೇನೊ. ಕುತೂಹಲದ ಕಣ್ಣಲ್ಲೇ ಎಲ್ಲವನ್ನೂ ನೋಡುವ ಮಕ್ಕಳು, ಯುವಜನರು ಇದನ್ನು ಪ್ರಯೋಗಿಸಲು ಹೊರಟರೆ ತಡೆಯುವವರ್‍ಯಾರು?
ಕೆಲವು ತಿಂಗಳುಗಳ ಹಿಂದೆ ಕೇರಳದಲ್ಲಿ ಇಂಥದ್ದೇ ಜಾಹೀರಾತೊಂದಕ್ಕೆ ಸಂಬಂಧಿಸಿದ್ದಂತೆ ಗಲಾಟೆಯಾಗಿತ್ತು. "ಮರುದಿನ’ದ ಮಾತ್ರೆಯೊಂದರ ಹೆಸರೇ "ಮಿಸ್-ಟೇಕ್’ ಎಂದಿದ್ದದ್ದೇ ಅದರ ಮಿಸ್ಟೇಕು. ಈ ಬಗೆಯ ಮಾತ್ರೆಗಳು ಯಾರನ್ನ ತಮ್ಮ ಗುರಿಯನ್ನಾಗಿಸಿಕೊಂಡಿವೆ ಅನ್ನೋದು ಸಾಂಪ್ರದಾಯಿಕ ಸಮಾಜವಾಗಿರುವ ಕೇರಳಿಗರ ಪ್ರಶ್ನೆಯಾಗಿತ್ತು. ಇದು ಮಕ್ಕಳಲ್ಲಿ, ನವತರುಣರಲ್ಲಿ ಜವಾಬ್ದಾರಿ ಇಲ್ಲದ ಸ್ವೇಚ್ಛೆಗೆ ಅನುವು ಮಾಡಿಕೊಡುಲಿದೆ ಎನ್ನುವ ಕಳವಳ ಅವರು ಈ ಬಗೆಯ ಮಾತ್ರೆಗಳ ವಿರುದ್ಧ ತಿರುಗಿ ನಿಲ್ಲುವಂತೆ ಮಾಡಿತ್ತು.

ಇದರರ್ಥ ಈ ಮಾತ್ರೆಗಳನ್ನು ಸಂಪೂರ್ಣವಾಗಿ ವಿರೋಧಿಸಬೇಕು ಎಂದಲ್ಲ. ಮಹಿಳೆಯರಿಗೆ ಅವರ ಲೈಂಗಿಕ ಜೀವನದ ಮೇಲೆ, ಗರ್ಭಧಾರಣೆಯ ಮೇಲೆ ಸಂಪೂರ್ಣ ಸ್ವಾತಂತ್ರ ನೀಡಲಿಕ್ಕಾಗಿ, ಅದರ ಬಗ್ಗೆ ಅರಿವು ಮೂಡಿಸಲಿಕ್ಕಾಗಿಯೇ ಈ ಜಾಹೀರಾತುಗಳನ್ನು ಪ್ರಸಾರ ಮಾಡಲು ಸರಕಾರ ಒಪ್ಪಿಗೆ ನೀಡಿದೆ. ಆದರೆ ಲೈಂಗಿಕತೆಯೊಂದಿಗೆ ಮಹಿಳೆಯರ ದೈಹಿಕ ಸ್ವಾಸ್ಥ್ಯ ಮತ್ತು ಸಮಾಜದ ಮಾನಸಿಕ ಸ್ವಾಸ್ಥ್ಯವೂ ಅಂಟಿಕೊಂಡಿರುವುದರಿಂದ ನೈತಿಕತೆಯೂ ಇಲ್ಲಿ ಪ್ರಮುಖ ಪಾತ್ರ ವಹಿಸಬೇಕಿತ್ತು. ಈ ಜಾಹೀರಾತುಗಳಲ್ಲಿ ಅದರ ಕುರುಹೇ ಇಲ್ಲದಿರುವ ಬಗ್ಗೆಯಷ್ಟೇ ನಮ್ಮ ಸಂತಾಪ. ಕೈ, ಕೈ ಹಿಡಿದು ನಗುತ್ತಾ ಬರುವ ಗಂಡು ಹೆಣ್ಣಿನ ಜೋಡಿ ’ಟೆನ್ಶನ್ ಫ್ರೀ’ ಎಂದು ಸಾರುವ ಈ ಜಾಹೀರಾತುಗಳು ಯುವ ಪೀಳಿಗೆಯನ್ನು ಮುಕ್ತ ಕಾಮಕ್ಕೆ ಪ್ರಚೋದಿಸುವ, ಲೈಂಗಿಕ ಸ್ವಾತಂತ್ರ್ಯ ನೀಡುವಂತಿದೆ ಎನ್ನುವುದು ಸ್ಪಷ್ಟ. ಅದರ ಬದಲು ತುರ್ತು ಸಂದರ್ಭದಲ್ಲಿ ಮಾತ್ರ ಬಳಸುವಂತೆ ಸೂಚಿಸಿ, ಇನ್ನಷ್ಟು ಪಾಸಿಟೀವ್ ಆಗಿ, ನಮ್ಮ ಸಮಾಜದ ನಂಬಿಕೆಗಳಿಗೆ, ಆರೋಗ್ಯಕ್ಕೆ ತೊಂದರೆ ನೀಡದಂತೆ ಜಾಹೀರಾತನ್ನು ರೂಪಿಸಿಬಹುದಿತ್ತು.
ಯಾರೋ ದುಷ್ಟರು ಅರೆ ಕ್ಷಣದ ಸುಖಕ್ಕಾಗಿ ಹೆಣ್ಣೊಬ್ಬಳನ್ನು ಬಲಾತ್ಕರಿಸಿದರೆ, ಮುಂದಿನ ಪರಿಣಾಮಗಳನ್ನು ಯೋಚಿಸಿಯೇ ಸಾಯಲು ತೀರ್ಮಾನ ಮಾಡುವ ಮನಸ್ಥಿತಿಯ ಹುಡುಗಿಯರು ನಮ್ಮ ಸಮಾಜದಲ್ಲಿದ್ದಾರೆ. ಆಂಥ ಕ್ಷಣದಲ್ಲಿ ಈ ಮಾತ್ರೆ ಅವರಿಗೆ ಧೈರ್ಯವನ್ನು ಕೊಡುತ್ತದೆಯಲ್ಲದೆ, ಅವರ ಪ್ರಾಣವನ್ನೂ ಉಳಿಸುತ್ತದೆ. ಕೆಲವೊಮ್ಮೆ ಬೇಜವಾಬ್ದಾರಿಯಿಂದಲೋ, ಅಸಹಾಯಕತೆಯಿಂದಲೋ ಸುರಕ್ಷಾ ಕ್ರಮಗಳನ್ನು ಕೈಗೊಳ್ಳದ ಗೃಹಿಣಿಯರಿಗೆ ಈ ಮಾತ್ರೆ ವರದಾನವಾಗುತ್ತದೆ. ನಿಜವೇ. ಅದರೆ ಅದೇ ಅಭ್ಯಾಸವಾದರೆ ಗತಿಯೇನು? ಸ್ವೇಚ್ಛತೆಗೆ ಬೇಜವಾಬ್ದಾರಿಯ ಸಾಥ್ ಸಿಕ್ಕಂತಾಗುವುದಿಲ್ಲವೇ? ಅಲ್ಲದೆ ಕಾಂಡೋಂ ಬಳಸಲು ಹಿಂಜರೆಯುವ ಗಂಡು "ಬಿಡು, ನೀನು ಬೆಳಗಾಗೆದ್ದು ಅದನೊಮ್ಮೆ ನುಂಗಿಬಿಡು’ ಎಂದು ಅಪ್ಪಣೆ ಮಾಡುವುದಿಲ್ಲ ಎಂಬುದಕ್ಕೆ ನಮ್ಮ ಸಮಾಜದಲ್ಲಿ ಖಾತ್ರಿಯೂ ಇಲ್ಲವಲ್ಲ.

ಜಾಹೀರಾತುಗಳಲ್ಲಿ ಈ ’ಮರುದಿನ’ದ ಮಾತ್ರೆಗಳ ಬಳಸುವಿಕೆಯ ಬಗ್ಗೆ ಸರಿಯಾದ ಮಾಹಿತಿಯೂ ಇಲ್ಲ. ಇದು ಕುಟುಂಬ ಯೋಜನೆಗೆ ಬಳಸುವ ಸಾಮಾನ್ಯ ಕುಟುಂಬ ನಿಯಂತ್ರಣ ಮಾತ್ರೆಯಂದು ತಪ್ಪು ತಿಳಿದುಕೊಂಡು ನಿತ್ಯ ಬಳಸುವವರೂ ಇದ್ದಾರೆ. ಆದರೆ ಇದು ಸಾಮಾನ್ಯ ಕುಟುಂಬ ನಿಯಂತ್ರಣ ಮಾತ್ರೆಯಂಥಲ್ಲ. ಅದರ ಹತ್ತರಷ್ಟು ಹೆಚ್ಚಿನ ಪ್ರಮಾಣದ ರಾಸಾಯನಿಕಗಳಿರುವ ಈ ಮಾತ್ರೆಗಳು ಖಂಡಿತಾ ಬಳಸಲು ಯೋಗ್ಯವಲ್ಲ. ಕೇವಲ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಬಳಸಬಹುದಾದಂಥವು. ಅಡ್ಡ ಪರಿಣಾಮಗಳೂ ಜಾಸ್ತಿ. ಕ್ಯಾನ್ಸರ್‌ಕಾರಕ ಅಂಶಗಳೂ ಅದರಲ್ಲಿರುವುದು ಸಂಶೋಧನೆಗಳಲ್ಲಿ ಪತ್ತೆಯಾಗಿದೆ. ಆದ್ದರಿಂದಲೇ ಈ ಮಾತ್ರೆಗಳು ಯಾವುದೇ ರೀತಿಯಲ್ಲೂ ಕುಟುಂಬ ಯೋಜನೆಗೆ ಪರ್ಯಾಯವಾಗುವುದು ಸಾಧ್ಯವಿಲ್ಲ. ಆದರೆ ಈ ಮಾತ್ರೆಗಳಿವೆಯೆಂಬ ಧೈರ್ಯದಲ್ಲಿ ಇತರ ಸುರಕ್ಷಾ ಮಾರ್ಗಗಳನ್ನು ಕೈಬಿಡುವ ಸಾಧ್ಯತೆ ಇರುವುದೂ ಪ್ರಜ್ಞಾವಂತರ ಆತಂಕಕ್ಕೆ ಕಾರಣ. ಏಕೆಂದರೆ ಈ ಮಾತ್ರೆಗಳು ಕಾಂಡೋಂನಂತೆ ಎಚ್‌ಐವಿ/ಏಡ್ಸ್‌ನಂಥ ಲೈಂಗಿಕ ರೋಗಗಳಿಂದ ಕಾಪಾಡಲಾರದು.
ಈ ಮೊದಲೂ ಅಂಥ ತುರ್ತು ಪರಿಸ್ಥಿತಿಯಲ್ಲಿ ಈ ಮಾತ್ರೆಗಳನ್ನೇ ವೈದ್ಯರು ಕೊಡುತ್ತಿದ್ದುದು. ಆದರೆ ಈ ಗ ಈ ಮಾತ್ರೆಗಳನ್ನು ಕೊಳ್ಳಲು ವೈದ್ಯರ ಸಲಹೆಯೇ ಬೇಕಿಲ್ಲ. ಪ್ರಿಸ್ಕ್ರಿಪ್ಷನ್ ಇಲ್ಲದೆಯೇ ಮೆಡಿಕಲ್ ಶಾಪ್‌ಗಳಲ್ಲಿ ಈ ಮಾತ್ರೆಗಳು ದೊರೆಯುತ್ತಿವೆ. ಅತ್ಯಾಚಾರಕ್ಕೊಳಗಾದ ಹುಡುಗಿಯರೇ ಈ ಮಾತ್ರೆಯನ್ನು ಬಳಸುತ್ತಾರೆಂದುಕೊಂಡರೂ, ಅವರಿಗೆ ವೈದ್ಯರ ಸಲಹೆ, ಮಾನಸಿಕ ಸಾಂತ್ವಾನದ ಅಗತ್ಯವೂ ಇದೆ. ಅದನ್ನು ನೀಡುವವರ್‍ಯಾರು?
ಧಾರಾವಾಹಿ ನೋಡುವ ಗೃಹಿಣಿಯೊಬ್ಬಳು ಹತ್ತನೇ ತರಗತಿ ಓದುತ್ತಿರುವ ತನ್ನ ಮಗಳೆಲ್ಲಿ ಈ ಜಾಹೀರಾತು ನೋಡುತ್ತಾಳೋ ಎಂಬ ಭಯದಿಂದ ತಕ್ಷಣ ಚಾನೆಲ್ ಬದಲಾಯಿಸುತ್ತಾಳೆ. ಆದರೂ ಭಾರತದಲ್ಲಿ ಪ್ರತಿ ತಿಂಗಳೂ ಸುಮಾರು 2 ಲಕ್ಷ "ಮರುದಿನ’ದ ಮಾತ್ರೆಗಳು ಮಾರಾಟವಾಗುತ್ತಿವೆ ಎಂಬ ವರದಿ ಪತ್ರಿಕೆಗಳಲ್ಲಿ ಬರುತ್ತಿದೆ.