ಗುರುವಾರ, ಏಪ್ರಿಲ್ 23, 2009

ವಸಂತನ ಕರೆ


"ಮಳೆರಾಯ ಕೊಟ್ಟ ಮುತ್ತಿಗೆ...ಮತ್ತೇರಿದೆ ಭೂಮಿಗೆ" ಎಂದು ಬೆಳಗ್ಗೆಯೇ ಕಳಿಸಿದ ಗೆಳೆಯನ ಮೆಸೇಜನ್ನು ಓದಿ ಕಿಟಕಿಯಾಚೆ ಕಣ್ಣಾಯಿಸಿದವಳಿಗೆ ಹೊರಗಡೆ ಹೊಸ ಲೋಕವೊಂದು ಬಂದಿಳಿದಂತೆನಿಸತೊಡಗಿತು. ನಿನ್ನೆಯವರೆಗೂ ಧೂಳು ಮೆತ್ತಿಕೊಂಡು, ಬೆವರಿನಿಂದ ಜಿಡ್ಡುಜಿಡ್ಡಾಗಿದ್ದ ಲೋಕ, ಕತ್ತಲು ಕಳೆದು ಬೆಳಗಾಗುವುದರ ಒಳಗೆ ಈಗಷ್ಟೆ ಸ್ನಾನ ಮಾಡಿಬಂದ ಅಪ್ಸರೆಯಂತೆ ಹೊಳೆಯತೊಡಗಿದ್ದಾದರೂ ಹೇಗೆ? ಗಿಡ ಮರವೆಲ್ಲಾ ಹೊಸ ಹಸಿರು ಸೀರೆಯುಟ್ಟಿದ್ದರೆ, ರಸ್ತೆಯುದ್ದಕ್ಕೂ ಗುಲ್‌ಮೊಹರ್ನ ಕೆಂಪುಹಾಸು! ಎಷ್ಟೆಂದರೂ ಋತುರಾಜ ವಸಂತನ ಆಳ್ವಿಕೆಯ ಕಾಲವಲ್ಲವೇ? ಐದಂಕಿಯ ಸಂಬಳಕ್ಕಾಗಿ ಹಳೆಯ ನೆನಪುಗಳನ್ನು ಊರಿನಲ್ಲಿಯೇ ಗಂಟುಕಟ್ಟಿ ಇಟ್ಟುಬಂದರೂ ಬೆಂಗಳೂರಂಥ ಬೆಂಗಳೂರಲ್ಲೂ ವಸಂತನ ನೆನಪಾಗುತಿದೆಯೆಂದರೆ ವೈ.ಎನ್.ಕೆ ಹೇಳಿದ್ದು ಸರಿಯೆ.
"ವಸಂತ ಕಾಲದಲ್ಲಿ
ಯಾರೂ ಸಂತರಲ್ಲವಂತೆ,
ಕಂತುಪಿತ ಭಗವಂತ
ಕೂಡ ರಮೆಯನ್ನು
ರಮಿಸುವ ಮಂತ್
ಇದಂತ’
"ಚೈತ್ರ ವೈಶಾಖ, ವಸಂತ ಋತು, ಜೇಷ್ಠ ಆಶಾಢ ವರ್ಷ ಋತು" ಅಂತ ಮನೆ ಮಕ್ಕಳೆಲಾ ರಾಗವಾಗಿ ಬಾಯಿಪಾಠ ಮಾಡುತ್ತಿದ್ದೆವಲ್ಲ, ಇದೇ ಬೋಗನ್‌ವಿಲ್ಲಾಗೆ ತಾನೆ ನಮ್ಮೂರಲ್ಲಿ "ಕಾಗದದ ಹೂವು" ಅಂತ ಕರೆಯುತ್ತಿದ್ದುದು, ಹತ್ತು ರೂಪಾಯಿಗೆ ಎರಡರಂತೆ ಕೊಳ್ಳುವ ಇದೇ ತೋತಾಪುರಿಗೆ ಅಲ್ಲವೇ ಪಕ್ಕದ ಮನೆಯ ಶಿವರಾಜುಗೆ ಬಳಪ ಲಂಚ ಕೊಟ್ಟು ತಿನ್ನುತ್ತಿದ್ದುದು, ಮಾವಿನ ಕಾಯಿಯ ಸೊನೆ ತುಟಿಗೆ ತಾಕಿ ಸುಟ್ಟಂತೆ ಕಪ್ಪು ಗಾಯವಾಗಿ, ನಂಜಾಗಿ, ಕೊನೆಗೆ ಅಪ್ಪನ ಹತ್ತಿರ ಹೊಡೆಸಿಕೊಳ್ಳುತ್ತಿದ್ದುದೂ ಅದೊಂದೇ ಕಾರಣಕ್ಕಲ್ಲವೇ? ಪಕ್ಕದ ಊರಿನ ಜಾತ್ರೆ ಇದೇ ತಿಂಗಳಲ್ಲೇ ನಡೆಯುತ್ತಿದ್ದುದಾ...ಇರಬೇಕು. ಪದವಿಯ ಪರೀಕ್ಷೆ ಮುಗಿಸಿ ಊರಿಗೆ ಹೊರಟು ನಿಂತಾಗ ಬೀಳ್ಕೊಡಲು ಬಂದ "ಅವನ" ಕಣ್ಣಲ್ಲಿ ಏನೋ ಫಳಫಳಗುಟ್ಟಿದ್ದು ಇನ್ನೂ ನೆನಪಿದೆ, ಆಗಲೇ ಅದಕ್ಕೆ ಎರಡು ವರ್ಷವಾಗಿಬಿಟ್ಟಿತೇ..ಬೇಸಿಗೆಯಲ್ಲಿ ರಜಾ ಕೊಡುವುದೇ ಅಜ್ಜಿ ಮನೆಗೆ ಹೋಗಲಿಕ್ಕೆಂದು ಎಂದು ಬಲವಾಗಿ ನಂಬಿದ್ದ ನನಗೆ ಆ ಸಲ ಅದೂ ರುಚಿಸಿರಲಿಲ್ಲ. ಪ್ರತಿ ವರ್ಷದಂತೆ ಅಂಗಳದಲ್ಲಿ ಮೊದಲ ಮಳೆಯೊಂದಿಗೆ ಬಿದ್ದ ಆಲಿಕಲ್ಲುಗಳನ್ನು ಆರಿಸಿಕೊಳ್ಳಲು ಕಾಂಪಿಟೇಷನ್ ಮಾಡದೆ ಸುಮ್ಮನೆ ನಿಂತು ನೋಡುತ್ತಿದ್ದವಳಿಗೆ ಅವನ ಕಣ್ಣಲ್ಲಿ ಹೊಳೆದದ್ದು ಇದೇ ಎನಿಸಿಬಿಟ್ಟಿತ್ತಲ್ಲ...
"ಕಾದು ಕಾದು
ಕೆಂಪಾದ ಇಳೆಗೆ
ತಂಪಾಯ್ತು ಇಂದು,
ನೆನೆದೂ ನೆನೆದೂ
ಬೆಂದೋಯ್ತು ಮನಸು,
ಭೇಟಿ ಇನ್ನೆಂದು?’
ಅದೇ ಗೆಳೆಯನ ಇನ್ನೊಂದು ಮೆಸೇಜ್ ಮೊಬೈಲ್‌ನಲ್ಲಿ ಉತ್ತರಕ್ಕಾಗಿ ಕಾಯುತ್ತಿದೆ. ಕಾಯಿ ಹಣ್ಣಾಗುವ ಸಮಯ, ಇನ್ನೂ ಕಾಯಿಸುವುದು ಸರಿಯಲ್ಲ ಎನಿಸತೊಡಗಿತು. ಮಳೆ ಸುರಿಯುವ ಎಲ್ಲಾ ಲಕ್ಷಣಗಳಿದ್ದರೂ ಛತ್ರಿಯನ್ನು ಬೇಕೆಂದೇ ಮರೆತು, ಹೊರ ಕಾಲಿಟ್ಟೆ. ತಂಗಾಳಿ ಬೀಸತೊಡಗಿತ್ತು...

3 ಕಾಮೆಂಟ್‌ಗಳು: