ಬುಧವಾರ, ಏಪ್ರಿಲ್ 15, 2009

ವಿಶ್ವೇಶ್ವರಯ್ಯ ಮ್ಯೂಸಿಯಂ ನೋಡಿದ್ದೀರಾ?


ಯಾವುದೇ ವಸ್ತು ಸಂಗ್ರಹಾಲಯಕ್ಕೆ ಹೋದರೂ ಅಲ್ಲಿ ನೀವು ಕಾಣುವ ಮೊದಲ ಸೂಚನೆ "Dont Touch' ಆದರೆ ಯುರೋಪಿನ ದೇಶಗಳ ಮ್ಯೂಸಿಯಂಗಳಲ್ಲಿ "Do It Yourself' ಎಂದಿರುತ್ತದೆ. ಆದರೆ ನಮ್ಮಲ್ಲೂ ಅಂಥದ್ದೇ ಒಂದು ಮ್ಯೂಸಿಯಂ ಇದೆ ಎಂದು ನನಗೆ ಗೊತ್ತಾದದ್ದು ಮೊನ್ನೆ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದಾಗಲೇ. ಮೊದಲಿಗೆ ನನಗೆ ಆಶ್ಚರ್ಯವಾಗಿದ್ದು ,ಅಲ್ಲಿ ಎಲ್ಲಾ ಮ್ಯೂಸಿಯಂಗಳಲ್ಲಿ ಕಾಣುವಂ ಘನಗಂಭೀರ ಮುಖಗಳು ಕಾಣದೇ, ಫನ್‌ವರ್ಲ್ಡ್‌ನಲ್ಲಿರುವಂತೆ ಮಕ್ಕಳ ನಗು, ಕೇಕೆ ಕಂಡಿದ್ದು. ನೂರಾರು ಮಕ್ಕಳು, ಆ ಬೃಹತ್ ವಿಜ್ಞಾನ, ತಂತ್ರಜ್ಞಾನದ ಎದುರು ಮಕ್ಕಳೇ ಆಗಿರುವ ದೊಡ್ಡವರೂ ಬೆರಗಿನಿಂದ ಅಗಲವಾದ ಕಣ್ಣು ಬಿಟ್ಟುಕೊಂಡು ನೋಡುತ್ತಿದ್ದರು. 'ಅದು ಹೇಗೆ ಹೀಗಾಗತ್ತಪ್ಪ?' ಎನ್ನುವ ಮಕ್ಕಳ ಪ್ರಶ್ನೆಗೆ ಅಲ್ಲಿರುವ ವಿವಣೆ ಓದಿ ತಿಳಿ ಹೇಳುವ ಪ್ರಯತ್ನದಲ್ಲಿದ್ದರು. ಆದರೆ ಅಲ್ಲಿ 'ಅದನ್ನು ಮುಟ್ಟಬೇಡಿ', 'ಇದಕ್ಕೆ ಕೈ ತಾಕಿಸಬೇಡಿ' ಎನ್ನುವವರ್ಯಾರೂ ಇರಲೇ ಇಲ್ಲ.
ಮ್ಯೂಸಿಯಂನ ಹೊರಭಾಗದಲ್ಲಿರುವ ವಿಮಾನ, ರಾಕೆಟ್, ಡೈನೋಸಾರಸ್ ಮಕ್ಕಳನ್ನಾಗಲೇ ಚುಂಬಕದಂತೆ ಸೆಳೆದಿದ್ದವು. ಒಳ ಹೊಕ್ಕೊಡನೆ ಬೃಹತ್ ಡೈನೋಸಾರಸ್ ಕುಟುಂಬದ ಸ್ಪೈನೊಸಾರಸ್ ಘೀಳಿಡುತ್ತಾ ಎದುರುಗೊಂಡಿತು. ಅಲ್ಲಿಂದ ಮುಂದೆ ಹೋಗಲೊಪ್ಪದ ಮಕ್ಕಳನ್ನು ಬಲವಂತವಾಗಿ ಮುಂದಿನ ಕೊಠಡಿಗೆ ಕರೆದುಕೊಂಡು ಹೋಗಬೇಕಾಯಿತು. "ಇಂಜಿನ್ ಹಾಲ್"ನಲ್ಲಿ ವಿವಿಧ ಯಂತ್ರಗಳ ಸರಳ ಉಪಯೋಗಗಳ ಡೆಮೊ ಕುತೂಹಲ ಕೆರಳಿಸುವಂತಿದೆ. ಕಬ್ಬಿಣದ ಸರಳುಗಳ ಮಧ್ಯೆ ನಿರಂತರವಾಗಿ ಸುತ್ತುವ , ಎಲ್ಲಿಂದಲೋ ಜಾರಿ ಎಲ್ಲೋ ಹಾರಿ ಬುಟ್ಟಿಯೊಳಗೆ ಬಂದು ಬೀಳುವ ಚೆಂಡುಗಳನ್ನು ಕಣ್ಣರಳಿಸಿಕೊಂಡು ನೋಡುತ್ತಿದ್ದರು. ಸಿನಿಮಾಸಕ್ತರಿಗೆ " ಅಪ್ಪು ರಾಜಾ’ ದಲ್ಲಿ ಕಮಲ್ ಹಸನ್ ಕೇವಲ ಒಂದು ಚೆಂಡನ್ನು ಬಳಸಿ ಕೇಡಿಗನನ್ನು ಕೊಲ್ಲುವ ತಂತ್ರವನ್ನು ನೆನಪಾದರೆ ಆಶ್ಚರ್ಯವಿಲ್ಲ. ಇಲ್ಲಿ ಬೇರೆಲ್ಲೂ ನೋಡಲು ಸಿಗದ ರೈಟ್ ಸಹೋದರರು ನಿರ್ಮಿಸಿದ ಮೊದಲ ವಿಮಾನದ ಪ್ರತಿಕೃತಿಯೂ ಇದೆ.
ಎರಡನೇ ಅಂತಸ್ತಿನ "ಎಲೆಕ್ಟ್ರೋ ಟೆಕ್ನಿಕ್ ಗ್ಯಾಲೆರಿ"ಯಂತೂ ಅಚ್ಚರಿಗಳ ಸಂತೆ. ತಳವೇ ಇಲ್ಲದ ಬಾವಿ, ಎಲ್ಲೋ ಪಿಸುಗುಟ್ಟಿದರೆ ಇನ್ನೆಲ್ಲೋ ಕಿವಿಗೊಟ್ಟು ಆಲಿಸಬಹುದಾದ ತಂತ್ರ, ದೃಷ್ಟಿ ಭ್ರಮೆ ಹುಟ್ಟಿಸುವ ವಿವಿಧ ಆಟಗಳು, ದೇಹ ತೂಕದ ಜತೆಗೆ ಅದರಲ್ಲಿರುವ ನೀರಿನ ತೂಕವನ್ನೂ ತಿಳಿಸುವ ಯಂತ್ರ, ನಮ್ಮದೇ ಬೆನ್ನನ್ನು ಕಣ್ಣೆದುರು ತೋರಿಸುವ ಕನ್ನಡಿ, ಒಂದೇ ಎರಡೇ. ವಿವಿಧ ಗ್ರಹಗಳ ಮೇಲೆ ನಮ್ಮ ತೂಕ ಎಷ್ಟು ಎಂದು ತೋರಿಸುವ ಯಂತ್ರ ನೋಡುಗರಲ್ಲಿ ಆ ಬಗ್ಗೆ ಕುತೂಹಲ ಹುಟ್ಟಿಸುವುದು ಖಂಡಿತ. ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ವಿವಿಧ ಆಟಗಳ ಮೂಲಕ ಕಂಪ್ಯೂಟರ್ ಹೇಗೆ ಸ್ಪರ್ಶವನ್ನು ಗಮನಿಸುತ್ತದೆ ಎಂದು ತೋರಿಸುವುದೂ ಒಳ್ಳೇ ಪ್ರಯೋಗ.
ಈಗೆರೆಡು ವರ್ಷಗಳ ಹಿಂದೆ ನಿರ್ಮಿಸಲ್ಪಟ್ಟ "ಬಾಲ ವಿಜ್ಞಾನ" ವಿಭಾಗದಲ್ಲಿ ಕುಳ್ಳಗಾಗಿ, ದಪ್ಪವಾಗಿ, ಉದ್ದವಾಗಿ ತೋರುವ ಕನ್ನಡಿಗಳು, ನಡೆದರೆ ನುಡಿಯುವ ಪಿಯಾನೊ ಇರುವ ಜಾಗವನ್ನೇ ಮರೆಸಿಬಿಡಬಲ್ಲವು. ಅಲ್ಲಿರುವ ೩ಈ ಚಿತ್ರಮಂದಿರದಲ್ಲಿ ವಿಶೇಷ ಕನ್ನಡಕ ಧರಿಸಿಕೊಂಡು ಚಿತ್ರ ನೋಡುವಾಗ ಮಕ್ಕಳಿರಲಿ, ದೊಡ್ಡವರೂ ಬೆರಗಾಗುವುವುದು ಅವರ ಕೇಕೆ, ಉದ್ಗಾರದಲ್ಲೇ ಗೊತ್ತಾಗುತ್ತಿತ್ತು.
ಸರ್. ಎಂ. ವಿಶ್ವೇ ಶ್ವರಯ್ಯನವರ ಜನ್ಮಶತಮಾನೋತ್ಸವದ ಅಂಗವಾಗಿ ೧೯೬೨ ಈ ಸಂಗ್ರಹಾಲಯವನ್ನು ಸ್ಥಾಪಿಸಿದ್ದಾದರೂ ಅಪ್‌ಡೇಟ್ ಆಗುತ್ತಿದೆ ಎನ್ನುವುದಕ್ಕೆ ಅಲ್ಲಿ ಸಾಕ್ಷಿಗಳಿದ್ದವು. ಪ್ರತಿ ದಿನ ನೂರಾರು ವೀಕ್ಷಕರಿರುವ , ಪ್ರತಿ ವಸ್ತುವನ್ನೂ ಮುಟ್ಟಿ, ತಟ್ಟಿ ನೋಡುವ ಈ ಸಂಗ್ರಹಾಲಯವನ್ನು ನೋಡಿಕೊಳ್ಳುವುದು ಸಾಮಾನ್ಯದ ಮಾತಲ್ಲ. ಆ ಕೆಲಸವನ್ನು ರಾಷ್ಟ್ರೀಯ ವಿಜ್ಞಾನ ವಸ್ತುಸಂಗ್ರಹಾಲಯ ಸೊಸೈಟಿಯು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದೆ. ಬಹು ಅಂತಸ್ತಿನ ಕಟ್ಟಡದಲ್ಲಿ ಲಿಫ್ಟ್ ಇಲ್ಲ ಎನ್ನುವುದೊಂದು ಕೊರತೆ. ಆದರೂ ಅಲ್ಲಲ್ಲಿ ಕೂರಲು ಕುರ್ಚಿಗಳು, ಸ್ವಚ್ಛ ಶೌಚಾಲಯಗಳೂ ನೋಡುಗರನ್ನು ಹಗುರಾಗಿಸುತ್ತವೆ. ಮೇಲಂತಸ್ತನಲ್ಲಿರುವ ಕ್ಯಾಂಟೀನ್ ಮಾತ್ರ ಕೊಂಚ ದುಬಾರಿಯೇ.
ನಮ್ಮೊಂದಿಗೆ ವಿವಿಧ ವಯಸ್ಸಿನ ಮಕ್ಕಳನ್ನು ಕರೆದುಕೊಂಡು, "ಮಕ್ಕಳಿಗೆ ಬೋರ್ ಆಗುತ್ತದೆಯೇನೋ, ಆದರೂ ಇವನ್ನೆಲ್ಲಾ ತಿಳಿದಿರಬೇಕು" ಎಂದು ದೊಡ್ಡವರ ಪೋಸ್ ಕೊಡುತ್ತಾ ಬಂದಿದ್ದ ನಮಗೂ ಇದು ವಿಶಿಷ್ಟ ಅನುಭವ. ವಿವರವಾಗಿ ನೋಡಲು ಇಡೀ ದಿನ ಸಾಲದು. ಭಾನುವಾರವೂ ತೆರೆದಿರುತ್ತದೆ ಎನ್ನುವುದು ಪ್ಲಸ್ ಪಾಯಿಂಟ್. ನೀವು ನೋಡಿಲ್ಲದಿದ್ದರೆ ಒಮ್ಮೆ ಭೇಟಿ ನೀಡಲೇಬೇಕಾದ ಸ್ಥಳವಿದು. ನಿಮ್ಮೊಡನೆ ಮಕ್ಕಳಿದ್ದರೆ ಬೇಸಿಗೆ ರಜೆ ಮುಗಿಯುವ ಮುನ್ನ ಹೋಗಿಬಂದು ಬಿಡಿ. ರಜೆ ಸಾರ್ಥಕವಾದೀತು.
ವಿಳಾಸ: ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ. ಕಸ್ತೂರಬಾ ರಸ್ತೆ. ಬೆಂಗಳೂರು.

10 ಕಾಮೆಂಟ್‌ಗಳು:

 1. ನೀವು ವಿಜಯ ಕರ್ನಾಟಕದಲ್ಲಿ ಅಮವಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮ ಬರೆದ್ರೂ ಚೆನ್ನಾಗಿ ಬರೆಯುತ್ತೀರ.

  ಪ್ರತ್ಯುತ್ತರಅಳಿಸಿ
 2. ಹಾಯ್ ರಜನಿ.
  ನಿಜ ನಮ್ಮಲ್ಲಿ ವಸ್ತು ಸಂಗ್ರಹಾಲಯ ಅಸ್ಟೊಂದು ಮಹತ್ವ ಪಡೆದಿಲ್ಲ... ಎಲ್ಲೊ ಒಂದೊಂದು ಇರುತ್ತೆ.. nammalli ಅದನ್ನು ನೋಡುವ , ಜನರ ಆಸಕ್ತಿ ಕಮ್ಮಿ ಅಂತಾನೆ ಹೇಳಬಹುದು...
  ನಿಮ್ಮ ಇ ಲೇಖನ ತುಂಬ ಚೆನ್ನಾಗಿ ಇದೆ... ನಾನು ತುಂಬ ದಿನಂದ ಹಿಂದೆ ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯಕ್ಕೆ ಹೋಗಿದ್ದೆ.. ಮತ್ತೆ ನೆನಪಿಸಿದಕ್ಕೆ thankx, ಮತ್ತೊಮ್ಮೆ ಹೋಗಿ ಬರುತ್ತೇನೆ,, ಏನಾದರೂ ಹೊಸ ಸಂಗ್ರಹಗಳು ಸೇರಿದಿಯೇನೋ ನೋಡಿ ಕೊಂಡ ಬರಲು..

  ಬಿಡುವಾದಾಗ ನನ್ನ ಬ್ಲಾಗಿಗೂ ಒಮ್ಮೆ ಬಂದು ಹೋಗಿ....

  ಪ್ರತ್ಯುತ್ತರಅಳಿಸಿ
 3. hey rajani, good job well described ,and is an additional vacational offer for the ones who want o spend their time seeing the best in the the world. sounds interesting. will make it a point to visit this place to improve my general knowledge . your article makes me think that !!!!!a man ,a unique creature ,of the god has grown to such an extant that ,today he has accumalated every thing in a building neatly organised. and let me not forget ,you initially in the article say that Indian museums say dont touch but in this museum they ask you to touch and experience rajani dont you feel that there is a kind of welcoming change in this world.in general a very good article with good phrases and instances

  ಪ್ರತ್ಯುತ್ತರಅಳಿಸಿ
 4. ನಿಜ, ನೀವಂದಂತೆ ಒಮ್ಮೆ ಮಕ್ಕಳೊಂದಿಗೆ ಹೊಗಲೇಬೇಕು ಮ್ಯೂಸಿಯಂಗೆ. ಬೇಸಿಗೆ ರಜೆಗೆ ಸೂಕ್ತವಾದ ಲೇಖನ.

  ಪ್ರತ್ಯುತ್ತರಅಳಿಸಿ
 5. ಲೇಖನ ಚೆನ್ನಾಗಿದೆ. ಆದರೆ ಅನೇಕ ಜನಗಳಿಗೆ ಅಲ್ಲಿರುವ ವಸ್ತುಗಳ ಮಹತ್ವವೇ ಗೊತ್ತಿಲ್ಲ. ಸುಮ್ಮಸುಮ್ಮನೆ ಒತ್ತುವುದು, ಬಟನ್ ಕುಟ್ಟುವುದು ಮಾಡಿ ಹಾಳು ಮಾಡುತ್ತಾರೆ. Exhibit ಏನು, ಅದು ಏನು ಮಾಡುತ್ತದೆ, ಹೇಗೆ ಕೆಲಸ ಮಾಡುತ್ತದೆ, ಅದರಿಂದ ನಮಗೇನು ಉಪಯೋಗ - ತಿಳಿಯುವ ಪ್ರಯತ್ನವೇ ಮಾಡುವುದಿಲ್ಲ. ಅದಕ್ಕೆ ಅಲ್ಲಿ ಎಷ್ಟೋ ಮಾದರಿಗಳು ಕೆಟ್ಟು ನಿಂತಿರುತ್ತವೆ.

  ಪ್ರತ್ಯುತ್ತರಅಳಿಸಿ
 6. Hi Rajani. Thanks for writing such blogs. it is my favourite place once liked very much. I visit this atleast bymonthaly

  keep writing
  Laxman

  ಪ್ರತ್ಯುತ್ತರಅಳಿಸಿ
 7. ನನ್ನ ಬ್ಲಾಗಿನಲ್ಲಿ (www.mnsrao.blogspot.com) ಒಂದು ವಿಡಿಯೋ ಇದೆ. ಅದನ್ನು ನೋಡಲು ಆಹ್ವಾನವಿದೆ.

  ಪ್ರತ್ಯುತ್ತರಅಳಿಸಿ