ಸೋಮವಾರ, ಮಾರ್ಚ್ 9, 2009

ತರಕಾರಿ ಜ್ಯೂಸ್: ರೋಗಿ ಬಯಸೋದೂ, ವೈದ್ಯ ಹೇಳೋದೂ....



ಮನೆಗೆ ಅತಿಥಿಗಳು ಬಂದಾಗ ಫ್ರಿಜ್‌ನಿಂದ ತೆಗೆದು ಕೋಲಾ ಬಗ್ಗಿಸಿಕೊಡುವುದು ಹಳೆಯ ಫ್ಯಾಶನ್. ತಾಜಾ ತರಕಾರಿ ಜ್ಯೂಸ್ ಮಾಡಿಕೊಡುವುದು ಈಗಿನ ಹೊಸ ಟ್ರೆಂಡ್. ಅದು ಅತಿಥೇಯರ ಅಭಿರುಚಿ, ಆರೋಗ್ಯದ ಬಗ್ಗೆ ಕಾಳಜಿಗೆ ಹಿಡಿದ ಕನ್ನಡಿ. ಉದ್ದನೆಯ ಗಾಜಿನ ಲೋಟಗಳಲ್ಲಿ ಬಣ್ಣದ ಜ್ಯೂಸನ್ನು ಕೊಟ್ಟು, ಅತಿಥಿಗಳು ಮೊದಲ ಗುಟುಕನ್ನೇ ಕಾಯುತ್ತಾ,ಅವರು ಬೆರಗಿನಿಂದ ತಲೆ ಎತ್ತಿದ ತಕ್ಷಣ 'ಅದು ಯಾವುದರ ಜ್ಯೂಸ್ ಹೇಳಿ? ನೋಡೋಣ' ಎನ್ನುವ ಮನೆಯೊಡತಿಗೆ ಅತಿಥಿಗಳ ಮೆಚ್ಚುಗೆಯ ಪ್ರಶಸ್ತಿ ಗ್ಯಾರಂಟಿ!
ಮಾರುಕಟ್ಟೆಯಲ್ಲಿ ಕೋಕ್, ಪೆಪ್ಸಿಗಳ ಹಾವಳಿ ಎಷ್ಟೇ ಇದ್ದರೂ ಎಳನೀರು, ತಾಜಾ ಜ್ಯೂಸ್‌ಗಳಿಗೂ ಅಪಾರ ಬೇಡಿಕೆ ಇರಲು ಕಾರಣ ಕೇವಲ ಅವುಗಳ ರುಚಿ ಮಾತ್ರವೇ ಅಲ್ಲ. ಅವು ಆರೋಗ್ಯಕ್ಕೆ ಪೂರಕ ಎನ್ನುವ ಅರಿವೂ ಹೌದು. ಒಟ್ಟಿನಲ್ಲಿ ಜನರಲ್ಲಿ ನಿಧಾನವಾಗಿ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗುತ್ತಿರುವುದಂತೂ ನಿಜ. ಸಣ್ಣಸಣ್ಣ ಊರುಗಳಲ್ಲಿಯೂ ಮಹಿಳೆಯರು, ಪುರುಷರೆನ್ನದೆ ವಾಕಿಂಗ್ ಹೆಸರಲ್ಲಿ ಜನ ನಡೆಯಲು ಪ್ರಾರಂಭಿಸಿರುವುದೇ ಅದಕ್ಕೆ ಸಾಕ್ಷಿ. ಯೋಗ ಪ್ರಾಣಾಯಾಮಗಳಲ್ಲಿ ಹೆಚ್ಚಿದ ನಂಬಿಕೆ, ಆಯುರ್ವೇದಿಕ್, ಹೋಮಿಯೋಪತಿ, ಆಧುನಿಕ ಔಷಧ ಪದ್ಧತಿಗಿಂತ ಉತ್ತಮವಾಗಿರಬಹುದೇ ಎಂಬ ಜಿಜ್ಞಾಸೆ, ತಿನ್ನುವ ಆಹಾರದ ಕಣಕಣವನ್ನೂ ತೂಗಿನೋಡುವ ಕ್ಯಾಲೋರಿ ಕಾನ್ಷಿಯಸ್, ಯಾವ ಗೊಬ್ಬರ ಹಾಕಿ ತರಕಾರಿ ಬೆಳೆಸಿದ್ದೀರಿ ಎಂದು ರೈತರನ್ನೇ ಪ್ರಶ್ನಿಸಿ ಕೊಳ್ಳುವ ಮುಂಜಾಗ್ರತೆ, ಏನು ತಿಂದರೆ ಏನಾಗಬಹುದೋ ಎನ್ನುವ ಗಾಬರಿ ಈ ಎಲ್ಲವೂ ಅದರದ್ದೇ ವಿವಿಧ ಮುಖಗಳು. ಅದಕ್ಕೆ ಇನ್ನೊಂದು ಹೊಸ (ರುಚಿಕರವೂ ಹೌದು) ಸೇರ್ಪಡೆ ತರಕಾರಿ ಜ್ಯೂಸ್‌ಗಳು.
ನಮಗೆ ಜ್ಯೂಸ್ ಹೊಸದಲ್ಲ. ಮಲೆನಾಡಿಗರನ್ನು ವಿಚಾರಿಸಿದರೆ ಐವತ್ತು-ಅರವತ್ತು ಬಗೆಯ ಪಾನಕಗಳನ್ನು ನಿಂತಲ್ಲಿಯೇ ಹೇಳಿಯಾರು. ಆದರೆ ವೈದ್ಯಕೀಯ ವಿಜ್ಞಾನ ಹೇಳುವಂತೆ ತರಕಾರಿಗಳನ್ನು ಹಸಿಯಾಗಿ ಬಳಸಬೇಕೆಂದರೆ ಕೋಸಂಬರಿ, ಚಟ್ನಿ ಅಥವಾ ತಂಬುಳಿಯನ್ನು ಮಾಡುತ್ತಿದ್ದರೇ ಹೊರತು ತರಕಾರಿ ಪಾನಕ ಗೊತ್ತಿರಲಿಲ್ಲ. ಊಟ ಮಾಡಲಿಕ್ಕೂ ಆಗದಷ್ಟು ನಿಶ್ಯಕ್ತಿಯಾದಾಗ ಅಕ್ಕಿಯೊಂದಿಗೆ ತರಕಾರಿಗಳನ್ನು ಹಾಕಿ ಬೇಯಿಸಿ, ರಸವನ್ನಷ್ಟೇ ಹಿಂಡಿ ರೋಗಿಗೆ ಬಲವಂತವಾಗಿ ಕುಡಿಸುತ್ತಿದ್ದುದೇ ಆಗಿನ ಕಾಲದ ತರಕಾರಿ ರಸ. ಆದರೆ ಈಗ ಚಿತ್ರ ಬದಲಾಗಿದೆ. ಸಂಜೆ ಕಾಫಿ ಕುಡಿದು ಒಂದು ಸಣ್ಣ ವಾಕ್ ಮುಗಿಸಿ ಬರುವಾಗ ಫ್ರೆಶ್ ಆದ ತರಕಾರಿ ತಂದು, ಜ್ಯೂಸರ್‌ನಲ್ಲಿ ಹಾಕಿ ತಿರುಗಿಸಿ ಘಮ್ಮೆನ್ನುವಂತೆ ಏಲಕ್ಕಿ, ಲವಂಗ, ಶುಂಠಿ ಹಾಕಿ, "ರುಚಿಗೆ ತಕ್ಕಷ್ಟು ಉಪ್ಪು" ಬೆರೆಸಿ ಚೆಂದದ ಗ್ಲಾಸಿನಲ್ಲಿ ಹಾಕಿಕೊಂಡು, ಆರಾಮಾಗಿ ದೀವಾನ ಕಾಟ್ ಮೇಲೆ ಕುಳಿತು "ಆಹಾ" ಎನ್ನುವಂತೆ ಕುಡಿಯುವಾಗ...ಯಾವುದೋ ಹೆಲ್ತ್ ಡ್ರಿಂಕಿನ ಜಾಹೀರಾತಿನಲ್ಲಿರುವಂಥ 'ಆರೋಗ್ಯಯುತ ಸುಂದರ ಜೀವನ" ನಿಮ್ಮದೆನಿಸುವುದು ಖಂಡಿತ.
ಮಕ್ಕಳು ತರಕಾರಿ ತಿನ್ನುವುದಿಲ್ಲ ಎನ್ನುವುದು ಎಲ್ಲ ಅಮ್ಮಂದಿರ ಆರೋಪ. ಆದರೆ ಯಾವ ಮಕ್ಕಳು ಜ್ಯೂಸ್ ಬೇಡ ಎನ್ನುತ್ತಾರೆ? ತರಕಾರಿಗಳು ಹಣ್ಣಿನಷ್ಟು ರುಚಿಕರವಲ್ಲ ಎನ್ನುವುದೂ ನಿಜ. ಆದ್ದರಿಂದ ತರಕಾರಿ ಜ್ಯೂಸ್‌ಗೆ ದ್ರಾಕ್ಷಿಯಂಥ ಹಣ್ಣುಗಳನ್ನೋ, ತೆಂಗಿನ ಕಾಯನ್ನೋ ಅಥವಾ ಹಾಲಿನ ಕೆನೆಯನ್ನೋ ಸ್ವಲ್ಪ ಸೇರಿಸಿ ರುಚಿಕರವಾಗಿರುವಂತೆ ನೋಡಿಕೊಳ್ಳಬೇಕಾದದ್ದು ತಾಯಿಯ ಜಾಣತನಕ್ಕೆ ಬಿಟ್ಟದ್ದು. ಅಲ್ಲದೆ ಬದಲಾಗುವ ಋತುವಿಗೆ ತಕ್ಕಂತೆ ತರಕಾರಿಗಳನ್ನೂ, ಹಣ್ಣುಗಳನ್ನೂ ಬದಲಾಯಿಸುತ್ತಾ, ವಿವಿಧ ಸೊಪ್ಪು, ಮೊಳಕೆ ಕಾಳುಗಳನ್ನು ಬಳಸುತ್ತಾ ಜ್ಯೂಸಿನ ರುಚಿಯನ್ನೂ ವೈವಿಧ್ಯಗೊಳಿಸಿದರೆ ಬೇಡವೆನ್ನುವವರೂ ಕುಡಿದಾರು.
"ರೋಗಿ ಬಯಸಿದ್ದೂ ಹಾಲೂ ಅನ್ನ, ವೈದ್ಯ ಹೇಳಿದ್ದೂ ಹಾಲೂ ಅನ್ನ' ಎನ್ನುವ ಸಂದರ್ಭ ಸಿಗಲೂ ಅದೃಷ್ಟ ಮಾಡಿರಬೇಕು. "ಜ್ಯೂಸ್ ಥೆರಪಿ" ಎನ್ನುವ ಚಿಕಿತ್ಸಾ ಪದ್ಧತಿಯೂ ಇದೆ ಎಂದು ತಿಳಿದಾಗ ನನಗಾದರೂ ರೋಗ ಬರಬಾರದಿತ್ತೇ ಎಂದುಕೊಳ್ಳುವವರೇನೂ ಕಡಿಮೆ ಇರಲಿಕ್ಕಿಲ್ಲ. ಖ್ಯಾತ ನಾಟಕಕಾರ, ನಿರ್ದೇಶಕ ಮಹೇಶ್ ದತ್ತಾನಿಯವರಿಗೆ ಒಮ್ಮೆ ಕ್ಯಾನ್ಸರ್ ಪ್ರಾರಂಭವಾಗಿರುವ ಸೂಚನೆ ಕಂಡುಬಂದಾಗ ಪ್ರತಿ ದಿನ ಕ್ಯಾರೆಟ್ ಜ್ಯೂಸ್ ಕುಡಿಯಲು ಡಾಕ್ಟರ್ ತಿಳಿಸಿದ್ದರಂತೆ. ಆನಂತರ ದತ್ತಾನಿಯವರೇ ಹೇಳುವಂತೆ "ಎರಡೇ ವಾರಗಳಲ್ಲಿ ಅದ್ಭುತ ಪಲಿತಾಂಶ ಕಾಣಿಸತೊಡಗಿತು. ಕ್ಯಾನ್ಸರ್ ಕಣಗಳ ಸಂಖ್ಯೆ ದಿನದಿನಕ್ಕೂ ಇಳಿಯತೊಡಗಿತು. ನನಗೆ ಬಂದ ರೋಗದ ಬಗ್ಗೆ ತೀರಾ ಕೆಟ್ಟದಾಗಿ ಯೋಚಿಸಿದ್ದೆ. ಆದರೆ ಎಂಥಾ ಸುಲಭ ಚಿಕಿತ್ಸೆ! ಹಲವು ದಿನಗಳ ಚಿಕಿತ್ಸೆಯ ನಂತರ ಸಂಪೂರ್ಣ ಗುಣವಾದಾಗ "ಇನ್ನು ಜ್ಯೂಸ್ ಕುಡಿಯಬೇಕಾದ ಅಗತ್ಯವಿಲ್ಲ" ಎಂದು ಡಾಕ್ಟರ್ ಹೇಳಿದರೂ ನಾನದನ್ನು ಬಿಟ್ಟಿಲ್ಲ. ಈಗ ತರಕಾರಿ ಜ್ಯೂಸ್ ನನ್ನ ಪ್ರತಿ ದಿನದ ಆಹಾರದ ಪ್ರಮುಖ ಅಂಗ".
ರಕ್ತಹೀನತೆಗೆ ಕೊತ್ತಂಬರಿ ಅಥವಾ ಕ್ಯಾರೆಟ್, ತೆಳ್ಳಗಾಗಲು ಸೋರೆಕಾಯಿ, ಮೂತ್ರಕೋಶದಲ್ಲಿ ಕಲ್ಲಾದಾಗ ಬಾಳೆದಿಂಡು ಅಥವಾ ಬೂದುಗುಂಬಳ, ಮಧುಮೇಹಕ್ಕೆ ಪುದೀನ ಅಥವಾ ನುಗ್ಗೇಕಾಯಿ, ಕ್ಯಾನ್ಸರ್‌ಗೆ ಗೋಹುಲ್ಲು ಅಥವಾ ಕ್ಯಾರೆಟ್ ಹೀಗೆ ಯಾವುದೋ ಕಾಯಿಲೆಗೆ ಔಷಯಾಗಿ ತರಕಾರಿ ಜ್ಯೂಸ್ ಕುಡಿಯಲು ಅಭ್ಯಾಸ ಮಾಡಿಕೊಂಡು, ಆನಂತರ ಅದನ್ನೇ ಹವ್ಯಾಸವನ್ನಾಗಿ ರೂಢಿಸಿಕೊಂಡವರೇ ಹೆಚ್ಚು. ಏಕೆಂದರೆ ಅವರಿಗಾಗಲೇ ಅದರ ಶಕ್ತಿಯ ಅರಿವಾಗಿರುತ್ತದೆ. ಆದರೆ ಜಾಣರು ತಮ್ಮ ಅನುಭವದಿಂದಲೇ ಪಾಠ ಕಲಿಯಬೇಕೆಂದಿಲ್ಲ. ಬೇರೆಯವರ ಅನುಭವದಿಂದಲೂ ಕಲಿತು, ರೋಗ ಬಾರದಿರುವಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತಾರೆ !
ಎಲ್ಲಾ ಹಣ್ಣುಗಳನ್ನೂ ಜ್ಯೂಸ್ ಮಾಡಬಹುದು, ಆದರೆ ಎಲ್ಲಾ ತರಕಾರಿಗಳನ್ನು ಜ್ಯೂಸ್ ಮಾಡಲಾಗುವುದಿಲ್ಲ. ಹಣ್ಣಿನ ಜ್ಯೂಸ್ ರುಚಿಕರವಾಗಿಯೂ ಪೌಷ್ಟಿಕವಾಗಿ ಇರುವುದು ನಿಜವಾದರೂ ಅದರಿಂದ ಇನ್ಸುಲಿನ್ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಆರೋಗ್ಯದ ದೃಷ್ಟಿಯಿಂದ ತರಕಾರಿ ಜ್ಯೂಸ್‌ಗೆ ಹೆಚ್ಚು ಅಂಕ. ತರಕಾರಿ ಜ್ಯೂಸ್‌ಗಳು ಬಹು ಬೇಗ ಹಾಳಾಗುತ್ತವೆ. ಆದ್ದರಿಂದ ಕೂಡಲೇ ಕುಡಿಯಬೇಕು. ಸ್ವಲ್ಪ ಹೊತ್ತು ಇಡಲೇ ಬೇಕಾದ ಪ್ರಸಂಗ ಬಂದರೆ ಗಾಳಿಯಾಡದ, ಮುಚ್ಚಳ ಬಿಗಿಯಾಗಿರುವ ಜಾರ್‌ನಲ್ಲಿ ಮೇಲ್ತನಕ ಹಾಕಿ ಇಡಬೇಕು. ಗಾಳಿಯಾಡಿದರೆ, ತೆರೆದಿಟ್ಟ ಸೇಬು ಹಣ್ಣು ಕೂಡಲೇ ಕಂದಾಗುವಂತೆ ತರಕಾರಿ ಜ್ಯೂಸ್ ಹಾಳಾಗಿಬಿಡುತ್ತದೆ ಎಂದು ಎಚ್ಚರಿಸುತ್ತಾರೆ ವೈದ್ಯರು.
ಬೆಂಗಳೂರಿನ ತಮ್ಮ ಮನೆಯ ತಾರಸಿಯ ಮೇಲೆ ಮಿನಿ ಕೈತೋಟ ಮಾಡಿಕೊಂಡಿರುವ ಗೃಹಿಣಿ ಅನುಸೂಯ ಶರ್ಮ, ಅವರ ಮನೆಗೆ ಆಗುವಷ್ಟು ತರಕಾರಿಯನ್ನೂ ಅಲ್ಲೇ ಬೆಳೆದುಕೊಳ್ಳುತ್ತಾರೆ. ಸಂಜೆ ನಾಲ್ಕಕ್ಕೆ ಕಾಫಿ ಕುಡಿದು ತಾರಸಿ ಹತ್ತಿ ಏಳರವರೆಗೆ ಗಿಡಗಳ ಆರೈಕೆ ಮಾಡಿ ಕೆಳಗಿಳಿದು ಬಂದಾಗ ಅವರಿಗೆ ತರಕಾರಿ ಜ್ಯೂಸ್ ಬೇಕೇಬೇಕು. ತಾರಸಿಯಿಂದ ಆಗಷ್ಟೇ ಕಿತ್ತು ತಂದ ಪಾಲಕ್‌ಅನ್ನು ಐದೇ ಐದು ನಿಮಿಷ ಬೇಯಿಸಿ ಅದಕ್ಕೆ ಉಪ್ಪು, ಮೆಣಸಿನ ಕಾಳು, ಹಾಲಿನ ಕೆನೆ ಹಾಕಿ ಜ್ಯೂಸ್ ಮಾಡಿಕೊಳ್ಳುತ್ತಾರೆ. ಜತೆಗೆ ಬ್ರೆಡ್ಡನ್ನು ಡ್ರೈಟೋಸ್ಟ್ ಮಾಡಿಕೊಂಡು ಅದರ ಮೇಲೆ ತೇಲಿಬಿಡುತ್ತಾರೆ (ಸೂಪ್‌ನಲ್ಲಿ ಇರುವಂತೆ). ಆನಂತರ ನಿರಾಳವಾಗಿ ಕುಳಿತು ಜ್ಯೂಸ್ ಕುಡಿದರೆ "ಹೊಟ್ಟೆ ಫುಲ್, ಮನಸು ಹೌಸ್‌ಫುಲ್". ಇದಲ್ಲದೇ ಟೊಮೇಟೊ-ಆಲೂಗಡ್ಡೆ ಜ್ಯೂಸ್, ಕ್ಯಾರೆಟ್, ಬೀಟ್‌ರೂಟ್, ಕೊತ್ತಂಬರಿ, ಬಾಳೆದಿಂಡು ಮಾತ್ರವಲ್ಲ, ಹೀರೇಕಾಯಿ ಸಿಪ್ಪೆ ಸಮೇತ, ಸೌತೆಕಾಯಿ ತಿರುಳಿನಲ್ಲಿ, ಬೂದುಗುಂಬಳಕಾಯಿಯನ್ನು ತುರಿದು ಜ್ಯೂಸ್‌ಗಳನ್ನು ಮಾಡುತ್ತಾರೆ. ನಲವತ್ತು ವರ್ಷಗಳಿಂದ ಪ್ರತಿನಿತ್ಯ ತರಕಾರಿ ಜ್ಯೂಸ್ ಕುಡಿದ ಅವರ ಅನುಭವದಲ್ಲಿ ಪಾಲಕ್ ಜ್ಯೂಸ್ ಅತ್ಯಂತ ರುಚಿಕರವಾದ ತರಕಾರಿ ಜ್ಯೂಸ್ ಅಂತೆ. ಇನ್ಯಾಕೆ ತಡ, ನೀವೂ ಒಂದ್ಸಲ ಟ್ರೈ ಮಾಡಿ...

3 ಕಾಮೆಂಟ್‌ಗಳು: