ಬುಧವಾರ, ಅಕ್ಟೋಬರ್ 21, 2009

ರಾತ್ರಿ ರಾಹುಕಾಲ, ಬೆಳಗ್ಗೆ ಗುಳಿಗೆ ಕಾಲ

ಮೊದಲ ಬಾರಿ ಸ್ಯಾನಿಟರಿ ನ್ಯಾಪ್‌ಕಿನ್  ಜಾಹೀರಾತು ಟಿವಿಯಲ್ಲಿ ಪ್ರಸಾರವಾಗಿದ್ದು ನೆನಪಿದೆಯೇ? ರೇಣುಕಾ ಶಹಾನೆ ("ಸುರಭಿ' ಕಾರ್ಯಕ್ರಮದಿಂದ ಜನಪ್ರಿಯಳಾಗಿದ್ದಳಲ್ಲ, ಅವಳೇ!)ಸರಳವಾದ ಉಡುಪಿನಲ್ಲಿ ಬಂದುನಿಂತು 'ನಾನು ನಿಮ್ಮ ಬಳಿ ಹೇಳಲೇಬೇಕಾದ ವಿಷಯವೊಂದಿದೆ. ಆದರೆ ಹೇಗೆ ಹೇಳಲಿ?’ ಎಂದು ಸಂಕೋಚದಿಂದ, ಮೆಲುದನಿಯಲ್ಲಿ ಅದರ ಬಗ್ಗೆ ಸೂಚ್ಯವಾಗಿ ಹೇಳುವ  ಜಾಹೀರಾತದು. ಸಂಪ್ರದಾಯವಾದಿಗಳು ಅಂದು ಮೂಗು ಮುರಿದಿದ್ದರು. ಮಕ್ಕಳು ಇದೇನೆಂದು ಕೇಳಿದರೆ ಏನು ಹೇಳುವುದು ಎಂದು ಹೌಹಾರಿದ್ದರು. ಆದರೆ ಮಕ್ಕಳ ಗಮನ ಸೆಳೆಯುವಂಥದ್ದೇನೂ ಅದರಲ್ಲಿರಲಿಲ್ಲ.   ಹೈಸ್ಕೂಲು, ಕಾಲೇಜಿಗೆ ಹೋಗುವ ತರುಣಿಯರು ಮಾತ್ರ  ಪರಸ್ಪರ ಕಿವಿಯಲ್ಲಿ ಪಿಸುಗುಟ್ಟಿಕೊಂಡು ಕಿಲಕಿಲ ನಕ್ಕಿದ್ದರು. ಅಷ್ಟು ವರ್ಷಗಳಿಂದ ಆರೋಗ್ಯ ಇಲಾಖೆ ಹೇಳಲು ವಿಫಲವಾಗಿದ್ದ ನೈರ್ಮಲ್ಯದ ಪಾಠವನ್ನು ಕೇವಲ ಒಂದು ಜಾಹೀರಾತು  ಸಾಧಿಸಿ ತೋರಿಸಿತ್ತು. ಮಾತ್ರವಲ್ಲ, ಜಾಹೀರಾತು ಲೋಕದಲ್ಲಿದ್ದ ಮಡಿವಂತಿಕೆಯನ್ನೂ ಕಳಚಿತ್ತು. ಅದರ ಪರಿಣಾಮವಾಗಿಯೇ ಇಂದು ಅದೇ ನ್ಯಾಪ್ಕಿನ್ ಕಂಪೆನಿ ಯಾವುದೇ ಸಂಕೋಚ, ಮುಜುಗರಗಳಿಗೆ ಅವಕಾಶವಿಲ್ಲದಂತೆ "ಹ್ಯಾವ್ ಅ ಹ್ಯಾಪಿ ಪಿರಿಯಡ್’ ಎಂದು ವಿಶ್ ಮಾಡಿಕೊಳ್ಳುವಂಥ ಆರೋಗ್ಯಕರ ಪರಿಸರವನು  ರೂಪಿಸಿಕೊಂಡಿತು.

 ಸ್ಯಾನಿಟರಿ ನ್ಯಾಪ್‌ಕಿನ್‌ಗಳಷ್ಟೇ ಗರ್ಭ ನಿರೋಧಕ ಮಾತ್ರೆ ಮತ್ತು ಕಾಂಡೋಮ್‌ಗಳ ಬಗ್ಗೆಯೂ ಮಡಿವಂತಿಕೆ ಇತ್ತು. ಜಾಗೃತಿಯ ಅಗತ್ಯವಿತ್ತು. ಆದರೆ ಅದರ ಸುರಕ್ಷೆಗೆ ಒತ್ತು ಕೊಡದೇ,  ಕಾಮೋತ್ತೇಜಕ  ಮಾತ್ರೆಗಳೇನೋ ಎಂಬಂತೆ ದೃಶ್ಯಗಳನ್ನು ಬಳಸಿದ್ದರಿಂದಲೇ ನಿರೀಕ್ಷಿತ ಮಟ್ಟದಲ್ಲಿ ಜಾಗೃತಿ ಮೂಡಿಸಲಿಲ್ಲವೆನಿಸುತ್ತದೆ. ಪಡಖಾನೆಯಲ್ಲಿ ಕೂತು ಟಿವಿ ನೋಡುವ ನಮ್ಮ ಮಂದಿ ಅಂಥ ದೃಶ್ಯಗಳನ್ನು ಕಂಡಕೂಡಲೇ ಚಾನೆಲ್ ಬದಲಾಯಿಸುತ್ತಾರೆ ಎನ್ನುವುದನ್ನು ಆ ಜಾಹೀರಾತು  ಮಾಡಿದವರು ಮರೆತಿದ್ದರೇನೊ.

ಇತ್ತೀಚೆಗೆ ಟಿವಿಯಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿರುವ ಗರ್ಭ ನಿರೋಧಕ ಮಾತ್ರೆಗಳ ಜಾಹೀರಾತುಗಳನ್ನು ನೋಡಿದಾಗ ಇದೆಲ್ಲಾ ನೆನಪಾಯಿತು."ರಾತ್ರಿ ಏನೇ ನಡೆದಿರಲಿ, ಬೆಳಗಾಗೆದ್ದು ಒಂದು ಮತ್ರೆ ನುಂಗಿದರೆ ಮುಗಿದೇ ಹೋಯಿತು, ಗರ್ಭಿಣಿಯಾಗುವ ಭಯವಿಲ್ಲ’ ಎನ್ನುವ "ಮರುದಿನದ ಮಾತ್ರೆಗಳ’ (Morning after pills) ಜಾಹೀರಾತದು. ಹುಡುಗಿಯರಿಬ್ಬರು ತಮ್ಮ "ರಹಸ್ಯ’ಗಳನ್ನು ಹಂಚಿಕೊಳ್ಳುವುದು ಮತ್ತು ಗರ್ಭಪಾತ ಮಾಡಿಸಿಕೊಳ್ಳುವುದಕ್ಕಿಂತ ’ಇದು’ ಉತ್ತಮ ಎಂಬ ತೀರ್ಮಾನಕ್ಕೆ ಬರುವ ಆ  ಜಾಹೀರಾತು ಅದೇಕೋ ಕಳವಳವನ್ನು ಹುಟ್ಟಿಸಿತು. ಬಹುಶಃ ಆ  ಜಾಹೀರಾತಿನಲ್ಲಿ ಮದುವೆಯಾದ ಗೃಹಿಣಿ ಅಥವಾ ಆಕಸ್ಮಿಕ ಅವಘಢಕ್ಕೆ ತುತ್ತಾದ ಹುಡುಗಿಯೊಬ್ಬಳನ್ನು ತೋರಿಸಿದ್ದರೆ ಹೆಚ್ಚು ಸಮರ್ಥನೀಯವಾಗುತ್ತಿತ್ತೇನೊ. ಕುತೂಹಲದ ಕಣ್ಣಲ್ಲೇ ಎಲ್ಲವನ್ನೂ ನೋಡುವ ಮಕ್ಕಳು, ಯುವಜನರು ಇದನ್ನು ಪ್ರಯೋಗಿಸಲು ಹೊರಟರೆ ತಡೆಯುವವರ್‍ಯಾರು?

ಕೆಲವು ತಿಂಗಳುಗಳ ಹಿಂದೆ ಕೇರಳದಲ್ಲಿ ಇಂಥದ್ದೇ ಜಾಹೀರಾತೊಂದಕ್ಕೆ ಸಂಬಂಧಿಸಿದ್ದಂತೆ ಗಲಾಟೆಯಾಗಿತ್ತು. "ಮರುದಿನ’ದ ಮಾತ್ರೆಯೊಂದರ ಹೆಸರೇ "ಮಿಸ್-ಟೇಕ್’ ಎಂದಿದ್ದದ್ದೇ ಅದರ ಮಿಸ್ಟೇಕು.  ಈ ಬಗೆಯ ಮಾತ್ರೆಗಳು ಯಾರನ್ನ ತಮ್ಮ ಗುರಿಯನ್ನಾಗಿಸಿಕೊಂಡಿವೆ ಅನ್ನೋದು ಸಾಂಪ್ರದಾಯಿಕ ಸಮಾಜವಾಗಿರುವ ಕೇರಳಿಗರ ಪ್ರಶ್ನೆಯಾಗಿತ್ತು. ಇದು ಮಕ್ಕಳಲ್ಲಿ, ನವತರುಣರಲ್ಲಿ  ಜವಾಬ್ದಾರಿ ಇಲ್ಲದ ಸ್ವೇಚ್ಛೆಗೆ ಅನುವು ಮಾಡಿಕೊಡುಲಿದೆ ಎನ್ನುವ ಕಳವಳ ಅವರು  ಈ ಬಗೆಯ ಮಾತ್ರೆಗಳ ವಿರುದ್ಧ ತಿರುಗಿ ನಿಲ್ಲುವಂತೆ ಮಾಡಿತ್ತು.

ನಾವು ಮುಕ್ತ ಸಮಾಜವೆಂದು ಭಾವಿಸಿರುವ ಮುಂದುವರಿದ ದೇಶಗಳಲ್ಲೇ ’ಮರುದಿನದ ಮಾತ್ರೆಗಳ’ ಜಾಹೀರಾತಿಗಳಿಗೆ ಕಡಿವಾಣವಿದೆ. ಅಮೆರಿಕದಲ್ಲಿ ಈ ಬಗೆಯ ಜಾಹೀರಾತುಗಳು ಕೇವಲ ಕೆಲವು ಚಾನೆಲ್‌ಗಳಲ್ಲಿ ಮಾತ್ರ ಪ್ರಸಾರವಾಗುತ್ತದೆ. ಎಲ್ಲರೂ ನೋಡುವ ರೆಗ್ಯುಲರ್ ಚಾನೆಲ್‌ಗಳಲ್ಲಿ ಪ್ರಸಾರ ಮಾಡುವುದಿಲ್ಲ. ಬ್ರಿಟನ್ನಿನಲ್ಲಿ ಸಹ ಈ ಜಾಹೀರಾತು ಕಳೆದ ಏಪ್ರಿಲ್‌ನಿಂದಷ್ಟೇ ಪ್ರಸಾರವಾಗುತ್ತಿದೆ. ಅದೂ ರಾತ್ರಿ  9 ಗಂಟೆಯ ನಂತರವಷ್ಟೇ (ಆ ವೇಳೆಗೆ ಮಕ್ಕಳು ಮಲಗಿರುತ್ತಾರೆ). ಅಲ್ಲಿ ಈ ಜಾಹೀರಾತನ್ನು ಹುಡುಗಿಯೊಬ್ಬಳ ಸ್ವಗತವೆಂಬಂತೆ ಕಾರ್ಟೂನ್‌ನಲ್ಲಿ ಚಿತ್ರಿಸಲಾಗಿದೆ. ಹಾಗಿದ್ದೂ ಸಹ ಅದು ಯುವಕರಲ್ಲಿ ಸುರಕ್ಷಿತವಲ್ಲದ ಲೈಂಗಿಕ ಜೀವನವನ್ನು ಪ್ರಚೋದಿಸುತ್ತಿದೆ, ವಿಷಯದ ಗಂಭೀರತೆಯನ್ನು ಕ್ಷುಲ್ಲಕವೆಂಬಂತೆ ಬಿಂಬಿಸುತ್ತಿದೆ ಎಂದು ನೂರಾರು ದೂರುಗಳು ಬರುತ್ತಿವೆ. ಈ ಮಾತ್ರೆಯ ಜಾಹೀರಾತನ್ನು ತೋರಿಸಬಹುದಾದರೆ ಗರ್ಭಪಾತದ ಮಾತ್ರೆಯ ಜಾಹೀರಾತನ್ನು ಟಿವಿಯಲ್ಲಿ ಪ್ರಸಾರಮಾಡುವುದಿಲ್ಲವೆಂಬ ನಂಬಿಕೆ ನಮಗಿಲ್ಲ ಎನ್ನುತ್ತಾರೆ ಅದರ ವಿರುದ್ಧ ಪ್ರತಿಭಟಿಸುವವರು. ದುರಾದೃಷ್ಟವೆಂದರೆ ಭಾರತದಲ್ಲಿ , ಕೇರಳವನ್ನು ಹೊರತುಪಡಿಸಿದರೆ ಆ ಬಗ್ಗೆ ಸೊಲ್ಲೆತ್ತಿದ ಉದಾಹರಣೆಯೇ ಇಲ್ಲ.

ಇದರರ್ಥ ಈ ಮಾತ್ರೆಗಳನ್ನು ಸಂಪೂರ್ಣವಾಗಿ ವಿರೋಧಿಸಬೇಕು ಎಂದಲ್ಲ. ಮಹಿಳೆಯರಿಗೆ ಅವರ ಲೈಂಗಿಕ ಜೀವನದ ಮೇಲೆ, ಗರ್ಭಧಾರಣೆಯ ಮೇಲೆ ಸಂಪೂರ್ಣ ಸ್ವಾತಂತ್ರ ನೀಡಲಿಕ್ಕಾಗಿ, ಅದರ ಬಗ್ಗೆ ಅರಿವು ಮೂಡಿಸಲಿಕ್ಕಾಗಿಯೇ ಈ ಜಾಹೀರಾತುಗಳನ್ನು ಪ್ರಸಾರ ಮಾಡಲು ಸರಕಾರ ಒಪ್ಪಿಗೆ ನೀಡಿದೆ. ಆದರೆ ಲೈಂಗಿಕತೆಯೊಂದಿಗೆ  ಮಹಿಳೆಯರ ದೈಹಿಕ ಸ್ವಾಸ್ಥ್ಯ ಮತ್ತು ಸಮಾಜದ ಮಾನಸಿಕ ಸ್ವಾಸ್ಥ್ಯವೂ ಅಂಟಿಕೊಂಡಿರುವುದರಿಂದ ನೈತಿಕತೆಯೂ ಇಲ್ಲಿ ಪ್ರಮುಖ ಪಾತ್ರ ವಹಿಸಬೇಕಿತ್ತು. ಈ ಜಾಹೀರಾತುಗಳಲ್ಲಿ ಅದರ ಕುರುಹೇ ಇಲ್ಲದಿರುವ ಬಗ್ಗೆಯಷ್ಟೇ ನಮ್ಮ ಸಂತಾಪ. ಕೈ, ಕೈ ಹಿಡಿದು ನಗುತ್ತಾ ಬರುವ ಗಂಡು ಹೆಣ್ಣಿನ ಜೋಡಿ ’ಟೆನ್ಶನ್ ಫ್ರೀ’ ಎಂದು ಸಾರುವ ಈ ಜಾಹೀರಾತುಗಳು ಯುವ ಪೀಳಿಗೆಯನ್ನು ಮುಕ್ತ ಕಾಮಕ್ಕೆ ಪ್ರಚೋದಿಸುವ, ಲೈಂಗಿಕ ಸ್ವಾತಂತ್ರ್ಯ ನೀಡುವಂತಿದೆ ಎನ್ನುವುದು ಸ್ಪಷ್ಟ.  ಅದರ ಬದಲು ತುರ್ತು ಸಂದರ್ಭದಲ್ಲಿ ಮಾತ್ರ ಬಳಸುವಂತೆ ಸೂಚಿಸಿ, ಇನ್ನಷ್ಟು ಪಾಸಿಟೀವ್ ಆಗಿ, ನಮ್ಮ ಸಮಾಜದ ನಂಬಿಕೆಗಳಿಗೆ, ಆರೋಗ್ಯಕ್ಕೆ ತೊಂದರೆ ನೀಡದಂತೆ ಜಾಹೀರಾತನ್ನು ರೂಪಿಸಿಬಹುದಿತ್ತು.

ಯಾರೋ ದುಷ್ಟರು ಅರೆ ಕ್ಷಣದ ಸುಖಕ್ಕಾಗಿ ಹೆಣ್ಣೊಬ್ಬಳನ್ನು ಬಲಾತ್ಕರಿಸಿದರೆ, ಮುಂದಿನ ಪರಿಣಾಮಗಳನ್ನು ಯೋಚಿಸಿಯೇ ಸಾಯಲು ತೀರ್ಮಾನ ಮಾಡುವ ಮನಸ್ಥಿತಿಯ ಹುಡುಗಿಯರು ನಮ್ಮ ಸಮಾಜದಲ್ಲಿದ್ದಾರೆ. ಆಂಥ ಕ್ಷಣದಲ್ಲಿ ಈ ಮಾತ್ರೆ ಅವರಿಗೆ ಧೈರ್ಯವನ್ನು ಕೊಡುತ್ತದೆಯಲ್ಲದೆ, ಅವರ ಪ್ರಾಣವನ್ನೂ ಉಳಿಸುತ್ತದೆ. ಕೆಲವೊಮ್ಮೆ  ಬೇಜವಾಬ್ದಾರಿಯಿಂದಲೋ, ಅಸಹಾಯಕತೆಯಿಂದಲೋ ಸುರಕ್ಷಾ ಕ್ರಮಗಳನ್ನು ಕೈಗೊಳ್ಳದ ಗೃಹಿಣಿಯರಿಗೆ ಈ ಮಾತ್ರೆ ವರದಾನವಾಗುತ್ತದೆ. ನಿಜವೇ. ಅದರೆ ಅದೇ ಅಭ್ಯಾಸವಾದರೆ ಗತಿಯೇನು? ಸ್ವೇಚ್ಛತೆಗೆ ಬೇಜವಾಬ್ದಾರಿಯ ಸಾಥ್ ಸಿಕ್ಕಂತಾಗುವುದಿಲ್ಲವೇ? ಅಲ್ಲದೆ ಕಾಂಡೋಂ ಬಳಸಲು ಹಿಂಜರೆಯುವ ಗಂಡು "ಬಿಡು, ನೀನು ಬೆಳಗಾಗೆದ್ದು ಅದನೊಮ್ಮೆ ನುಂಗಿಬಿಡು’ ಎಂದು ಅಪ್ಪಣೆ ಮಾಡುವುದಿಲ್ಲ ಎಂಬುದಕ್ಕೆ ನಮ್ಮ ಸಮಾಜದಲ್ಲಿ ಖಾತ್ರಿಯೂ ಇಲ್ಲವಲ್ಲ.


ಜಾಹೀರಾತುಗಳಲ್ಲಿ ಈ ’ಮರುದಿನ’ದ ಮಾತ್ರೆಗಳ ಬಳಸುವಿಕೆಯ ಬಗ್ಗೆ ಸರಿಯಾದ ಮಾಹಿತಿಯೂ ಇಲ್ಲ. ಇದು ಕುಟುಂಬ ಯೋಜನೆಗೆ ಬಳಸುವ ಸಾಮಾನ್ಯ ಕುಟುಂಬ ನಿಯಂತ್ರಣ ಮಾತ್ರೆಯಂದು ತಪ್ಪು ತಿಳಿದುಕೊಂಡು ನಿತ್ಯ ಬಳಸುವವರೂ ಇದ್ದಾರೆ. ಆದರೆ ಇದು ಸಾಮಾನ್ಯ ಕುಟುಂಬ ನಿಯಂತ್ರಣ ಮಾತ್ರೆಯಂಥಲ್ಲ. ಅದರ ಹತ್ತರಷ್ಟು ಹೆಚ್ಚಿನ ಪ್ರಮಾಣದ ರಾಸಾಯನಿಕಗಳಿರುವ ಈ ಮಾತ್ರೆಗಳು ಖಂಡಿತಾ ಬಳಸಲು ಯೋಗ್ಯವಲ್ಲ. ಕೇವಲ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಬಳಸಬಹುದಾದಂಥವು. ಅಡ್ಡ ಪರಿಣಾಮಗಳೂ ಜಾಸ್ತಿ. ಕ್ಯಾನ್ಸರ್‌ಕಾರಕ ಅಂಶಗಳೂ ಅದರಲ್ಲಿರುವುದು ಸಂಶೋಧನೆಗಳಲ್ಲಿ ಪತ್ತೆಯಾಗಿದೆ. ಆದ್ದರಿಂದಲೇ ಈ ಮಾತ್ರೆಗಳು ಯಾವುದೇ ರೀತಿಯಲ್ಲೂ ಕುಟುಂಬ ಯೋಜನೆಗೆ ಪರ್ಯಾಯವಾಗುವುದು ಸಾಧ್ಯವಿಲ್ಲ. ಆದರೆ ಈ ಮಾತ್ರೆಗಳಿವೆಯೆಂಬ ಧೈರ್ಯದಲ್ಲಿ ಇತರ ಸುರಕ್ಷಾ ಮಾರ್ಗಗಳನ್ನು ಕೈಬಿಡುವ ಸಾಧ್ಯತೆ ಇರುವುದೂ ಪ್ರಜ್ಞಾವಂತರ ಆತಂಕಕ್ಕೆ ಕಾರಣ. ಏಕೆಂದರೆ ಈ ಮಾತ್ರೆಗಳು ಕಾಂಡೋಂನಂತೆ ಎಚ್‌ಐವಿ/ಏಡ್ಸ್‌ನಂಥ ಲೈಂಗಿಕ ರೋಗಗಳಿಂದ ಕಾಪಾಡಲಾರದು.

 ಈ ಮೊದಲೂ  ಅಂಥ ತುರ್ತು ಪರಿಸ್ಥಿತಿಯಲ್ಲಿ ಈ ಮಾತ್ರೆಗಳನ್ನೇ ವೈದ್ಯರು ಕೊಡುತ್ತಿದ್ದುದು. ಆದರೆ ಈ ಗ ಈ ಮಾತ್ರೆಗಳನ್ನು ಕೊಳ್ಳಲು ವೈದ್ಯರ ಸಲಹೆಯೇ ಬೇಕಿಲ್ಲ. ಪ್ರಿಸ್ಕ್ರಿಪ್ಷನ್ ಇಲ್ಲದೆಯೇ ಮೆಡಿಕಲ್ ಶಾಪ್‌ಗಳಲ್ಲಿ ಈ ಮಾತ್ರೆಗಳು ದೊರೆಯುತ್ತಿವೆ. ಅತ್ಯಾಚಾರಕ್ಕೊಳಗಾದ ಹುಡುಗಿಯರೇ ಈ ಮಾತ್ರೆಯನ್ನು ಬಳಸುತ್ತಾರೆಂದುಕೊಂಡರೂ, ಅವರಿಗೆ  ವೈದ್ಯರ ಸಲಹೆ, ಮಾನಸಿಕ ಸಾಂತ್ವಾನದ ಅಗತ್ಯವೂ ಇದೆ. ಅದನ್ನು ನೀಡುವವರ್‍ಯಾರು?

  ಧಾರಾವಾಹಿ ನೋಡುವ ಗೃಹಿಣಿಯೊಬ್ಬಳು ಹತ್ತನೇ ತರಗತಿ ಓದುತ್ತಿರುವ ತನ್ನ ಮಗಳೆಲ್ಲಿ ಈ ಜಾಹೀರಾತು ನೋಡುತ್ತಾಳೋ ಎಂಬ ಭಯದಿಂದ ತಕ್ಷಣ ಚಾನೆಲ್ ಬದಲಾಯಿಸುತ್ತಾಳೆ. ಆದರೂ ಭಾರತದಲ್ಲಿ ಪ್ರತಿ ತಿಂಗಳೂ ಸುಮಾರು  2  ಲಕ್ಷ  "ಮರುದಿನ’ದ ಮಾತ್ರೆಗಳು ಮಾರಾಟವಾಗುತ್ತಿವೆ ಎಂಬ ವರದಿ ಪತ್ರಿಕೆಗಳಲ್ಲಿ ಬರುತ್ತಿದೆ.

20 ಕಾಮೆಂಟ್‌ಗಳು:

 1. ಮೇಡಂ ನಮಸ್ತೇ. ತುಂಬಾ ಒಳ್ಳೆಯ ಲೇಖನ. ವಿ.ಕ.ದಲ್ಲಿ ಓದಿದಾಗಲೇ ಇಷ್ಟವಾಗಿತ್ತು. ಈಗ ಮೋಟುಗೋಡೆಯಲ್ಲಿ ಲಿಂಕಿಸಿದ್ದೇನೆ: ನಿಮ್ಮ ಅನುಮತಿ ಇದೆ ಅಂದ್ಕೊಂಡು. ;)

  ಥ್ಯಾಂಕ್ಸ್,
  -ಸುಶ್ರುತ

  ಪ್ರತ್ಯುತ್ತರಅಳಿಸಿ
 2. ಹೆಲೋ ರಜನಿ ,
  ಮುಕ್ತವಾದ ವಿಚರವಾನ್ನು ತುಂಬ ಚೆನ್ನಾಗಿ ಚರ್ಚೆ ಮಾಡಿದ್ದಿರ.. ಹೌದು, ಯುವಜನತೆ ಮೇಲೆ ಇದರ ಅಡ್ಡ ಪರಿಣಾಮ ಆಗುತ್ತ ಇದೆ.. ನೀವು ಹೇಳಿದ ಹಾಗೆ ಇನ್ನಸ್ಟು ಪಾಸಿಟಿವ್ ಆಗಿ, ಹಾಗು ಆರೋಗ್ಯಕರ ಬೆಳವಣಿಗೆ ದೃಷ್ಟಿ ಇಂದ ಜಾಹೀರಾತು ಮಾಡಬಹುದಾಗಿತ್ತು... ಕೇರಳದಲ್ಲಿ ಇದರ ಬಗ್ಗೆ ಆಕ್ಷೇಪ ಬಂದಿರುವ ವಿಚಾರ ಗೊತ್ತಿರಲಿಲ್ಲ.. ಇದು ಎಲ್ಲೆಡೆ ಇಂದ ಬರಬೇಕು...
  ಸಾಮಾಜಿಕ ಕಳಕಳಿಯ ಒಳ್ಳೆಯ ಬರಹಕ್ಕಾಗಿ ಧನ್ಯವಾದಗಳು...

  ಗುರು

  ಪ್ರತ್ಯುತ್ತರಅಳಿಸಿ
 3. ಚೆನ್ನಾಗಿದೆ ಬರಹ. ಕೆಲದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರದ ಆರೋಗ್ಯ ಖಾತೆ ಈ ಮಾತ್ರೆಗಳಿಗೆ, ಮಾತ್ರೆಗಳ ಜಾಹೀರಾತಿಗೆ ಕಡಿವಾಣ ಹಾಕಲು ಹೊರಟ ಸುದ್ದಿ ಪತ್ರಿಕೆಗಳಲ್ಲಿ ವರದಿಯಾಗಿತ್ತು.

  ಪ್ರತ್ಯುತ್ತರಅಳಿಸಿ
 4. Namasthe, Olleya baraha. Vijaya karnataka dalle odidde. nanna sangrahadalli ettittu kondidde koodaa. nimma lekhanagalannu odutta iruttene. chennagi bareeteeri. shubhavaagali. ondu vicharapoorna lekhanakkagi dhanyavaada.

  ಪ್ರತ್ಯುತ್ತರಅಳಿಸಿ
 5. ನಿಮ್ಮ ಬರಹದಲ್ಲಿನ ಸಾಮಾಜಿಕ ಕಾಳಜಿ ಹಿಡಿಸಿತು ರಜನಿ. ಟೈಟಲ್ ತುಂಬಾ ಚೆನ್ನಾಗಿ ಕೊಟ್ಟಿದ್ದೀರಿ. ಮರುದಿನದ ಮಾತ್ರೆಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ಜಾಹೀರಾತಿನಲ್ಲಿ ನೀಡುತ್ತಿಲ್ಲ, ಅದು ಯುವಪೀಳಿಗೆಯನ್ನು ಮುಕ್ತ ಕಾಮಕ್ಕೆ ಪ್ರಚೋದಿಸುತ್ತಿದೆ ಎಂಬ ಆರೋಪವನ್ನು ನಾನೂ ಒಪ್ಪುತ್ತೇನೆ. ಆದರೆ ಬಲತ್ಕಾರಕ್ಕೆ ಒಳಗಾಗುವ ಹುಡುಗಿಗೆ ಅನುಕೂಲವಾಗುತ್ತದೆ ಎಂಬಂತೆ ಜಾಹೀರಾತನ್ನು ನಿರೂಪಿಸದರೆ, ಇನ್ನು ಮುಂದೆ ಬಲತ್ಕಾರವು ಸಮಸ್ಯೆಯಾಗದು ಎಂಬಂತಹ ಸಂದೇಶವನ್ನು ನೀಡಿದಂತಾಗುವುದಿಲ್ಲವೇ? ಬೇಸಿಕಲಿ ನಮ್ಮಲ್ಲಿ ಲೈಂಗಿಕ ಶಿಕ್ಷಣದ ಅಗತ್ಯವಿದೆ. ಶಾಲೆಗಳಲ್ಲಿ, ಕಾಲೇಜುಗಳಲ್ಲಿ ಲೈಂಗಿಕ ಶಿಕ್ಷಣ ಕೊಡಬೇಕೆಂದರೆ ಬರುವ ಅಡೆತಡೆಗಳ ಅರಿವು ನಿಮಗೆ ತಿಳಿದೇ ಇದೆ ಆದರೆ ನಿಮಿಷಕ್ಕೊಮ್ಮೆ ಬರುವ ಈ ಮರುದಿನದ ಮಾತ್ರೆಗಳ ಜಾಹೀರಾತನ್ನು ಯಾರೂ ವಿರೋದಿಸುವುದಿಲ್ಲ. ಮಹಿಳೆಯರನ್ನು ಏಡ್ಸ್ ನಂತಹ ಲೈಂಗಿಕ ರೋಗಗಳಿಂದ ಕಾಪಾಡದ ಈ ಮಾತ್ರೆಗಳಿಗೆ ಇಷ್ಟೊಂದು ಪ್ರಚಾರವೂ ಬೇಕಿರಲಿಲ್ಲ. ಆದರೂ ತಯಾರಕ ಕಂಪನಿಗಳ ಕಮರ್ಶಿಯಲೈಸ್ಡ್ ಧೋರಣೆ ಇಂದ ಇಷ್ಟೊಂದು ಅಬ್ಬರದ ಪ್ರಚಾರ ಪಡೆಯುತ್ತಿವೆ ಅಷ್ಟೇ.

  ಹೇಮ ಪವಾರ್

  ಪ್ರತ್ಯುತ್ತರಅಳಿಸಿ
 6. ರಜನಿ, ನಿಮ್ಮ ಈ ಉತ್ತಮ ಬರಹಕ್ಕೆ ಧನ್ಯವಾದಗಳು.
  ಯಾವುದೋ ಒಂದು ವಿಷಯವನ್ನಷ್ಟೇ ಮುಂದಿಟ್ಟುಕೊಂಡು ಅದರ ಸಂಭಂಧಿಕ ವಿಷಯಗಳನ್ನು ಅಲ್ಲಗಳೆದು ಮಾಡಿರುವಂತ ಜಾಹೀರಾತಗಿ ಇದು ತೋರುತ್ತದೆ. ಈ ರೀತಿಯ ಅರ್ಧಂಬರ್ಧ ವಿಚಾರಗಳನ್ನು ಮುಂದಿಡುವ ಜಾಹಿರಾತುಗಳಿಂದ ಅನುಕೂಲಕ್ಕಿಂತ ಸಮಾಜಕ್ಕೆ ಅನನುಕೂಲಗಳೇ ಹೆಚ್ಚು!!

  - ರವಿ

  ಪ್ರತ್ಯುತ್ತರಅಳಿಸಿ
 7. ರಜನಿ ಮೇಡಂ,
  ಈಗಷ್ಟೆ ನಿಮ್ಮ ಕಾಮೆಂಟ್ ಓದಿದ ಮೇಲೆ ನನ್ನ ಈ ಮೇಲ್ ಓಪನ್ ಮಾಡಿ ನೋಡಿದೆ. ನೀವು ಕಳಿಸಿದ ವಿನಂತಿ ಹಾಗೂ ಪ್ರಶ್ನೆಗಳು ಅಲ್ಲಿವೆ. ಆದರೆ ನೀವು ಕೇಳಿರುವ ಸಮಯ ತುಂಬಾ ಕಡಿಮೆ. ಆದರೂ ಈ (ಸೋಮವಾರ)ರಾತ್ರಿಯೊಳಗೆ ಅದೇ ಈ ಮೇಲ್‍ಗೆ ಕಳಿಸಿಕೊಡುವೆ. ನಿಮ್ಮ ಪ್ರೀತಿಗೆ ಚಿರಋಣಿ.

  ಪ್ರತ್ಯುತ್ತರಅಳಿಸಿ
 8. ಹಲೋ ಮೇಡಂ,
  ಈಗಷ್ಟೆ ನನ್ನ ಲೇಖನವನ್ನು ಅದೇ ಈಮೇಲ್‍ಗೆ ಕಳಿಸಿಕೊಟ್ಟೆ. ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಹೊರನಾಡ ಕನ್ನಡಿಗರ ಸದ್ಯದ ಮನಸ್ಸನ್ನು ದಾಖಲಿಸಲು ಹೊರಟಿರುವ ನಿಮ್ಮೀ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಈ ಚರ್ಚೆಯಲ್ಲಿ ಭಾಗವಹಿಸಲು ನನ್ನನ್ನೂ ಆಯ್ಕೆ ಮಾಡಿ ಅವಕಾಶ ಮಾಡಿಕೊಟ್ಟಿದ್ದಕ್ಕೆ ತುಂಬು ಹೃದಯದ ಕೃತಜ್ಞತೆಗಳು. ನಿಮ್ಮ ಈಮೇಲ್‍ನ್ನು ತಡವಾಗಿ ನೋಡಿ ತಡವಾಗಿ ಉತ್ತರಿಸಿ ಕಳಿಸುತ್ತಿರುವದಕ್ಕೆ ಕ್ಷಮೆಯಿರಲಿ.
  ಪ್ರೀತಿಯಿಂದ
  ಉದಯ ಇಟಗಿ

  ಪ್ರತ್ಯುತ್ತರಅಳಿಸಿ
 9. ರಜನಿ ಅವರೆ,

  ನಿಮ್ಮ ಬ್ಲಾಗಿಗೆ ಇದು ನನ್ನ ಮೊದಲ ಭೇಟಿ. ಬಿಸಿಲ ಹನಿ ಬ್ಲಾಗ್‌ನಿಂದ ನಿಮ್ಮ ಲಿಂಕ್‌ಗೆ ಬಂದೆ. ತುಂಬಾ ಉತ್ತಮ ಲೇಖನ. ಉಪಯುಕ್ತ ಮಾಹಿತಿಗಳಿವೆ. ನೀವು ಹೇಳಿದ್ದು ನಿಜ. ವಿದೇಶದಲ್ಲೇ ತಡೆ ಹಿಡಿದ ಅದೆಷ್ಟೋ ಔಷಧಗಳು ಇಲ್ಲಿ ಇನ್ನೂ ಚಾಲ್ತಿಯಲ್ಲಿವೆ. ಅದು ಹೆಚ್ಚಿನವರಿಗೂ ಗೊತ್ತು. ಈ "ಮರುದಿನ"ದ ಮಾತ್ರೆಯಿಂದಾಗುವ ಅಡ್ಡ ಪರಿಣಾಮಗಳು/ ಇದನ್ನು ತೆಗೆದುಕೊಳ್ಳುವುದರಿಂದ ಉಂಟಾಗುವ ವೈಪರೀತ್ಯಗಳು ಬಿ.ಫಾರ್ಮ್ ಆದ ವ್ಯಕ್ತಿಗೂ ತಿಳಿದಿದೆ. ಆದರೂ ಆತ ತೆಪ್ಪಗೆ ಮಾರುತ್ತಿರುವ. ಮರುಳಾದ ಜನರು ತೆಗೆದುಕೊಳ್ಳುತ್ತಿದ್ದಾರೆ. ಉಪಯುಕ್ತ ಲೇಖನಕ್ಕೆ ಚೆಂದದ ಶೀರ್ಷಿಕೆ.

  ಪ್ರತ್ಯುತ್ತರಅಳಿಸಿ
 10. ರಜನಿ ಮೇಡಂ,
  ತುಂಬಾ ಜಟಿಲವಾದ ವಿಷಯವನ್ನು ಸರಳವಾಗಿ ಹೇಳಿದ್ದಿರಿ, ತುಂಬಾ ಧನ್ಯವಾದ ..... ಭಾರತದ ಕಾನೂನನ್ನು ಯಾರು ಬೇಕಾದರೂ ಮುರಿಯಬಹುದು ಎಂಬುದನ್ನು ಈ ಜಾಹಿರಾತು ತಿಳಿಸಿತ್ತು.... ಈಗ ಈ ಜಾಹಿರಾತಿಗೆ ಬ್ಯಾನ್ ಮಾಡಿದ್ದರೂ ಸಹ (ನನಗಂತೂ ಗೊತ್ತಿಲ್ಲ) ಇದು ಮಾಡಬೇಕಾದ ಪರಿಣಾಮ ಈಗಾಗಲೇ ಮಾಡಿದೆ ಎಂದು ನನ್ನ ಅಭಿಪ್ರಾಯ..... ಯಾಕೆಂದರೆ ನಮ್ಮ ಮೇಲೆ ಒಳ್ಳೆಯ ಪರಿಣಾಮಕ್ಕಿಂತ, ಕೆಟ್ಟ ಪರಿಣಾಮ ಬೇಗ ಆಗುತ್ತದಂತೆ....

  ಪ್ರತ್ಯುತ್ತರಅಳಿಸಿ
 11. ಹಾಂ ...! ಹೇಳಲು ಮರೆತೇ..... ಟೈಟಲ್ ತುಂಬಾ ಸುಪ್ಪರ್ ಆಗಿತ್ತು.............

  ಪ್ರತ್ಯುತ್ತರಅಳಿಸಿ
 12. ಲೇಖನ ಅತ್ಯ೦ತ ಚೆನ್ನಾಗಿ ಮೂಡಿ ಬ೦ದಿದೆ. ಮತ್ತೊ೦ದು ಅನುಭವ. ಇ೦ತಹ ಜಾಹಿರಾತುಗಳು, ಊಟ ತಿ೦ಡಿ ಮಾಡುವ ಸಮಯದಲ್ಲಿ, ಮನೆಯವರೆಲ್ಲ ಒಟ್ಟಿಗೆ ಕುಳಿತು ಕಾರ್ಯಕ್ರಮ ವೀಕ್ಶಿಸುವ ಸಮಯದಲ್ಲಿ ಬ೦ದಾಗ ಆಗುವುದು ಮಾನಸಿಕ ಹಿ೦ಸೆ. ಪಾಶ಼್ಚಾತ್ಯ ದೇಶಗಳಲ್ಲಿರುವ೦ತೆ, ನಿರ್ಬ೦ದ ಹೇರುವುದೇ ಸಮಾಜದ ದೄಷ್ಟಿಯಿ೦ದ ಒಳ್ಳೆಯದು.

  ಪ್ರತ್ಯುತ್ತರಅಳಿಸಿ
 13. ಲೇಖನ ಅತ್ಯ೦ತ ಚೆನ್ನಾಗಿ ಮೂಡಿ ಬ೦ದಿದೆ. ಮತ್ತೊ೦ದು ಅನುಭವ. ಇ೦ತಹ ಜಾಹಿರಾತುಗಳು, ಊಟ ತಿ೦ಡಿ ಮಾಡುವ ಸಮಯದಲ್ಲಿ, ಮನೆಯವರೆಲ್ಲ ಒಟ್ಟಿಗೆ ಕುಳಿತು ಕಾರ್ಯಕ್ರಮ ವೀಕ್ಶಿಸುವ ಸಮಯದಲ್ಲಿ ಬ೦ದಾಗ ಆಗುವುದು ಮಾನಸಿಕ ಹಿ೦ಸೆ. ಪಾಶ಼್ಚಾತ್ಯ ದೇಶಗಳಲ್ಲಿರುವ೦ತೆ, ನಿರ್ಬ೦ದ ಹೇರುವುದೇ ಸಮಾಜದ ದೄಷ್ಟಿಯಿ೦ದ ಒಳ್ಳೆಯದು

  ಪ್ರತ್ಯುತ್ತರಅಳಿಸಿ
 14. So called next day pills are sold without any physician's prescription because of Government policy. Certainly they fall under dangerous drugs List, but because of Govt. policy these drugs previleged by Schedule K of Drugs and Cosmetics Act. So these Drugs though having so much of adverse effects the can sold anybody without any restrictions. Hamara Bharat Mahan!!

  ಪ್ರತ್ಯುತ್ತರಅಳಿಸಿ
 15. Chennagide lekhana...

  samajave muchchiduvudanna Jahiraatu Bichchiduttade... Apporna mahitigalu kooda samajadalli vikrutigalannu untumaduttade...

  ಪ್ರತ್ಯುತ್ತರಅಳಿಸಿ
 16. rajani,

  nimma maatina saalugaLe nannannu kaadiduntu...intaha jaahiraatu avashyakate ideye endenisutte... namma samaajavannu halavu kavaludaariyannagisalu intaha jaahiratugaLu saha kaaraNavaaguttave.

  ಪ್ರತ್ಯುತ್ತರಅಳಿಸಿ