ಬುಧವಾರ, ಅಕ್ಟೋಬರ್ 21, 2009

ರಾತ್ರಿ ರಾಹುಕಾಲ, ಬೆಳಗ್ಗೆ ಗುಳಿಗೆ ಕಾಲ

ಮೊದಲ ಬಾರಿ ಸ್ಯಾನಿಟರಿ ನ್ಯಾಪ್‌ಕಿನ್  ಜಾಹೀರಾತು ಟಿವಿಯಲ್ಲಿ ಪ್ರಸಾರವಾಗಿದ್ದು ನೆನಪಿದೆಯೇ? ರೇಣುಕಾ ಶಹಾನೆ ("ಸುರಭಿ' ಕಾರ್ಯಕ್ರಮದಿಂದ ಜನಪ್ರಿಯಳಾಗಿದ್ದಳಲ್ಲ, ಅವಳೇ!)ಸರಳವಾದ ಉಡುಪಿನಲ್ಲಿ ಬಂದುನಿಂತು 'ನಾನು ನಿಮ್ಮ ಬಳಿ ಹೇಳಲೇಬೇಕಾದ ವಿಷಯವೊಂದಿದೆ. ಆದರೆ ಹೇಗೆ ಹೇಳಲಿ?’ ಎಂದು ಸಂಕೋಚದಿಂದ, ಮೆಲುದನಿಯಲ್ಲಿ ಅದರ ಬಗ್ಗೆ ಸೂಚ್ಯವಾಗಿ ಹೇಳುವ  ಜಾಹೀರಾತದು. ಸಂಪ್ರದಾಯವಾದಿಗಳು ಅಂದು ಮೂಗು ಮುರಿದಿದ್ದರು. ಮಕ್ಕಳು ಇದೇನೆಂದು ಕೇಳಿದರೆ ಏನು ಹೇಳುವುದು ಎಂದು ಹೌಹಾರಿದ್ದರು. ಆದರೆ ಮಕ್ಕಳ ಗಮನ ಸೆಳೆಯುವಂಥದ್ದೇನೂ ಅದರಲ್ಲಿರಲಿಲ್ಲ.   ಹೈಸ್ಕೂಲು, ಕಾಲೇಜಿಗೆ ಹೋಗುವ ತರುಣಿಯರು ಮಾತ್ರ  ಪರಸ್ಪರ ಕಿವಿಯಲ್ಲಿ ಪಿಸುಗುಟ್ಟಿಕೊಂಡು ಕಿಲಕಿಲ ನಕ್ಕಿದ್ದರು. ಅಷ್ಟು ವರ್ಷಗಳಿಂದ ಆರೋಗ್ಯ ಇಲಾಖೆ ಹೇಳಲು ವಿಫಲವಾಗಿದ್ದ ನೈರ್ಮಲ್ಯದ ಪಾಠವನ್ನು ಕೇವಲ ಒಂದು ಜಾಹೀರಾತು  ಸಾಧಿಸಿ ತೋರಿಸಿತ್ತು. ಮಾತ್ರವಲ್ಲ, ಜಾಹೀರಾತು ಲೋಕದಲ್ಲಿದ್ದ ಮಡಿವಂತಿಕೆಯನ್ನೂ ಕಳಚಿತ್ತು. ಅದರ ಪರಿಣಾಮವಾಗಿಯೇ ಇಂದು ಅದೇ ನ್ಯಾಪ್ಕಿನ್ ಕಂಪೆನಿ ಯಾವುದೇ ಸಂಕೋಚ, ಮುಜುಗರಗಳಿಗೆ ಅವಕಾಶವಿಲ್ಲದಂತೆ "ಹ್ಯಾವ್ ಅ ಹ್ಯಾಪಿ ಪಿರಿಯಡ್’ ಎಂದು ವಿಶ್ ಮಾಡಿಕೊಳ್ಳುವಂಥ ಆರೋಗ್ಯಕರ ಪರಿಸರವನು  ರೂಪಿಸಿಕೊಂಡಿತು.

 ಸ್ಯಾನಿಟರಿ ನ್ಯಾಪ್‌ಕಿನ್‌ಗಳಷ್ಟೇ ಗರ್ಭ ನಿರೋಧಕ ಮಾತ್ರೆ ಮತ್ತು ಕಾಂಡೋಮ್‌ಗಳ ಬಗ್ಗೆಯೂ ಮಡಿವಂತಿಕೆ ಇತ್ತು. ಜಾಗೃತಿಯ ಅಗತ್ಯವಿತ್ತು. ಆದರೆ ಅದರ ಸುರಕ್ಷೆಗೆ ಒತ್ತು ಕೊಡದೇ,  ಕಾಮೋತ್ತೇಜಕ  ಮಾತ್ರೆಗಳೇನೋ ಎಂಬಂತೆ ದೃಶ್ಯಗಳನ್ನು ಬಳಸಿದ್ದರಿಂದಲೇ ನಿರೀಕ್ಷಿತ ಮಟ್ಟದಲ್ಲಿ ಜಾಗೃತಿ ಮೂಡಿಸಲಿಲ್ಲವೆನಿಸುತ್ತದೆ. ಪಡಖಾನೆಯಲ್ಲಿ ಕೂತು ಟಿವಿ ನೋಡುವ ನಮ್ಮ ಮಂದಿ ಅಂಥ ದೃಶ್ಯಗಳನ್ನು ಕಂಡಕೂಡಲೇ ಚಾನೆಲ್ ಬದಲಾಯಿಸುತ್ತಾರೆ ಎನ್ನುವುದನ್ನು ಆ ಜಾಹೀರಾತು  ಮಾಡಿದವರು ಮರೆತಿದ್ದರೇನೊ.

ಇತ್ತೀಚೆಗೆ ಟಿವಿಯಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿರುವ ಗರ್ಭ ನಿರೋಧಕ ಮಾತ್ರೆಗಳ ಜಾಹೀರಾತುಗಳನ್ನು ನೋಡಿದಾಗ ಇದೆಲ್ಲಾ ನೆನಪಾಯಿತು."ರಾತ್ರಿ ಏನೇ ನಡೆದಿರಲಿ, ಬೆಳಗಾಗೆದ್ದು ಒಂದು ಮತ್ರೆ ನುಂಗಿದರೆ ಮುಗಿದೇ ಹೋಯಿತು, ಗರ್ಭಿಣಿಯಾಗುವ ಭಯವಿಲ್ಲ’ ಎನ್ನುವ "ಮರುದಿನದ ಮಾತ್ರೆಗಳ’ (Morning after pills) ಜಾಹೀರಾತದು. ಹುಡುಗಿಯರಿಬ್ಬರು ತಮ್ಮ "ರಹಸ್ಯ’ಗಳನ್ನು ಹಂಚಿಕೊಳ್ಳುವುದು ಮತ್ತು ಗರ್ಭಪಾತ ಮಾಡಿಸಿಕೊಳ್ಳುವುದಕ್ಕಿಂತ ’ಇದು’ ಉತ್ತಮ ಎಂಬ ತೀರ್ಮಾನಕ್ಕೆ ಬರುವ ಆ  ಜಾಹೀರಾತು ಅದೇಕೋ ಕಳವಳವನ್ನು ಹುಟ್ಟಿಸಿತು. ಬಹುಶಃ ಆ  ಜಾಹೀರಾತಿನಲ್ಲಿ ಮದುವೆಯಾದ ಗೃಹಿಣಿ ಅಥವಾ ಆಕಸ್ಮಿಕ ಅವಘಢಕ್ಕೆ ತುತ್ತಾದ ಹುಡುಗಿಯೊಬ್ಬಳನ್ನು ತೋರಿಸಿದ್ದರೆ ಹೆಚ್ಚು ಸಮರ್ಥನೀಯವಾಗುತ್ತಿತ್ತೇನೊ. ಕುತೂಹಲದ ಕಣ್ಣಲ್ಲೇ ಎಲ್ಲವನ್ನೂ ನೋಡುವ ಮಕ್ಕಳು, ಯುವಜನರು ಇದನ್ನು ಪ್ರಯೋಗಿಸಲು ಹೊರಟರೆ ತಡೆಯುವವರ್‍ಯಾರು?

ಕೆಲವು ತಿಂಗಳುಗಳ ಹಿಂದೆ ಕೇರಳದಲ್ಲಿ ಇಂಥದ್ದೇ ಜಾಹೀರಾತೊಂದಕ್ಕೆ ಸಂಬಂಧಿಸಿದ್ದಂತೆ ಗಲಾಟೆಯಾಗಿತ್ತು. "ಮರುದಿನ’ದ ಮಾತ್ರೆಯೊಂದರ ಹೆಸರೇ "ಮಿಸ್-ಟೇಕ್’ ಎಂದಿದ್ದದ್ದೇ ಅದರ ಮಿಸ್ಟೇಕು.  ಈ ಬಗೆಯ ಮಾತ್ರೆಗಳು ಯಾರನ್ನ ತಮ್ಮ ಗುರಿಯನ್ನಾಗಿಸಿಕೊಂಡಿವೆ ಅನ್ನೋದು ಸಾಂಪ್ರದಾಯಿಕ ಸಮಾಜವಾಗಿರುವ ಕೇರಳಿಗರ ಪ್ರಶ್ನೆಯಾಗಿತ್ತು. ಇದು ಮಕ್ಕಳಲ್ಲಿ, ನವತರುಣರಲ್ಲಿ  ಜವಾಬ್ದಾರಿ ಇಲ್ಲದ ಸ್ವೇಚ್ಛೆಗೆ ಅನುವು ಮಾಡಿಕೊಡುಲಿದೆ ಎನ್ನುವ ಕಳವಳ ಅವರು  ಈ ಬಗೆಯ ಮಾತ್ರೆಗಳ ವಿರುದ್ಧ ತಿರುಗಿ ನಿಲ್ಲುವಂತೆ ಮಾಡಿತ್ತು.

ನಾವು ಮುಕ್ತ ಸಮಾಜವೆಂದು ಭಾವಿಸಿರುವ ಮುಂದುವರಿದ ದೇಶಗಳಲ್ಲೇ ’ಮರುದಿನದ ಮಾತ್ರೆಗಳ’ ಜಾಹೀರಾತಿಗಳಿಗೆ ಕಡಿವಾಣವಿದೆ. ಅಮೆರಿಕದಲ್ಲಿ ಈ ಬಗೆಯ ಜಾಹೀರಾತುಗಳು ಕೇವಲ ಕೆಲವು ಚಾನೆಲ್‌ಗಳಲ್ಲಿ ಮಾತ್ರ ಪ್ರಸಾರವಾಗುತ್ತದೆ. ಎಲ್ಲರೂ ನೋಡುವ ರೆಗ್ಯುಲರ್ ಚಾನೆಲ್‌ಗಳಲ್ಲಿ ಪ್ರಸಾರ ಮಾಡುವುದಿಲ್ಲ. ಬ್ರಿಟನ್ನಿನಲ್ಲಿ ಸಹ ಈ ಜಾಹೀರಾತು ಕಳೆದ ಏಪ್ರಿಲ್‌ನಿಂದಷ್ಟೇ ಪ್ರಸಾರವಾಗುತ್ತಿದೆ. ಅದೂ ರಾತ್ರಿ  9 ಗಂಟೆಯ ನಂತರವಷ್ಟೇ (ಆ ವೇಳೆಗೆ ಮಕ್ಕಳು ಮಲಗಿರುತ್ತಾರೆ). ಅಲ್ಲಿ ಈ ಜಾಹೀರಾತನ್ನು ಹುಡುಗಿಯೊಬ್ಬಳ ಸ್ವಗತವೆಂಬಂತೆ ಕಾರ್ಟೂನ್‌ನಲ್ಲಿ ಚಿತ್ರಿಸಲಾಗಿದೆ. ಹಾಗಿದ್ದೂ ಸಹ ಅದು ಯುವಕರಲ್ಲಿ ಸುರಕ್ಷಿತವಲ್ಲದ ಲೈಂಗಿಕ ಜೀವನವನ್ನು ಪ್ರಚೋದಿಸುತ್ತಿದೆ, ವಿಷಯದ ಗಂಭೀರತೆಯನ್ನು ಕ್ಷುಲ್ಲಕವೆಂಬಂತೆ ಬಿಂಬಿಸುತ್ತಿದೆ ಎಂದು ನೂರಾರು ದೂರುಗಳು ಬರುತ್ತಿವೆ. ಈ ಮಾತ್ರೆಯ ಜಾಹೀರಾತನ್ನು ತೋರಿಸಬಹುದಾದರೆ ಗರ್ಭಪಾತದ ಮಾತ್ರೆಯ ಜಾಹೀರಾತನ್ನು ಟಿವಿಯಲ್ಲಿ ಪ್ರಸಾರಮಾಡುವುದಿಲ್ಲವೆಂಬ ನಂಬಿಕೆ ನಮಗಿಲ್ಲ ಎನ್ನುತ್ತಾರೆ ಅದರ ವಿರುದ್ಧ ಪ್ರತಿಭಟಿಸುವವರು. ದುರಾದೃಷ್ಟವೆಂದರೆ ಭಾರತದಲ್ಲಿ , ಕೇರಳವನ್ನು ಹೊರತುಪಡಿಸಿದರೆ ಆ ಬಗ್ಗೆ ಸೊಲ್ಲೆತ್ತಿದ ಉದಾಹರಣೆಯೇ ಇಲ್ಲ.

ಇದರರ್ಥ ಈ ಮಾತ್ರೆಗಳನ್ನು ಸಂಪೂರ್ಣವಾಗಿ ವಿರೋಧಿಸಬೇಕು ಎಂದಲ್ಲ. ಮಹಿಳೆಯರಿಗೆ ಅವರ ಲೈಂಗಿಕ ಜೀವನದ ಮೇಲೆ, ಗರ್ಭಧಾರಣೆಯ ಮೇಲೆ ಸಂಪೂರ್ಣ ಸ್ವಾತಂತ್ರ ನೀಡಲಿಕ್ಕಾಗಿ, ಅದರ ಬಗ್ಗೆ ಅರಿವು ಮೂಡಿಸಲಿಕ್ಕಾಗಿಯೇ ಈ ಜಾಹೀರಾತುಗಳನ್ನು ಪ್ರಸಾರ ಮಾಡಲು ಸರಕಾರ ಒಪ್ಪಿಗೆ ನೀಡಿದೆ. ಆದರೆ ಲೈಂಗಿಕತೆಯೊಂದಿಗೆ  ಮಹಿಳೆಯರ ದೈಹಿಕ ಸ್ವಾಸ್ಥ್ಯ ಮತ್ತು ಸಮಾಜದ ಮಾನಸಿಕ ಸ್ವಾಸ್ಥ್ಯವೂ ಅಂಟಿಕೊಂಡಿರುವುದರಿಂದ ನೈತಿಕತೆಯೂ ಇಲ್ಲಿ ಪ್ರಮುಖ ಪಾತ್ರ ವಹಿಸಬೇಕಿತ್ತು. ಈ ಜಾಹೀರಾತುಗಳಲ್ಲಿ ಅದರ ಕುರುಹೇ ಇಲ್ಲದಿರುವ ಬಗ್ಗೆಯಷ್ಟೇ ನಮ್ಮ ಸಂತಾಪ. ಕೈ, ಕೈ ಹಿಡಿದು ನಗುತ್ತಾ ಬರುವ ಗಂಡು ಹೆಣ್ಣಿನ ಜೋಡಿ ’ಟೆನ್ಶನ್ ಫ್ರೀ’ ಎಂದು ಸಾರುವ ಈ ಜಾಹೀರಾತುಗಳು ಯುವ ಪೀಳಿಗೆಯನ್ನು ಮುಕ್ತ ಕಾಮಕ್ಕೆ ಪ್ರಚೋದಿಸುವ, ಲೈಂಗಿಕ ಸ್ವಾತಂತ್ರ್ಯ ನೀಡುವಂತಿದೆ ಎನ್ನುವುದು ಸ್ಪಷ್ಟ.  ಅದರ ಬದಲು ತುರ್ತು ಸಂದರ್ಭದಲ್ಲಿ ಮಾತ್ರ ಬಳಸುವಂತೆ ಸೂಚಿಸಿ, ಇನ್ನಷ್ಟು ಪಾಸಿಟೀವ್ ಆಗಿ, ನಮ್ಮ ಸಮಾಜದ ನಂಬಿಕೆಗಳಿಗೆ, ಆರೋಗ್ಯಕ್ಕೆ ತೊಂದರೆ ನೀಡದಂತೆ ಜಾಹೀರಾತನ್ನು ರೂಪಿಸಿಬಹುದಿತ್ತು.

ಯಾರೋ ದುಷ್ಟರು ಅರೆ ಕ್ಷಣದ ಸುಖಕ್ಕಾಗಿ ಹೆಣ್ಣೊಬ್ಬಳನ್ನು ಬಲಾತ್ಕರಿಸಿದರೆ, ಮುಂದಿನ ಪರಿಣಾಮಗಳನ್ನು ಯೋಚಿಸಿಯೇ ಸಾಯಲು ತೀರ್ಮಾನ ಮಾಡುವ ಮನಸ್ಥಿತಿಯ ಹುಡುಗಿಯರು ನಮ್ಮ ಸಮಾಜದಲ್ಲಿದ್ದಾರೆ. ಆಂಥ ಕ್ಷಣದಲ್ಲಿ ಈ ಮಾತ್ರೆ ಅವರಿಗೆ ಧೈರ್ಯವನ್ನು ಕೊಡುತ್ತದೆಯಲ್ಲದೆ, ಅವರ ಪ್ರಾಣವನ್ನೂ ಉಳಿಸುತ್ತದೆ. ಕೆಲವೊಮ್ಮೆ  ಬೇಜವಾಬ್ದಾರಿಯಿಂದಲೋ, ಅಸಹಾಯಕತೆಯಿಂದಲೋ ಸುರಕ್ಷಾ ಕ್ರಮಗಳನ್ನು ಕೈಗೊಳ್ಳದ ಗೃಹಿಣಿಯರಿಗೆ ಈ ಮಾತ್ರೆ ವರದಾನವಾಗುತ್ತದೆ. ನಿಜವೇ. ಅದರೆ ಅದೇ ಅಭ್ಯಾಸವಾದರೆ ಗತಿಯೇನು? ಸ್ವೇಚ್ಛತೆಗೆ ಬೇಜವಾಬ್ದಾರಿಯ ಸಾಥ್ ಸಿಕ್ಕಂತಾಗುವುದಿಲ್ಲವೇ? ಅಲ್ಲದೆ ಕಾಂಡೋಂ ಬಳಸಲು ಹಿಂಜರೆಯುವ ಗಂಡು "ಬಿಡು, ನೀನು ಬೆಳಗಾಗೆದ್ದು ಅದನೊಮ್ಮೆ ನುಂಗಿಬಿಡು’ ಎಂದು ಅಪ್ಪಣೆ ಮಾಡುವುದಿಲ್ಲ ಎಂಬುದಕ್ಕೆ ನಮ್ಮ ಸಮಾಜದಲ್ಲಿ ಖಾತ್ರಿಯೂ ಇಲ್ಲವಲ್ಲ.


ಜಾಹೀರಾತುಗಳಲ್ಲಿ ಈ ’ಮರುದಿನ’ದ ಮಾತ್ರೆಗಳ ಬಳಸುವಿಕೆಯ ಬಗ್ಗೆ ಸರಿಯಾದ ಮಾಹಿತಿಯೂ ಇಲ್ಲ. ಇದು ಕುಟುಂಬ ಯೋಜನೆಗೆ ಬಳಸುವ ಸಾಮಾನ್ಯ ಕುಟುಂಬ ನಿಯಂತ್ರಣ ಮಾತ್ರೆಯಂದು ತಪ್ಪು ತಿಳಿದುಕೊಂಡು ನಿತ್ಯ ಬಳಸುವವರೂ ಇದ್ದಾರೆ. ಆದರೆ ಇದು ಸಾಮಾನ್ಯ ಕುಟುಂಬ ನಿಯಂತ್ರಣ ಮಾತ್ರೆಯಂಥಲ್ಲ. ಅದರ ಹತ್ತರಷ್ಟು ಹೆಚ್ಚಿನ ಪ್ರಮಾಣದ ರಾಸಾಯನಿಕಗಳಿರುವ ಈ ಮಾತ್ರೆಗಳು ಖಂಡಿತಾ ಬಳಸಲು ಯೋಗ್ಯವಲ್ಲ. ಕೇವಲ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಬಳಸಬಹುದಾದಂಥವು. ಅಡ್ಡ ಪರಿಣಾಮಗಳೂ ಜಾಸ್ತಿ. ಕ್ಯಾನ್ಸರ್‌ಕಾರಕ ಅಂಶಗಳೂ ಅದರಲ್ಲಿರುವುದು ಸಂಶೋಧನೆಗಳಲ್ಲಿ ಪತ್ತೆಯಾಗಿದೆ. ಆದ್ದರಿಂದಲೇ ಈ ಮಾತ್ರೆಗಳು ಯಾವುದೇ ರೀತಿಯಲ್ಲೂ ಕುಟುಂಬ ಯೋಜನೆಗೆ ಪರ್ಯಾಯವಾಗುವುದು ಸಾಧ್ಯವಿಲ್ಲ. ಆದರೆ ಈ ಮಾತ್ರೆಗಳಿವೆಯೆಂಬ ಧೈರ್ಯದಲ್ಲಿ ಇತರ ಸುರಕ್ಷಾ ಮಾರ್ಗಗಳನ್ನು ಕೈಬಿಡುವ ಸಾಧ್ಯತೆ ಇರುವುದೂ ಪ್ರಜ್ಞಾವಂತರ ಆತಂಕಕ್ಕೆ ಕಾರಣ. ಏಕೆಂದರೆ ಈ ಮಾತ್ರೆಗಳು ಕಾಂಡೋಂನಂತೆ ಎಚ್‌ಐವಿ/ಏಡ್ಸ್‌ನಂಥ ಲೈಂಗಿಕ ರೋಗಗಳಿಂದ ಕಾಪಾಡಲಾರದು.

 ಈ ಮೊದಲೂ  ಅಂಥ ತುರ್ತು ಪರಿಸ್ಥಿತಿಯಲ್ಲಿ ಈ ಮಾತ್ರೆಗಳನ್ನೇ ವೈದ್ಯರು ಕೊಡುತ್ತಿದ್ದುದು. ಆದರೆ ಈ ಗ ಈ ಮಾತ್ರೆಗಳನ್ನು ಕೊಳ್ಳಲು ವೈದ್ಯರ ಸಲಹೆಯೇ ಬೇಕಿಲ್ಲ. ಪ್ರಿಸ್ಕ್ರಿಪ್ಷನ್ ಇಲ್ಲದೆಯೇ ಮೆಡಿಕಲ್ ಶಾಪ್‌ಗಳಲ್ಲಿ ಈ ಮಾತ್ರೆಗಳು ದೊರೆಯುತ್ತಿವೆ. ಅತ್ಯಾಚಾರಕ್ಕೊಳಗಾದ ಹುಡುಗಿಯರೇ ಈ ಮಾತ್ರೆಯನ್ನು ಬಳಸುತ್ತಾರೆಂದುಕೊಂಡರೂ, ಅವರಿಗೆ  ವೈದ್ಯರ ಸಲಹೆ, ಮಾನಸಿಕ ಸಾಂತ್ವಾನದ ಅಗತ್ಯವೂ ಇದೆ. ಅದನ್ನು ನೀಡುವವರ್‍ಯಾರು?

  ಧಾರಾವಾಹಿ ನೋಡುವ ಗೃಹಿಣಿಯೊಬ್ಬಳು ಹತ್ತನೇ ತರಗತಿ ಓದುತ್ತಿರುವ ತನ್ನ ಮಗಳೆಲ್ಲಿ ಈ ಜಾಹೀರಾತು ನೋಡುತ್ತಾಳೋ ಎಂಬ ಭಯದಿಂದ ತಕ್ಷಣ ಚಾನೆಲ್ ಬದಲಾಯಿಸುತ್ತಾಳೆ. ಆದರೂ ಭಾರತದಲ್ಲಿ ಪ್ರತಿ ತಿಂಗಳೂ ಸುಮಾರು  2  ಲಕ್ಷ  "ಮರುದಿನ’ದ ಮಾತ್ರೆಗಳು ಮಾರಾಟವಾಗುತ್ತಿವೆ ಎಂಬ ವರದಿ ಪತ್ರಿಕೆಗಳಲ್ಲಿ ಬರುತ್ತಿದೆ.

ಸೋಮವಾರ, ಅಕ್ಟೋಬರ್ 12, 2009

ಛೇ! ಅಪ್ಪನಿಗೂ ವಯಸ್ಸಾಗಿಬಿಡ್ತೇ?




ಕಾಲ ಎಷ್ಟು ಬೇಗ ಬದಲಾಗಿಬಿಡತ್ತಲ್ವಾ? ಪ್ರತೀ ದಿನ ಅದೇ ಸೂರ್ಯ ಅಲ್ಲೇ ಮುಳುಗುತ್ತಿದ್ದರೂ ನಿನ್ನೆ ಇದ್ದ ಹಾಗೆ ಇಂದಿಲ್ಲ. ಚಿಕ್ಕವಳಿದ್ದಾಗ ಎಂದಾದರೂ ಅಪ್ಪನಿಗೂ ವಯಸ್ಸಾಗುತ್ತದೆ ಎಂಬುದನ್ನು ಊಹಿಸಿಯೇ ಇರಲಿಲ್ಲ. "ಅಪ್ಪನಿಗೆ ವಯಸ್ಸಾಗತ್ತಾ? ಅಜ್ಜನಿಗೆ ಮಾತ್ರ ವಯಸ್ಸಾಗುವುದು ’ ಎಂದೇ ನಮ್ಮ ತಿಳುವಳಿಕೆ. ಹಾಗೆ ನೋಡಿದರೆ ಅಪ್ಪ ನಾನು ಭಾರೀ ಫ್ರೆಂಡ್ಸ್. ಚಿಕ್ಕವಳಿದ್ದಾಗ ಶಾಲೆ ಮುಗಿದ ತಕ್ಷಣ ತೋಟಕ್ಕೆ ಓಡ್ತಿದ್ದೆ. ಕೆಲಸ ಮುಗಿದ ಮೇಲೆ ಅಪ್ಪನ ಜತೆ ಮಾತಾಡುತ್ತಾ ಕೆರೆಯ ಏರಿಯ ಮೇಲೆ ಬರುವುದು ನನ್ನ ನೆಚ್ಚಿನ ಸಂಗತಿ. ಆಗಲೇ ನಾನು ಶಾಲೆಯ ಬಗ್ಗೆ , ಗೆಳತಿಯರ ಬಗ್ಗೆ, ಮಾಡಿದ ಪಾಠ, ನಡೆಸಿದ ದಾಂದಲೆಗಳ ಬಗ್ಗೆ ಅಪ್ಪನಿಗೆ ಹೇಳುತ್ತಿದ್ದುದು. ಅಪ್ಪ ಯಾವುದಕ್ಕೂ ಬಯ್ಯದೇ ನನ್ನ ಮಾತು ಕೇಳುತ್ತಾ , ಹೊಸ ಹೊಸ ಆಟ ಹೇಳಿಕೊಡುತ್ತಾ, ದಾರಿಯಲ್ಲಿ ಎದುರಾಗುವ ಹಸು ಕರುಗಳಿಗೆ ದಾರಿ ಮಾಡಿಕೊಡುತ್ತಾ ನನ್ನ ಕೈ ಹಿಡಿದು ಕರೆತರುತ್ತಿದ್ದರು. ನಾನು ಅಷ್ಟೆಲ್ಲಾ ಪಟ್ಟಾಂಗ ಹೊಡೆಯುತ್ತಿದ್ದರೂ ನನ್ನ ದೃಷ್ಟಿ ಮಾತ್ರ ನಮ್ಮ ನೆರಳ ಮೇಲೆಯೆ. ಸೂರ್ಯನಿಗೆ ಬೆನ್ನು ಹಾಕಿ ನಡೆಯುತ್ತಿದ್ದ ನಮ್ಮ ಮುಂದೆ ಉದ್ದೂದ್ದ ನೆರಳುಗಳು. ಆದರೂ ನನ್ನ ನೆರಳು ಅಪ್ಪನ ನೆರಳಿಗಿಂತ ಚಿಕ್ಕದು. ನನ್ನ ನೆರಳು ಅಪ್ಪನ ನೆರಳಿಗಿಂತ ಉದ್ದ ಕಾಣಬೇಕೆಂದು ಮುಂದೆ ಮುಂದೆ ಓಡುತ್ತಿದ್ದೆ. ಅಥವಾ ಅಪ್ಪನ ನೆರಳನ್ನ ತುಳಿಯುತ್ತಾ ಹಿಂದೆ ಹಿಂದೆ ಬರುತ್ತಿದ್ದೆ. ಅಪ್ಪ ನಗುತ್ತಿದ್ದರು.

ಇತ್ತೀಚೆಗೆ ನನ್ನ ಓದು ಮುಗಿಸಿ ಕೆಲಸ ಸಿಕ್ಕ ನಂತರ ಊರಿಗೆ ಹೋದಾಗ ಅಪ್ಪ ಯಾಕೋ ನಿಧಾನವಾಗಿ ನಡೆಯುತ್ತಿದ್ದಾರಲ್ಲ ಅನಿಸಿತ್ತು. ಆಮೇಲೆ ಅದನ್ನು ಮರೆತೇ ಬಿಟ್ಟಿದ್ದೆ. ಆದರೆ ನಿನ್ನ ಬಿಟ್ಟು ಇಲ್ಲಿರಲಾರೆವು, ನಾವೂ ಅಲ್ಲಿಗೇ ಬರುತ್ತೇವೆ ಎಂದು ಪತ್ರ ಬರೆದು ಇಲ್ಲಗೇ ಬಂದರಲ್ಲ, ಅವತ್ತು ಮಾತ್ರ ಇದ್ದಕ್ಕಿದ್ದಂತೆ ಅಪ್ಪನಿಗೆ ವಯಸ್ಸಾಗುತ್ತಿದೆ ಎನಿಸಿ ಕಸಿವಿಸಿಯಾಗತೊಡಗಿತ್ತು. ಸಂಜೆ ಅಪ್ಪನೊಂದಿಗೆ ವಾಕಿಂಗ್ ಹೊರಟರೆ ಅರೇ! ನನ್ನ ನೆರಳು ಅಪ್ಪನ ನೆರಳಿಗಿಂತ ಉದ್ದ! ಅಪ್ಪ ಕುಗ್ಗಿದ್ದಾರೆ ಅನಿಸಿ ಅಪ್ಪನ ಮುಖ ನೋಡಿದರೆ ಅವರಿಗೆ ಮುಳುಗುತ್ತಿರುವ ಸೂರ್ಯನ ಕಿರಣಗಳೂ ಕಣ್ಣಿಗೆ ಚುಚ್ಚಿದಂತಾಗುತ್ತಿತ್ತೇನೋ, ಸೂರ್ಯನಿಗೆ ನನ್ನನ್ನು ಅಡ್ಡ ಮಾಡಿಕೊಂಡು ನನ್ನ ನೆರಳಿನಲ್ಲಿ ಬರುತ್ತಿದ್ದರು. ಖುಷಿಯೋ, ದುಃಖವೋ, ಉಕ್ಕಿಬಂದ ಮಮತೆಯೋ ಗೊತ್ತಾಗದೇ ನಿಧಾನವಾಗಿ ಅವರ ಕೈ ಹಿಡಿದುಕೊಂಡು ನಡೆಯತೊಡಗಿದೆ...

ಮಂಗಳವಾರ, ಸೆಪ್ಟೆಂಬರ್ 29, 2009

ನಮ್ಮ ದಾರಿ ಬರಿ ಚಂದ್ರನವರೆಗೆ...?



ಅಂದು ಅಕ್ಟೋಬರ್ 22,2008. ಆಂಧ್ರಪ್ರದೇಶದ ಶ್ರೀಹರಿ ಕೋಟದಲ್ಲಿ ಮೊದಲ ಹೆರಿಗೆಯ ಸಂಭ್ರಮ ಹಾಗೂ ಆತಂಕ. ಇಡೀ ದೇಶ ಉಸಿರು ಬಿಗಿ ಹಿಡಿದು ಕುಳಿತಿತ್ತು. ಎಲ್ಲರ ಕಣ್ಣು ಟಿವಿಯಲ್ಲಿ ಬರುವ ಬ್ರೇಕಿಂಗ್ ನ್ಯೂಸ್‌ನತ್ತಲೇ. ಬೆಳಗ್ಗೆ 6.22ಕ್ಕೆ ಸರಿಯಾಗಿ ಹಾರಿತಲ್ಲ ಗಗನನೌಕೆ, ಪ್ರಾರಂಭವಾಯಿತಲ್ಲ ಚಂದ್ರಯಾನ, ಇಡೀ ದೇಶವೇ ಆತ್ಮವಿಶ್ವಾಸದ ಗೆಲುವಿನ ಸಂಭ್ರಮದಲ್ಲಿ ಮಿಂದೆದ್ದಿತು. ಅದಕ್ಕೆ ಕಾರಣವೂ ಇತ್ತು. ಅದು ಭಾರತದ ಮೊದಲ ಚಂದ್ರಯಾನ ಯೋಜನೆಯಾಗಿದ್ದುದು ಮಾತ್ರವಲ್ಲ ಸಂಪೂರ್ಣವಾಗಿ ಸ್ವದೇಶೀ ನಿರ್ಮಿತವಾಗಿತ್ತು.
1998ರಲ್ಲಿ ಪೋಖ್ರಾನ್‌ನಲ್ಲಿ ಭಾರತ ತನ್ನ ಅಣುಶಕ್ತಿ ಪ್ರದರ್ಶಿಸಿದ ದಿನವೂ ಹೀಗೆಯೇ ಸಂಭ್ರಮಾಚರಣೆ ನಡೆದಿತ್ತು. ಆದರೆ ಅದಕ್ಕೆ ಅಮೆರಿಕವೂ ಸೇರಿದಂತೆ ಹಲವು ಮುಂದುವರಿದ ದೇಶಗಳು ಕೆಂಗಣ್ಣು ಬೀರಿ, ಭಾರತಕ್ಕೆ ನೀಡುವ ತಮ್ಮೆಲ್ಲಾ ಸಹಾಯ, ಸಹಕಾರವನ್ನು ನಿಲ್ಲಿಸಿದ್ದವು. ಆದರೆ ಭಾರತೀಯ ವಿಜ್ಞಾನಿಗಳು ಅದನ್ನೇ ಸವಾಲಾಗಿ ಪರಿಗಣಿಸಿ ಸಂಪೂರ್ಣ ಸ್ವದೇಶಿ ನಿರ್ಮಿತ ರಾಕೆಟನ್ನು ತಯಾರಿಸಿದರು. ಅದೇ ಚಂದ್ರಯಾನದತ್ತ ಮೊದಲ ಹೆಜ್ಜೆಯಾಯಿತು.
ಚಂದ್ರಯಾನ ನಡೆದ ಈ ಒಂದು ವರುಷದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ತಲೆ ಎತ್ತಿನಡೆಯುವಂಥ ಹಲವು ಬದಲಾವಣೆಗಳಾಗಿವೆ. ಚಂದ್ರನತ್ತ ಬಾಹ್ಯಾಕಾಶನೌಕೆಯನ್ನು ಕಳಿಸಿದ ಪ್ರತಿಷ್ಠಿತ ನಾಲ್ಕನೇ ದೇಶವಾಗಿ ಭಾರತ ಹೊರಹೊಮ್ಮಿದೆ. ನಿಗದಿತ ಅವಗೆ ಮುಂಚೆಯೇ ಭೂಮಿಯೊಡನೆ ತನ್ನ ಸಂಪರ್ಕ ಕಳೆದುಕೊಂಡರೂ ಮೊದಲ ಚಂದ್ರಯಾನ ಅಂದುಕೊಂಡಿದ್ದ ಕೆಲಸವನ್ನೆಲ್ಲಾ ಮಾಡಿ ಮುಗಿಸಿದೆ. ಚಂದ್ರನ ಮೇಲೆ ನೀರಿದೆಯೇ ಎಂಬ ಪ್ರಶ್ನೆಗೆ ಸಾಕ್ಷಿ ಸಮೇತ ಉತ್ತರ ಕೊಟ್ಟಿದೆ. ಆರ್ಥಿಕ ಹಿಂಜರಿತವನ್ನು ಭಾರತ ದೃಢವಾಗಿ ಎದುರಿಸಿ ನಿಂತಿದೆ. "ಭಾರತ ಚಂದ್ರಯಾನದತ್ತ ಧಾಪುಗಾಲಿಡುತ್ತಿದೆ. ನಾವು ನಮ್ಮ ಸಾರ್ವಭೌಮತ್ವವನ್ನು ಬಿಟ್ಟುಕೊಡಬಾರದು' ಎಂದು ಅಧ್ಯಕ್ಷ ಒಬಾಮ ತನ್ನ ದೇಶಿಗರಿಗೆ ಎಚ್ಚರಿಸುವ ಮಟ್ಟಿಗೆ ಅಮೆರಿಕ ಹೆದರಿದೆ. ಈ ಎಲ್ಲ ಸಂಭ್ರಮಗಳ ಮಧ್ಯೆ ಭಾರತ ಮತ್ತೊಂದು ಚಂದ್ರಯಾನಕ್ಕೆ ಸಿದ್ಧಮಾಡಿಕೊಳ್ಳುತ್ತಿದೆ.
ಅಂದುಕೊಂಡಂತೆ ಆಗಿದ್ದರೆ ಈ ವರುಷದ ಕೊನೆಯಲ್ಲೇ ಎರಡನೇ ಚಂದ್ರಯಾನ ಪ್ರಾರಂಭವಾಗಬೇಕಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಅದೀಗ 2013ಕ್ಕೆ ಎಂದು ನಿರ್ಧಾರವಾಗಿದೆ. ನಿಜ ಹೇಳಬೇಕೆಂದರೆ ಭಾರತ ವಿಜ್ಞಾನಿಗಳ ಮೂಲ ಆಸಕ್ತಿ ಇರುವುದು ಈ ಎರಡನೇ ಚಂದ್ರಯಾನದ ಮೇಲೆಯೇ. ಮೊದಲನೆಯದು ಕೇವಲ ಮುನ್ನುಡಿಯಷ್ಟೆ. ಸುಮಾರು 386 ಕೋಟಿ ರೂಗಳ ವೆಚ್ಚದಲ್ಲಿ (ಜಗತ್ತಿನಲ್ಲಿಯೇ ಅತಿ ಅಗ್ಗದಲ್ಲಿ ತಯಾರಾದ ಗಗನನೌಕೆ ಇದು ಎಂಬುದೂ ಒಂದು ಸಾಧನೆ. ಮುಂದುವರಿದ ದೇಶಗಳಲ್ಲಿ ಇದೇ ಯೋಜನೆಗೆ ಸಾವಿರಾರು ಕೋಟಿ ರೂ.ಗಳು ಖರ್ಚಾಗಿದೆ.) ಚಂದ್ರಯಾನ ಮಾಡಿದ ಆ ನೌಕೆಯಿಂದ ಹಲವಾರು ವಿಷಯಗಳು ತಿಳಿದುಬಂದವು. ಸೆಕೆಂಡಿಗೆ ಒಂದರಂತೆ, ಚಂದ್ರನ ಮೇಲ್ಮೈಯನ್ನು ವಿವಿಧ ಕೋನಗಳಿಂದ ಸೆರೆ ಹಿಡಿದ ಸಾವಿರಾರು ಚಿತ್ರಗಳನ್ನು ಭೂಮಿಗೆ ಕಳುಹಿಸುತ್ತಿತ್ತು. ಇದರಿಂದ ಚಂದ್ರನ ಮೇಲಿನ ತಗ್ಗು, ದಿನ್ನೆ, ಮೇಲ್ಮೈರಚನೆಯ ಮಾಹಿತಿ, ಅಲ್ಲಿರಬಹುದಾದ ನೀರು, ಖನಿಜಗಳ ವಿವರ ನಮಗೆ ಲಭ್ಯವಾಗುತ್ತಿದೆ. ಅಲ್ಲದೆ ಮೊದಲನೇ ಚಂದ್ರಯಾನದಿಂದ ಚಂದ್ರನಲ್ಲಿ ಹೊರಸೂಸುವ ವಿಕಿರಣ ಈ ಮೊದಲು ಲೆಕ್ಕ ಹಾಕಿದ್ದಕ್ಕಿಂತ ಹೆಚ್ಚಿದೆ ಎಂಬುದು ತಿಳಿಯಿತು. ಆದ್ದರಿಂದಲೇ ನೌಕೆಯ ಕೆಲವು ಉಪಕರಣಗಳು ಸರಿಯಾಗಿ ವರ್ತಿಸದೆ, ನಿಗದಿತ ಅವಧಿಗೆ ಮೊದಲೇ ಮೊದಲ ಚಂದ್ರಯಾನ ಮುಗಿಯುವಂತಾಯಿತು. ಆದರೆ ಈಗ ತಿಳಿದ ಸರಿಯಾದ ಮಾಹಿತಿಯಿಂದ ಮುಂದಿನ ಚಂದ್ರಯಾನದಲ್ಲಿ ಮತ್ತಷ್ಟು ಸುರಕ್ಷತೆಯ, ಉಷ್ಣ ನಿರೋಧಕಗಳನ್ನು ಅಳವಡಿಸಿ ಕೊಳ್ಳಬಹುದು. ಹೀಗೆ ಹಲವು ಪ್ರಾಯೋಗಿಕ ಸಮಸ್ಯೆಗಳಿಗೆ ಮೊದಲ ಚಂದ್ರಯಾನ ಉತ್ತರ ದೊರಕಿಸಿಕೊಟ್ಟಿದೆ.

ಮೊದಲ ಚಂದ್ರಯಾನದಿಂದಾದ ಇನ್ನೊಂದು ಪ್ರಮುಖ ಲಾಭವೆಂದರೆ ಅಮೆರಿಕದೊಂದಿಗಿನ ರಾಜತಾಂತ್ರಿಕ ಸಂಬಂಧ ಸುಧಾರಿಸಿರುವುದು. ಚಂದ್ರನ ಮೇಲಿನ ತನ್ನ ಹಿಡಿತವನ್ನು ಬಡಪೆಟ್ಟಿಗೆ ಬಿಡಲೊಪ್ಪದ ಅಮೆರಿಕದ ಈಗ ಅನಿವಾರ್ಯವಾಗಿ ಸಂಧಾನಕ್ಕೆ ಬಂದಿದೆ. ಅದರ ಫಲವಾಗಿಯೇ ಕಳೆದ ಆಗಸ್ಟ್ ೨೦ರ ಮಧ್ಯರಾತ್ರಿ ಭಾರತದ ಚಂದ್ರಯಾನದ ಉಪಗ್ರಹದೊಂದಿಗೆ ಅಮೆರಿಕದ ನಾಸಾದ ಉಪಗ್ರಹವೂ ಸೇರಿ, ಚಂದ್ರನ ಮೇಲ್ಮೈಯಲ್ಲಿ ನೀರಿನ ಪಸೆಯನ್ನು ಪತ್ತೆ ಹಚ್ಚುವ ಜಂಟಿ ಕಾರ್ಯಾಚರಣೆ ನಡೆಸಿದ್ದು. ಈ ಎರಡೂ ಉಪಗ್ರಹಗಳು ಸೆಕೆಂಡಿಗೆ 1.6 ಕಿ.ಮೀ ವೇಗದಲ್ಲಿ ಚಂದ್ರನ ಉತ್ತರ ಧ್ರುವದ 200ಕಿ.ಮೀ ಮೇಲಿನಿಂದ ಒಟ್ಟಿಗೇ ಸಮೀಕ್ಷೆ ನಡೆಸಿದ್ದವು. ಈ ಸಮೀಕ್ಷೆಯಲ್ಲಿಯೇ ಚಂದ್ರನ ಮೇಲೆ ನೀರಿರುವ ಅಂಶ ಖಚಿತಗೊಂಡಿದ್ದು. ಇದು ಭಾರತದ ಬಾಹ್ಯಾಕಾಶ ಸಾಧನೆಗೆ ಸಂದ ಐತಿಹಾಸಿಕ ವಿಜಯ.


ಈ ಹೊತ್ತಿಗಾಗಲೇ 425 ಕೋಟಿ ರೂಪಾಯಿಗಳ ಎರಡನೇ ಚಂದ್ರಯಾನದ ಸಂಪೂರ್ಣ ನೀಲನಕ್ಷೆ ಸಿದ್ಧವಾಗಿದೆ. ನೌಕೆ ಎಲ್ಲಿ ಇಳಿಯಬೇಕು, ಅಲ್ಲಿ ಏನು ಮಾಡಬೇಕು ಎಂಬುದರ ರೂಪುರೇಷೆ ಗೊತ್ತುಮಾಡಲಾಗಿದೆ. ಇದರ ವಿಶೇಷವೆಂದರೆ ಅದರಲ್ಲಿ ಪ್ರಥಮವಾಗಿ ಬಳಸಲಾಗುತ್ತಿರುವ ಅಣು ಇಂಧನ. ಅದನ್ನು ನಮಗೆ ಕಾಣದ ಚಂದ್ರನ ಮುಖದ ಇನ್ನೊಂದು ಭಾಗದಲ್ಲಿ ಕೇವಲ ಕತ್ತಲಿರುವುದರಿಂದ (ಅಲ್ಲಿ ಸೌರಶಕ್ತಿ ದೊರೆಯುವುದಿಲ್ಲವಾದ್ದರಿಂದ) ಅಲ್ಲಿ ಅಣು ಇಂಧನವನ್ನು ಬಳಸಿಕೊಳ್ಳಲಿದ್ದಾರೆ. ಅಣು ಇಂಧನ ಇರುವುದರಿಂದಲೇ ಈ ನೌಕೆಗೆ ಹಿಂದೆಂದಿಗಿಂತಲೂ ಹೆಚ್ಚಿನ ಮಟ್ಟಿಗೆ ಸುರಕ್ಷೆಗೆ ಒತ್ತು ಕೊಡಲಾಗಿದೆಯಂತೆ. ಅದಕ್ಕಾಗಿ ಇತ್ತೀಚಿನ ಆಧುನಿಕ ಉಪಕರಣಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಎರಡನೇ ಚಂದ್ರಯಾನಕ್ಕೆ ರಷ್ಯಾದ ತಾಂತ್ರಿಕ ನೆರವಿದ್ದರೂ, ಅದು ಸಂಪೂರ್ಣವಾಗಿ ನಮ್ಮದೇ ಯೋಜನೆ. ಅದರ ಕುರಿತು ನಮ್ಮ ವಿಜ್ಞಾನಿಗಳಿಗೆ ಹಲವು ಕನಸುಗಳಿವೆ. ಚಂದ್ರನ ಧ್ರುವ ಭಾಗದಲ್ಲಿ ನಿರಂತರವಾಗಿ ಸೂರ್ಯನ ಬೆಳಕು ಬೀಳುತ್ತಿರುತ್ತದೆ. ಅಲ್ಲಿ ಸೌರಶಕ್ತಿಯ ಘಟಕವನ್ನೂ ಸ್ಥಾಪಿಸುವ ಯೋಜನೆಯೂ ಚಂದ್ರಯಾನ-2ರ ಮುಂದಿದೆ. ಅಲ್ಲಿಯೇ ಹಿಮ ಹಾಗೂ ಹೈಡ್ರೋಜನ್ ಇರಬಹುದಾದ ಸೂಚನೆಯೂ ಸಿಕ್ಕಿದೆ. ಅಲ್ಲಿಯ ಮಣ್ಣಿನಲ್ಲಿ ನೀರಿನ ಪಸೆ ಇರುವುದೀಗ ಖಚಿತವಾಗಿರುವುದರಿಂದ, ನೆಲವನ್ನು ಕೊರೆದು ಅಂತರ್ಜಲ ಹುಡುಕುವ ಪ್ರಯತ್ನವನ್ನೂ ಮಾಡಬಹುದು ಎಂದು ಅಬ್ದುಲ್ ಕಲಾಂ ಸಲಹೆ ನೀಡಿದ್ದಾರೆ. ಅಂಥ ಪ್ರದೇಶದಲ್ಲಿ ಒಂದು ಶಾಶ್ವತ ವಾಸ್ತವ್ಯ ರೂಪಿಸುವ ಯೋಜನೆಯೂ ಇದೆ. ಅದು ಮುಂದೆ ಚಂದ್ರನ ಅಂಗಳಕ್ಕೆ ಬರಬಹುದಾದ ಗಗನಯಾತ್ರಿಗಳಿಗೆ ಮನೆಯೂ ಅಗಬಹುದು! ಈ ಕನಸಿಗೂ ಕಾರಣವಿದೆ. 2020ರ ಒಳಗೆ ನಡೆಯುವ ಭಾರತದ ಮೂರನೇ ಚಂದ್ರಯಾನದಲ್ಲಿ ಭಾರತೀಯ ಗಗನಯತ್ರಿಯೊಬ್ಬ ಚಂದ್ರನಲ್ಲಿಗೆ ಹಾರಲಿದ್ದಾನೆ! ಭಾರತ ಈಗಾಗಲೇ ಅದಕ್ಕೆ 12,000ಕೋಟಿ ರೂ.ಗಳನ್ನು ಅದಕ್ಕಾಗಿ ಮೀಸಲಿರಿಸಿದೆ. ಅಲ್ಲದೆ ಈಗ ಮೊದಲ ಚಂದ್ರಯಾನದ ವಿಜಯದಿಂದಾಗಿ ಇತರ ದೇಶಗಳೂ ನಮ್ಮೊಡನೆ ಭಾಗವಹಿಸಲು ಹಾತೊರೆಯುತ್ತಿವೆ.


ಇಸ್ರೋದ ಅಧ್ಯಕ್ಷ ಮಾಧವನ್ ನಾಯರ್ ಹೇಳಿರುವಂತೆ ಕ್ಯಾಮೆರಾಗಳನ್ನು ಉಪಗ್ರಹದ ಆಯಕಟ್ಟಿನ ಜಾಗದಲ್ಲಿ ಸರಿಯಾಗಿ ಇಡಲಾಗುತ್ತಿದೆಯಂತೆ. ಅವರು ಅಷ್ಟೊಂದು ವಿಶ್ವಾಸದಿಂದ ಅದನ್ನು ಹೇಳಿರುವುದಕ್ಕೂ ಕಾರಣವಿದೆ. ಚಂದ್ರಯಾನ-1ರಲ್ಲಿಟ್ಟ ಕ್ಯಾಮೆರಾಗಳು ಅದೆಷ್ಟರ ಮಟ್ಟಿಗೆ ಸರಿಯಾಗಿ ಕಾರ್ಯ ನಿರ್ವಹಿಸಿವೆ ಎಂದರೆ ನಮ್ಮ ವಿಜ್ಞಾನಿಗಳು ಇತ್ತೀಚೆಗೆ ನಡೆದ ಸೂರ್ಯಗ್ರಹಣದ ಸಮಯದಲ್ಲಿ ಅದರ ಕ್ಯಾಮೆರಾಗಳನ್ನು ಇಲ್ಲಿಂದಲೇ ಸುಲಭವಾಗಿ ಭೂಮಿಯ ಕಡೆ ತಿರುಗಿಸಿದ್ದರು!


ಚಂದ್ರಯಾನ ಕೇವಲ ದುಂದುವೆಚ್ಚ, ಮುಂದುವರಿದ ದೇಶಗಳ ಷೋಕಿ, "...ಜುಟ್ಟಿಗೆ ಮಲ್ಲಿಗೆ ಹೂ' ಎಂದೆಲ್ಲಾ ಜರಿಯುವವರೂ ಇದ್ದಾರೆ. ಆದರೆ ಚಂದ್ರಯಾನದ ಹಿಂದೆ ಆರ್ಥಿಕ ಉದ್ದೇಶವೂ ಬಹಳಷ್ಟಿದೆ. ಚಂದ್ರಯಾನ-1ರ ಪ್ರಾಥಮಿಕ ಉದ್ದೇಶವೇ ಅಲ್ಲಿರುವ ಖನಿಜಗಳ ಪತ್ತೆ ಹಚ್ಚುವಿಕೆಯಾಗಿತ್ತು. ಅದರಲ್ಲಿ ಮುಖ್ಯವಾದದ್ದು ಹೀಲಿಯಂ ಹುಡುಕಾಟ. ಮುಂದಿನ ಜನಾಂಗದ ಶಕ್ತಿಯ ಮೂಲ ಎಂದೇ ಬಿಂಬಿತವಾಗಿರುವ ಹೀಲಿಯಂ ಅಲ್ಲಿ ಸಾವಿರಾರು ಟನ್ನುಗಟ್ಟಲೆ ವ್ಯರ್ಥವಾಗಿ ಬಿದ್ದಿರುವ ಸಾಧ್ಯತೆ ಇದೆ. (ಒಂದು ಟನ್ ಹೀಲಿಯಂ ಒಂದು ಸಾವಿರ ಕೋಟಿ ರೂಪಾಯಿಗೆ ಸಮ) ಅದೃಷ್ಟವಶಾತ್ ಅದನ್ನು ಅಲ್ಲಿಂದ ಇಲ್ಲಿಗೆ ತರುವುದು ಅತ್ಯಂತ ಸುಲಭ. ಹೀಲಿಯಂನ್ನು ಕಾಯಿಸಿದರೆ ಅದು ಅನಿಲರೂಪ ತಾಳುತ್ತದೆ. ಆನಂತರ ಅದನ್ನು ಸುಲಭವಾಗಿ ಭೂಮಿಗೆ ರವಾನಿಸಬಹುದು!


ಬಾಹ್ಯಾಕಾಶ ಸಂಶೋಧನೆಗಳನ್ನು ಅನಗತ್ಯ ಎಂದು ಹೀಗಳೆಯುವದರಲ್ಲಿ ಯಾವುದೇ ಅರ್ಥವಿಲ್ಲ. ಅದರಿಂದ ತತ್‌ಕ್ಷಣಕ್ಕೆ ಯಾವುದೇ ಆರ್ಥಿಕ ಲಾಭವಾಗದಿರಬಹುದು. ಆದರೆ ಅವು ಇಡೀ ದೇಶದ ಜನರ ಮನಸ್ಥಿತಿಯನ್ನು ಬದಲಾಯಿಸುತ್ತವೆ. ಕನಸುಗಳನ್ನು ಬಿತ್ತುತ್ತವೆ. ಚಂದ್ರಯಾನದ ಪ್ರತಿ ಹೆಜ್ಜೆಯೂ ಯುವಕರನ್ನು ಮೂಲ ವಿಜ್ಞಾನ ಕ್ಷೇತ್ರದತ್ತ ಆಕರ್ಷಿಸುವಂತೆ ಮಾಡಿದರೆ ಅದಕ್ಕಿಂತ ದೊಡ್ಡ ಲಾಭ ಬೇಕೆ? ಕೇವಲ ಬಹುರಾಷ್ಟ್ರೀಯ ಕಂಪನಿಗಳನ್ನು ಕಟ್ಟುವಲ್ಲಿ ತಮ್ಮ ಪ್ರತಿಭೆಯನ್ನು ಪಣಕ್ಕಿಡುತ್ತಿರುವ ನಮ್ಮ ವಿದ್ಯಾರ್ಥಿಗಳು ಇದರಿಂದಲಾದರೂ ಮೂಲ ವಿಜ್ಞಾನದ ಅಧ್ಯಯನ, ಸಂಶೋಧನೆ ಮಾಡುವತ್ತ ಮನಸ್ಸು ಹರಿಸಿದರೆ ದೇಶದ ಭವಿಷ್ಯವೇ ಬದಲಾಗದಿರದೇ?

ಮಂಗಳವಾರ, ಸೆಪ್ಟೆಂಬರ್ 1, 2009

"ಸುಪರ್" ಗುರುವಿಗೆ ಸಲಾಮ್

ಸತೀಶ ಕುಮಾರನಿಗೆ ಚಿಕ್ಕಂದಿನಿಂದಲೂ ಓದುವ ಹುಚ್ಚು. ಆದರೆ ಅವನ ತಾಯಿಗೆ ಅದೇ ಚಿಂತೆ. ತನಗೆ ಬರುವ 200 ರೂ. ವಿಧವಾ ವೇತನದಲ್ಲಿ ಊಟಕ್ಕೆ ಅಕ್ಕಿ ಕೊಳ್ಳದೇ, ಅವನನ್ನು ಉತ್ತಮ ಶಾಲೆಗೆ ಕಳಿಸುವುದು ಕನಸಿನ ಮಾತೇ ಸರಿ. ಆದರೆ ಈ ವರುಷದ ಐಐಟಿ ಪ್ರವೇಶ ಪರೀಕ್ಷೆಯಲ್ಲಿ ,ರಾಷ್ಟ್ರಮಟ್ಟದಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರ ಪಟ್ಟಿಯಲ್ಲಿ ಇವನ ಹೆಸರೂ ಇದೆ !

ಜಾಡಮಾಲಿಯೊಬ್ಬನ ಮಗ ನಾಗೇಂದ್ರ ಓದಿದ್ದು ಹಳ್ಳಿಯ ಸರಕಾರಿ ಶಾಲೆಯಲ್ಲಿ. ಆದರೆ ಯಾವತ್ತೂ ಶಾಲೆಗೆ ಈತನೇ ಮೊದಲಿಗ. ಆದರೆ ಮನೆಯಲ್ಲಿ ಊಟಕ್ಕೂ ಗತಿ ಇಲ್ಲದ ಬಡತನ. ಶಾಲೆಗೆ ಪ್ರವೇಶ ಪಡೆಯಲಿಕ್ಕೇ ಇವನು ತುಂಬಾ ಹೋರಾಟ ಮಾಡಬೇಕಾಗಿತ್ತು. ಪರೀಕ್ಷೆ ಸಮಯದಲ್ಲಿ ಪುಸ್ತಕಗಳನ್ನು ಕಡ ತಂದು ಓದಬೇಕಾಗುತ್ತಿತ್ತು. ಆದರೆ ಇಂದು ರಾಷ್ಟ್ರದ ಪ್ರಖ್ಯಾತ ಶಿಕ್ಷಣ ಸಂಸ್ಥೆ ಐಐಟಿಯಲ್ಲಿ ವಿದ್ಯಾರ್ಥಿ!

ಬಿಹಾರದಲ್ಲೀಗ ಇಂಥ ಪವಾಡಗಳು ಜರುಗುತ್ತಿವೆ. ಇವರ್‍ಯಾರೂ ಆರ್ಥಿಕವಾಗಿ ಸದೃಢರಲ್ಲ, ಆದರೆ ಎಲ್ಲರೂ ಬುದ್ಧಿವಂತರು ಹಾಗೂ ಎಲ್ಲರೂ ರಾಮಾನುಜನ್ ಸ್ಕೂಲ್ ಆಫ್ ಮ್ಯಾಥಮ್ಯಾಟಿಕ್ಸ್‌ನಲ್ಲಿ ತರಬೇತಿ ಪಡೆದವರು. ಬಡತನದ ಬೇಗೆಯಲ್ಲಿ ಕಮರಿ ಹೋಗಬೇಕಾಗಿದ್ದ ಈ ಪ್ರತಿಭೆಗಳಿಗೆ ಸಾಣೆ ಹಿಡಿದು ಬೆಳಕಿಗೆ ತಂದಿದ್ದೇ ಒಂದು ಯಶೋಗಾಥೆ.

ಪ್ರತಿ ಏಪ್ರಿಲ್‌ನಲ್ಲಿ ಸುಮಾರು ಎರಡೂವರೆ ಲಕ್ಷ ವಿದ್ಯಾರ್ಥಿಗಳು, ಭಾರತದ ಏಳು ಪ್ರಖ್ಯಾತ ವಿದ್ಯಾಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಹಲವು ತಿಂಗಳ ಪೂರ್ವ ಸಿದ್ಧತೆಯೊಂದಿಗೆ ಐಐಟಿ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಪ್ರವೇಶ ಪರೀಕ್ಷೆ ಬರೆಯುತ್ತಾರೆ. ಆರು ಗಂಟೆಗಳ ಕ್ಲಿಷ್ಟಕರ ಪರೀಕ್ಷೆಯಲ್ಲಿ ಆಯ್ಕೆಯಾಗುವುದು ಕೇವಲ ಐದು ಸಾವಿರ ವಿದ್ಯಾರ್ಥಿಗಳು! ಸಾಮಾನ್ಯವಾಗಿ ಆಯ್ಕೆಯಾಗುವ ಮಧ್ಯಮ ವರ್ಗ ಮತ್ತು ಮೇಲ್ಮಧ್ಯಮ ವರ್ಗದ ವಿದ್ಯಾರ್ಥಿಗಳು ಇದಕ್ಕಾಗಿ ಖಾಸಗಿ ಟ್ಯೂಶನ್ ತೆಗೆದುಕೊಂಡಿರುತ್ತಾರೆ. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ತೀರಾ ಕೆಳವರ್ಗದ, ಬಡತನ ರೇಖೆಗಿಂತ ಎಷ್ಟೋ ಕೆಳಗಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳೂ ಐಐಟಿಗೆ ಪ್ರವೇಶ ಪಡೆಯುತ್ತಿದ್ದಾರೆ. ಆದರ ಸಂಪೂರ್ಣ ಕ್ರೆಡಿಟ್ ಸಲ್ಲಬೇಕಾಗಿರುವುದು - ಸದಾ ಅನಕ್ಷರತೆ, ಬಡತನ, ಭ್ರಷ್ಟಾಚಾರದಿಂದಲೇ ಕುಖ್ಯಾತಿಗೊಳಗಾಗಿರುವ ಬಿಹಾರದ ರಾಜಧಾನಿ ಪಾಟ್ನಾದಲ್ಲಿರುವ - ಆನಂದ ಕುಮಾರ್‌ಗೆ ಮತ್ತು ಅವರ ಸಂಸ್ಥೆ 'ರಾಮಾನುಜನ್ ಸ್ಕೂಲ್ ಆಫ್ ಮ್ಯಾಥಮೆಟಿಕ್ಸ'ಗೆ.


ಪ್ರತಿ ವರುಷ, ಆರ್ಥಿಕವಾಗಿ ಹಿಂದಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ಐಐಟಿ ತರಬೇತಿ ನೀಡುವ ’ಸುಪರ್ ೩೦’ ಎಂಬ ಪರಿಕಲ್ಪನೆ ಆನಂದಕುಮಾರ್‌ಗೆ ಬಂದದ್ದೇ "ರಾಮಾನುಜನ್ ಸ್ಕೂಲ್ ಆಫ್ ಮ್ಯಾಥಮ್ಯಾಟಿಕ್ಸ್’ ಸಂಸ್ಥೆಯ ಸ್ಥಾಪನೆಗೆ ಕಾರಣವಾಯ್ತು. ಗಣಿತದ ಶಿಕ್ಷಕ ಹಾಗೂ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪತ್ರಿಕೆಗಳ ಅಂಕಣಕಾರರಾಗಿರುವ ಆನಂದಕುಮಾರ್ ಬಂದಿದ್ದೂ, ಮನೆಯಲ್ಲಿ ಹಪ್ಪಳ ಮಾಡಿ ಮಾರುವುದನ್ನೇ ಉದ್ಯೋಗ ಮಾಡಿಕೊಂಡಿದ್ದ ಕುಟುಂಬದಿಂದಲೇ. ಹೀಗಾಗಿಯೇ ಬಡತನದ ಪರಿಣಾಮಗಳೂ ಮತ್ತು ಕೇವಲ ಹುಟ್ಟಿನಿಂದ ಬರುವ ಬುದ್ಧಿವಂತಿಕೆಯೊಂದೇ ಜೀವನದಲ್ಲಿ ಯಶಸ್ಸು ತಂದುಕೊಡಲು ಸಾಧ್ಯವಿಲ್ಲ ಎಂಬುದು ಅವರಿಗೆ ಚೆನ್ನಾಗಿಯೇ ಗೊತ್ತಿತ್ತು. ಪಾಟ್ನಾದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಅಭಯಾನಂದ್ (ಈಗ ಅವರೂ ತರಬೇತಿ ಕೇಂದ್ರ ಆರಂಭಿಸಿದ್ದು, ಅದೂ ಯಶಸ್ವಿಯಾಗಿದೆ) ಜತೆ ಕೆಲಸ ಮಾಡುತ್ತಿದ್ದ ಆನಂದಕುಮಾರ್ 2002ರಲ್ಲಿ ತಮ್ಮ ಮನೆಯ ಒಂದು ಭಾಗದಲ್ಲೇ ವಿದ್ಯಾರ್ಥಿಗಳಿಗೆ ಐಐಟಿ ತರಬೇತಿ ನೀಡಲು ಪ್ರಾರಂಭಿಸಿದರು. ಅದು ತರಗತಿ ಎನ್ನುವುದಕ್ಕಿಂತ ತಗಡಿನ ಹೊದಿಕೆ ಹೊದೆಸಿದ ದನದ ಕೊಟ್ಟಿಗೆಯಂತಿದೆ. ಕುಳಿತುಕೊಳ್ಳಲು ಉದ್ದನೆಯ ಮರದ ಬೆಂಚುಗಳು. ಅಲ್ಲಿಯ ಪಾಠ ಕೇಳುವುದಕ್ಕೆ ಅಕ್ಕಪಕ್ಕದ ಹಳ್ಳಿಗಳಿಂದ ಬಸ್ಸಿನಲ್ಲಿ, ಸೈಕಲ್ಲಿನಲ್ಲಿ, ಅಥವಾ ಪಕ್ಕದ ಉಚಿತ ಹಾಸ್ಟೆಲ್‌ನಿಂದ ಬರಿಯ ಕಾಲಿನಲ್ಲಿ ನಡೆಯುತ್ತಾ ವಿದ್ಯಾರ್ಥಿಗಳು ಬರುತ್ತಾರೆ. ಆದರೆ ಅಲ್ಲಿ ಸೇರಿದ ಮೂವತ್ತಕ್ಕೆ ಮೂವತ್ತೂ ವಿದ್ಯಾರ್ಥಿಗಳು ಐಐಟಿಯಲ್ಲಿ ಪ್ರವೇಶ ಪಡೆದಿದ್ದಾರೆ !

ಶ್ರೇಷ್ಠ ಗಣಿತಜ್ಞ ರಾಮಾನುಜನ್ ಹೆಸರನ್ನೇ ಹೊತ್ತ ಈ ಸಂಸ್ಥೆಗೆ ಸೇರಲು ಸಾವಿರಾರು ವಿದ್ಯಾರ್ಥಿಗಳು ಸಾಲುಗಟ್ಟುತ್ತಾರೆ. ಆದರೆ ಅಲ್ಲಿ ಸೇರಲು ಬೇಕಾದ ಎರಡು ವಿಶೇಷ ಅರ್ಹತೆಗಳೆಂದರೆ ಅಪಾರ ಬುದ್ಧಿವಂತಿಕೆ ಹಾಗೂ ಬಡತನ! ಕೇವಲ ಅರುವತ್ತು ರೂಪಾಯಿಯ ಅರ್ಜಿಯನ್ನು ಸುಮಾರು ಆರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಖರೀದಿಸುತ್ತಾರೆ. ಅದರಲ್ಲಿ ಮೂವತ್ತು ವಿಶೇಷ ಬುದ್ಧಿವಂತಿಕೆಯ ವಿದ್ಯಾರ್ಥಿಗಳನ್ನು ಆರಿಸಲು ಮೂರು ವಿಧವಾದ ಪರೀಕ್ಷೆಗಳನ್ನು ಬರೆಯಬೇಕಾಗುತ್ತದೆ. ಕ್ಲಿಷ್ಟ, ಹೆಚ್ಚು ಕ್ಲಿಷ್ಟ, ಅತ್ಯಂತ ಹೆಚ್ಚು ಕ್ಲಿಷ್ಟದ ಈ ಪರೀಕ್ಷೆಗಳಲ್ಲಿ ವಿದ್ಯಾರ್ಥಿಯ ಐ.ಕ್ಯು. (ಬುದ್ಧಿಮತ್ತೆ)ಪರೀಕ್ಷಿಸಲಾಗುತ್ತದೆ. ಆಯ್ದ "ಸುಪರ್ 30 ವಿದ್ಯಾರ್ಥಿಗಳಿಗೆ ಮುಂದಿನ ಒಂದು ವರುಷ ಉಚಿತ ಹಾಸ್ಟೆಲ್, ಪಾಠ, ತರಬೇತಿ. ಆದರೆ ಒಂದೇ ಒಂದು ತರಗತಿಯನ್ನೂ ತಪ್ಪಿಸುವಂತಿಲ್ಲ.

ಇಲ್ಲಿ ಇತರ ಕೋಚಿಂಗ್ ಕ್ಲಾಸ್‌ಗಳ ರೀತಿಯಲ್ಲಿ , ಸುಲಭವಾಗಿ ಐಐಟಿಯಲ್ಲಿ ಪ್ರವೇಶ ಪಡೆಯುವುದು ಹೇಗೆ ಎಂದು ಹೇಳಿಕೊಡುವುದಿಲ್ಲ. ಯಾವುದೇ ಅಡ್ಡ ದಾರಿಗಳಿಲ್ಲ. ಏನು ಪಡೆಯಬೇಕೆಂದರೂ ಕಷ್ಟಪಡಲೇಬೇಕು ಎನ್ನುವುದು ಇಲ್ಲಿಯ ಅಲಿಖಿತ ನಿಯಮ. ಆದ್ದರಿಂದಲೇ ಇಲ್ಲಿಯ ವಿದ್ಯಾರ್ಥಿಗಳು ಒಂದು ವರುಷವನ್ನು ಸಂಪೂರ್ಣವಾಗಿ ವಿದ್ಯಾಭ್ಯಾಸದ ಮೇಲೆ ಕೇಂದ್ರೀಕರಿಸಬೇಕು. ಆ ಒಂದು ವರುಷ ಓದುವುದನ್ನು ಬಿಟ್ಟು ಬೇರೇನು ಮಾಡಲೂ ಅವಕಾಶವಿಲ್ಲ. ಅವರಿರುವ ಹಾಸ್ಟೆಲ್‌ನಲ್ಲಿ ಟಿವಿ ಇಲ್ಲ, ಕಂಪ್ಯೂಟರ್ ಇಲ್ಲ. ಆಟವಾಡುವಂತಿಲ್ಲ, ಸಿನಿಮಾ ಇಲ್ಲವೇ ಇಲ್ಲ. ಹಾಗೂ ಅಲ್ಲಿಯ ವಿದ್ಯಾರ್ಥಿಗಳು ಅದನ್ನು ಬಯಸುವುದೂ ಇಲ್ಲ. ಏಕೆಂದರೆ ಇಡೀ ಜಗತ್ತನ್ನೇ ಗೆಲ್ಲುವಷ್ಟು ಬುದ್ಧಿವಂತಿಕೆ ಇದ್ದೂ ಬಡತನದಿಂದಾಗಿ ಕಟ್ಟಿ ಹಾಕಲ್ಪಟ್ಟಿದ್ದೇವೆ ಎಂದು ಅರಿವಾದಾಗ, ಆ ಕಟ್ಟನ್ನು ಒಡೆದುಹಾಕಲು ಏನು ಬೇಕಾದರೂ ಮಾಡಲು ಸಿದ್ಧರಾಗುತ್ತಾರೆ. ಅದಕ್ಕೆ ಇಲ್ಲಿಯ ವಿದ್ಯಾರ್ಥಿಗಳ ಶ್ರಮ ಹಾಗೂ ಅದರ ಪ್ರತಿಫಲವೇ ಸಾಕ್ಷಿ. ಬಹುಶಃ "ಸುಪರ್ 30'ಯ ಯಶಸ್ಸಿನ ಹಿಂದಿರುವ ಗುಟ್ಟೂ ಸಹ ಅದೇ.

ಉದಾಹರಣೆಗೆ "ಸುಪರ್ 30’ಯಲ್ಲಿ ಒಬ್ಬನಾಗಿದ್ದ ಸಂತೋಷ ಕುಮಾರ ಪ್ರತಿ ದಿನ ಬೆಳಗ್ಗೆ ನಾಲ್ಕು ಗಂಟೆ ಓದಿನಲ್ಲಿ ತೊಡಗುತ್ತಿದ್ದ. ಆನಂತರ ಮೂರು ಗಂಟೆ, ಗಣಿತ, ರಸಾಯನ ಶಾಸ್ತ್ರ ಅಥವಾ ಭೌತವಿಜ್ಞಾನದ ಪತ್ರಿಕೆ ಬಿಡಿಸುತ್ತಿದ್ದ. ಸ್ವಲ್ಪ ಸಮಯದ ವಿರಾಮದ ನಂತರ ಸಂಜೆ ಆರರಿಂದ ಒಂಬತ್ತರವರೆಗೆ ಅಂದಿನ ತರಗತಿ. ಆನಂತರ ಮರುದಿನದ ಪರೀಕ್ಷೆಗಾಗಿ ರಾತ್ರಿ ಎರಡು ಗಂಟೆಯವರೆಗೆ ತಯಾರಿ. ಅವನ ಈ ಕಠಿಣ ಶ್ರಮದಿಂದಾಗಿಯೇ ಈ ವರುಷ ಐಐಟಿಗೆ ಆಯ್ಕೆಯಾದ 5000 ವಿದ್ಯಾರ್ಥಿಗಳಲ್ಲಿ ಈತನಿಗೆ 3537ನೇ ಸ್ಥಾನ ದೊರಕಿದೆ.

ವಿದ್ಯಾರ್ಥಿಗಳಿಂದ ಸಾವಿರಾರು ರೂಪಾಯಿ ಪಡೆಯುವ, ವಿದ್ಯಾರ್ಥಿಗಳನ್ನು ಸೆಳೆಯಲು ಯಾವ ಮಟ್ಟದ ಸ್ಪರ್ಧೆಗೂ ಇಳಿಯಲು ಸಿದ್ಧವಿರುವ ಖಾಸಗಿ ಟ್ಯುಟೋರಿಯಲ್‌ಗಳಿಗೆ "ರಾಮಾನುಜನ್ ಶಾಲೆ’ ಸಿಂಹಸ್ವಪ್ನ. ಆದ್ದರಿಂದಲೇ ಅನೇಕ ಬಾರಿ ಆನಂದಕುಮಾರ್ ಅವರ ಮೇಲೆ ಬಾಂಬ್ ದಾಳಿಯಂಥ ಹಲವು ಬಗೆಯ ಕೊಲೆ ಯತ್ನಗಳೂ ನಡೆದಿವೆ. ಈಗಲೂ ಸುತ್ತ ಅಂಗರಕ್ಷಕರನ್ನು ಇಟ್ಟುಕೊಂಡು ಬೀದಿಗಿಳಿಯಬೇಕಾದ ಪರಿಸ್ಥಿತಿ ಇದೆ. ಆದರೂ ಆನಂದಕುಮಾರ್ ಪಾಠ ಮಾಡುವುದನ್ನು ಬಿಟ್ಟಿಲ್ಲ!

ಕೃಪೆ: ಔಟ್‌ಲುಕ್‌‌

ಗುರುವಾರ, ಆಗಸ್ಟ್ 20, 2009

ಆರತಿ ಎತ್ತಿರೇ ಕಳ್ ಗಣಪಂಗೆ...



ಶ್.... ಗಣಪತಿ ಬಪ್ಪಾ.... ಮೋರ್ಯಾ...
ಕೈಲಿದ್ದ ಗಣಪತಿಯನ್ನು ಕಂಡವರ ಮನೆ ಮುಂದೆ ಇಟ್ಟು ಹೀಗೆ ಜೋರಾಗಿ ಒಮ್ಮೆಲೆ ಕೂಗಿ ಎದ್ದುಬಿದ್ದು ಓಡಿಬಿಡುತ್ತಿತ್ತು ನಮ್ಮ ಗುಂಪು. ಅರೆ ಕ್ಷಣ ನಮ್ಮ ಗಣಪತಿ ಅಲ್ಲಿ ಅನಾಥ. ಮರು ಕ್ಷಣದಲ್ಲೇ ಆ ಮನೆಯ ಬಾಗಿಲು ತೆರೆಯುತ್ತಿತ್ತು. ನೋಡಿದರೆ ಎದುರಿಗೇ ಸಾಕ್ಷಾತ್ ಗಣಪತಿ. ಹಬ್ಬದ ದಿನ ಬಾಗಿಲಿಗೆ ಬಂದ ಗಣಪತಿಯನ್ನು ಹಾಗೆ ಕಳಿಸುವುದಕ್ಕಾಗುತ್ತದೆಯೇ? ಆರತಿ ಮಾಡಿ ಒಳಗೆ ಕೊಂಡೊಯ್ದು ಮಂಟಪ, ನೈವೇದ್ಯಕ್ಕೆ ಸಿದ್ಧ ಮಾಡಿಕೊಳ್ಳಬೇಕು. ಪಾಪ! ಕಣ್ಣು ತಿಕ್ಕಿಕೊಳ್ಳುತ್ತಾ ಹೊರಗೆ ಬಂದಿದ್ದ ಮನೆಯೊಡೆಯನ ನಿದ್ದೆ ಅದೆಲ್ಲಿ ಹಾರಿಹೋಗುತ್ತಿತ್ತೋ?

ಗಣಪತಿ ತಯಾರಿಸುವ ಕಿಟ್ಟಣ್ಣ ಇನ್ನೂ ಮಣ್ಣು ತಂದಿರುತ್ತಿದ್ದನೋ ಇಲ್ಲವೋ. ನಮ್ಮ ಹುಡುಗರ ಗುಂಪಂತೂ ಶ್ರಾವಣ ಮಾಸ ಪ್ರಾರಂಭವಾದಾಗಲಿಂದ ಬಹಳ ರಹಸ್ಯವಾಗಿ, ಮತ್ತು ಅಷ್ಟೇ ಶ್ರದ್ಧೆಯಿಂದ ಕಳ್ಳ ಗಣಪತಿ ತಯಾರಿಸಲು ಕೂತುಬಿಡುತ್ತಿತ್ತು. ಗಣಪತಿ ಮಾಡಲು ಸರಿಯಾಗಿ ಬಾರದಿದ್ದರೂ ಅದಕ್ಕೆ ದೊಡ್ಡ ಕಿರೀಟ, ಉದ್ದ ಸೊಂಡಿಲು, ದಪ್ಪ ಹೊಟ್ಟೆ ಇಟ್ಟು ಹೇಗೋ ಮೂರ್ತಿಯೊಂದನ್ನು ಮಾಡಿಬಿಡುತ್ತಿದ್ದೆವು. ಯಾರದ್ದೋ ಮನೆಗೆ ಹಚ್ಚಲು ತಂದಿರುವ ಬಣ್ಣವನ್ನು ಕದ್ದುತಂದು ಆ ಮೂರ್ತಿಗೆ ಹಚ್ಚಿದರೆ... ಆಹಾ! ಗಣಪತಿ ಸಿದ್ಧ. ಅದು ದೊಡ್ಡವರಿಗೆ ಕಾಣದಂತೆ ಕಾಯುವ, ಸುರಿವ ಮಳೆಯಿಂದ ಕಾಪಾಡುವ ಹೊಣೆ ಬೇರೆ. ಹಬ್ಬಕ್ಕೆ 2-3 ದಿನವಿದ್ದಾಗ ಹುಡುಗರ ಗುಂಪು ರಹಸ್ಯ ಸಭೆ ಸೇರಿ ಯಾರ ಮನೆಯಲಿ ಗಣಪತಿ ಇಡಬೇಕೆಂಬ ತೀರ್ಮಾನ ಕೈಗೊಳ್ಳುತ್ತಿತ್ತು. ಸಾಮಾನ್ಯವಾಗಿ ಮಾವಿನ ಕಾಯಿ ಕೊಯ್ಯಲು ಬಿಡದ, ಮಕ್ಕಳಿಗೆ ಬೈಯುವ, ತೀರಾ ಜುಗ್ಗತನ ತೋರುವ, ಗಣಪತಿ ಹಬ್ಬ ಮಾಡದ ಮನೆಯೊಂದನ್ನು ಆರಿಸಿಕೊಳ್ಳಲಾಗುತ್ತಿತ್ತು. ಹಬ್ಬದ ದಿನ ಬೆಳಗ್ಗೆ ನಾಲ್ಕು-ನಾಲ್ಕೂವರೆಗೆ ಎದ್ದು ಎಲ್ಲರೂ ಸೇರಿ ಯಾರಿಗೂ ಗೊತ್ತಾಗದಂತೆ ಆ ಮೂರ್ತಿಯನ್ನು ಎತ್ತಿಕೊಂಡು ಹೋಗಿ ಆ ಮನೆಯ ಬಾಗಿಲಲ್ಲಿ ಇಟ್ಟು ....ಗಣಪತಿ ಬಪ್ಪಾ...ಮೋರ್ಯಾ..

ಪಾಪ! ಹಬ್ಬಕ್ಕೆಂದು ಯಾವ ತಯಾರಿಯನ್ನೂ ಮಾಡಿಕೊಂಡಿರದ ಆ ಮನೆಯವರ ಸ್ಥಿತಿ ಅಂದು ದೇವರಿಗೇ ಪ್ರೀತಿ. ಒಂದೆಡೆ ನಮ್ಮನ್ನು ಬೈಯುತ್ತಾ... ಇನ್ನೊಂದೆಡೆ ಆವತ್ತಿನ ಪೂಜೆಗೆ ಪುರೋಹಿತರನ್ನು ಕರೆಸುವ, ಅಡುಗೆಗೆ ದಿನಸಿ ತರುವುದರ ಜತೆಗೆ ಒಂದು ವರ್ಷ ಗಣಪತಿ ಇಟ್ಟವರು ಕನಿಷ್ಠ ಮೂರು ವರ್ಷ ಇಡಲೇ ಬೇಕು ಎಂಬ ಅಲಿಖಿತ ನಿಯಮದ ಯೋಚನೆ. ಮೂರು ವರ್ಷ ಗಣಪತಿ ತಂದು ಪೂಜೆ ಮಾಡಿ ಅಭ್ಯಾಸವಾದರೆ ಆನಂತರ ಎಂದೂ ಗಣಪತಿ ಹಬ್ಬವನ್ನು ಬಿಡುವುದಿಲ್ಲವೆಂಬುದು ನಮ್ಮ ನಂಬಿಕೆ.

ಸಂಜೆ 21 ಗಣಪತಿ ನೋಡಬೇಕೆಂದು ಮನೆ ಮನೆಗೆ ತಿರುಗಲು ಹೊರಡುತ್ತಿದ್ದ ನಮ್ಮ ಗುಂಪಿಗೆ ಕಳ್ಳ ಗಣಪತಿ ಇಟ್ಟಿರುವ ಮನೆಗೆ ಹೋಗಲು ಭಾರಿ ಸಂಭ್ರಮ. "ಅವಸರಕ್ಕೆ ಮಾಡಿದ್ದಾದರೂ ಪಂಚಕಜ್ಜಾಯ ತುಂಬಾ ರುಚಿ ಇದೆ ಮರಾಯ್ರೇ' ಎಂದು ಅವರನ್ನು ಕಿಚಾಯಿಸುವುದು ಬೇರೆ. ನಮ್ಮನ್ನು ಕೊಂದು ಬಿಡುವಷ್ಟು ಕೋಪ ಉಕ್ಕಿಬರುತ್ತಿದ್ದರೂ ಅವರು ಏನೂ ಮಾಡುವಂತಿಲ್ಲ. ಏಕೆಂದರೆ ನಮ್ಮ ಗಣಪತಿ ಅಲ್ಲೇ ನಗುತ್ತಿರುತ್ತಾನಲ್ಲ!

ಶನಿವಾರ, ಆಗಸ್ಟ್ 15, 2009

ಹಳೇ ಚಿತ್ರಕೆ ಹೊಸ ದಾರಿ

ಅದು 1895-96ರ ಸಮಯ. ಎದುರಿನ ದೊಡ್ಡ ಪ್ರೊಜೆಕ್ಟರ್‌ನಲ್ಲಿ ಕಂಡ ಬೃಹತ್ ರೈಲು ಚಲಿಸುತ್ತಾ ತಮ್ಮೆಡೆಗೆ ಹಾದು ಬಂದದನ್ನು ಕಂಡು ಪ್ರೇಕ್ಷಕರು ಹೌಹಾರಿದರು. ತಮ್ಮ ಮೇಲೆಯೇ ಹರಿಯಲಿದೆ ಎಂದು ಎದ್ದು ಓಡಿದರು. ಅವರ ಭಯಕ್ಕೂ ಕಾರಣವಿತ್ತು. ಅದು ಲೂಮಿಯರ್ ಸಹೋದರರ 'ನಿಲ್ದಾಣಕ್ಕೆ ಆಗಮಿಸುತ್ತಿರುವ ರೈಲು' (Arrival of a Train at La Ciotat)ಚಲನ ಚಿತ್ರದ ಮೊದಲ ಪ್ರದರ್ಶನವಾಗಿತ್ತು. ಅದುವರೆಗೂ ಸ್ಥಿರ ಚಿತ್ರಗಳನ್ನು ಮಾತ್ರ ನೋಡಿದ್ದ ಪ್ರೇಕ್ಷಕರು ಚಿತ್ರದಲ್ಲಿರುವ ರೈಲು ತಮ್ಮೆದುರು ಚಲಿಸಿದಾಗ ಉದ್ವೇಗಕ್ಕೆ ಒಳಗಾಗಿದ್ದು ಸಹಜವೇ.

40-50 ಸೆಕೆಂಡುಗಳ ವಿವಿಧ ಚಲನ ದೃಶ್ಯಗಳನ್ನು ಸೆರೆ ಹಿಡಿದು, ಅದನ್ನು ನೋಡಲು ಟಿಕೆಟ್ ಇಟ್ಟಿದ್ದ ಲೂಮಿಯರ್ ಸಹೋದರರು "ಈ ಹೊಸ ಸಂಶೋಧನೆಗೆ ಭವಿಷ್ಯವಿಲ್ಲ' ಎಂದು ತೀರ್ಮಾನಿಸಿ, ತಮ್ಮ ಗಮನವನ್ನು ಕಲರ್ ಫೋಟೊಗ್ರಫಿಯ ಕಡೆ ತಿರುಗಿಸಿಕೊಂಡರಂತೆ. ಅಂಥ ಅದ್ಭುತ ಪ್ರತಿಭಾವಂತರ ಲೆಕ್ಕವೂ ತಪ್ಪಾಗುವಂತೆ ಇಂದು ಸಿನಿಮಾ ಬೃಹತ್ ಉದ್ಯಮವಾಗಿ ಬೆಳೆದುನಿಂತಿದೆ.

ಲೂಮಿಯರ್ ಸಹೋದರರ ಚಿತ್ರಗಳ ಪ್ರದರ್ಶನಕ್ಕೂ ಮೊದಲೇ ಹಲವರು ಚಲಿಸುವ ಚಿತ್ರಗಳನ್ನು ರೂಪಿಸಲು ಪ್ರಯತ್ನ ಪಟ್ಟಿದ್ದರು. 1878ರಲ್ಲೇ ಎಡ್ವರ್ಡ್ ಮೇಬ್ರಿಡ್ಜ್ ಎಂಬಾತ "ಚಲಿಸುತ್ತಿರುವ ಕುದುರೆ'ಯ ಚಿತ್ರವನ್ನು ಸೆರೆ ಹಿಡಿದಿದ್ದ. ಕುದುರೆಯ ಹಾದುಬರುವ ದಾರಿಯಲ್ಲಿ 12 ಕ್ಯಾಮೆರಾಗಳನ್ನು ಸಾಲಿಗಿಟ್ಟಿದ್ದ. ಕುದುರೆಯ ಪ್ರತಿ ಹೆಜ್ಜೆಗೂ ಒಂದೊಂದು ವೈಯರು ಜೋಡಿಸಿ ಪ್ರತಿ ಕ್ಯಾಮೆರಾ ಕ್ಲಿಕ್ಕಿಸುವಂತೆ ಮಾಡಿದ್ದ. ಅವನ ಪ್ರಯತ್ನ ಯಶಸ್ವಿಯಾಗಿತ್ತು.



ಲೂಯಿ ಲೆ ಪ್ರಿನ್ಸ್ ಎಂಬುವವನು 1888ರಲ್ಲಿ "ರಾಂಡೆ ಗಾರ್ಡನ್ ಸೀನ್' ಚಿತ್ರೀಕರಿಸಿದ್ದ. ಬ್ರಿಟನ್ನಿನ ಶ್ರೀಮಂತ ವಿಟ್ಲೆ ಕುಟುಂಬದವರು ತಮ್ಮ ಮನೆಯ ಮುಂದಿನ ಉದ್ಯಾನದಲ್ಲಿ ನಗುತ್ತಾ ಸಂಚರಿಸುವ ದೃಶ್ಯವದು. ಸಿಂಗಲ್ ಲೆನ್ಸ್‌ನಲ್ಲಿ ತೆಗೆದ ನಾಲ್ಕು ಫ್ರೇಮಿನಲ್ಲಿರುವ ಈ ಚಿತ್ರ ಕೇವಲ ಎರಡು ಸೆಕೆಂಡಿಗೆ ಮುಗಿದು ಹೋಗುತ್ತದೆ. ಈಗಲೂ ನೋಡಲು ಸಾಧ್ಯವಿರುವ ಅತಿ ಹಳೆಯ ಚಲನಚಿತ್ರ ಎಂಬ ದಾಖಲೆಯೂ ಇದಕ್ಕಿದೆ.

ಇಂಥ ಅಪರೂಪದ ಹಳೆಯ ಚಿತ್ರಗಳನ್ನು ಇದುವರೆಗೂ ನಾವು ನೀನಾಸಂನಲ್ಲೋ, ಆಥವಾ ಯಾವುದಾದರೂ ಫಿಲ್ಮ್ ಸೊಸೈಟಿ ನಡೆಸಿಕೊಡುವ ಸಿನಿಮಾ ರಸಗ್ರಹಣ ಶಿಬಿರಗಳಲ್ಲೋ ಮಾತ್ರ ನೋಡುತ್ತಿದ್ದೆವು. ಆದರೆ ಈಗ ಅವುಗಳೆಲ್ಲಾ ಯೂಟ್ಯೂಬ್‌ನಲ್ಲಿಯೇ ಲಭ್ಯವಿದೆ! ಲೂಮಿಯರ್ ಸಹೋದರರು,ಎಡ್ವರ್ಡ್ ಮೇಬ್ರಿಡ್ಜ್, ಲೂಯಿ ಲೆ ಪ್ರಿನ್ಸ್ ಹೀಗೆಯೇ ಹುಡುಕಿದರೆ ಅವರ ಇನ್ನೂ ಹಲವಾರು ಚಿತ್ರಗಳು ನಿಮ್ಮೆದುರು ಕಾಣುತ್ತವೆ. ನೋಡ್ತೀರಲ್ವಾ?

ಸೋಮವಾರ, ಆಗಸ್ಟ್ 3, 2009

ತಕ್ಕಡಿಯಲ್ಲಿ ಎರಡು ಹಾಡು

ಕಳೆದೆರಡು ವಾರಗಳಲ್ಲಿ ಇಬ್ಬರು ದಿಗ್ಗಜರ ಅಗಲಿಕೆಯಿಂದಾಗಿ ಸಂಗೀತ ಕ್ಷೇತ್ರ ಬಡವಾಗಿದೆ. ಒಂದೆಡೆ ಮೈಕೆಲ್ ಜಾಕ್ಸನ್‌ನ ಸಾವು ಪಾಪ್ ಸಂಗೀತ ಲೋಕದ ಅಬ್ಬರವನ್ನು ತಣ್ಣಗಾಗಿಸಿದ್ದರೆ ಇನ್ನೊಂದೆಡೆ ಗಂಗೂಬಾಯಿ ಹಾನಗಲ್‌ರ ನಿಧನ ಶಾಸ್ತ್ರೀಯ ಸಂಗೀತ ಲೋಕವನ್ನು ಮಂದ್ರದಲ್ಲಿ ನಿಲ್ಲಿಸಿದೆ. ಇಬ್ಬರೂ ಮಹಾನ್ ಪ್ರತಿಭಾವಂತರೇ. ಅಲ್ಲಿ ಯಾರು ಹೆಚ್ಚು ಯಾರು ಕಡಿಮೆ ಎಂದು ತೂಗಲು ನನ್ನ ತಕ್ಕಡಿಗೆ ಸಾಮರ್ಥ್ಯವೇ ಇಲ್ಲ. ಇಬ್ಬರೂ ತಮ್ಮ ತಮ್ಮ ಮಿತಿಗಳನ್ನು ಅರಿತು ಅದನ್ನೇ ಅಸ್ತ್ರವನ್ನಾಗಿಸಿಕೊಂಡು ಸಾಧನೆಯ ಶಿಖರ ಮುಟ್ಟಿದವರು. ಕೀರ್ತಿಯ ಸವಿಯ ಉಂಡವರು.ಆದರೆ ಸಾವಿನ ಬೆಳಕು ಅವರಿಬ್ಬರ ಬದುಕಿನ ಶೈಲಿಯ ಅಂತರವನ್ನು ಕಣ್ಣಿಗೆ ರಾಚುವಂತೆ ತೆರೆದಿಟ್ಟುಬಿಟ್ಟಿದೆ.

ಮೂಳೆಗಳೇ ಇಲ್ಲವೆನೋ ಎಂಬಂತೆ ಮೈಡೊಂಕಿಸಿ ಕುಣಿಯುತಿದ್ದ ಮೈಕೆಲ್‌ನ ಮೈಯಲ್ಲಿ ಸಾಯುವ ವೇಳೆಗೆ ಮೂಳೆಯಲ್ಲದೇ ಬೇರೇನು ಇರಲಿಲ್ಲ. ಹೊಟ್ಟೆಯಲ್ಲಿ ಒಂದಗಳು ಅನ್ನಕ್ಕೂ ಜಾಗವಿಲ್ಲದಂತೆ ಮಾತ್ರೆಗಳೇ ತುಂಬಿದ್ದವಂತೆ. ಬರಬಾರದ ರೋಗಗಳನ್ನೆಲ್ಲಾ ತಂದುಕೊಂಡು ತನ್ನ ಐವತ್ತನೇ ವರ್ಷದಲ್ಲಿಯೇ ಅಸಹಜ ರೀತಿಯಲ್ಲಿ ಸಾವನ್ನಪ್ಪಿದ. ೯೭ ವರ್ಷದ ತನಕ ಹಾಡುತ್ತಲೇ ಜೀವನ ಸಾಗಿಸಿದ ಗಂಗಜ್ಜಿಗೆ ವಯಸ್ಸಾಗಿತ್ತೇ ಹೊರತು ಆರೋಗ್ಯಕ್ಕೇನೂ ಕೊರತೆಯಾಗಿರಲಿಲ್ಲ. "ನಾಳೆ ಊಟ ಮಾಡಲು ನಾನಿರುವುದಿಲ್ಲ. ಊಟ ತರಬೇಡವೋ" ಎಂದು ಅಪ್ಪಣೆ ಕೊಟ್ಟೇ ವಿದಾಯ ಹೇಳಿದ ನಿಶ್ಚಿಂತೆ. ಚಿರನಿದ್ರೆಯಲ್ಲಿದ್ದ ಅವರ ಮುಖ ನೋಡಿದರೆ ಸಾವೂ ಸಹ ಅವರ ಬಳಿ ತಲೆಬಾಗಿ ಬಂದಿತ್ತು ಎಂಬುದು ಯಾರಿಗಾದರೂ ತಿಳಿಯುವಂತಿತ್ತು.

ತನ್ನ ಅಂದಚೆಂದಗಳಿಗೆ ಅಪಾರ ಗಮನ ಕೊಡುತ್ತಿದ್ದ ಮೈಕೆಲ್‌ನ ದೇಹಕ್ಕೆ ಇನ್ನೂ ಸರಿಯಾದ ರೀತಿಯಲ್ಲಿ ಅಂತ್ಯ ಸಂಸ್ಕಾರವೇ ಆಗಿಲ್ಲ. ಅವನ ಖ್ಯಾತಿ, ಕುಖ್ಯಾತಿ ಎರಡನ್ನೂ ಬಿತ್ತರಿಸಿದ್ದ ಮಧ್ಯಮಗಳಿಗೆ ಅವನ ಸಾವನ್ನೂ ಸೆನ್ಸೇಷನ್ ಮಾಡುವ ಅವಕಾಶ. ಆದರೆ ನೆಮ್ಮದಿಯುತ ಜೀವನ ನಡೆಸಿದ ಗಂಗಜ್ಜಿ ಕೊನೆಯ ತನಕ ಅಜಾತಶತ್ರು. ಪ್ರಾಯದಲ್ಲೂ ಹಳಿಕೊಳ್ಳುವಂಥ ಚಂದಗಾತಿಯಲ್ಲದಿದ್ದರೂ ಜೀವನ ಮುಗಿಸಿದ ಮೇಲೆ ತಮ್ಮ ಕಣ್ಣುಗಳನ್ನು ದಾನ ಮಾಡಿದ ಗುಣವಂತೆ.

ಕೋಟಿಗಟ್ಟಲೇ ಹಣವನ್ನು ಡಾಲರ್ ಲೆಕ್ಕದಲ್ಲಿ ಗಳಿಸುತ್ತಿದ್ದ ಮೈಕೆಲ್ ತೀರಿಕೊಂಡಾಗ ಆತನಿಗಿದ್ದ ರೋಗದ ಪಟ್ಟಿಯಂತೆಯೇ ಸಾಲದ ಪಟ್ಟಿಯೂ ದೊಡ್ಡದಿತ್ತು. "ಗಳಿಸಿದ ದುಡ್ಡು ಹೋದದ್ದೆಲ್ಲಿ?' ಎಂಬುದು ಅವನ ಅಭಿಮಾನಿಗಳ ಪ್ರಶ್ನೆ. ಗಂಗಜ್ಜಿಯೂ ಬಡತನದಲ್ಲೇ ಬೆಳೆದವರು. ಸಾಲ ತೀರಿಸಲು ಮೈಮೇಲಿನ ಒಡವೆ ಮಾರಿದವರು. ಆದರೆ ಅವರ ಮನೆ ಬೇರೆಯವರ ಪಾಲಾಗುವ ಸಂದರ್ಭದಲ್ಲಿ ಸಾಲ ಕೊಟ್ಟವನು ಬಂದು "ನಿಮಗೆ ಸಾಧ್ಯವಾದಾಗ ಕೊಡಿ ತಾಯಿ" ಎಂದು ಕೈಮುಗಿದು ಹೋದನಂತೆ. "ಅವರು ಗಳಿಸಿದ್ದು ಈ ಅಭಿಮಾನವನ್ನೇ' ಎಂದು ಉತ್ತರಿಸಿತ್ತಾರೆ ಅವರನ್ನು ತಿಳಿದವರು.

ಲಕ್ಷಾಂತರ ಜನರ ಅರಾಧ್ಯ ದೈವವಾಗಿದ್ದ ಮೈಕೆಲ್‌ನ ಕೊನೆಗಾಲದಲ್ಲಿ ಅವನ ಮೈಯ ಬಣ್ಣ , ತಲೆಯ ಕೂದಲು, ಮೂಗು, ಮುಖದ ಆಕಾರ ಯಾವುದೂ ನಿಜವಾಗಿರಲಿಲ್ಲ, ಕೊನೆಗೆ ಅವನ ಮಕ್ಕಳೂ ಅವನದಾಗಿ ಉಳಿಯಲಿಲ್ಲ. ಆದರೆ ಕೆಲವೇ ಕೇಳುಗರಿರುವ ಶಾಸ್ತ್ರೀಯ ಸಂಗೀತದ ಸೇವೆ ಮಾಡಿದ ಗಂಗೂಬಾಯಿ ಎಂಬಾಕೆ ಹಾಡು ಮುಗಿಸುವಷ್ಟರಲ್ಲಿ ಕೇಳುಗರೆಲ್ಲಾ ಮಕ್ಕಳಾಗಿದ್ದರು. ನಾಡಿನ ಜನರಿಗೆಲ್ಲಾಆಕೆ "ಗಂಗೂ ತಾಯಿ' ಯಾಗಿದ್ದರು.